ಬಂಡವಾಳ ತರುವಷ್ಟು ಸುಲಭವಲ್ಲ ಉದ್ದಿಮೆಯಲ್ಲಿ ಯಶಸ್ಸು ಗಳಿಸುವುದು. ಆಗ fake it till you make it ಎನ್ನುವುದು ಸಿಲಿಕಾನ್ ಕಣಿವೆಯ ಮಹಾಮಂತ್ರವಾಯಿತು. ಇಲ್ಲದದ್ದನ್ನು ಇದೆ ಎನ್ನುವಂತೆ, ಆಗಿಲ್ಲದ್ದನ್ನು ಆಗಿದೆ ಎನ್ನುವಂತೆ ತೋರಿಸಿಕೊಳ್ಳುವುದು ಶುರುವಾಯಿತು. ಅಂತಹುದೇ ಒಂದು ಕಥೆ ಈ ಎಲೆಜೆಬೆತ್‌ಳದ್ದು. ‘The Inventor : Out for blood in Silicon Valley’ ಡಾಕ್ಯುಮೆಂಟರಿ Disney Hotstar ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಮೊನ್ನೆ ಮೊನ್ನೆ ಸುದ್ದಿ ಮಾಧ್ಯಮದಲ್ಲಿ ಒಂದು ಸುದ್ದಿ ಬೆಂಕಿಗಿಟ್ಟ ಪಾಪ್‌ಕಾರ್ನ್‌ನಂತೆ ಪುಟಿಯುತ್ತಿತ್ತು – ಬರೀ ಯಶಸ್ಸಿನ ಸುದ್ದಿಗಳಲ್ಲೇ ಮೆರೆಯುತ್ತಿದ್ದ ಸಿಲಿಕಾನ್ ಕಣಿವೆಯಲ್ಲಿ ಇದೊಂದು ಮಹಾನ್ ಪತನದ ಕಥೆ – ಹೂಡಿಕೆದಾರರಿಗೆ ಮೋಸ ಮಾಡಿದ ಆರೋಪಗಳಲ್ಲಿ ನಾಲ್ಕು ಆರೋಪಗಳು ಸಾಬೀತಾಗಿದ್ದು, Theranos ಕಂಪನಿಯನ್ನು ಸ್ಥಾಪಿಸಿದ ಎಲೆಜೆಬತ್ ಹೋಮ್ಸ್ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎನ್ನುವುದು ಆ ಸುದ್ದಿ.
ಎಲೆಜಬೆತ್ ಹೋಮ್ಸ್ 19ರ ವಯಸ್ಸಿನಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವನ್ನುತೊರೆದು Theranos ಎನ್ನುವ ಕಂಪನಿ ಹುಟ್ಟುಹಾಕಿದವಳು. Theranos ಎಂದರೆ Therapy and Diagnosis ಪದಗಳ ಸಮ್ಮಿಲನ. ತನ್ನ 21 ರ ವಯಸ್ಸಿನಲ್ಲಿ ಬರೀ ಗಂಡಸರೇ ತಾರೆಗಳಾಗಿದ್ದ ಸಿಲಿಕಾನ್ ಕಣಿವೆಯಲ್ಲಿ ತಂಗಾಳಿಯಂತೆ ಬಂದ ಹೆಣ್ಣುಮಗಳು ಆಕೆ. ಅಮೇರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್ ಜೊತೆಗೆ ಆಕೆ ವೇದಿಕೆ ಹಂಚಿಕೊಂಡಿದ್ದಳು. ಬರಾಕ್ ಒಬಾಮರ ಅಧ್ಯಕ್ಷೀಯ ಕಛೇರಿಯಲ್ಲಿ ಆಕೆ ಆರಾಮಾಗಿ ಹೋಗಿ ಬರುವಂಥವಳು. 700 ಜನ ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕಳು.
