ಕೇಕ್‌ ಬಾರಿಂಗ್‌ ಚಟುವಟಿಕೆಯನ್ನು ಒಂದು ಹುಡುಗಾಟಿಕೆಯಿಂದ ತೋರಿಸಿರುವುದರಿಂದ ಮೊದಲರ್ಧ ಸ್ವಲ್ಪ ಬೋರ್ ಹೊಡೆಸುತ್ತದೆ. ಎರಡನೇ ಆಯಾಮದ ಭಾವುಕತೆ ಮತ್ತು ಗಂಭೀರತೆ ಈ ಕೊರೆಯನ್ನು ಮುಚ್ಚುತ್ತದೆ. ಚಿತ್ರದ ಅಂತ್ಯ ಮನಸ್ಸು ಮುಟ್ಟುತ್ತದೆ. ಒಮ್ಮೆ ನೋಡಬಹುದಾದ ಉತ್ತಮ ಪ್ರಯತ್ನ. ‘ಸಿಟ್ಟಿಂಗ್ ಇನ್ ಬಾರ್ಸ್ ವಿತ್ ಕೇಕ್’ ಸಿನಿಮಾ ಆಮೇಜಾನ್ ಪ್ರೈಮ್‌ನಲ್ಲಿ stream ಆಗುತ್ತಿದೆ.

ಟ್ರಿಶ್ ಸೀ ನಿರ್ದೇಶನದ ‘ಸಿಟ್ಟಿಂಗ್ ಇನ್ ಬಾರ್ಸ್ ವಿತ್ ಕೇಕ್’ ಚಿತ್ರ ಇಬ್ಬರು ಗೆಳತಿಯರ ಕಥಾನಕ. ಜೇನ್ ಪಾತ್ರದಲ್ಲಿ ಯಾರಾ ಶಾಹಿದಿ ಮತ್ತು ಕೊರೀನ್ ಪಾತ್ರದಲ್ಲಿ ಒಡೆಸ್ಸಾ ನಟಿಸಿದ್ದಾರೆ. ಇದೊಂದು ಸರಳವಾದ ಕಥೆ. ಇಬ್ಬರು ಬಾಲ್ಯದ ಸ್ನೇಹಿತೆಯರು ಜೇನ್ ಮತ್ತು ಕೊರೀನ್ ತಮ್ಮ ಯೌವ್ವನದಲ್ಲೂ ಒಟ್ಟಿಗೆ ರೂಮ್ ಮೇಟುಗಳಂತೆ ವಾಸಿಸುತ್ತಾ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುವತ್ತಾ ಕನಸಿನ ನಗರಿಯಾದ ಲಾಸ್ ಎಂಜಲೀಸ್ ಅಲ್ಲಿ ವಾಸಿಸುತ್ತಿರುತ್ತಾರೆ.

ಕಾಲೇಜು ಮುಗಿಸಿ ವಯಸ್ಕರಾಗಿ ತಮ್ಮ ತಮ್ಮ ಜೀವನದ ಹಾದಿ ಕಂಡುಕೊಳ್ಳುವ ಮಾರ್ಗದಲ್ಲಿ ಇನ್ನೂ ಜವಾಬ್ದಾರಿಯಿಂದ ಇರಬೇಕಿತ್ತೇನೋ ಅಥವಾ ಇನ್ನೂ ಹುಡುಗಾಟತನದಲ್ಲಿ ಸ್ವಲ್ಪ ಇರಬಹುದಿತ್ತೇನೋ ಎಂದು ನಮ್ಮನ್ನು ನಾವು ಕೇಳಿಕೊಳ್ಳುವಂತೆ ಮಾಡುವ ಚಿತ್ರ ಇದು. ಇಬ್ಬರು ಭಿನ್ನ ಸ್ವಭಾವದ ಜೀವದ ಗೆಳತಿಯರ ಚಿತ್ರ. ಕೊರೀನ್ ನಾಳೆಗಳ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದ ಬಿಂದಾಸ್ ಸ್ವಭಾವದ ಹುಡುಗಿಯಾದರೆ, ಜೇನ್ ಬಹಳ ಜವಾಬ್ದಾರಿ ಇರುವ ಗಂಭೀರ ಸ್ವಭಾವದ ಯುವತಿ.

