ಪ್ರೇಮ್ ಅಭಿನಯದ 25ನೇ ಚಿತ್ರವಾಗಿ ‘ಪ್ರೇಮಂ ಪೂಜ್ಯಂ’ ತೆರೆಗೆ ಬಂದಿತ್ತು. ಅರ್ಧ ಶತಕದತ್ತ ಸಾಗುತ್ತಿದೆ ಸಿನಿಮಾ. ಈ ಮಧ್ಯೆ ಚಿತ್ರದ ಪಾರ್ಟ್ 2 ಘೋಷಿಸಿದ್ದಾರೆ ನಿರ್ದೇಶಕ ಡಾ.ರಾಘವೇಂದ್ರ.
ನಟ ಪ್ರೇಮ್ ಆರಂಭದಿಂದಲೂ ಯೂಥ್ಬೇಸ್ ಲವ್ಸ್ಟೋರಿಗಳನ್ನೇ ಆಯ್ಕೆ ಮಾಡಿಕೊಂಡು ಅಭಿನಯಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ತೆರೆಕಂಡ ಅವರ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’ನಲ್ಲೂ ಅವರು ಮೆಡಿಕಲ್ ಸ್ಟೂಡೆಂಟ್ ಆಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಇಷ್ಟವಾಗಿದೆ. ಡಾ.ಬಿ.ಎಸ್.ರಾಘವೇಂದ್ರ ನಿರ್ದೇಶನದ ಸಿನಿಮಾ 50ನೇ ದಿನದತ್ತ ದಾಪುಗಾಲು ಹಾಕಿದೆ. ತಮಿಳು, ತೆಲುಗು ನಿರ್ಮಾಪಕರಿಂದ ರೀಮೇಕ್ ಹಕ್ಕುಗಳಿಗೆ ಬೇಡಿಕೆ ಇದ್ದು, ಓಟಿಟಿಯಿಂದಲೂ ಉತ್ತಮ ಆಫರ್ ಇದೆ ಎನ್ನುತ್ತಾರೆ ನಿರ್ಮಾಪಕರು. ಸಿನಿಮಾ ಶತದಿನೋತ್ಸವ ಆಚರಿಸಿಕೊಂಡ ನಂತರ ಬೇರೆ ಭಾಷೆಗೆ ಹಕ್ಕುಗಳನ್ನು ಕೊಡುವ ನಿರ್ಧಾರ ಅವರದು. ಇದರ ಜೊತೆಗೆ ನಿರ್ದೇಶಕ ರಾಘವೇಂದ್ರ ಚಿತ್ರದ ಮುಂದುವರಿದ ಭಾಗವಾಗಿ ‘ಪ್ರೇಮಂ ಪೂಜ್ಯಂ’ ಸೀಕ್ವೇಲ್ ಮಾಡಲು ಮುಂದಾಗಿದ್ದು, ಚಿತ್ರಕಥೆಯನ್ನೂ ಸಿದ್ಧಪಡಿಸಿಕೊಂಡಿದ್ದಾರೆ. ಸೀಕ್ವೆಲ್ನಲ್ಲಿ ಒಂದಷ್ಟು ಕುತೂಹಲಕರ ಕಥೆಯನ್ನು ಬಿಚ್ಚಿಡುವುದು ಅವರ ಇರಾದೆ.
2022ರಲಿ ಪ್ರೇಮಿಗಳ ದಿನವಾದ ಫೆಬ್ರವರಿ 14ರಂದು ಚಿತ್ರದ 2ನೇ ಭಾಗಕ್ಕೆ ಚಾಲನೆ ನೀಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದ ಮೊದಲ ಭಾಗದಲ್ಲಿ ಕೆಲಸ ಮಾಡಿದ್ದ ಬಹುತೇಕ ಕಲಾವಿದ, ತಂತ್ರಜ್ಞರೇ ಈ ಚಿತ್ರದಲ್ಲೂ ಸಹ ಮುಂದುವರಿಯಲಿದ್ದಾರೆ. ನಾಯಕನ ಪ್ರೀತಿಯ ಕಥೆಯ ವಿವಿಧ ಮಜಲುಗಳನ್ನು ಹೇಳುವ ಕಥೆಯಿರುವ ಈ ಚಿತ್ರದಲ್ಲಿ ಪ್ರೇಮ್, ಬೃಂದಾ ಆಚಾರ್ಯ, ಐಂದ್ರಿತಾ ರೇ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರೇಮಿಗಳು, ತಂದೆ-ತಾಯಿ, ಸ್ನೇಹಿತರು ಈ ಎಲ್ಲ ಸಂಬಂಧಗಳಲ್ಲೂ ಪೂಜನೀಯ ಭಾವನೆ ಇರಬೇಕೆಂಬ ಉತ್ತಮ ಸಂದೇಶ ಚಿತ್ರದ್ದು. ಡಾ.ರಕ್ಷಿತ್ ಕದಂಬಾಡಿ, ಡಾ. ರಾಜಕುಮಾರ್ ಜಾನಕಿರಾಮನ್, ಮನೋಜ್ಕೃಷ್ಣನ್ ಹಾಗೂ ರಾಘವೇಂದ್ರ ಎಸ್. ಸೇರಿ ನಿರ್ಮಿಸಿರುವ ಚಿತ್ರವಿದು. ಸ್ವತಃ ವೈದ್ಯರಾದ ನಿರ್ದೇಶಕ ಡಾ.ರಾಘವೇಂದ್ರರು ವೈದ್ಯಕೀಯ ವೃತ್ತಿ ಹಿನ್ನೆಲೆಯಲ್ಲೇ ಪ್ರೇಮಕತೆಯನ್ನು ಹೆಣೆದು ನಿರೂಪಿಸಿದ್ದಾರೆ.