ನಮ್ಮ ಸುತ್ತಮುತ್ತ ನಡೆಯುವ, ನೆಡೆಯಬಹುದಾದ ಸೈಬರ್‌ ಕ್ರೈಮ್‌ ಕುರಿತು ಪರೋಕ್ಷವಾಗಿ ಎಚ್ಚರಿಕೆ ನೀಡುತ್ತದೆ. ಉಪದೇಶ ನೀಡಿದಂತೆ ಎನಿಸದೆ ಸಹಜವಾಗಿ ಪ್ರೇಕ್ಷರ ಅಂತರಾಳದ ಆಲೋಚನೆಗೆ ಬಿಟ್ಟಿದ್ದು ಎಂಬಂತೆ ಕತೆ ನಿರೂಪಿಸಿದ್ದಾರೆ. ZEE5ನಲ್ಲಿ ಸ್ಟ್ರೀಮ್‌ ಆಗುತ್ತಿದೆ ‘ಆಪರೇಷನ್ ಜಾವ’ ಮಲಯಾಳಂ ಸಿನಿಮಾ.

ಈ ಜನರೇಷನ್‌ ಅತ್ಯವಶ್ಯವಾಗಿ ನೋಡಬೇಕಾದ ಸಿನಿಮಾ. ಮೇಲ್ನೋಟಕ್ಕೆ ಇದು ಸೈಬರ್‌ ಕ್ರೈಮ್‌ ಥ್ರಿಲ್ಲರ್‌ ಎನಿಸಿದರೂ, ಆಂತರ್ಯದಲ್ಲಿ ಮನುಷ್ಯ ಸಂಬಂಧ ಮತ್ತು ಮಾನವೀಯ ಮೌಲ್ಯಗಳ ಕುರಿತು ಮಾತನಾಡುತ್ತದೆ. ನಮ್ಮ ಸುತ್ತಮುತ್ತ ನಡೆಯುವ, ನೆಡೆಯಬಹುದಾದ ಸೈಬರ್‌ ಕ್ರೈಮ್‌ ಕುರಿತು ಪರೋಕ್ಷವಾಗಿ ಎಚ್ಚರಿಕೆ ನೀಡುತ್ತದೆ. ಮನುಷ್ಯರ ನಡುವೆ ಇರಬೇಕಾದ ಪ್ರೀತಿ, ಸೌಹರ್ದತೆಗಳನ್ನು ತೋರ್ಪಡಿಸುವ ಪಾತ್ರಗಳು ಮತ್ತು ದುರಭಿಮಾನ ಹೊಂದಿರುವ ಪಾತ್ರಗಳನ್ನು ಕಥೆಗಳಲ್ಲಿ ಅಚ್ಚುಕಟ್ಟಾಗಿ ಹೆಣೆದಿದ್ದಾರೆ. ಉಪದೇಶ ನೀಡಿದಂತೆ ಎನಿಸದೆ ಸಹಜವಾಗಿ ಪ್ರೇಕ್ಷರ ಅಂತರಾಳದ ಆಲೋಚನೆಗೆ ಬಿಟ್ಟಿದ್ದು ಎಂಬಂತೆ ಕತೆ ನಿರೂಪಿಸಿದ್ದಾರೆ.

ಚಿತ್ರ ಅದ್ಭುತವಾದ ಬರವಣಿಗೆ ಹೊಂದಿದ್ದು ಎಲ್ಲಾ ವರ್ಗದ ತಂತ್ರಗಾರಿಕೆಯಲ್ಲಿ ಅಚ್ಚುಕಟ್ಟಾಗಿದೆ. ಕ್ಯಾಮೆರಾ, ಸಂಗೀತ, ಸಂಕಲನ ಸಿನಿಮಾದ ಮೂಲ ಪಾತ್ರಗಳನ್ನು ಕಟ್ಟಿರುವ ರೀತಿಯೇ ಅಮೋಘವಾಗಿದೆ. ಒಟ್ಟಾರೆ ಇದೊಂದು ಪೂರ್ಣ ಪ್ರಮಾಣದ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರವಾಗಿದ್ದು ದ್ವಿತಿಯಾರ್ಧದಲ್ಲಿ ರೋಚಕ ಅನುಭವ ನೀಡುತ್ತದೆ. ಎರಡೂವರೆ ಗಂಟೆಯಿರುವ ಚಿತ್ರ ಯಾವುದೋ ಒಂದು ಸಸ್ಪೆನ್ಸ್‌ ಕ್ರೈಮ್‌ ಥಿಲ್ಲರ್ ವೆಬ್‌ ಸರಣಿ ನೋಡಿದ ಅನುಭವನನ್ನು ನೀಡಬಹುದು. ಕ್ರೈಮ್‌ ಸಸ್ಪೆನ್ಸ್‌ ವೆಬ್‌ ಸರಣಿ ಎಂದೊಡನೆ ಎಲ್ಲರಿಗೂ ನೆನಪಿಗೆ ಬರುವ ಅಥವಾ ಅನೇಕರು ಚರ್ಚಿಸುವಂತೆ ಕ್ರೌರ್ಯ, ಕಾಮ, ರಕ್ತಪಾತದ ವೈಭವೀಕರಣವಿಲ್ಲ. ಇದು ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡಬಹುದಾದ ಥ್ರಿಲ್ಲರ್‌ ಸಿನಿಮಾ.