ಕೊರೀನ್‌ಗೆ ಹಾಡುವುದು ಜೀವವಾದರೆ ಜೇನ್‌ಗೆ ಬೇಕಿಂಗ್ ಜೀವ. ಕೊರೀನ್ ವಿಶಾಲವಾದ ಕನಸುಗಳ ಹುಡುಗಿಯಾದರೆ ಜೇನ್ ಒಂದು ಗುರಿಯತ್ತ ಕಣ್ಣು ನೆಟ್ಟಿರುವ ಯುವತಿ. ಆದರೂ ಒಬ್ಬರಿಗೊಬ್ಬರು ಜೀವ. ಒಬ್ಬರಿಗೊಬ್ಬರಿಗೆ ಒತ್ತಾಸೆಯಾಗಿ ಇರಲು ಇಬ್ಬರೂ ಸದಾ ಸಿದ್ಧ. ಜೇನ್ ಸ್ವಲ್ಪ ಸಂಕೋಚದ ಯುವತಿ. ಕೊರೀನ್ ಅವಳಿಗೆ ಜನಗಳನ್ನು ಪರಿಚಯ ಮಾಡಿಕೊಳ್ಳಲು, ಹುಡುಗರನ್ನು ಭೇಟಿಯಾಗಲು ಒಂದು ಉಪಾಯ ಹೇಳಿಕೊಡುತ್ತಾಳೆ. ಜೇನ್ ಬಹಳ ಇಷ್ಟಪಡುವ ಬೇಕಿಂಗ್ ಕಲೆ ಉಪಯೋಗಿಸಿಕೊಂಡು ವಾರವಾರವೂ ಒಂದೊಂದು ಬಗೆಯ ಕೇಕ್ ಮಾಡಿ ಬಾರುಗಳಿಗೆ ತೆಗೆದುಕೊಂಡು ಹೋಗಿ ಯುವಕರಿಗೆ ಹಂಚುವುದು. ಆ ಮೂಲಕ ಬೇರೆ ಬೇರೆ ಯುವಕರನ್ನು ಪರಿಚಯ ಮಾಡಿಕೊಂಡು ಸ್ನೇಹವಲಯ ಮತ್ತು ಪ್ರೇಮವಲಯ ವಿಸ್ತಾರ ಮಾಡಿಕೊಳ್ಳುವುದು ಅನ್ನುವುದು ಕೊರೀನ್ ಐಡಿಯಾ.

ಹೀಗೇ ಒಟ್ಟು 50 ವಾರಗಳು 50 ಕೇಕು ಮಾಡಿಕೊಂಡು ಹೋಗುವುದು ಎಂದು ಇವರಿಬ್ಬರ ಯೋಜನೆ. ಇದಕ್ಕೆ ಕೇಕ್‌ ಬಾರಿಂಗ್‌ ಎಂಬ ಹೆಸರನ್ನೂ ಕೊಡುತ್ತಾರೆ. ಯೋಜನೆ ಶುರು ಆಗುತ್ತೆ. ಏತನ್ಮಧ್ಯೆ ಜೇನ್ ತಾನು ಕೆಲಸ ಮಾಡುವ ಆಫೀಸಿನಲ್ಲಿ ಒಬ್ಬನೊಂದಿಗೆ ಸಲುಗೆ ಬೆಳೆಸಿಕೊಳ್ಳುತ್ತಾಳೆ. ಅಷ್ಟರಲ್ಲಿ ಕೊರೀನ್‌ಗೆ ಕ್ಯಾನ್ಸರ್ ಎಂದು ತಿಳಿಯುತ್ತದೆ. ಕಥೆ ಕೊನೆಗೆ ಹೇಗೆ ಅಂತ್ಯವಾಗುತ್ತದೆ ಎನ್ನುವುದಕ್ಕೆ ಚಿತ್ರ ನೋಡಬೇಕು. ಅಂತ್ಯದವರೆಗೂ ಗೆಳತಿಯರ ಬಾಂಧವ್ಯದ ಮನಸ್ಸು ಮುಟ್ಟುವ ಹಲವಾರು ಸನ್ನಿವೇಶಗಳಿವೆ. ಅಪ್ಪಟ ಗೆಳೆತನ ಹೇಗಿರುತ್ತದೆ ಎನ್ನುವುದರ ನಿದರ್ಶನ ಈ ಚಿತ್ರದಲ್ಲಿದೆ.

