ನಟ ಡಾಲಿ ಧನಂಜಯ್‌ ನಿರ್ಮಾಣದ ‘ಟಗರು ಪಲ್ಯ’ ಚಿತ್ರದಲ್ಲಿ ಟಗರಿಗೂ ಒಂದು ಪ್ರಮುಖ ಪಾತ್ರವಿದೆ. ‘7 ಸ್ಟಾರ್‌ ಸುಲ್ತಾನ’ ಎಂದೇ ಕರೆಸಿಕೊಂಡಿರುವ ಈ ಟಗರನ್ನು ಬಕ್ರೀದ್‌ಗೆ ಕುರ್ಬಾನಿ ಕೊಡಲು ಮಾಲೀಕರು ನಿರ್ಧರಿಸಿದ್ದರಂತೆ. ಚಿತ್ರತಂಡದ ಮನವಿ ಮೇರೆಗೆ ಕುರುಬಾನಿ ಕ್ಯಾನ್ಸಲ್‌ ಆಗಿದೆ.

ಉಮೇಶ್‌ ಕೃಪ ನಿರ್ದೇಶನದ ‘ಟಗರು ಪಲ್ಯ’ ಸಿನಿಮಾದಲ್ಲಿ ಟಗರಿಗೂ ಒಂದು ಪ್ರಮುಖ ಪಾತ್ರವಿದೆ. ಬಾಗಲಕೋಟೆ ತಾಲೂಕಿನ ಸುತಗುಂಡಾರ ಗ್ರಾಮದ‌ ಯೂನೀಸ್ ಗಡೇದ್ ಈ ಟಗರಿನ ಮಾಲೀಕರು. ಹಲವು ಟಗರು ಕಾಳಗಗಳಲ್ಲಿ ಗೆದ್ದು ಬೀಗಿರುವ ಈ ಟಗರಿಗೆ ಯೂನಿಸ್‌ ‘7 ಸ್ಟಾರ್‌ ಸುಲ್ತಾನ’ ಎಂದೇ ಹೆಸರಿಟ್ಟಿದ್ದಾರೆ. ಬಕ್ರೀದ್ ಹಬ್ಬಕ್ಕೆ ಕುರ್ಬಾನಿ ಕೊಡಲೆಂದೇ ಎರಡೂವರೆ ವರ್ಷದ ಹಿಂದೆ ಈ ಟಗರನ್ನು ಅವರು 1 ಲಕ್ಷ 88 ಸಾವಿರದ ಐನೂರು ರೂ.ಗೆ ಖರೀದಿಸಿದ್ದರಂತೆ. ಕುರ್ಬಾನಿಗೂ ಮುನ್ನ ಟಗರನ್ನು ಕಾಳಗಕ್ಕೆ ಇಳಿಸಲಾಗಿದ್ದು ಟಗರು ಅನೇಕ ಬಹುಮಾನಗಳನ್ನು ಗೆದ್ದಿದೆ. ಇಲ್ಲಿಯವರೆಗೆ 34 ಕಣಗಳಲ್ಲಿ ಪ್ರಥಮ ಬಹುಮಾನ ಗಳಿಸಿದ್ದು ಸುಮಾರು 20 ಲಕ್ಷದಷ್ಟು ಹಣ, ಬೆಳ್ಳಿ, ಬಂಗಾರ, ಬೈಕ್‌ಗಳನ್ನು ಗೆದ್ದಿದೆ. ಅಂದುಕೊಂಡಂತೆ ಈ ಬಾರಿಯ ಬಕ್ರೀದ್ ಹಬ್ಬಕ್ಕೆ ಈ ಟಗರನ್ನು ಕುರ್ಬಾನಿ ನೀಡಲು ಯೂನಿಸ್‌ ನಿರ್ಧರಿಸಿದ್ದರು. ಸಾಧಕ ಟಗರನ್ನು ಕುರ್ಬಾನಿ‌ ಮಾಡದಂತೆ ‘ಟಗರು ಪಲ್ಯ’ ಮತ್ತು ‘7 ಸ್ಟಾರ್‌ ಸುಲ್ತಾನ’ ಟಗರಿನ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿತ್ತು. ಹೀಗಾಗಿ ಟಗರನ್ನು ಕುರ್ಬಾನಿ ಕೊಡದಿರಲು ಯೂನೀಸ್ ನಿರ್ಧರಿಸಿದ್ದಾರೆ.

ಡಾಲಿ ಧನಂಜಯ್ ತಮ್ಮ ಡಾಲಿ ಪಿಕ್ಚರ್ಸ್‌ನಡಿ ನಿರ್ಮಿಸುತ್ತಿರುವ ‘ಟಗರು ಪಲ್ಯ’ ಚಿತ್ರದಲ್ಲಿ ‘ಇಕ್ಕಟ್’, ‘ಬಡವ ರಾಸ್ಕಲ್’ ಸಿನಿಮಾಗಳ ಖ್ಯಾತಿಯ ನಾಗಭೂಷಣ್ ನಾಯಕನಾಗಿ ನಟಿಸುತ್ತಿದ್ದಾರೆ. ನಟ ಪ್ರೇಮ್‌ ಪುತ್ರಿ ಅಮೃತಾ ಚಿತ್ರದ ನಾಯಕಿ. ಮಂಡ್ಯ ಭಾಗದ ಹಳ್ಳಿಗಳಲ್ಲಿ ನಡೆಯುವ ಆಚರಣೆ ಸುತ್ತಾ ಇಡೀ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಚಿತ್ರದ ಇತರೆ ಪ್ರಮುಖ ಕಲಾವಿದರು. ವಾಸುಕಿ ವೈಭವ್ ಸಂಗೀತ, ಎಸ್ ಕೆ ರಾವ್ ಛಾಯಾಗ್ರಹಣ ಚಿತ್ರಕ್ಕಿದೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರ‌ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ.

LEAVE A REPLY

Connect with

Please enter your comment!
Please enter your name here