ಆ ಮಳೆ, ಪೋಲಿಸ್‌ ಪಾತ್ರಗಳು ಅವುಗಳ ಸಂಭಾಷಣೆ ಮತ್ತು ಸ್ಲೋ ಮೋಷನ್‌ ಶಾಟ್ಸ್‌ಗಳೊಂದಿಗೆ ಸಿನಿಮಾ ಹಲವು ಬಗೆಯ ಸೈಬರ್‌ ಕ್ರೈಮ್‌ ಪ್ಯಾಕೇಜ್‌ನೊಂದಿಗೆ ಸಾಗುತ್ತದೆ. ಚಿತ್ರಕಥೆಯಲ್ಲಿ ಹತ್ತು ಹಲವು ಪಾತ್ರಗಳಿದ್ದರೂ ಆಂಥೋನಿ ಜಾರ್ಜ್ (ಬಾಲು ವರ್ಗೀಸ್) ಮತ್ತು ವಿನಯ ದಾಸನ್ (ಲುಕ್ಮಾನ್) ಮುಖ್ಯಭೂಮಿಕೆಯಲ್ಲಿ ಕಥೆ ಸುತ್ತುತ್ತದೆ. ತಾಂತ್ರಿಕ ಶಿಕ್ಷಣದಲ್ಲಿ ಪದವೀಧರರಾಗಿದ್ದರೂ ಆ ಕ್ಷೇತ್ರದ ಉದ್ಯೋಗ ಪಡೆಯಲು ಸಾಧ್ಯವಾಗಿರುವುದಿಲ್ಲ. ಒಂದು ಸಿನಿಮಾ ಪೈರಸಿ ಕೇಸಿಗೆ ಸಂಬಂಧಿಸಿದಂತೆ ಪೋಲೀಸ್‌ ಇಲಾಖೆಯ ಸೈಬರ್‌ ಕ್ರೈಮ್‌ ವಿಭಾಗದ ಜೊತೆಗೂಡಿ ಕಾರ್ಯನಿರ್ವಹಿಸುತ್ತಾರೆ. ಇವರು ಸಿಕ್ಕ ಆ ಒಂದು ಅವಕಾಶದ ಮೂಲಕ ತಮ್ಮ ಪ್ರತಿಭೆ, ಚಾತುರ್ಯ ಸಾಬೀತುಪಡಿಸಿ ತಾತ್ಕಾಲಿಕ ಉದ್ಯೋಗ ಗಿಟ್ಟಿಸಿಕೊಳ್ಳುತ್ತಾರೆ.

ಹೀಗೆ ತಾವು ಸಮಾಜ ಭಾವಿರುವಷ್ಟು ನಿಷ್ಪ್ರಯೋಜಕರಲ್ಲ ಎಂಬುದನ್ನು ಸಾಬೀತು ಪಡಿಸಿಕೊಳ್ಳುತ್ತ ಕೇರಳ ರಾಜ್ಯ ಸೈಬರ್ ಸೆಲ್ ಪ್ರಕರಣಗಳ ಸುತ್ತಲೂ ಸುತ್ತಾಡುತ್ತಾರೆ. ಇಲ್ಲಿ ಯಾವುದೂ ವಾಸ್ತವಕ್ಕೆ ದೂರ ಎನಿಸುವಂಥ ಕಥೆಗಳಾಗಲೀ, ದೃಶ್ಯಗಳಾಗಲೀ ಇಲ್ಲ. ಎಲ್ಲವೂ ನಮ್ಮ ಸಮಾಜ, ಕಾನೂನು ಮತ್ತು ಸುವ್ಯವಸ್ಥೆ, ಜನಜೀವನಕ್ಕೆ ಹೋಲುತ್ತವೆ. ವಿನಯಾಕನ್‌ ನಟಿಸಿರುವ ಒಂದು ಪ್ರಕರಣದಲ್ಲಿ ಪಾತ್ರಗಳ ಹೆಸರುಗಳ ಮೂಲಕವೇ ಪ್ರಕರಣವನ್ನು ಬರೀ ಪ್ರಕರಣವನ್ನಾಗಿಸದೆ ಮಹಾಕಾವ್ಯವೊಂದರ ಸನ್ನಿವೇಶವನ್ನು ಅವರದ್ದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಇದು ಸಿನಿಮಾ ನೋಡುಗರ ಗ್ರಹಿಕೆಯೋ ಇಲ್ಲವೇ ಬರಹಗಾರ ಮತ್ತು ನಿರ್ದೇಶಕರಾದ ತರುಣ್‌ ಮೂರ್ತಿಯವರು ಉದ್ದೇಶಪೂರ್ವಕವಾಗಿಯೇ ಮಾಡಿದ್ದರೋ ಒಟ್ಟಾರೆ ಒಳ್ಳೆಯ ಪ್ರಯೋಗ.

ಹಾಗೆ, ಚಿತ್ರದಲ್ಲಿನ ಕೆಲವು ಭಾವನಾತ್ಮಕ ದೃಶ್ಯಗಳು ಪ್ರೇಮಿಗಳು ಎದುರಿಸುವ ಸಾಮಾನ್ಯ ಸನ್ನಿವೇಶವನ್ನು ನೆನಪಿಸುತ್ತವೆ. ನೋಡುಗರು ಚಿತ್ರದ ಪಾತ್ರಗಳಲ್ಲಿ ತಮ್ಮನ್ನು ಕಾಣುತ್ತಾ ಸಿನಿಮಾದಲ್ಲಿ ಒಳಗೊಳ್ಳುತ್ತಾ ಹೋಗುತ್ತಾರೆ. ಕೊನೆಯಲ್ಲಿ ಚಿತ್ರತಂಡ ಏನೋ ಹೇಳುತ್ತದೆ! ಸಿನಿಮಾ ZEE5ನಲ್ಲಿ ಸ್ಟ್ರೀಮ್‌ ಆಗುತ್ತಿದೆ, ವೀಕ್ಷಿಸಿ.

LEAVE A REPLY

Connect with

Please enter your comment!
Please enter your name here