ಸಹೋದರ ಪುನೀತ್ ಅಗಲಿಕೆಯ ನಂತರ ಶಿವರಾಜಕುಮಾರ್ ಮೊದಲ ಬಾರಿಗೆ ಇಂದು ಸಿನಿಮಾ ಥಿಯೇಟರ್‌ನಲ್ಲಿ ಕಾಣಿಸಿಕೊಂಡರು. ಬೆಂಗಳೂರು ಮೆಜಸ್ಟಿಕ್‌ ಪ್ರದೇಶದ ಅನುಪಮ ಚಿತ್ರಮಂದಿರದಲ್ಲಿ ಇಂದು ಅವರು ಅಭಿಮಾನಿಗಳೊಂದಿಗೆ ‘ಭಜರಂಗಿ 2’ ಚಿತ್ರವನ್ನು ವೀಕ್ಷಿಸಿದರು.

ನಟ ಶಿವರಾಜಕುಮಾರ್ ಅಭಿನಯದ ‘ಭಜರಂಗಿ 2’ ಸಿನಿಮಾ ತೆರೆಕಂಡ ದಿನವೇ ಪುನೀತ್ ರಾಜಕುಮಾರ್ ನಮ್ಮನ್ನು ಅಗಲಿದರು. ದೊಡ್ಡ ನಟನನ್ನು ಕಳೆದುಕೊಂಡ ಚಿತ್ರರಂಗ ಸಹಜವಾಗಿಯೇ ಕಳೆಗುಂದಿತ್ತು. ಜನರು ಕೂಡ ಥಿಯೇಟರ್‌ಗಳಿಂದ ದೂರವಿದ್ದರು. ಈ ಚಿತ್ರ ತೆರೆಕಂಡು ಈಗ ಮೂರನೇ ವಾರ. ಸಹೋದರ ಅಗಲಿಕೆಯ ದುಃಖದ ಮಧ್ಯೆಯೂ ಶಿವರಾಜಕುಮಾರ್‌ ಸಿನಿಮಾ ವೀಕ್ಷಿಸಿದರು. “ಅಪ್ಪು ಅಗಲಿಕೆಯ ನೋವು ಜೀವನವಿಡೀ ಜೊತೆಗಿದ್ದೇ ಇರುತ್ತದೆ. ಎಲ್ಲಾ ನೋವುಗಳ ಮಧ್ಯೆಯೂ ಬದುಕು ನಡೆಯಬೇಕು. ಸಿನಿಮಾ ನಡೆಯಬೇಕು. ವರ್ಷಗಟ್ಟಲೆ ಸಿನಿಮಾಗಾಗಿ ದುಡಿದ ಕಲಾವಿದರ, ತಂತ್ರಜ್ಞರ ಹಲವು ಕನಸು ಕಂಡಿರುತ್ತಾರೆ. ಶೋ ಮಸ್ಟ್ ಗೋ ಆನ್‌. ಜನರು ‘ಭಜರಂಗಿ 2’ ಸಿನಿಮಾವನ್ನು ಪ್ರೀತಿಯಿಂದ ವೀಕ್ಷಿಸುತ್ತಿದ್ದಾರೆ” ಎಂದು ಸಿನಿಮಾ ಬೆಂಬಲಿಸಿದ ಪ್ರೇಕ್ಷಕರಿಗೆ ಅವರು ಕೃತಜ್ಞತೆ ಅರ್ಪಿಸಿದರು.

‘ಭಜರಂಗಿ 2’ ಚಿತ್ರವನ್ನು ಪುನೀತ್‌ ನೋಡಲಾಗಲಿಲ್ಲ ಎನ್ನುವ ನೋವು ಶಿವರಾಜಕುಮಾರ್ ಅವರಲ್ಲಿತ್ತು. “ಅವನು ಈ ಸಿನಿಮಾ ನೋಡಲು ತುಂಬಾ ಉತ್ಸುಕನಾಗಿದ್ದ. ದುರದೃಷ್ಟವತಾಶ್ ಸಿನಿಮಾ ಬಿಡುಗಡೆಯಾದ ದಿನದಂದೇ ಅವನು ನಮ್ಮನ್ನು ಬಿಟ್ಟು ಹೊರಟ. ಆದರೇನಂತೆ ಅವನ ಅಭಿಮಾನಿಗಳು ಈ ಸಿನಿಮಾ ನೋಡುತ್ತಿದ್ದಾರೆ. ಆ ಮೂಲಕ ಅಪ್ಪುನೇ ಸಿನಿಮಾ ನೋಡಿದಂತಾಗುತ್ತಿದೆ” ಎಂದರವರು. ಅವರೊಂದಿಗೆ ಚಿತ್ರದ ನಿರ್ದೇಶಕ ಹರ್ಷ, ಪ್ರಮುಖ ಕಲಾವಿದರಾದ ಸೌರವ್ ಲೋಕಿ, ಪ್ರಸನ್ನ, ಚೆಲುವರಾಜು, ಗಿರೀಶ್‌ ಮತ್ತಿತರರು ಇದ್ದರು.

‘ಭಜರಂಗಿ 2’ ಚಿತ್ರದ ನಿರ್ದೇಶಕ ಹರ್ಷ ಮಾತನಾಡಿ, “ಅಪ್ಪು ಸರ್ ಅಗಲಿಕೆಯ ನೋವು ನಮ್ಮನ್ನು ತುಂಬಾ ಕಾಡಿತ್ತು. ಈ ದುಃಖದ ಜೊತೆ ಸಿನಿಮಾ ಮಾಡಿದ ನಮ್ಮೆಲ್ಲರ ಕನಸುಗಳೂ ಕಮರಿದ್ದವು. ಅಪ್ಪು ಸರ್ ಅಗಲಿಕೆಯ ಕೆಲ ದಿನಗಳ ನಂತರ ಪ್ರೇಕ್ಷಕರು ಮತ್ತೆ ಥಿಯೇಟರ್‌ಗೆ ಬರತೊಡಗಿದರು. ‘ಭಜರಂಗಿ 2’ ಸಿನಿಮಾವನ್ನು ಮೆಚ್ಚಿಕೊಂಡರು. ಇಂದು ಮೊದಲ ಬಾರಿ ಶಿವಣ್ಣ ಥಿಯೇಟರ್‌ಗೆ ಬಂದು ಪ್ರೇಕ್ಷಕರೊಂದಿಗೆ ಸಿನಿಮಾ ವೀಕ್ಷಿಸಿದರು” ಎಂದರು. ಶಿವರಾಜಕುಮಾರ್ ಅಭಿನಯದ ‘ವೇದ’ ಚಿತ್ರವನ್ನು ಹರ್ಷ ಅವರೇ ನಿರ್ದೇಶಿಸಿದ್ದು, ಇದು ಶಿವರಾಜ್‌ ಅವರ 125ನೇ ಸಿನಿಮಾ ಆಗಲಿದೆ.

LEAVE A REPLY

Connect with

Please enter your comment!
Please enter your name here