ಅಮೇರಿಕಾ ಸರ್ಕಾರದ ವಿಶ್ರಾಂತ ಸೆಕ್ರೆಟರಿ ಆಫ್ ಸ್ಟೇಟ್, ವಿಶ್ರಾಂತ ಸೆಕ್ರೆಟರಿ ಆಫ್ ಟ್ರೆಶರಿ, ವಿಶ್ರಾಂತ ಸೆಕ್ರೆಟರಿ ಆಫ್ ಡಿಫೆನ್ಸ್ ಅವಳ ಕಂಪನಿಯ ಬೋರ್ಡ್ ಆಫ್ ಡೈರೆಕ್ಟರ್‌ಗಳಾಗಿರುತ್ತಾರೆ. ಅವಳ ಸುತ್ತಲೂ ಭರವಸೆಯ ಪ್ರಭಾವಳಿ ಕಣ್ಣುಕೋರೈಸುವಂತೆ ಉರಿಯುತ್ತಿರುತ್ತದೆ. 30ನೆಯ ವಯಸ್ಸನ್ನು ತಲುಪುವ ವೇಳೆಗೆ ಆಕೆ ಅಮೇರಿಕಾದ ಔದ್ಯಮಿಕ ರಂಗದಲ್ಲಿ ಮಿರುಗುವ ತಾರೆಯಾಗಿರುತ್ತಾಳೆ. ಅಮೇರಿಕಾದ ಪ್ರಸಿದ್ಧ ವಾಣಿಜ್ಯ, ರಾಜಕೀಯ ಮತ್ತು ಗ್ಲಾಮರ್ ಮ್ಯಾಗಜೀನ್‌ಗಳಲ್ಲಿ ಆಕೆಯ ಮುಖಪುಟಗಳು ಮುದ್ರಣಗೊಂಡಿರುತ್ತವೆ. ಅವಳು ಓದಿದ್ದ ಅದೇ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಅಧ್ಯಾಪಕರು ಅಲ್ಲಿನ ಕೆಲಸ ಬಿಟ್ಟು ಇವಳ ಕಂಪನಿಯಲ್ಲಿ ಸಲಹೆಗಾರರಾಗಿ ಸೇರಿಕೊಂಡಿರುತ್ತಾರೆ. ಕನಸುಗಳನ್ನು ಮಾರುವ ಸಿಲಿಕಾನ್ ಕಣಿವೆ ಇವಳಿಗೆ ಸಂಪೂರ್ಣವಾಗಿ ಶರಣಾಗಿ ಮಿಲಿಯನ್ ಗಟ್ಟಲೆ ಡಾಲರ್ ಬಂಡವಾಳವಾಗಿ ಇವಳೆಡೆಗೆ ಹರಿದು ಬಂದಿರುತ್ತದೆ.
ಆಗ ಅಮೇರಿಕಾದ ಪ್ರಖ್ಯಾತ Fortune ಮ್ಯಾಗಜೀನ್ ಇವಳ ಸಂದರ್ಶನ ಮಾಡುತ್ತದೆ. 2025ಕ್ಕೆ ನಿಮ್ಮ ವಿಶನ್ ಏನು, ನಿಮ್ಮ ಕನಸುಗಳೇನು ಎಂದು ಅವರು ಒಂದೊಂದಾಗಿ ಪ್ರಶ್ನೆ ಕೇಳುತ್ತಿದ್ದಂತೆ ಈಕೆ ಒಂದು ಕ್ಷಣವೂ ಯೋಚಿಸದೆ ಪಟಪಟ ಎಂದು ಉತ್ತರ ಕೊಡುತ್ತಿರುತ್ತಾಳೆ. ಅವರ ಒಂದು ಪ್ರಶ್ನೆಗೆ ಮಾತ್ರ ಇವಳು ಯೋಚಿಸುತ್ತಾ ನಿಂತು ಬಿಡುತ್ತಾಳೆ. ಪ್ರಶ್ನೆ “ನಿಮ್ಮ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ರಹಸ್ಯ ಹೇಳಿ…?” ಕೆಲವು ಕ್ಷಣಗಳ ಮೌನದ ನಂತರ ಆಕೆ ಉತ್ತರಿಸುತ್ತಾಳೆ, “ನನ್ನಲ್ಲಿ ಯಾವುದೇ ರಹಸ್ಯಗಳಿಲ್ಲ”. ಆಕೆ ಅದೆಷ್ಟು ಬದ್ಧತೆಯಿಂದ ಈ ಮಾತನ್ನು ಹೇಳುತ್ತಾಳೆ ಎಂದರೆ ಈ ಡಾಕ್ಯುಮೆಂಟರಿ ಪ್ರಾರಂಭವಾಗುವುದೇ ಆ ಸಂದರ್ಶನದಿಂದ.
