ಶಿವರಾಜಕುಮಾರ್‌ ನಟನೆಯ ‘ಭಜರಂಗಿ 2’ OTTಗೆ ಬರುತ್ತಿದೆ. ಅಕ್ಟೋಬರ್‌ 29ರಂದು ತೆರೆಕಂಡಿದ್ದ ಸಿನಿಮಾ ಆರು ವಾರಗಳ ನಂತರ ಇದೇ 23ರಿಂದ ZEE5ನಲ್ಲಿ ಸ್ಟ್ರೀಮ್‌ ಆಗಲಿದೆ.

ಭಾರೀ ಪ್ರಚಾರದೊಂದಿಗೆ ಇದೇ ಅಕ್ಟೋಬರ್‌ 29ರಂದು ‘ಭಜರಂಗಿ 2’ ಸಿನಿಮಾ ತೆರೆಕಂಡಿತ್ತು. ಕೋವಿಡ್‌ ಸಂಕಷ್ಟದ ನಂತರ ‘ಕೋಟಿಗೊಬ್ಬ2’, ‘ಸಲಗ’ ಚಿತ್ರಗಳ ಬಳಿಕ ತೆರೆಗೆ ಬಂದ ‘ಭಜರಂಗಿ 2’ ಚಿತ್ರಕ್ಕೆ ಉತ್ತಮ ಓಪಿನಿಂಗ್‌ ಕೂಡ ಸಿಕ್ಕಿತ್ತು. ಬಹುದಿನಗಳ ನಂತರ ತಮ್ಮ ನೆಚ್ಚಿನ ನಟನ ಸಿನಿಮಾ ಥಿಯೇಟರ್‌ಗೆ ಬಂದಿದ್ದರಿಂದ ಶಿವರಾಜಕುಮಾರ್‌ ಅಭಿಮಾನಿಗಳು ಉತ್ಸಾಹದಿಂದಿದ್ದರು. ಮಾರ್ನಿಂಗ್‌ ಶೋ ನಡೆಯುತ್ತಿದ್ದ ಸಮಯದಲ್ಲಿ ನಟ ಪುನೀತ್‌ ರಾಜಕುಮಾರ್‌ ಅಗಲಿದ ಸುದ್ದಿ ಹೊರಬಿದ್ದಿತು. ಆ ದಿನ ಥಿಯೇಟರ್‌ಗಳು ಮುಚ್ಚಿದವು. ಅಲ್ಲಿಂದ ಮುಂದೆ ಒಂದು ವಾರ ಜನರು ಥಿಯೇಟರ್‌ ಕಡೆ ಸುಳಿಯಲಿಲ್ಲ. ಈ ಬೆಳವಣಿಗೆಯಿಂದಾಗಿ ‘ಭಜರಂಗಿ 2’ ಸಂಕಷ್ಟಕ್ಕೀಡಾಯ್ತು. ಪುನೀತ್‌ ಅಗಲಿಕೆಯ ನಂತರದ ದಿನಗಳಲ್ಲಿ ಜನರು ನಿಧಾನವಾಗಿ ಥಿಯೇಟರ್‌ ಕಡೆ ಮುಖ ಮಾಡಿದರೂ, ಮೊದಲಿನ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಇತರೆ ಸಿನಿಮಾಗಳು ಬಿಡುಗಡೆಯಾದ್ದರಿಂದ ‘ಭಜರಂಗಿ 2’ ನಿರ್ಮಾಪಕರಿಗೆ ಕೊಂಚ ಹಿನ್ನೆಡೆಯಾಯ್ತು.

ಇದೀಗ ತೆರೆಕಂಡು ಆರು ವಾರಗಳ ನಂತರ ‘ಭಜರಂಗಿ 2’ ಸಿನಿಮಾ ಇದೇ 23ರಿಂದ ZEE5ನಲ್ಲಿ ಸ್ಟ್ರೀಮ್‌ ಆಗಲಿದೆ. ಎ.ಹರ್ಷ ನಿರ್ದೇಶನದಲ್ಲಿ ಶಿವರಾಜಕುಮಾರ್‌ ನಟಿಸಿದ ಮೂರನೇ ಚಿತ್ರವಿದು. ಈ ಹಿಂದೆ ಶಿವರಾಜಕುಮಾರ್‌ ಅವರಿಗಾಗಿ ಹರ್ಷ ‘ವಜ್ರಕಾಯ’, ‘ಭಜರಂಗಿ’ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣದ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ, ಸ್ವಾಮಿ ಜೆ. ಛಾಯಾಗ್ರಹಣವಿದೆ. ಶಿವರಾಜಕುಮಾರ್‌ ಅವರಿಗೆ ನಾಯಕಿಯಾಗಿ ಭಾವನಾ ಇದ್ದು, ಶ್ರುತಿ, ಸೌರವ್‌ ಲೋಕೇಶ್‌ ಇತರೆ ಪ್ರಮಖ ಪಾತ್ರಗಳಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here