ಎಂಎಕ್ಸ್‌ಪ್ಲೇಯರ್ ಓಟಿಟಿ ಪ್ಲಾಟ್‌ಫಾರ್ಮ್ ‘ದಿ ವಿಜಯ್ ಮಲ್ಯ ಸ್ಟೋರಿ’ ಕೃತಿ ಆಧರಿಸಿದ ವೆಬ್ ಸರಣಿ ನಿರ್ಮಿಸಲು ಸಜ್ಜಾಗಿದೆ. ಪೂರ್ವಸಿದ್ಧತೆ ನಡೆದಿದ್ದು 2022ರಲ್ಲಿ ಸರಣಿ ನಿರ್ಮಾಣದ ಕುರಿತು ಅಧಿಕೃತ ಘೋಷಣೆ ಹೊರಬೀಳಲಿದೆ.
ಭಾರತ ಮೂಲದ ವಿವಾದಿತ ಬ್ಯುಸಿನೆಸ್‌ಮ್ಯಾನ್ ವಿಜಯ್ ಮಲ್ಯ ಅವರ ಬದುಕಿನ ಕತೆ ವೆಬ್ ಸರಣಿಯಾಗಿ ಮೂಡಿಬರಲಿದೆ. ಪತ್ರಕರ್ತ ಕೆ.ಗಿರಿಪ್ರಕಾಶ್ ಅವರು ರಚಿಸಿರುವ ‘ದಿ ವಿಜಯ್ ಮಲ್ಯ ಸ್ಟೋರಿ’ ಆಧರಿಸಿ ಈ ಸರಣಿ ತಯಾರಾಗಲಿದೆ. ಪ್ರತಿಷ್ಠಿತ ಪೆಂಗ್ವಿನ್ ರ್ಯಾಂಡಮ್ ಹೌಸ್ ಪ್ರಕಟಿಸಿರುವ ಪುಸ್ತಕವಿದು. ಸುನಿಲ್ ಬೋರಾ ಅವರ ಆಲ್‌ಮೈಟಿ ಮೋಷನ್ ಪಿಕ್ಚರ್ಸ್ ಜೊತೆಗೂಡಿ ಎಂಎಕ್ಸ್ ಪ್ರೇಯರ್ ಓಟಿಟಿ ಪ್ಲಾಟ್‌ಫಾರ್ಮ್ ಈ ಸರಣಿ ನಿರ್ಮಿಸಲು ಹಕ್ಕುಗಳನ್ನು ಖರೀದಿಸಿದೆ. ಎಂಎಕ್ಸ್ ಪ್ಲೇಯರ್ ಪ್ಲಾಟ್‌ಫಾರ್ಮ್‌ನಲ್ಲಿ ಈಗಾಗಲೇ ‘ಆಶ್ರಮ್’, ‘ಕ್ವೀನ್’, ‘ಮತ್ಸ್ಯಕಾಂಡ್’, ‘ಹೈ’ ಮುಂತಾದ ಒರಿಜಿನಲ್ ಸರಣಿಗಳು ಸ್ಟ್ರೀಮ್ ಆಗಿ ಯಶಸ್ವಿಯಾಗಿವೆ.
ವಿಜಯ್ ಮಲ್ಯ ಹಿಂದೊಂದು ಕಾಲದಲ್ಲಿ ಕಿಂಗ್‌ಫೀಶರ್ ಏರ್‌ಲೈನ್ಸ್, ಲಿಕ್ಕರ್ ಕಂಪನಿಗಳು ಹಾಗೂ ಫಾರ್ಮುಲಾ ಒನ್ ರೇಸಿಂಗ್ ಟೀಮ್ ಹೊಂದಿದ್ದ ಸಿರಿವಂತ. ಪ್ರಸ್ತುತ ಭಾರತದ ಬ್ಯಾಂಕ್‌ಗಳಿಗೆ ದೊಡ್ಡ ಮೊತ್ತದ ಸಾಲಗಾರನಾಗಿರುವ ವಿಜಯ್ ಮಲ್ಯ ಇದೀಗ ಇಂಗ್ಲೆಂಡ್‌ನಲ್ಲಿದ್ದಾರೆ. ನ್ಯಾಯಾಲಯದಲ್ಲಿ ಅವರ ಮೇಲೆ ಕೆಲವು ಪ್ರಕರಣಗಳಿವೆ. ವರ್ಣರಂಜಿತ ವ್ಯಕ್ತಿತ್ವದ ವಿಜಯ್ ಮಲ್ಯ ಬದುಕು ವೆಬ್ ಸರಣಿಗೆ ಉತ್ತಮ ಕಂಟೆಂಟ್ ಎನ್ನಲಾಗುತ್ತಿದೆ. ಪೂರ್ವಸಿದ್ಧತೆ ನಡೆದಿದ್ದು 2022ರಲ್ಲಿ ಸರಣಿ ನಿರ್ಮಾಣದ ಕುರಿತು ಅಧಿಕೃತ ಘೋಷಣೆ ಹೊರಬೀಳಲಿದೆ.