ಇಪ್ಪತ್ತೊಂದನೆಯ ಶತಮಾನ ಮಾಹಿತಿ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಒಂದು ಮಹಾಸ್ಫೋಟವನ್ನೇ ಕಂಡಿತು. ಡಾಟ್‌ಕಾಂಗಳು, ಸ್ಟಾರ್ಟ್ ಅಪ್ ಕಂಪನಿಗಳು ಹಿಂದೆಂದೂ ಕಂಡಿರದಂತೆ ಹಣದ ಮಹಾಪೂರವನ್ನು ಕಂಡವು. ಯಾವಾಗ ಇವು ಹೂಡಿದ ಹಣಕ್ಕೆ ಹಲವಾರು ಪಟ್ಟು ಇಳುವರಿಯನ್ನು ತರಬಲ್ಲವು ಎನ್ನುವುದು ಕಂಡುಬಂದಿತೋ ಆಗ, ಯಾರು ತಮ್ಮ ಕನಸುಗಳಿಗೆ ಅಂಗುರಂಗಿನ ಮಾತುಗಳನ್ನು ತೊಡಿಸಿ, ಭವಿಷ್ಯದ ಇಳುವರಿಯ ಕಣ್ಣುಕುಕ್ಕುವ ಪ್ರೆಸೆಂಟೇಶನ್ ಗಳನ್ನು ತಯಾರಿಸಿ, ಅದಕ್ಕೆ ತಕ್ಕ ಉಡುಗೆ ತೊಡುಗೆ ಧರಿಸಿ, ಒಪ್ಪುವಂತಹ ಹಾವಭಾವಗಳನ್ನು ಅಳವಡಿಸಿಕೊಂಡು ಯಶಸ್ವಿಯಾಗಿ ಮಾರಬಲ್ಲರೋ ಅವರು ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಬಂಡವಾಳ ತರಬಲ್ಲವರಾದರು.
ಈ ಸಾಕ್ಷಚಿತ್ರ ಇದನ್ನು ಕುರಿತು ಹೀಗೆ ಹೇಳುತ್ತದೆ, ಕಥೆಗಳು ನಮ್ಮ ಮೆದುಳುಗಳಿಗೆ ಅಂಟಿಕೊಳ್ಳುವ ಹಾಗೆ ಡೇಟಾ ನಮ್ಮನ್ನು ತಾಕುವುದಿಲ್ಲ. ಏಕೆಂದರೆ ಕಥೆಗಳಲ್ಲಿ ಭಾವೋನ್ಮಾದ ಇರುತ್ತದೆ, ಡೇಟಾ ಹಾಗಲ್ಲ. ಯಶಸ್ಸಿನ ಕತೆಗಳಿಗೆ ರೆಕ್ಕೆಪುಕ್ಕ ಬೆಳೆಸಿಕೊಳ್ಳುವ ಅಭ್ಯಾಸ ಇರುತ್ತದೆ. ಉಘೇಉಘೇ ಎಂದು ಒಂದಿಬ್ಬರು ಕೂಗತೊಡಗಿದೊಡನೆಯೇ ಮಿಕ್ಕವರು ಆ ಗುಂಪನ್ನು ಸೇರಿಕೊಳ್ಳುತ್ತಾರೆ, ಸತ್ಯಾಸತ್ಯತೆಯ ಮಾಹಿತಿ ಪರಿಶೀಲಿಸುವವರು ಕೆಲವರೇ ಕೆಲವರು.
