ಕ್ರೈಂ ಥ್ರಿಲ್ಲರ್ ವೆಬ್ ಸರಣಿಗಳ ಪೈಕಿ ನಿರೀಕ್ಷೆ ಹುಟ್ಟಿಸಿದ್ದ ಮತ್ತೊಂದು ಸರಣಿ ‘ಆರ್ಯ 2’. ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ಈ ಸರಣಿ ನೋಡಬೇಕೋ ಅಥವಾ ಕಡೆಗಣಿಸಿ ಮುಂದೆ ಸಾಗಬೇಕೋ ಎಂಬ ಸೂಚನೆ ಕೊಡುತ್ತದೆ ಈ ವಿಮರ್ಶೆ.
‘ಆರ್ಯ 2’ ಬಗ್ಗೆ ಏನೇ ಹೇಳಲು ಶುರು ಮಾಡುವ ಮೊದಲು ಒಂದು ಮಾತು ಹೇಳಲೇಬೇಕು. ಆರ್ಯ ಪಾತ್ರದಲ್ಲಿ ಸುಶ್ಮಿತಾ ಸೇನ್ ಅಭಿನಯಕ್ಕೆ ನೂರಕ್ಕೆ ನೂರು ಅಂಕ. ಸ್ವಾಭಿಮಾನಿ ಮಹಿಳೆಯಾಗಿ, ಜವಾಬ್ದಾರಿಯುತ ತಾಯಿಯಾಗಿ, ಸಂಕಷ್ಟ ನಿಭಾಯಿಸುವ ಗಟ್ಟಿಗಿತ್ತಿ ವಿಧವೆಯಾಗಿ ಸುಶ್ಮಿತಾ ಮನಸೂರೆಗೊಳಿಸುತ್ತಾರೆ. ಅಮೇಝಾನ್ ಪ್ರೈಮ್‌ನಲ್ಲಿ ಬಿತ್ತರವಾಗುತ್ತಿರುವ ಆರ್ಯ ಗೃಹಿಣಿಯೊಬ್ಬಳು ಡಾನ್ ಆಗುವ ಡಚ್ ಭಾಷೆಯ ವೆಬ್ ಸರಣಿ ‘ಪೋನ್ಜಾ಼’ದ ಭಾರತೀಯ ಆವೃತ್ತಿ.
‘ಆರ್ಯ 1’ ನಿಂತಲ್ಲಿಂದಲೇ ‘ಆರ್ಯ 2’ ಮುಂದೆ ಸಾಗುತ್ತದೆ. ರಷ್ಯನ್ನರ ಜತೆಗೆ 300 ಕೋಟಿ ರೂಪಾಯಿಯ ಭಾರಿ ಮೊತ್ತದ ಡೀಲ್ ಅಸ್ತವ್ಯಸ್ತವಾಗಿದೆ. ಆ ವಹಿವಾಟಿನಲ್ಲಿ ಕಾನೂನಿನ ಕೈಗೆ ಸಿಕ್ಕಿಬಿದ್ದ ಆರ್ಯಳ ತಂದೆ ಹಾಗೂ ಮಾವ ವಿಚಾರಣೆ ಎದುರಿಸುತ್ತಿದ್ದಾರೆ. ಅವರ ಮೇಲಿನ ಆರೋಪ ಸಂಪೂರ್ಣ ನಿಂತಿರುವುದು ಆರ್ಯಳ ಬಳಿಯಿರುವ ಪೆನ್‌ಡ್ರೈವ್ ಮತ್ತು ಅವಳ ಹೇಳಿಕೆಯ ಮೇಲೆ. ಅದಕ್ಕಾಗಿ ವಿಟ್ನೆಸ್ ಪ್ರೊಟೆಕ್ಷನ್ ಪ್ರೋಗ್ರಾಂ ಅಡಿಯಲ್ಲಿ ಎಸಿಪಿ ಯೂನಿಸ್ ಖಾನ್ (ವಿಕಾಸ್ ಕುಮಾರ್) ಅವಳಿಗೆ ರಕ್ಷಣೆ ಕೊಡಿಸುತ್ತಿದ್ದಾನೆ. ಆದರೆ ಈ ಪ್ರೊಟೆಕ್ಷನ್ ಪ್ರೋಗ್ರಾಮೇ ಅವಳಿಗೆ ಮುಳುವಾಗುವುದು ವ್ಯವಸ್ಥೆಯ ವ್ಯಂಗ್ಯ. ಆದರೆ ನಮ್ಮ ದೇಶದಲ್ಲಿ ಅಂಥದ್ದೊಂದು ವ್ಯವಸ್ಥೆಯೇ ಇಲ್ಲದಿರುವುದು ಕತೆಗಾರರ ಜ್ಞಾನದ ವಿಪರ್ಯಾಸ.
