ಹಾಲಿವುಡ್‌ ಮಂದಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ಪ್ರತಿಷ್ಠಿತ ಗೌರವವೆಂದೇ ಭಾವಿಸುತ್ತಾ ಬಂದಿದ್ದಾರೆ. ಆದರೆ ಕಳೆದ ವರ್ಷ ಲಾಸ್ ಏಂಜಲಿಸ್ ಟೈಮ್ಸ್ ಹೊರಹಾಕಿದ ಹಗರಣ ವರ್ಷ ಪೂರ್ತಿ ಸದ್ದು ಮಾಡಿತು. ಈ ಹಗರಣದ ಬಣ್ಣಗಳು ಅದೆಷ್ಟು ಗಾಢವಾಗಿದ್ದವು ಎಂದರೆ ಗೋಲ್ಡನ್ ಗ್ಲೋಬ್ ಜತೆಗೆ ಗುರುತಿಸಿಕೊಳ್ಳುವುದೂ ಹೇಸಿಗೆಯ ವಿಚಾರ ಎಂಬಂತಾಗಿ ಈ ಬಾರಿ ಪ್ರಾಯೋಜಕರು ಅದರೊಂದಿಗೆ ಗುರುತಿಸಿಕೊಳ್ಳಲೂ ಹಿಂದೇಟು ಹಾಕಿದ್ದಾರೆ.

‘ಅತ್ಯುತ್ತಮ ಸಾಮಾಜಿಕ ಪರಿಣಾಮ ಬೀರಿದ ಚಿತ್ರ’ ಎಂಬ ಪ್ರಶಸ್ತಿ ಪಡೆಯುವ ಸಿನಿಮಾ ಥಿಯೇಟರಿಗೇ ಬಂದಿರುವುದಿಲ್ಲ. ಒಂದಷ್ಟು ದೊಡ್ಡವರು ನೋಡಿ ಮೆಚ್ಚಿ, ಮಕ್ಕಳಿಗೆ ತೋರಿಸಿದರೂ ನೋಡದ ಸಿನಿಮಾಗಳಿಗೆ ‘ಅತ್ಯುತ್ತಮ ಮಕ್ಕಳ ಚಿತ್ರ’ ಪ್ರಶಸ್ತಿ ಬಂದುದಿದೆ. ನಮ್ಮಲ್ಲಿ ಹೀಗೇ, ಎಲ್ಲದಕ್ಕೂ‌ ಹೊಲಸು ರಾಜಕೀಯ ಎಂದು ಮೂದಲಿಸುವ ಮುನ್ನ ಹಾಲಿವುಡ್ ಕಡೆಗೊಮ್ಮೆ ಕಣ್ಣು ಹಾಯಿಸಬೇಕು. ನಮ್ಮ ಬಿಡಿ ರಾಜಕೀಯಗಳು ಹಾಲಿವುಡ್ಡಿನ ವ್ಯವಸ್ಥಿತ ತಾರತಮ್ಯ, ಕಲೆಯ ಆಚೆಗಿನ ಹಿತಾಸಕ್ತಿಗಳ ಮುಂದೆ ಏನೇನೂ ಅಲ್ಲ. ಅದಕ್ಕೆ ತಾಜಾ ಉದಾಹರಣೆ ಈ ವರ್ಷದ ಗೋಲ್ಡನ್ ಗ್ಲೋಬ್ ಅವಾರ್ಡ್ಸ್.