ಬಂಡವಾಳ ತರುವಷ್ಟು ಸುಲಭವಲ್ಲ ಉದ್ದಿಮೆಯಲ್ಲಿ ಯಶಸ್ಸು ಗಳಿಸುವುದು. ಆಗ fake it till you make it ಎನ್ನುವುದು ಸಿಲಿಕಾನ್ ಕಣಿವೆಯ ಮಹಾಮಂತ್ರವಾಯಿತು. ಇಲ್ಲದದ್ದನ್ನು ಇದೆ ಎನ್ನುವಂತೆ, ಆಗಿಲ್ಲದ್ದನ್ನು ಆಗಿದೆ ಎನ್ನುವಂತೆ ತೋರಿಸಿಕೊಳ್ಳುವುದು ಶುರುವಾಯಿತು. ಅಂತಹುದೇ ಒಂದು ಕಥೆ ಈ ಎಲೆಜೆಬೆತ್‌ಳದ್ದು. ಮೊದಲು ಇವಳನ್ನು ಕುರಿತು ಓದಿದ ಪುಸ್ತಕ, ತನಿಖಾ ವರದಿಗಳ ಪತ್ರಕರ್ತ John Carreyrou ಬರೆದ Bad Blood. ಅದಕ್ಕೆ ಆತ Secrets and Lies in a Silicon Valley Startup ಎನ್ನುವ ಟ್ಯಾಗ್‌ಲೈನ್ ಕೊಟ್ಟಿದ್ದ. ಅದರಲ್ಲಿ ಆಕೆಯ ಬಗ್ಗೆ, ಅವಳ ಕಂಪನಿಯ ಬಗ್ಗೆ ವಿವರವಾಗಿ ಬರೆಯಲಾಗಿತ್ತು. ಆದರೆ ಆ ಪುಸ್ತಕದಲ್ಲಿ ಆಕೆಯನ್ನು ಅಪರಾಧಿ ಎಂದೇ ಪರಿಗಣಿಸಿ ಬರೆಯಲಾಗಿತ್ತು. ಆದರೆ The Inventor : Out for blood in Silicon Valley ಎನ್ನುವ ಈ ಸಾಕ್ಷ್ಯಚಿತ್ರದಲ್ಲಿ ಹೀಗೆ ಯಾವುದೇ ನಿರ್ಣಯಕ್ಕೆ ಬಂದು ನಂತರ ಅದನ್ನು ಸಾಬೀತು ಪಡಿಸುವ ಮಾದರಿಯನ್ನು ಅನುಸರಿಸದೆ ಹಲವಾರು ಸಂದರ್ಶನಗಳ ಮೂಲಕ ನೋಡುಗರೆದುರಲ್ಲಿ ವಿಷಯವನ್ನು ಮಂಡಿಸುತ್ತಾ ಹೋಗುತ್ತಾರೆ.
ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿಯಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಓದುತ್ತಿದ್ದ ಎಲೆಜಬೆತ್ ಹೋಮ್ಸ್, 19 ವರ್ಷವಾಗಿದ್ದಾಗ ಒಂದು ಕನಸು ಕಾಣುತ್ತಾಳೆ, ಆ ಕನಸನ್ನು ನಂಬುತ್ತಾಳೆ. ಅಂದಿನಿಂದಲೇ ಕನಸಿನೆಡೆಗೆ ಹೆಜ್ಜೆ ಹಾಕಲು ಪ್ರಾರಂಭಿಸುತ್ತಾಳೆ. ಇಂಜೆಕ್ಷನ್ ಸೂಜಿ ಎಂದರೆ ಹೆದರುವ ಆಕೆಗೆ ರಕ್ತಪರೀಕ್ಷೆಗಾಗಿ ಸೂಜಿ ಚುಚ್ಚಿ, ಟ್ಯೂಬುಗಟ್ಟಲೆ ರಕ್ತ ತೆಗೆಯುವುದನ್ನು ಕಂಡರೆ ಗಾಬರಿ. ಆಕೆ ತುಂಬಾ ಪ್ರೀತಿಸುತ್ತಿದ್ದ ಆಕೆಯ ಚಿಕ್ಕಪ್ಪ ಕ್ಯಾನ್ಸರ್ ಖಾಯಿಲೆಗೆ ಬಲಿಯಾಗಿರುತ್ತಾರೆ. ಕ್ಯಾನ್ಸರ್ ಅನ್ನು ಮೊದಲ ಹಂತದಲ್ಲೇ ತಿಳಿಯುವಂತಾಗಿದ್ದರೆ ಅದನ್ನು ನಿಯಂತ್ರಿಸಬಹುದಿತ್ತು ಎಂದುಕೊಳ್ಳುವ ಈ ಪುಟ್ಟ ಹುಡುಗಿ ಒಂದು ಕನಸು ಕಾಣುತ್ತಾಳೆ. ಅದೇ, ಒಂದೆರಡು ಹನಿ ರಕ್ತದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಟೆಸ್ಟ್‌ಗಳು ಮಾಡುವಂತಹ ಒಂದು ಯಂತ್ರವನ್ನು ನಿರ್ಮಿಸಬೇಕು ಎನ್ನುವುದು.
ಆದರೆ ಈ ಯಂತ್ರ ಕೇವಲ ಲ್ಯಾಬೊರೇಟರಿಗಳಿಗೆ ಸೀಮಿತವಾಗಬಾರದು. ಅದು ನಿಜಕ್ಕೂ ಉಪಯೋಗವಾಗಬೇಕೆಂದರೆ ಆ ಯಂತ್ರದ ತೂಕ ಮತ್ತು ಆಕಾರ ಮನೆಯ ಟೇಬಲ್ ಒಂದರ ಮೇಲೆ ಇರಿಸಿಕೊಳ್ಳುವಂತಿರಬೇಕು. ಯಾರೇ ಆಗಲಿ ಅವರ ಪಾಡಿಗೆ ಅವರು, ಮನೆಯಲ್ಲೇ ಆ ಪರೀಕ್ಷೆಯನ್ನು ಮಾಡಿಕೊಳ್ಳುವಂತಿರಬೇಕು. ರಕ್ತದಲ್ಲಿನ ಸಣ್ಣ ಬದಲಾವಣೆಯನ್ನೂ ಅದು ಗುರುತಿಸಿ, ಮುಂದೆಂದೋ ಬರುವ ಖಾಯಲೆಯ ಬಗ್ಗೆ ಹೇಳಬೇಕು, ಆ ಮೂಲಕ ಅವರು ಅದಕ್ಕೆ ಸನ್ನದ್ಧರಾಗಬೇಕು. ಅವಳ ಕನಸು ಎಷ್ಟು ಪ್ರಖರವಾಗಿರುತ್ತದೆ ಎಂದರೆ ಅವಳ ಪ್ರಯತ್ನಕ್ಕೆ ಬಂಡವಾಳ ತಾನಾಗೇ ಒದಗಿ ಬರುತ್ತದೆ. ತನ್ನ ಕನಸನ್ನು ಹಾಗೆ ಪ್ಯಾಕೇಜ್ ಮಾಡಿ, ಪ್ರೆಸೆಂಟ್ ಮಾಡುವ ಕಲೆ ಅವಳಿಗೆ ಒಲಿದಿರುತ್ತದೆ.
