ಮಿಸ್ ಇಂಡಿಯಾ ಮಾನಸ ವಾರಣಾಸಿ ಸೇರಿದಂತೆ ಕೆಲವು ಸ್ಪರ್ಧಿಗಳಿಗೆ ಕೋವಿಡ್ ಪಾಸಿಟೀವ್ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಿಸ್ ವರ್ಲ್ಡ್ 2021 ಇವೆಂಟ್ ಮುಂದೂಡಲ್ಪಟ್ಟಿದೆ. ಮುಂದಿನ 90 ದಿನಗಳೊಳಗಾಗಿ ಮತ್ತೊಂದು ದಿನಾಂಕ ನಿಗಧಿಪಡಿಸುವುದಾಗಿ ಆಯೋಜಕರು ಹೇಳಿಕೊಂಡಿದ್ದಾರೆ.
“ವೈರಾಜಲಿಸ್ಟ್ ಸಲಹೆ ಮೇರೆಗೆ ಪೋರ್ಟೊ ರಿಕೊದಲ್ಲಿ ನಡೆಯಬೇಕಿದ್ದ 2021ನೇ ಸಾಲಿನ ಮಿಸ್ ವರ್ಲ್ಡ್ ಸ್ಪರ್ಧೆಯನ್ನು ಮುಂದೂಡಲಾಗಿದೆ. ಸ್ಪರ್ಧಿಗಳು ಮತ್ತು ತಾಂತ್ರಿಕ ಸಿಬ್ಬಂದಿಯ ಯೋಗಕ್ಷೇಮದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಮುಂದಿನ ದಿನಾಂಕ ಘೋಷಿಸಲಾಗುವುದು. ಇವೆಂಟ್ ವೀಕ್ಷಿಸಲು ಜಗತ್ತಿನಾದ್ಯಂತ ಕಾದಿದ್ದ ಜನರಿಗೆ ಇದರಿಂದ ನಿರಾಸೆಯಾಗಿದ್ದು, ಅವರ ಕ್ಷಮೆ ಕೋರುತ್ತೇವೆ” ಎಂದು ಮಿಸ್ ವರ್ಲ್ಡ್ ಆಯೋಜಕರು ಇಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 70ನೇ ಮಿಸ್ ವರ್ಲ್ಡ್ ಸ್ಪರ್ಧೆಗೆ ಈ ಬಾರಿ ಭಾರತದಿಂದ ಮಾನಸ ವಾರಣಾಸಿ ಸ್ಪರ್ಧಿಸುತ್ತಿದ್ದಾರೆ. ತೆಲಂಗಾಣ ಮೂಲದ ಅವರು 2020ರ ಮಿಸ್ ಇಂಡಿಯಾ ವಿಜೇತೆ. ಕೋವಿಡ್ ಪಾಸಿಟೀವ್‌ಗೆ ತುತ್ತಾದ ಸ್ಪರ್ಧಿಗಳಲ್ಲಿ ಮಾನಸ ವಾರಣಾಸಿ ಕೂಡ ಒಬ್ಬರು. ಸದ್ಯ ಪೋರ್ಟೊ ರಿಕೊದಲ್ಲಿ ಐಸೋಲೇಷನ್‌ನಲ್ಲಿರುವ ಅವರು ಕೆಲವು ದಿನಗಳಲ್ಲಿ ಭಾರತಕ್ಕೆ ಮರಳಲಿದ್ದಾರೆ.
ಈ ಕುರಿತಾಗಿ ಮಿಸ್ ಇಂಡಿಯಾ ಆರ್ಗನೈಸೇಷನ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ಹಾಕಿದ್ದು, “ಕೋವಿಡ್ ಸೋಂಕಿಗೆ ಗುರಿಯಾದ ಎಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ನಾವು ಆಶಿಸುತ್ತೇವೆ. ಆದಷ್ಟು ಬೇಗ ಎಲ್ಲರೂ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾಗವಿಸುವುದನ್ನು ಎದುರುನೋಡುತ್ತಿದ್ದೇವೆ. ನಮ್ಮ ಸ್ಪರ್ಧಿ ಮಾನಸ ವಾರಣಾಸಿ ಭಾರತಕ್ಕೆ ಹಿಂದಿರುಗಿ, ಪೂರ್ಣ ಗುಣಮುಖರಾಗಿ ಮತ್ತಷ್ಟು ಹರುಪಿನಿಂದ ಸ್ಪರ್ಧೆ ಎದುರಿಸಲಿದ್ದಾರೆ” ಎಂದಿದೆ.