ಮೊದಲಿನಿಂದಲೂ ಆಸ್ಕರ್ ಅವಾರ್ಡ್ ಮಾದರಿಯಲ್ಲೇ ನಡೆಯುವ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರಧಾನ ಸಮಾರಂಭ ಹಾಲಿವುಡ್‌ನ ಜಾಲಿ ಮಂದಿಗೆ ಹೆಮ್ಮೆಯ ಅವಾರ್ಡ್. ಮೂಲತಃ ಅಮೆರಿಕದ ಸಿನಿಮಾ ಹಾಗೂ ಟಿವಿ ಸರಣಿಗಳಿಗೆ ನೀಡುವ ಪ್ರಶಸ್ತಿಯಾದರೂ ಇಂಗ್ಲೀಷೇತರ ವರ್ಗದಲ್ಲೂ ಕೆಲವು ಪ್ರಶಸ್ತಿಗಳನ್ನು ಮೀಸಲಿರಿಸುವ ಕಾರಣ ಇದೊಂದು ಜಾಗತಿಕ ಮಟ್ಟದ ಸುದ್ದಿ. ಪ್ರಶಸ್ತಿ ಪ್ರದಾನ ಸಮಾರಂಭದ ಟಿವಿ ಪ್ರಸಾರ ಹಕ್ಕುಗಳೇ ನೂರು ಕೋಟಿ ಡಾಲರ್‌ಗೆ ಬಿಕರಿಯಾಗುವ ಕಾರ್ಯಕ್ರಮವದು. ಆದರೆ ಈ ವರ್ಷ ಟೀವಿ ಪ್ರಸಾರವಿಲ್ಲದೆ, ರೆಡ್ ಕಾರ್ಪೆಟ್ ಹಾಸದೆ, ಗಣ್ಯಾತಿಗಣ್ಯ ಅತಿಥಿಗಳು ಬಾರದೆ ಕೇವಲ ಲೆಕ್ಕ ಭರ್ತಿಗಷ್ಟೇ ಅವಾರ್ಡ್ ಕಾರ್ಯಕ್ರಮ ನಡೆಸಲಾಗಿದೆ. ಟ್ವೀಟ್ ಮೂಲಕ ಘೋಷಣೆಗೆ ಸೀಮಿತವಾಗಿದೆ. ಪ್ರಶಸ್ತಿಯನ್ನು ವೇದಿಕೆಯಲ್ಲಿ ಹೆಮ್ಮೆಯಿಂದ ಎತ್ತಿ ಹಿಡಿದು ಮೈಕ್ ಮುಂದೆ ಭಾವಪರವಶವಾಗುತ್ತಿದ್ದ ವಿಜೇತರು ಈಗ ಪುಟ್ಟ ವಿಡಿಯೋದಲ್ಲಿ ನಾಲ್ಕು‌ ಮಾತಾಡಿ ತಮ್ಮ ಸಂತೋಷವನ್ನು ಜಾಲತಾಣದಲ್ಲಿ ಹರಿಬಿಡುವಷ್ಟರ ಮಟ್ಟಿಗೆ ಸೀಮೀತ ಪರಿಧಿಗೆ ಬಂದು ನಿಂತಿದೆ.

ಮೂಲತಃ 1944ರಲ್ಲಿ ಸ್ಥಾಪನೆಯಾದ ಗೋಲ್ಡನ್ ಗ್ಲೋಬ್ ಅವಾರ್ಡ್ಸ್‌ 2020 ಹಾಗೂ 2021ರ ಅವಧಿಯ ಕೋವಿಡ್ ಕಾರಣ ಹೊರತುಪಡಿಸಿ ದೊಡ್ಡ ಮಟ್ಟದಲ್ಲೇ ಸುದ್ದಿಯಾಗುತ್ತಿತ್ತು, ಪ್ರತಿಷ್ಠಿತವೆಂದೂ ಪರಿಗಣಿತವಾಗಿತ್ತು. ಆದರೆ ಕಳೆದ ವರ್ಷ ಲಾಸ್ ಏಂಜಲಿಸ್ ಟೈಮ್ಸ್ ಹೊರಹಾಕಿದ ಹಗರಣ ವರ್ಷ ಪೂರ್ತಿ ಸದ್ದು ಮಾಡಿತು. ಈ ಹಗರಣದ ಬಣ್ಣಗಳು ಅದೆಷ್ಟು ಗಾಢವಾಗಿದ್ದವು ಎಂದರೆ ಗೋಲ್ಡನ್ ಗ್ಲೋಬ್ ಜತೆಗೆ ಗುರುತಿಸಿಕೊಳ್ಳುವುದೂ ಹೇಸಿಗೆಯ ವಿಚಾರ ಎಂಬಂತಾಗಿ ಪ್ರಾಯೋಜಕರು ಅದರೊಂದಿಗೆ ಗುರುತಿಸಿಕೊಳ್ಳಲೂ ಹಿಂದೇಟು ಹಾಕಿದ್ದಾರೆ. 100ಕ್ಕೂ ಹೆಚ್ಚು ಪ್ರಾಯೋಜಕರು ಗೋಲ್ಡನ್ ಗ್ಲೋಬಿ‌ನಿಂದ ಈ ವರ್ಷ ದೂರ ಉಳಿದಿದ್ದಾರೆ. ಮಿಲಿಯಗಟ್ಟಲೆ ಡಾಲರ್‌ಗಳಿಗೆ ಬಿಕರಿಯಾಗುತ್ತಿದ್ದ ಟಿವಿ ಪ್ರಸಾರ ಹಕ್ಕಿನ ಹರಾಜು ಬದಿಗಿರಲಿ, ಕಾರ್ಯಕ್ರಮದ ಪ್ರಸಾರವನ್ನೇ ಎಲ್ಲಾ ಪ್ರಮುಖ ಟಿವಿ ಚಾನಲ್‌ಗಳು ಬಹಿಷ್ಕರಿಸಿವೆ. 1996ರಿಂದ ಸತತವಾಗಿ ಪ್ರಸಾರ ಹಕ್ಕುಗಳನ್ನು ಪಡೆದ ಎನ್‌ಬಿಸಿ ಈ ವರ್ಷ ಬದಿಗೆ ಸರಿದಿದೆ.

