ಕತೆಯಲ್ಲಿ ಹೇಗೆ ಯಾವುದೇ ಆಳ ಮತ್ತು ಲೇಯರ್ ಇಲ್ಲವೂ, ಮಾಣೆಕ್ ಶಾ ವ್ಯಕ್ತಿತ್ವ ಚಿತ್ರಣದಲ್ಲೂ ಯಾವುದೇ ಸಂಕೀರ್ಣತೆಗಳಿಲ್ಲ. ಮಾಡಿದ್ದೆಲ್ಲವೂ ಸರಿ ಇರುವ, ಎಲ್ಲವನ್ನೂ ಜಯಿಸುವ, ಎಲ್ಲರನ್ನೂ ಮಣಿಸುವ ವ್ಯಕ್ತಿಯಾಗಿ ಅವರನ್ನು ಚಿತ್ರದಲ್ಲಿ ತೋರಿಸಲಾಗಿದೆ.

ಏಳು ಗುಂಡುಗಳು ದೇಹವನ್ನು ಹೊಕ್ಕಿದ್ದರೂ ಬದುಕುಳಿಯುವ ನಾಯಕ, ಒಂದು ಕಾಲಕ್ಕೆ ಮಿಲಿಟರಿಯಲ್ಲಿ ಒಟ್ಟಿಗೆ ಹೋರಾಡಿದ ಸ್ನೇಹಿತರು, ಬದಲಾದ ಪರಿಸ್ಥಿತಿಯಲ್ಲಿ ಮುಂದೆ ವಿರೋಧಿಗಳಾಗಿ ಹೋರಾಡಬೇಕಾದ ಸ್ಥಿತಿ, ರಾಜಕಾರಣಿಗಳನ್ನು ನೇರವಾಗಿ ಎದುರಿಸಿ ಅವರ ದ್ವೇಷ ಕಟ್ಟಿಕೊಳ್ಳಲು ಹಿಂಜರಿಯದ ಮನಸ್ಥಿತಿ, ದೇಶ ಕಂಡ ಅತ್ಯಂತ ಪ್ರಭಾವಿ ಮತ್ತು ಶಕ್ತಿಯುತ ಪ್ರಧಾನಿಯನ್ನು ಸ್ವೀಟಿ ಎಂದು ಕರೆದು ಅರಗಿಸಿಕೊಳ್ಳುವ ದಾರ್ಷ್ಟ್ಯ – ಇವೆಲ್ಲಾ ಯಾವುದೋ ಸಿನಿಮಾದಲ್ಲಿನ ಕಾಲ್ಪನಿಕ ನಾಯಕನ ಕತೆಯಲ್ಲಿ ಮಾತ್ರ ಸಾಧ್ಯವಾಗುವ ಸಂಗತಿಗಳಂತೆ ಕಾಣಬಹುದು. ಆದರೆ, ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಶಾ ಬದುಕಿನಲ್ಲಿ ಇವೆಲ್ಲಾ ಸಂಗತಿಗಳು ನಿಜವಾಗಿಯೂ ನಡೆದಿದ್ದವು ಎಂಬುದೇ ಅವರ ಕತೆ ಚಲನಚಿತ್ರವಾಗಲು ಎಷ್ಟರಮಟ್ಟಿಗೆ ಸೂಕ್ತ ಎಂಬುದನ್ನು ಹೇಳುತ್ತದೆ.