ಆಗಷ್ಟೇ ಮಾರ್ಕ್ ಜುಕರ್‌ಬರ್ಗ್, ಸ್ಟೀವ್ ಜಾಬ್ಸ್ ಸಿಲಿಕಾನ್ ವ್ಯಾಲಿಯಲ್ಲಿ ಚಂಡಮಾರುತ ಎಬ್ಬಿಸಿರುತ್ತಾರೆ. ಈಗ ಒಬ್ಬ ಹುಡುಗಿ ಆ ಹಾದಿಯಲ್ಲಿ ದಾಪುಗಾಲಿಡುತ್ತಿದ್ದಾಳೆ. ಇಡೀ ವ್ಯಾಲಿ ಅವಳನ್ನು ಭರವಸೆಯ ಕಣ್ಣುಗಳಿಂದ ನೋಡುತ್ತದೆ. ಅದನ್ನು ಅವಳೂ ನಂಬುತ್ತಾಳೆ, ತನ್ನನ್ನು ತಾನು ಮುಂದಿನ ಸ್ಟೀವ್ ಜಾಬ್ಸ್ ಎಂದುಕೊಳ್ಳುತ್ತಾಳೆ. ಅವನಂತೆಯೇ ತುಂಬು ಕುತ್ತಿಗೆಯ ಕಪ್ಪು ಸ್ವೆಟರ್ ಹಾಕುತ್ತಾಳೆ, ತನ್ನದಲ್ಲದ ಆಳವಾದ ಕೃತಕ ಧ್ವನಿಯನ್ನು ಅಭ್ಯಾಸ ಮಾಡುತ್ತಾಳೆ. ಎದುರಿನವರು ಮಾಂತ್ರಿಕತೆಗೆ ಒಳಗಾಗುವಂತೆ ಕಣ್ಣುರೆಪ್ಪೆ ಮಿಟುಕಿಸದೆ, ಅವರ ಕಣ್ಣುಗಳನ್ನೇ ನೋಡುತ್ತಾ ಮಾತನಾಡುತ್ತಾಳೆ.
ಅಲ್ಲಿಯವರೆಗೂ ಎಲ್ಲವೂ ಚೆನ್ನಾಗಿರುತ್ತದೆ. ಆದರೆ ಅವಳು ಅಂದುಕೊಂಡ ಹಾಗೆ ಆ ಯಂತ್ರಗಳು ಕೆಲಸ ಮಾಡುವುದಿಲ್ಲ. ತಪ್ಪುತಪ್ಪು ರೀಡಿಂಗ್‌ಗಳು ಬರುತ್ತವೆ. ಒಂದೇ ರಕ್ತವನ್ನು ಎರಡು ಸಲ ಪರೀಕ್ಷೆ ಮಾಡಿದಾಗ, ಬೇರೆ ಬೇರೆ ಫಲಿತಾಂಶ ಬರುತ್ತದೆ. ಆದರೆ ಅದನ್ನು ಅವಳು ಒಪ್ಪಿಕೊಳ್ಳುವುದಿಲ್ಲ. ಒಂದರ ಮೇಲೊಂದರಂತೆ ಸುಳ್ಳು ಹೇಳುತ್ತಾ ಹೋಗುತ್ತಾಳೆ. ಸುಳ್ಳು ಹೊರಗೆ ಹೋಗಬಾರದೆಂದು ತನ್ನ ಆಫೀಸನ್ನು ಒಂದು ಕಬ್ಬಿಣದ ಕೋಟೆಯನ್ನಾಗಿ ಮಾಡುತ್ತಾಳೆ. ಕೆಲಸಗಾರರನ್ನು ಕಳ್ಳರಂತೆ ನೋಡುತ್ತಾಳೆ. ಅವಳ ಸ್ನೇಹಿತ ಮತ್ತು ಕಂಪನಿಯ ಸಿಓಓ ಸನ್ನಿ ಮತ್ತು ಆಕೆ, ಕಂಪನಿಯನ್ನು ರಾಷ್ಟ್ರೀಯ ರಹಸ್ಯವೇನೋ ಎನ್ನುವ ಹಾಗೆ ನಡೆಸುತ್ತಿರುತ್ತಾರೆ.