ರಾಥೋರ್‌ದ್ವಯರು (ಜಯಂತ್ ಕ್ರಿಪಲಾನಿ ಮತ್ರು ಅಂಕುರ್ ಭಾಟಿಯಾ) ಮತ್ತು ಶೇಖಾವತ್ (ಆಕಾಶ್ ಖುರಾನಾ) ಪಾತ್ರಧಾರಿಗಳಿರುವ ‘ಆರ್ಯ 2’ ಕತೆ ನಡೆಯುವುದು ರಾಜಸ್ಥಾನದಲ್ಲಿ. ಬೆಂಗಳೂರಿನಿಂದ ರಾಜಸ್ಥಾನಕ್ಕೆ ಸೆಕೆಂಡ್ ಕ್ಲಾಸ್ ರೈಲಿನಲ್ಲಿ ಎಷ್ಟು ಹೋದರೂ ಮುಗಿಯದಂತೆ ಭಾಸವಾಗುವ ಸುದೀರ್ಘ ಪಯಣದ ಹಾದಿಯಲ್ಲಿ ಚಿತ್ರಕತೆ ಸಾಗುತ್ತದೆ. ತನ್ನ ತಂದೆಯ ಸಾವನ್ನು ಕಣ್ಣಾರೆ ಕಂಡ ಮೂರನೇ ಮಗ ಆದಿತ್ಯ (ಪ್ರತ್ಯಕ್ಷ್ ಪನ್ವಾಲ್) ಆಘಾತದಿಂದ ಹೊರಬರಲು ಮನಶಾಸ್ತ್ರಜ್ಞರ ಸಹಾಯ ಪಡೆಯುವ ಸ್ಥಿತಿಯಲ್ಲಿದ್ದರೆ ಮಗಳು ಅರುಂಧತಿಯೂ (ವಿರ್ತಿ ವಾಘನಿ) ಆತ್ಮಹತ್ಯೆಗೆ ಸ್ವಯಂ ಪ್ರಚೋದನೆ ಮಾಡಿಕೊಳ್ಳುವ ವಿಕ್ಷಿಪ್ತ ಮನಸ್ಥಿಯಲ್ಲಿದ್ದಾಳೆ. ಹೀಗಿರುವಾಗ ಆರ್ಯಳ ಪಾಲಿಗೆ ಊರುಗೋಲಾಗಿ ಇರುವುದು ದೊಡ್ಡ ಮಗ ವೀರ್ (ವಿರೇನ್ ವಝೀರಾನಿ) ಮಾತ್ರ. ಇವೆಲ್ಲವುಗಳ ನಡುವೆ ತನ್ನ ಮಗನ ಸಾವಿಗೆ ಆರ್ಯಳನ್ನು ಕೊಲ್ಲುವ ಮೂಲಕ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುವ ಮಾವ ಶೇಖಾವತ್ ಇದ್ದಾನೆ.
ಮೊದಲ ಸೀಸನ್‌ನಲ್ಲಿ ಪುರುಷ ಪಾತ್ರಗಳೇ ಹೆಚ್ಚು ವಿಜೃಂಭಿಸಿದ್ದರೆ ಎರಡನೆಯದ್ದರಲ್ಲಿ ಹೆಚ್ಚೆಚ್ಚು ಮಹಿಳಾ ಪಾತ್ರಗಳು ಕತೆಗೆ ಕೊಂಡಿಯಾಗಿವೆ. ಗರ್ಭಿಣಿಯಾಗಿ ಸುಗಂಧಾ ಗಾರ್ಗ್ ಆಂಗಿಕ ಅಭಿನಯ ಆಕೆ ಗರ್ಭಿಣಿಯಲ್ಲ ಎಂಬ ಭಾವವನ್ನೇ ಮೂಡಿಸುವುದು ಅದೇಕೋ ಗೊತ್ತಾಗಲಿಲ್ಲ. ಬಹುಶಃ ನಿಧಾನಗತಿಯಲ್ಲಿ ಸಾಗುವ ಕತೆ ಇಂಥ ಉಳಿದ ವಿಚಾರಗಳ ಬಗೆಗೆ ಗಮನ ಹರಿಯುವಂತೆ ಮಾಡಿದ್ದಾಗಿರಬೇಕು. ಇನ್‌ಸ್ಪೆಕ್ಟರ್ ಸುಶೀಲಾ ಶೇಖ್ ಪಾತ್ರದಲ್ಲಿ ಗೀತಾಂಜಲಿ ಕುಲಕರ್ಣಿ ನಟನೆ ಪರಿಣಾಮಕಾರಿ. ಹಾಗೆಯೇ ಪ್ರಾಸಿಕ್ಯೂಟರ್ ಪಾತ್ರದಲ್ಲಿ ದಿಲ್ನಾಝ್ ಇರಾನಿ ಅಭಿನಯವೂ ಚೆನ್ನಾಗಿಯೇ ಇದೆಯಾದರೂ ಸ್ವತಃ ವಿಚಾರಣಾ ಕೊಠಡಿಗೇ ಬಂದು ಆಕೆ ಆರ್ಯಳನ್ನು ವಿಚಾರಣೆ ಮಾಡುವ ಸನ್ನಿವೇಶ ಭಾರತೀಯ ಕಾನೂನು ವ್ಯವಸ್ಥೆಯಲ್ಲಂತೂ ಇಲ್ಲ.