ಈ ವಾರ ಬಿಡುಗಡೆಯಾದ ‘ಸ್ಯಾಮ್ ಬಹದ್ದೂರ್‌’, ಅಂತಹ ಒಂದು ವರ್ಣಮಯ ಮತ್ತು ಆಸಕ್ತಿಕರ ವ್ಯಕ್ತಿತ್ವದ ಜೀವನದ ಕತೆ, ಪ್ರತಿಭಾವಂತ ನಟ, ಸಮರ್ಥ ನಿರ್ದೇಶಕಿ ಎಲ್ಲವನ್ನೂ ಹೊಂದಿದ್ದ ಕಾರಣ ಸಹಜವಾಗಿಯೇ ಕುತೂಹಲ ಮೂಡಿಸಿದ್ದ ಸಿನಿಮಾ. ನಿರ್ದೇಶಕಿ ಮೇಘನಾ ಗುಲ್ಝಾರ್, ಸ್ಯಾಮ್ ಬಹದ್ದೂರ್ ಕತೆಯನ್ನು ಸರಳವಾಗಿ ಮತ್ತು ನೇರವಾಗಿ ನಿರೂಪಿಸಿದ್ದಾರೆ. ಅದು ಎಷ್ಟರಮಟ್ಟಿಗೆ ಸರಳ ರೇಖೆಯಲ್ಲಿ ಚಲಿಸುತ್ತದೆ ಎಂದರೆ ತೊಟ್ಟಿಲಿನಲ್ಲಿ ಮಗುವನ್ನು ತೋರಿಸುವ ಮೂಲಕವೇ ಚಿತ್ರ ಆರಂಭವಾಗುತ್ತದೆ. ನಂತರದ ಕೆಲವು ನಿಮಿಷಗಳಲ್ಲಿ ಯುವಕ ಸ್ಯಾಮ್‌ನ ಆಕರ್ಷಕ ವ್ಯಕ್ತಿತ್ವ, ಆತನ ಹುಡುಗುತನ, ಸಾಮರ್ಥ್ಯ ಇವೆಲ್ಲದರ ಪರಿಚಯ ಮಾಡಲಾಗುತ್ತದೆ. ಆದರೆ, ಈ ಯಾವ ಘಟನೆಗಳು ವಿಶೇಷವಾಗಿ ಸೆಳೆಯುವುದಿಲ್ಲ.

94 ವರ್ಷಗಳ ತುಂಬು ಜೀವನ ನಡೆಸಿದ, ಎರಡನೇ ವಿಶ್ವಯುದ್ಧದಿಂದ ಹಿಡಿದು ಹಲವಾರು ಸಮರಗಳನ್ನು ನೋಡಿದ ಮತ್ತು ನೇರವಾಗಿ ಭಾಗಿಯಾದ, ಸ್ವಾತಂತ್ರ್ಯಾ ನಂತರದಲ್ಲಿ ದೇಶವನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಮಾಣೆಕ್ ಶಾ ಜೀವನ, ಯಾವುದೇ ಕಾಲ್ಪನಿಕ ಸಂಗತಿಗಳನ್ನು ಸೇರಿಸದೆಯೇ ಅತ್ಯಂತ ಸ್ವಾರಸ್ಯಕರ ಚಿತ್ರಕತೆಯಾಗಲು ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಹೊಂದಿದೆ. ಆದರೆ, ಅದುವೇ ಚಿತ್ರಕ್ಕೆ ದೊಡ್ಡ ತೊಂದರೆಯಾಗಿರುವುದು ವಿಪರ್ಯಾಸ. ಏಕೆಂದರೆ, ಸ್ಯಾಮ್ ಜೀವನದ ಎಷ್ಟೋ ಘಟನೆಗಳು ಪ್ರತ್ಯೇಕ ಸಿನಿಮಾಗಳಾಗುವಷ್ಟು ದೊಡ್ಡ ಸರಕನ್ನು ಹೊಂದಿವೆ. ಹೀಗಿರುವಾಗ ಎರಡೂವರೆ ಗಂಟೆಯಲ್ಲಿ ಹಲವು ದಶಕಗಳ ಕತೆ ಹೇಳಲು ಹೊರಟಿರುವ ನಿರ್ದೇಶಕಿ ಅವಸರಕ್ಕೆ ಬೀಳುತ್ತಾರೆ.