ತಂತ್ರಜ್ಞಾನದ ವಿಷಯದಲ್ಲಿ ಕಂಪನಿಗಳು ಹೀಗೆ ಉದ್ದುದ್ದದ ಭರವಸೆಗಳನ್ನು ಕೊಡುತ್ತವೆ, ಆದರೆ ಎಲೆಜಬತ್ ಕೈ ಹಾಕಿದ ಕ್ಷೇತ್ರ ಆರೋಗ್ಯ. ಅಲ್ಲಿ ಎಡವಟ್ಟಾದರೆ ಹಾನಿ ಅಷ್ಟಿಷ್ಟಲ್ಲ. ಯಂತ್ರಗಳು ತಪ್ಪು ರೀಡಿಂಗ್ ಕೊಟ್ಟರೆ ಆರೋಗ್ಯ ಚೆನ್ನಾಗಿದ್ದರೂ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗಬಹುದು. ಅದಕ್ಕೂ ಮಿಗಿಲಾದ ಸಮಸ್ಯೆ ಎಂದರೆ ಆರೋಗ್ಯ ಕೆಟ್ಟಿದ್ದವರಿಗೆ ಅದರ ಅರಿವೇ ಆಗದೆ ಅವರು ಸಾವಿನತ್ತ ಹೆಜ್ಜೆ ಹಾಕಬಹುದು. ಆದರೆ ಅದನ್ನು ಹೇಳುವವರು ಯಾರು? ಕ್ಲಿಂಟನ್ ಕುಟುಂಬಕ್ಕೆ ಅವಳು ಆಪ್ತೆ, ಅಮೇರಿಕಾದ ಸೆಕ್ರೆಟರಿ ಆಫ್ ಸ್ಟೇಟ್, ಹೆನ್ರಿ ಕಿಸಿಂಜರ್, ರೂಪರ್ಟ್ ಮುರ್ಡೋಕ್ ಅವಳ ಕಂಪನಿಗೆ ಬಂಡವಾಳ ಹಾಕಿರುತ್ತಾರೆ. ದೇಶದ ಮುಖ್ಯ ಮುಖ್ಯ ಪತ್ರಿಕೆಗಳು, ಟೆಲಿವಿಷನ್‌ಗಳು ಅವಳ ಸಂದರ್ಶನ ಮಾಡುತ್ತವೆ.
ಬೆರಳ ತುದಿಯಿಂದ ಕೆಲವು ತೊಟ್ಟು ರಕ್ತ ತೆಗೆದುಕೊಂಡು, ಪರೀಕ್ಷೆ ಮಾಡುವ ಯಂತ್ರವೊಂದನ್ನು ತನ್ನ ಪ್ರಯೋಗಾಲಯ ಅಭಿವೃದ್ಧಿ ಪಡಿಸಿದೆ ಎಂದು ಹೇಳುವ ಆಕೆ ಅದಕ್ಕೆ ಕೊಟ್ಟ ಹೆಸರು ’ಎಡಿಸನ್’. ಅವಳ ಕನಸಿನ ಬಗ್ಗೆ, ಅದರ ಸಾಧ್ಯತೆಯ ಬಗ್ಗೆ ಅವಳಿಗೆ ಯಾವ ಮಟ್ಟದ ಹುಚ್ಚು ನಂಬಿಕೆ ಇರುತ್ತದೆ ಎಂದರೆ ಅವಳ ಕಂಪನಿಯಲ್ಲಿ ಕೆಲಸ ಮಾಡುವ ಇಯಾನ್ ಎನ್ನುವ ಹೆಸರಾಂತ ವಿಜ್ಞಾನಿ ಅದು ಕೆಲಸ ಮಾಡುವುದಿಲ್ಲ ಎಂದಾಗ ಅವನನ್ನು ಯಾವ ಪರಿಯಲ್ಲಿ ಕಡೆಗಣಿಸಿ ಹಣಿಯುತ್ತಾಳೆ ಎಂದರೆ ಡಿಪ್ರೆಶನ್‌ಗೆ ಒಳಗಾದ ಆತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆ ಯಂತ್ರದ ಬಗ್ಗೆ ಯಾರೇ ಪ್ರಶ್ನೆ ಎತ್ತಿದರೂ ಅವರನ್ನು ಕೆಲಸದಿಂದ ತೆಗೆಯಲಾಗುತ್ತದೆ.