ಚಿತ್ರದಲ್ಲಿ ಹೇಳಿಕೊಳ್ಳುವಂತ ಕಥೆ ಇಲ್ಲ. ಶುರುವಿನಲ್ಲಿ ಅಂತೂ ಬಹಳ ಬಾಲಿಶ ಎಂದೇ ಅನ್ನಿಸುತ್ತದೆ. ಅನವಶ್ಯಕ ಕುಡಿತ ಮತ್ತು ಮಾದಕ ದ್ರವ್ಯದ ದೃಶ್ಯಗಳು ಕಿರಿಕಿರಿ ಉಂಟುಮಾಡುತ್ತದೆ. ಹತ್ತರಲ್ಲಿ ಹನ್ನೊಂದು ಎನಿಸಿಬಿಡುತ್ತದೆ ಅನ್ನುವಷ್ಟರಲ್ಲೇ ಮೊದಲರ್ಧ ಮುಗಿಯುತ್ತಿದ್ದಂತೆ ಚಿತ್ರ ಗಾಢವಾಗಿ ಮನಸ್ಸಲ್ಲಿ ಇಳಿಯುತ್ತಾ ಹೋಗುತ್ತದೆ. ಆಯಾಮಗಳು ಬದಲಾಗುತ್ತವೆ. ಪಾತ್ರಗಳು ಪ್ರಬುದ್ಧವಾಗುತ್ತವೆ. ಸನ್ನಿವೇಶ ಗಂಭೀರವಾಗುತ್ತದೆ. ಜೇನ್‌ಳ ಕೇಕ್ ಬಾರಿಂಗ್ ಚಟುವಟಿಕೆ ಒಂದು ಅರ್ಥವನ್ನು ಪಡೆದುಕೊಳ್ಳಲು ಶುರುವಾಗುತ್ತದೆ.

ಚಿತ್ರದ ಮೊದಲನೇ ಅರ್ಧದಲ್ಲೂ ಇದೇ ಅಂಶವನ್ನು ಮತ್ತಷ್ಟು ಬೆಳೆಸಬಹುದಿತ್ತು ಅನ್ನಿಸುತ್ತದೆ. ಅಪ್ಪ, ಅಮ್ಮನ ಲಾಯರ್ ಕನಸನ್ನು ತನ್ನದಾಗಿಸಿಕೊಳ್ಳಲು ಮಾಡುವ ಜೇನ್‌ಳ ವ್ಯರ್ಥ ಪ್ರಯತ್ನ, ಬೇಕರ್ ಆಗಬೇಕೆಂಬ ತನ್ನ ಕನಸನ್ನು ಅವರಿಗೆ ಅರ್ಥ ಮಾಡಿಸುವ ಪ್ರಯತ್ನ ಇದೆಲ್ಲವನ್ನೂ ಇನ್ನಷ್ಟು ಪರಿಣಾಮಕಾರಿಯಾಗಿ ತೋರಿಸುವತ್ತ ಪ್ರಯತ್ನ ಮಾಡಬಹುದಿತ್ತು. ಬದಲಿಗೆ ಬರೀ ಯುವತಿಯರ ಕೇಕ್‌ ಬಾರಿಂಗ್‌ ಚಟುವಟಿಕೆಯನ್ನು ಒಂದು ಹುಡುಗಾಟಿಕೆಯಿಂದ ತೋರಿಸಿಬಿಟ್ಟಿರುವುದರಿಂದ ಮೊದಲರ್ಧ ಸ್ವಲ್ಪ ಬೋರ್ ಹೊಡೆಸುತ್ತದೆ. ಎರಡನೇ ಆಯಾಮದ ಭಾವುಕತೆ ಮತ್ತು ಗಂಭೀರತೆ ಈ ಕೊರೆಯನ್ನು ಮುಚ್ಚುತ್ತದೆ. ಎಲ್ಲ ಪಾತ್ರಧಾರಿಗಳ ಅಭಿನಯ ಇಷ್ಟವಾಗುತ್ತದೆ. ಚಿತ್ರದ ಅಂತ್ಯ ಮನಸ್ಸು ಮುಟ್ಟುತ್ತದೆ. ಒಮ್ಮೆ ನೋಡಬಹುದಾದ ಉತ್ತಮ ಪ್ರಯತ್ನ. ‘ಸಿಟ್ಟಿಂಗ್ ಇನ್ ಬಾರ್ಸ್ ವಿತ್ ಕೇಕ್’ ಆಮೇಜಾನ್ ಪ್ರೈಮ್‌ನಲ್ಲಿ stream ಆಗುತ್ತಿದೆ.

LEAVE A REPLY

Connect with

Please enter your comment!
Please enter your name here