ತೊಟ್ಟಿಲಲ್ಲಿದ್ದ ಸ್ಯಾಮ್ ಮರುಕ್ಷಣ ಸೈನ್ಯ ಸೇರಿರುತ್ತಾನೆ, ಮತ್ತೊಂದು ನಿಮಿಷದಲ್ಲಿ ಯುದ್ಧ ಮಾಡುತ್ತಿರುತ್ತಾನೆ, ಐದು ನಿಮಿಷದಲ್ಲಿ ಯುವತಿಯ ಪ್ರೇಮದಲ್ಲಿ ಬಿದ್ದು, ಮರುಕ್ಷಣದಲ್ಲೇ ಎರಡು ಮಕ್ಕಳ ತಂದೆಯಾಗಿರುತ್ತಾನೆ. ಯಾವ ದೃಶ್ಯಗಳನ್ನೂ ನಿಧಾನವಾಗಿ ಸವಿಯಲು ಬಿಡದೆ, ವಿಕಿಪೀಡಿಯಾದ ಪೇಜಿನಲ್ಲಿ ಮಾಹಿತಿಗಳನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸಿರುವಂತೆ ತೆರೆಯ ಮೇಲೆ ಚಕಚಕನೆ ಕತೆ ಹಾರುತ್ತಾ ಹೋಗುತ್ತದೆ. ಹೀಗಾಗಿ, ಯಾವುದೇ ದೃಶ್ಯದ ಭಾವ ತೀವ್ರತೆಯನ್ನು ಅನುಭವಿಸಲು, ಅದರೊಂದಿಗೆ ಕನೆಕ್ಟ್ ಆಗಲು ಪ್ರೇಕ್ಷಕರಿಗೆ ಸಮಯವೇ ಸಿಗುವುದಿಲ್ಲ. ಜೊತೆಗೆ, ನಿರೂಪಣೆ ಸರಳರೇಖೆಯಲ್ಲಿ ಸಾಗುವುದರಿಂದ ಕತೆ ಮತ್ತಷ್ಟು ಪೇಲವ ಎನಿಸುತ್ತದೆ. ನಾನ್ ಲೀನಿಯರ್ ನಿರೂಪಣೆಯ ಲಾಭವನ್ನು ಅರಿಯಲು ಈ ಚಿತ್ರ ಅತ್ಯಂತ ಸೂಕ್ತ. ಈ ಸವಾಲಿನ ಅರಿವಿದ್ದ ನಿರ್ದೇಶಕಿ ಕತೆಯನ್ನು ಸ್ಯಾಮ್ ಜೀವನದ ಪ್ರಮುಖ ಘಟ್ಟದಿಂದ ಆರಂಭಿಸಿ, ಮತ್ತಷ್ಟು ಆಳಕ್ಕೆ ಇಳಿಯಲು ಯತ್ನಿಸಬಹುದಿತ್ತು.

ಸ್ಯಾಮ್ ವ್ಯಕ್ತಿತ್ವ ಪರಿಚಯ, ಪ್ರೇಮ, ಮದುವೆಯ ದೃಶ್ಯಗಳನ್ನೆಲ್ಲಾ ಬಿಟ್ಟು ಮುಂದಕ್ಕೆ ಬಂದಿದ್ದರೆ, ದೃಶ್ಯಗಳ ನಡುವೆ ಬ್ರೀದಿಂಗ್ ಸ್ಪೇಸ್ ನೀಡಲು ಸಮಯವಿರುತ್ತಿತ್ತೇನೋ. ಕಾಶ್ಮೀರದ ರಾಜ ಹರಿಸಿಂಗ್ ಜೊತೆಗಿನ ಭೇಟಿ ಮತ್ತು 1971ರ ಇಂಡೋ – ಪಾಕ್ ಯುದ್ಧದ ಸಂದರ್ಭಗಳಲ್ಲಿ ಮಾತ್ರ ಚಿತ್ರ ಕೊಂಚ ನಿಂತು ಉಸಿರೆಳೆದುಕೊಳ್ಳುತ್ತದೆ. ಇಲ್ಲಿ ಸುಮ್ಮನೆ ಕತೆ ಹೇಳದೆ, ಸಿನಿಮಾದ ಇತರ ಸಾಧ್ಯತೆಗಳನ್ನು ಬಳಸಿಕೊಂಡು ದೃಶ್ಯವನ್ನು ಕಟ್ಟಿ ಕೊಡಲಾಗಿದೆ. ಇಂಡೋ ಪಾಕ್ ಯುದ್ಧ ಅತ್ಯಂತ ಪ್ರಮುಖ ಘಟನೆಯಾದ್ದರಿಂದ ಅದಕ್ಕೆ ಕೊಂಚ ಸಮಯ ನೀಡಲಾಗಿದೆ. ಸ್ಯಾಮ್ ಮತ್ತು ಪ್ರಧಾನಿ ಇಂದಿರಾ ಗಾಂಧಿ ನಡುವಿನ ಸಂಬಂಧವನ್ನು ಎಕ್ಸ್‌ಪ್ಲೋರ್‌ ಮಾಡಲು ಯತ್ನಿಸಲಾಗಿದೆ. ಅದು ಕೆಲವು ಕಡೆ ಅತ್ಯಂತ ಕುತೂಹಕಾರಿಯಾಗಿ ಮೂಡಿಬಂದಿದ್ದರೂ, ಒಟ್ಟಾರೆ ಫಲಿತಾಂಶ ತೃಪ್ತಿ ಕೊಡುವುದಿಲ್ಲ.