ಒಂದು ಸಲವಂತೂ ಲ್ಯಾಬ್ ಅಸಿಸ್ಟೆಂಟ್ ಅನ್ನು ಕೆಲಸದಿಂದ ತೆಗೆದು ಆ ಸ್ಥಾನಕ್ಕೆ ಡರ್ಮಟಾಲಜಿಸ್ಟ್ ಒಬ್ಬರನ್ನು ತರಲಾಗುತ್ತದೆ! ತನ್ನ ಕನಸು ಸಾಧ್ಯವಾಗದು ಎಂದು ಅರಿವಾದ ಮೇಲೂ ಅದನ್ನು ಬಿಡದ ಹುಚ್ಚುತನ ಅವಳಲ್ಲಿರುತ್ತದೆ. ಅದಕ್ಕಾಗಿ ಎದುರಿನವರ ಕಣ್ಣು ದಿಟ್ಟಿಸುತ್ತಾ ಯಾವ ಸುಳ್ಳನ್ನಾದರೂ ಹೇಳಬಲ್ಲಳು. ಅವಳ ಸುಳ್ಳುಗಳನ್ನು ಅವಳು ಯಾವ ಮಟ್ಟಿಗೆ ನಂಬುತ್ತಿರುತ್ತಾಳೆ ಎನ್ನುವುದಕ್ಕೆ ಒಂದು ಉದಾಹರಣೆ, ಅವಳ ಬಳಿ ಒಂದು ಕಟ್ಟುಮಸ್ತಾದ ನಾಯಿ ಇರುತ್ತದೆ. ಯಾರಾದರೂ ಅದರ ಬಗ್ಗೆ ಕೇಳಿದರೆ ಕಣ್ಣುರೆಪ್ಪೆ ಮಿಟುಕಿಸದೆ, ಓಹ್ ಇದು ನಾಯಿ ಅಲ್ಲ, ತೋಳ ಎನ್ನುತ್ತಿರುತ್ತಾಳೆ. ಅವಳ ಮನಸ್ಸಿನಲ್ಲಿ ತನ್ನ ಕಲ್ಪನೆಗೂ ವಾಸ್ತವಕ್ಕೂ ನಡುವಿನ ಗೆರೆಯೇ ಅಳಿಸಿಹೋಗಿರುತ್ತದೆ.
ಹಾಗಾದರೆ ಈ ಹುಸಿಯ ಬಲೂನು ಒಡೆದದ್ದು ಹೇಗೆ? ಅದನ್ನು ಅಲೆಕ್ಸ್ ಗಿಬ್ನೆ ನಿರ್ದೇಶನದ ಈ ಸಾಕ್ಷ್ಯಚಿತ್ರ ಎಳೆಎಳೆಯಾಗಿ ಬಿಚ್ಚಿಡುತ್ತದೆ. 2018ರಲ್ಲಿ ಈ ಕಂಪನಿ ಚೂರುಚೂರಾಗುತ್ತದೆ. ಹಲವಾರು ಕೇಸುಗಳನ್ನು ಹಾಕಲಾಗುತ್ತದೆ. ಅನೇಕ ತಿರುವುಗಳ ನಂತರ ಮೊನ್ನೆಮೊನ್ನೆ ಈಕೆ ಅಪರಾಧಿ ಎನ್ನುವ ತೀರ್ಪು ಬಂದಿದೆ, ಶಿಕ್ಷೆ ಇನ್ನೇನು ಪ್ರಕಟವಾಗಬೇಕಿದೆ.