ಕತೆ ರಾಜಸ್ಥಾನದಲ್ಲಿ ನಡೆಯುತ್ತದೆ ಎಂಬುದಕ್ಕೆ ಅಲ್ಲಿನ ವಿಶೇಷ ಭೂಭಾಗವನ್ನು ಹಿನ್ನೆಲೆಯಲ್ಲಿ ತರಬಹುದಿತ್ತು. ಅದಕ್ಕೆ ಬದಲು ತೆರೆಯ ಮೇಲೆ ಬರುವ ವಾಹನಗಳ ನಂಬರ್ ಪ್ಲೇಟುಗಳಷ್ಟೇ ರಾಜಸ್ಥಾನದ ಹಿನ್ನೆಲೆಗೆ ಸಾಕ್ಷಿಯಾಗಿರುವುದರ ಹೊಣೆಯನ್ನು ಛಾಯಾಗ್ರಹಕನ ಹೆಗಲಿಗೆ ಹಾಕಬೇಕೋ ಅಥವಾ ನಿರ್ದೇಶಕನ ಕೊರಳಿಗೆ ತೂಗಬೇಕೋ ಎಂಬ ಬಗ್ಗೆ ವೈಯಕ್ತಿಕವಾಗಿ ನನ್ನಲ್ಲಿ ಗೊಂದಲವಿದೆ. ಫ್ಯಾಮಿಲಿ ಮ್ಯಾನ್‌ನಂಥ ವೆಬ್ ಸೀರೀಸ್ ಒಂದು ಕಂತು ನೋಡೋಣವೆಂದು ಕೂತರೆ ಮರುದಿನದ ಕೆಲಸ ಕಾರ್ಯಗಳನ್ನೆಲ್ಲ ಮರೆಸಿ ರಾತ್ರಿ ಪೂರ್ತಿ ಒಂದರ ಮೇಲೊಂದು ನೋಡಿಸಿಕೊಂಡು ಹೋಗುತ್ತದೆ. ಆದರೆ ಫ್ಯಾಮಿಲಿ ವುಮೆನ್ ಆಗಿ ಸುಶ್ಮಿತಾ ಸೇನ್ ನಟಿಸಿದ ಆರ್ಯ, ಎರಡು ಎಪಿಸೋಡು ನೋಡುವಲ್ಲಿಗೇ ನಿದ್ದೆ ಹತ್ತಿಸುತ್ತದೆ. ಏಕೆಂದರೆ ಮಾಜಿ ಭುವನ ಸುಂದರಿಯ ಅಭಿನಯದ ಹೊರತಾಗಿ ನೋಡಿಸಿಕೊಂಡು ಹೋಗುವ ಅಂಶಗಳು ಹೆಚ್ಚಾಗಿ ಇಲ್ಲ. ಹಾಂ, ಅಂದಹಾಗೆ ಈ ಹೆಂಗಸು ತನ್ನೊಳಗೆ ಇನ್ನೂ ಒಂದಷ್ಟು ರಹಸ್ಯಗಳನ್ನು ಇಟ್ಟುಕೊಂಡಿದ್ದಾಳೆ ಎಂಬ ಸೂಚನೆಯೊಂದಿಗೆ ಕೊನೆಯ ಕಂತು ಮುಕ್ತಾಯವಾಗುತ್ತದೆ. ಆದರೆ ತಟ್ಟೆಯಲ್ಲಿರುವ ಹೋಳಿಗೆ ತಿಂದು ಮುಗಿಸುವುದೇ ಕಷ್ಟವಾದಾಗ ಇನ್ನೊಂದು ಹೋಳಿಗೆ ಬೇಕು ಎಂಬ ಆಸೆ ಮೂಡುವುದು ಕಷ್ಟ.