ಕನ್ನಡ ಧ್ವಜ ಸುಟ್ಟಿದ್ದು, ಸ್ವಾತಂತ್ರ್ಯ ಹೋರಾಟಗಾರ ರಾಯಣ್ಣನ ಪ್ರತಿಮೆ ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಶಿವರಾಜಕುಮಾರ್ ಆಕ್ರೋಷ ಹೊರಹಾಕಿದರು. ನಿನ್ನೆ ರಾತ್ರಿ ನಡೆದ ‘ಬಡವ ರಾಸ್ಕಲ್’ ಪ್ರೀರಿಲೀಸ್ ಇವೆಂಟ್‌ನಲ್ಲಿ ನಟ ಶಿವರಾಜಕುಮಾರ್ ಸೇರಿದಂತೆ ಕನ್ನಡದ ಹಲವು ತಾರೆಯರು ಈ ಬಗ್ಗೆ ಪ್ರಸ್ತಾಪಿಸಿದರು.
“ದೇಶದ ಪ್ರತೀ ರಾಜ್ಯದವರಿಗೂ ತಮ್ಮದೇ ಆದ ಅಸ್ತಿತ್ವವಿದೆ. ರಾಜ್ಯದ ಭಾಷೆ, ಧ್ವಜ, ಅಸ್ಮಿತೆಗೆ ಪ್ರತಿಯೊಬ್ಬರೂ ಪರಸ್ಪರ ಗೌರವ ಕೊಡುವುದು ಕರ್ತವ್ಯ. ಕನ್ನಡ ಧ್ವಜ ಸುಟ್ಟು ಹಾಕಿದ್ದು, ರಾಯಣ್ಣನ ಪ್ರತಿಮೆ ವಿರೂಪಗೊಳಿಸಿದ ಪ್ರಕರಣಗಳು ಖಂಡನೀಯ. ಕನ್ನಡಿಗರು ಸೌಮ್ಯ ಸ್ವಭಾವದವರು ಎಂದು ಏನು ಮಾಡಿದರು ನಡೆಯುತ್ತದೆ ಎನ್ನುವ ಧೋರಣೆ ಸರಿಯಲ್ಲ. ರಾಜಕಾರಣಿಗಳು ಕೂಡ ಮತಬ್ಯಾಂಕ್ ರಾಜಕೀಯ ಮಾಡದೆ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದರು ಶಿವರಾಜಕುಮಾರ್. ನಿನ್ನೆ ಸಂಜೆ ನಡೆದ ‘ಬಡವ ರಾಸ್ಕಲ್’ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ತಾರೆಯರು ಪ್ರಸ್ತಾಪಿಸಿದರು. “ಮೂರೂವರೆ ದಶಕಗಳ ಕಾಲ ಕನ್ನಡಿಗರು ಪ್ರೀತಿ ಕೊಟ್ಟು ಹಾರೈಸಿದ್ದಾರೆ. ಇದಕ್ಕಿಂತ ದೊಡ್ಡ ಗೌರವ ಮತ್ತೇನಿದೆ? ಕನ್ನಡಕ್ಕಾಗಿ ಜೀವ ಹೋಗುವುದಾದರೂ ಸರಿ” ಎಂದು ಶಿವರಾಜಕುಮಾರ್ ಹೇಳಿದಾಗ ಕಾರ್ಯಕ್ರಮದಲ್ಲಿದ್ದ ಹಲವರು ಭಾವುಕರಾದರು.