ಯುದ್ದ, ಸೇನೆಯ ಕುರಿತಾದ ಚಿತ್ರವಾದರೂ ಸಿನಿಮಾ ಎಲ್ಲೂ ಅತಿಯಾದ ದೇಶಭಕ್ತಿಯ ಭಾವದಿಂದ ಬಳಲುವುದಿಲ್ಲ ಎಂಬುದು ನಿರ್ದೇಶಕಿ ಮೇಘನಾ ಅವರ ಸಾಧನೆ. ‘ರಾಝಿ’ಯಂತಹ ಉತ್ತಮ ಸಂವೇದನೆಯ ಚಿತ್ರವೊಂದನ್ನು ನೀಡಿದ ನಿರ್ದೇಶಕಿಗೆ ಮಾತ್ರ ಇದು ಸಾಧ್ಯ. ಎಲ್ಲೂ ಅನಗತ್ಯ ಪಾಕ್ ಧೂಷಣೆಯೂ ಇಲ್ಲ. ಸ್ಯಾಮ್‌ನ ದೇಶಪ್ರೇಮಕ್ಕಿಂತ ಹೆಚ್ಚಾಗಿ ಆತನಿಗೆ ತನ್ನ ವೃತ್ತಿ, ಸೇನೆ ಮತ್ತು ಸೈನಿಕರ ಮೇಲಿದ್ದ ಪ್ರೀತಿ, ಅಭಿಮಾನವನ್ನು ಚಿತ್ರ ಎತ್ತಿ ತೋರಿಸುತ್ತದೆ. ಚಿತ್ರದ ಕೆಲವು ಮನ ತಟ್ಟುವ ದೃಶ್ಯಗಳು, ದೇಶ ವಿಭಜನೆಯ ಹಿನ್ನೆಲೆಯಲ್ಲಿ ಮೂಡಿ ಬಂದಿವೆ. ಸೇನೆಯ ಬಳಿ ಇರುವ ನಕ್ಷೆಗಳನ್ನು ವಿಭಜಿಸುವುದು, ಇದುವರೆಗೂ ಒಂದಾಗಿ ಹೋರಾಡಿದ ಸೈನಿಕರು ಈಗ ತಮ್ಮ ತಮ್ಮ ಮತವನ್ನು ಆಧರಿಸಿ ದೇಶವನ್ನು ಆಯ್ಕೆ ಮಾಡಿಕೊಳ್ಳಬೇಕಿರುವುದು, ಪಾಕಿಸ್ತಾನಕ್ಕೆ ತೆರಳುವ ಮೊದಲು ಯಾಹ್ಯಾ ಖಾನ್ ಮಾಡುವ ವಿದಾಯದ ಭಾಷಣ ಇವೆಲ್ಲಾ ದೇಶ ವಿಭಜನೆಯ ಹೊಸ ಬಗೆ ಕತೆಯನ್ನು ಹೇಳಿದೆ.

