ರಾಜ್‌ಕುಮಾರ್‌ ಹಿರಾನಿ ಮತ್ತು ಶಾರುಖ್‌ ಖಾನ್‌ ಜೊಡಿಯ ಬಹುನಿರೀಕ್ಷಿತ ‘ಡಂಕಿ’ ಹಿಂದಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ತಾಪ್ಸಿ ಪನ್ನು, ವಿಕ್ಕಿ ಕೌಶಲ್‌, ಅನಿಲ್‌ ಗ್ರೋವರ್‌, ವಿಕ್ರಂ ಕೊಚ್ಚಾರ್‌, ಬೊಮನ್‌ ಇರಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಡಿಸೆಂಬರ್‌ 21ರಂದು ತೆರೆಕಾಣಲಿದೆ.

ಶಾರುಖ್ ಖಾನ್ ಮತ್ತು ತಾಪ್ಸೀ ಪನ್ನು ಅಭಿನಯದ ಬಹುನಿರೀಕ್ಷಿತ ‘ಡಂಕಿ’ ಹಿಂದಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಚಲನಚಿತ್ರವನ್ನು ರಾಜ್‌ಕುಮಾರ್‌ ಹಿರಾನಿ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ವಿಕ್ಕಿ ಕೌಶಲ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 1995ರ ಕಾಲಘಟ್ಟದಲ್ಲಿ ನಡೆಯುವ ಈ ಸಿನಿಮಾದಲ್ಲಿ ಶಾರುಖ್‌ರನ್ನು ಹರದಯಾಳ್ ಸಿಂಗ್ ದಿಲ್ಲಾನ್ ಅಥವಾ ಹಾರ್ಡಿ ಎಂದು ಪರಿಚಯಿಸಲಾಗಿದೆ. ಹಾರ್ಡಿ ಪಂಜಾಬಿನ ಲಾಲ್ತಿ ಎಂಬ ಸಣ್ಣ ಪಟ್ಟಣಕ್ಕೆ ಬಂದಾಗ ಕತೆ ಪ್ರಾರಂಭವಾಗುತ್ತದೆ. ಅಲ್ಲಿ ಅವನು ಬಲ್ಲಿ (ಅನಿಲ್‌ ಗ್ರೋವರ್‌), ಬುಗ್ಗು (ವಿಕ್ರಂ ಕೊಚ್ಚಾರ್‌). ಸುಖೀ (ವಿಕ್ಕಿ ಕೌಶಲ್) ಮತ್ತು ಮನ್ನೋ (ತಾಪ್ಸಿ ಪನ್ನು) ರನ್ನು ಭೇಟಿಯಾಗುತ್ತಾನೆ. ಪಂಜಾಬ್ ರಾಜ್ಯದ ಯುವಕರ ಗುಂಪು ವಲಸೆ ಹೋಗುವುದನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ.

ಯುದ್ಧದಿಂದ ಹತಾಶರಾಗಿ ಬೇರೆ ಯಾವುದೇ ದಾರಿ ಕಾಣದೆ ಜನರು ದೇಶವನ್ನು ತೊರೆಯಲು ಮುಂದಾಗುತ್ತಾರೆ. ಕತೆಯ ಪ್ರತಿ ತಿರುವಿನಲ್ಲಿ ಹಾರ್ಡಿ ಮತ್ತು ಅವನ ಗೆಳೆಯರಿಗೆ ಭಾಷೆ ಗೊತ್ತಿಲ್ಲದ ಕಾರಣ ಅವರು ವಿದೇಶದಲ್ಲಿ ವಾಸಿಸಲು ಸಾಧ್ಯವಾಗುವುದಿಲ್ಲ. ಕ್ರಮೇಣ ಅವರು ತಮ್ಮ ಕೆಲವು ಗೆಳೆಯರನ್ನು ಯುದ್ಧದಲ್ಲಿ ಕಳೆದುಕೊಳ್ಳುತ್ತಾರೆ. ನಂತರ ಅವರು ಅಕ್ರಮ ಮಾರ್ಗದ ಮೂಲಕ ಸ್ವದೇಶಕ್ಕೆ ಮರಳಲು ನಿರ್ಧರಿಸುತ್ತಾರೆ. ವಿಶಾಲವಾದ ಮರುಭೂಮಿಗಳಲ್ಲಿ, ರೈಲುಗಳ ಮೇಲ್ಛಾವಣಿಯ ಮೇಲೆ ಸವಾರಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಸೈನಿಕರು ಗುಂಡಿನ ದಾಳಿ ನಡೆಸುತ್ತಾರೆ. ಹಾರ್ಡಿ ಮತ್ತು ಸ್ನೇಹಿತರ ಗುಂಪು ನದಿಗಳನ್ನು ಈಜುವುದನ್ನು ಮತ್ತು ಪರ್ವತಗಳನ್ನು ದಾಟುವುದನ್ನು ಕಾಣಬಹುದು. ತಪ್ಪಿಸಿಕೊಂಡು ಬಂದ ಹಾರ್ಡಿಯನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸುತ್ತಾರೆ. ನಿರ್ದೆಶಕರ ‘ಸಂಜು’, ‘3 ಈಡಿಯಟ್ಸ್’ ಮತ್ತು ‘ಮುನ್ನಾ ಭಾಯ್’ ಚಲನಚಿತ್ರಗಳಂತೆಯೇ ಸಾಮಾಜಿಕ ಸಂದೇಶವನ್ನು ದೇಶಭಕ್ತಿಯ ಕಥೆಯನ್ನು ಮತ್ತು ಹಾಸ್ಯ ಪರಿಕಲ್ಪನೆಯನ್ನು ‘ಡಂಕಿ’ ಸಿನಿಮಾ ಹೊಂದಿದೆ. ಈ ಸಿನಿಮಾವನ್ನು Red Chillies Entertainment ಬ್ಯಾನರ್‌ ಅಡಿಯಲ್ಲಿ ರಾಜ್‌ಕುಮಾರ್‌ ಹಿರಾನಿ ಮತ್ತು ಗೌರಿ ಖಾನ್‌ ನಿರ್ಮಿಸಿದ್ದಾರೆ. ಡಿಸೆಂಬರ್ 21ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here