ಶಿವರಾಜಕುಮಾರ್ ಅವರಿಗೆ ಮುನ್ನ ಮಾತನಾಡಿದ ನಟಿ ತಾರಾ, ನಟರಾದ ರಂಗಾಯಣ ರಘು, ವಸಿಷ್ಠ ಹಾಗೂ ನೀನಾಸಂ ಸತೀಶ್ ಅವರು ಕನ್ನಡ ಧ್ವಜ ಸುಟ್ಟ ಪ್ರಕರಣವೂ ಸೇರಿದಂತೆ ತೆಲುಗು ಸಿನಿಮಾ ‘ಪುಷ್ಪ’ ಕುರಿತು ಪ್ರಸ್ತಾಪಿಸಿದರು. “ಕನ್ನಡ ಡಬ್ಬಿಂಗ್ ಅವತರಣಿಕೆಗಳಲ್ಲಿ ರಿಲೀಸ್ ಮಾಡುವ ನೆಪದಲ್ಲಿ ಮೂಲ ತೆಲುಗು ಚಿತ್ರವನ್ನು ದೊಡ್ಡ ಸಂಖ್ಯೆಯಲ್ಲಿ ತೆರೆಗೆ ತರುತ್ತಾರೆ. ನೆಪಮಾತ್ರಕ್ಕೆ ಕನ್ನಡ ಡಬ್ಬಿಂಗ್ ಅವತರಣಿಕೆಗಳು ಬರುತ್ತವೆ. ಇದು ನಮ್ಮ ಕನ್ನಡ ಸಿನಿಮಾ ಅಸ್ವಿತ್ವಕ್ಕೆ ಧಕ್ಕೆಯಾಗುತ್ತದೆ. ಈ ಬಗ್ಗೆ ನಾವು ಎಚ್ಚರಿಕೆ ವಹಿಸದಿದ್ದರೆ ಅಪಾಯ” ಎಂದು ನಟಿ, ಎಂಎಲ್‌ಸಿ ತಾರಾ ಪ್ರಸ್ತಾಪಿಸಿದರು. ನಂತರ ಮಾತನಾಡಿದ ನಟ ರಂಗಾಯಣ ರಘು, “ಪಸ್ತುತ ಸರ್ಕಾರದಲ್ಲಿ ಅಧಿಕಾರ ಹೊಂದಿರುವ ತಾರಾ ಅವರೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು” ಎಂದಾಗ ಕನ್ನಡ ಚಿತ್ರರಂಗಕ್ಕೆ ಸೂಕ್ತ ನಾಯಕತ್ವ ಅಗತ್ಯವಿದೆ ಎನ್ನುವ ಮಾತು ಕೇಳಿಬಂತು.
ಸಂಗೀತ ಸಂಯೋಜಕ ಹಂಸಲೇಖ ಸೇರಿದಂತೆ ಹಲವರು ತಮ್ಮ ಮಾತುಗಳಲ್ಲಿ ಶಿವರಾಜಕುಮಾರ್ ಅವರು ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು. “ಶಿವರಾಜಕುಮಾರ್ ನಾಯಕತ್ವದೊಂದಿಗೆ ಕರೆ ಕೊಟ್ಟರೆ ಕನ್ನಡಕ್ಕೆ ಸಂಬಂಧಿಸಿದ ಯಾವುದೇ ಹೋರಾಟಕ್ಕೂ ನಾವು ಸಿದ್ಧ” ಎಂದರು ನಟರಾದ ನೀನಾಸಂ ಸತೀಶ್, ವಸಿಷ್ಠ. ನಂತರ ನಟ ಶಿವರಾಜಕುಮಾರ್ ಮತಾನಾಡುತ್ತಾ, “ಎಲ್ಲಾ ಭಾಷೆಗಳ ಸಿನಿಮಾಗಳನ್ನು ಗೌರವಿಸುವುದರ ಜೊತೆ ನಮ್ಮ ಸಿನಿಮಾಗಳನ್ನು ಪ್ರೀತಿಸೋಣ. ನನ್ನ ಲೀಡರ್‌ಶಿಪ್ ಎನ್ನುವುದು ದೊಡ್ಡ ಮಾತು. ನಾನೂ ನಿಮ್ಮೆಲ್ಲರ ಜೊತೆ ಒಬ್ಬನಾಗಿ ಹೋರಾಟ ನಡೆಸುತ್ತೇನೆ. ಎಲ್ಲರೂ ಒಟ್ಟಾಗಿರೋಣ” ಎನ್ನುವ ಅವರ ಮಾತುಗಳಲ್ಲಿ ಮೊದಲಿನ ಉತ್ಸಾಹ ಇರಲಿಲ್ಲ. ನಟ ಪುನೀತ್ ಅಗಲಿಕೆಯ ನೋವಿನಿಂದ ಅವರಿನ್ನೂ ಹೊರಬಂದಂತಿರಲಿಲ್ಲ. ಅವರು ಸೇರಿದಂತೆ ಹಲವು ತಾರೆಯರ ಮಾತುಗಳಲ್ಲಿ ಅಗಲಿದ ಪುನೀತ್ ರಾಜಕುಮಾರ್ ಕುರಿತ ವಿಷಾದದ ಛಾಯೆ ಮನೆಮಾಡಿತ್ತು.