ದೇಶ ವಿಭಜನೆಯನ್ನು ಪ್ರಾಯುಶಃ ಸೈನಿಕರ ದೃಷ್ಟಿಯಿಂದ ಮತ್ತಾವ ಸಿನಿಮಾವೂ ನೋಡಿಲ್ಲವೇನೋ. ‘ನಾಳೆ ನೀನು ಮತ್ತೆ ಸಿಗುತ್ತಿ ಎಂದು ದಿನವೂ ರಾತ್ರಿ ಖುಷಿಯಾಗಿರುತ್ತಿದ್ದೆ. ಆದರೆ, ಈಗ ಮುಂದೆಂದೂ ನೀನು ಸಿಗದೇ ಇರಲಿ ಎಂದು ಬಯಸುತ್ತಿದ್ದೇನೆ’ ಎಂದು ಮುಂದೆ ಪಾಕಿಸ್ತಾನದ ಜನರಲ್ ಮತ್ತು ಅಧ್ಯಕ್ಷನಾಗುವ ಯಾಹ್ಯಾ ಖಾನ್, ಗೆಳೆಯ ಸ್ಯಾಮ್‌ಗೆ ಹೇಳುವ ಮಾತು ಆ ನೋವನ್ನು ಸಮರ್ಥವಾಗಿ ಬಿಚ್ಚಿಡುತ್ತದೆ.

ಚಿತ್ರ ಹಲವಾರು ಐತಿಹಾಸಿಕ ಘಟನೆಗಳು ಮತ್ತು ವ್ಯಕ್ತಿಗಳನ್ನು ಒಳಗೊಂಡಿರುವುದರಿಂದ ಇತಿಹಾಸ ಹೆಚ್ಚು ಗೊತ್ತಿಲ್ಲದವರಿಗೆ ಕೆಲವು ಕಡೆ ಚಿತ್ರ ಅರ್ಥವಾಗುವುದು ಕಷ್ಟವಾಗಬಹುದು. ಆದರೆ, ಅಗತ್ಯವಿಲ್ಲದ ಕಡೆ ನಿರ್ದೇಶಕಿ ದೃಶ್ಯಗಳನ್ನು ತೀರಾ ವಾಚ್ಯವಾಗಿಸಿ, ಅರ್ಥೈಸಲು ಹೊರಡುತ್ತಾರೆ. ತನ್ನನ್ನು ಸ್ವೀಟಿ ಎಂದು ಕರೆದ ಸ್ಯಾಮ್‌ನನ್ನು ತಪ್ಪಾಗಿ ಅರ್ಥೈಸಿಕೊಂಡ ಪತ್ರಕರ್ತೆಯೊಬ್ಬರು ಮುಖ ಸಿಂಡರಿಸುತ್ತಾಳೆ. ಆದರೆ, ಮರುಕ್ಷಣವೇ ಸ್ಯಾಮ್ ತನ್ನ ಆರ್ಡರ್ಲೀಯನ್ನು ಕೂಡ ಸ್ವೀಟೀ ಎಂದೇ ಕರೆದಾಗ, ಆಕೆಗೆ ವಿಷಯ ಗೊತ್ತಾಗುತ್ತದೆ. ದೃಶ್ಯ ಅಲ್ಲಿಗೇ ನಿಲ್ಲದೆ ಆಕೆಯಿಂದ ‘ಓ ನೀವು ಎಲ್ಲರನ್ನೂ ಸ್ವೀಟೀ ಎಂದೇ ಕರೆಯುತ್ತೀರಾ. ನಾನು ತಪ್ಪು ತಿಳಿದಿಕೊಂಡುಬಿಟ್ಟೆ’ ಎಂದು ಹೇಳಿಸಲಾಗುತ್ತದೆ. ಇವೆಲ್ಲಾ ಎಷ್ಚು ವೇಗವಾಗಿ ನಡೆಯುತ್ತದೆಂದರೆ, ತೀರಾ ನಾಟಕೀಯವೆನಿಸಿಬಿಡುತ್ತದೆ.

ಇಂತಹ ಕೆಲವು ದೃಶ್ಯಗಳು ಚಿತ್ರಕ್ಕೆ ಯಾವುದೇ ರೀತಿಯಲ್ಲೂ ನೆರವಾಗುವುದಿಲ್ಲ. ಕತೆಯಲ್ಲಿ ಹೇಗೆ ಯಾವುದೇ ಆಳ ಮತ್ತು ಲೇಯರ್ ಇಲ್ಲವೂ, ಮಾಣೆಕ್ ಶಾ ವ್ಯಕ್ತಿತ್ವ ಚಿತ್ರಣದಲ್ಲೂ ಯಾವುದೇ ಸಂಕೀರ್ಣತೆಗಳಿಲ್ಲ. ಮಾಡಿದ್ದೆಲ್ಲವೂ ಸರಿ ಇರುವ, ಎಲ್ಲವನ್ನೂ ಜಯಿಸುವ, ಎಲ್ಲರನ್ನೂ ಮಣಿಸುವ ವ್ಯಕ್ತಿಯಾಗಿ ಅವರನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇದು ವಿವಾದ ತಪ್ಪಿಸಿಕೊಳ್ಳಲು ಇರಬಹುದಾದರೂ, ಇದರಿಂದ ಸ್ಯಾಮ್ ಏಕ ಆಯಾಮದ ವ್ಯಕ್ತಿಯಾಗಿ ಬಿಟ್ಟಿದ್ದಾರೆ. ಚಿತ್ರದ ಪೂರ್ತಿ ಭಾರ ಸ್ಯಾಮ್ ಪಾತ್ರದಲ್ಲಿ ನಟಿಸಿರುವ ವಿಕ್ಕಿ ಕೌಶಲ್ ಹೆಗಲ ಮೇಲಿದೆ. ಚಿತ್ರದ ಆರಂಭದಿಂದಲೇ ವಿಕ್ಕಿ, ಸ್ಯಾಮ್‌ನ ಬಾಡಿ ಲ್ಯಾಂಗ್ವೇಜ್, ಮಾತನಾಡುವ ಶೈಲಿ, ಮ್ಯಾನರಿಸಂಗಳನ್ನು ಅಳವಡಿಸಿಕೊಂಡಿದ್ದಾರೆ. ಆದರೆ ಆ ಶೈಲಿ ಯುವಕ ಸ್ಯಾಮ್‌ಗೆ ಅಷ್ಟೇನೂ ಹೊಂದುವುದಿಲ್ಲ, ಆದರೆ, ಚಿತ್ರ ಮುಂದುವರಿದಂತೆ, ಸ್ಯಾಮ್‌ಗೆ ವಯಸ್ಸಾಗುತ್ತಿದ್ದಂತೆ ವಿಕಿಯನ್ನು, ಸ್ಯಾಮ್‌ ಆಗಿ ಸ್ವೀಕರಿಸುವುದು ಸಾದ್ಯವಾಗುತ್ತದೆ.

ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಲು ಫಾತಿಮಾ ಸಾನಾ ಕಷ್ಟಪಡುತ್ತಾರೆ. ಇದರಿಂದಾಗಿ, ಸ್ಯಾಮ್ ಮತ್ತು ಇಂದಿರಾ ನಡುವಣ ಕೆಲವು ದೃಶ್ಯಗಳು ಏರಬೇಕಾದ ಎತ್ತರಕ್ಕೆ ಏರುವುದಿಲ್ಲ. ನೆಹರುವನ್ನು ಭಾವುಕ ಮತ್ತು ದುರ್ಬಲವಾಗಿ ತೋರಿಸುವುದರಿಂದ, ಆ ಪಾತ್ರದಲ್ಲಿ ನಟಿಸಿರುವ ನೀರಜ್ ಕಬಿಗೆ ಹೆಚ್ಚಿನ ಅವಕಾಶವಿಲ್ಲ. ಪೋಷಕ ಪಾತ್ರಗಳಲ್ಲಿ ಸರ್ದಾರ್ ಪಾತ್ರದಲ್ಲಿರುವ ಗೋವಿಂದ ನಾಮ್‌ದೇವ್ ಮಾತ್ರ ಸಣ್ಣ ಅವಕಾಶದಲ್ಲೂ ಗಮನಸೆಳೆಯುತ್ತಾರೆ. ಸ್ಯಾಮ್ ಪತ್ನಿಯ ಪಾತ್ರದಲ್ಲಿ ಸಾನ್ಯಾ ಮಲ್ಹೋತ್ರಾಗೆ ಹೆಚ್ಚಿನ ಕೆಲಸವೇನೂ ಇಲ್ಲ. ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಮನ ಸೆಳೆಯುತ್ತದೆ. ಯುದ್ದ ಮತ್ತು ಹಲವಾರು ಘಟನೆಗಳಿಗೆ ಆರ್ಕೈವಲ್ ದೃಶ್ಯಗಳನ್ನು ಬಳಸಿರುವುದರಿಂದ ಯುದ್ದದ ಅನಗತ್ಯ ವೈಭವೀಕರಣ ತಪ್ಪಿದೆ.

ವಿಶೇಷವೆಂದರೆ ಒಂದೇ ದಿನ ಬಿಡುಗಡೆಯಾದ ಎರಡು ಹಿಂದಿ ಸಿನಿಮಾಗಳಲ್ಲೂ (ಅನಿಮಲ್ ಮತ್ತು ಸ್ಯಾಮ್ ಬಹದ್ದೂರ್) ಪುರುಷಾಧಿಪತ್ಯವಿದೆ. ಆದರೆ, ಭಿನ್ನವಾಗಿದೆ. ಮಾನವ ಇತಿಹಾಸದುದ್ದಕ್ಕೂ ಅನುಸರಿಸಿಕೊಂಡು ಬಂದ, ಬದಲಾಗುತ್ತಾ ಬಂದ ಪುರುಷತ್ವದ ಸ್ವರೂಪಗಳು ಇಲ್ಲಿ ಕಾಣುತ್ತವೆ. ಯುದ್ದಗಳನ್ನು ಗೆಲ್ಲುವ, ಗುಂಡು ತಿನ್ನುವ ಸ್ಯಾಮ್ ಪುರುಷ ಶಕ್ತಿ, ಸಾಮರ್ಥ್ಯದ ಪ್ರತೀಕವಾಗಿಯೇ ಕಂಡುಬರುತ್ತಾರೆ. ಒಂದು ದೃಶ್ಯದಲ್ಲಿ ಸ್ಯಾಮ್ ಹೆದರಿ ಹಿಂದೆ ಬಂದ ಸೈನಿಕರಿಗೆ, ಬಳೆ ಕಳುಹಿಸುವ ಮೂಲಕ ಅವರು ಮತ್ತೆ ಯುದ್ದಕ್ಕೆ ಹೋಗುವಂತೆ ಪ್ರೇರೇಪಿಸುತ್ತಾರೆ. ಈ ಎರಡೂ ಚಿತ್ರಗಳಲ್ಲೂ ನಾಯಕಿಯ ಮುಖ್ಯ ಕಾರ್ಯಕ್ಷೇತ್ರ ತನ್ನ ಮನೆಗೆ ಸೀಮಿತ. ಆದರೆ, ‘ಸ್ಯಾಮ್ ಬಹದ್ದೂರ್’ ಚಿತ್ರದಲ್ಲಿನ ಕಳೆದ ಶತಮಾನದ ಕ್ಯಾಷುವಲ್ ಸೆಕ್ಸಿಸಂ ಅನ್ನು ಈಗಿನ ಕಾಲದ ಸಂವೇದನಗಳಿಂದ ಅಳೆಯುವುದು ತಪ್ಪಾಗಬಹುದೇನೋ. ಜೊತೆಗೆ, ಇಲ್ಲಿ ಅದೇ ಕಾಲದ ಶಿವಲ್ರಿ ಮತ್ತು ಜೆಂಟಲ್‌ಮ್ಯಾನ್ಲಿನೆಸ್ ಕೂಡ ಇದೆ. ಪುರುಷಾಧಿಪತ್ಯದ ಈ ಎರಡು ವಿಭಿನ್ನ ಮುಖಗಳು, ಎರಡು ಬೇರೆ ಸಿನಿಮಾಗಳಲ್ಲಿ, ಒಂದೇ ದಿನ ಅನಾವರಣಗೊಂಡಿರುವುದು ವಿಶೇಷ.

LEAVE A REPLY

Connect with

Please enter your comment!
Please enter your name here