ಹಾಲಿವುಡ್ ಫಾರಿನ್ ಪ್ರೆಸ್ ಅಸೋಸಿಯೇಷನ್ ಈ ಪ್ರಶಸ್ತಿಯ ಸ್ಥಾಪಕ ಮತ್ತು ಪೋಷಕ ಸಂಸ್ಥೆ ಹಾಗೂ ಪ್ರಸ್ತುತ ಹಗರಣದ ಕೇಂದ್ರಬಿಂದು. ಹೆಸರಿಗೆ ಅಂತಾರಾಷ್ಟ್ರೀಯ ಮಟ್ಟದ ಮನರಂಜನಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ 87 ಪತ್ರಕರ್ತರ ಒಕ್ಕೂಟ. ಕಳೆದ ವರ್ಷ ನೆಟ್‌ಫ್ಲಿಕ್ಸ್‌‌ನ ‘ಎಮಿಲಿ ಇನ್ ಪ್ಯಾರಿಸ್’ಗೆ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಸಿಕ್ಕಿತು. ಅದಕ್ಕೆ ಪ್ರತಿಯಾಗಿ ಆಯ್ಕೆ ಸಮಿತಿಯ ಸದಸ್ಯರನ್ನು ನೆಟ್‌ಫ್ಲಿಕ್ಸ್ ಪ್ಯಾರಿಸ್ ಪ್ರವಾಸಕ್ಕೆ ಕರೆದೊಯ್ದಿತ್ತು. ಅಲ್ಲದೆ 2020 ಹಾಗೂ 2021ರ ಅವಧಿಯಲ್ಲಿ ಆಯ್ಕೆ ಸಮಿತಿಯ ಸದಸ್ಯರಿಗೆ 20 ಲಕ್ಷ ಡಾಲರ್ ಭಕ್ಷೀಸೂ ಕೊಡಲಾಗಿತ್ತು ಎಂಬ ಅಂಶವನ್ನು ಲಾಸ್ ಏಂಜಲಿಸ್ ಟೈಮ್ಸ್ ಹೊರಹಾಕಿತು. ಜತೆಗೆ ಸದಸ್ಯರಲ್ಲಿ 2002ರಿಂದಲೂ ಕಪ್ಪು ಜನಾಂಗಕ್ಕೆ ಸೇರಿದ ಒಬ್ಬನೇ ಒಬ್ಬ ವ್ಯಕ್ತಿ ಇಲ್ಲದಿರುವ ಅಂಶವೂ ಚರ್ಚೆಗೆ ಬಂತು. ಆ ವರ್ಗವನ್ನು ಪ್ರತಿನಿಧಿಸುವ ಯಾವ ಸಿನಿಮಾ/ಸರಣಿಯೂ ಎಷ್ಟೇ ಉತ್ತಮವಾಗಿದ್ದರೂ ಪ್ರಶಸ್ತಿಗೆ ಪರಿಗಣಿತವಾಗಿಲ್ಲ ಎಂಬ ವಿಚಾರವೂ ಮುನ್ನೆಲೆಗೆ ಬಂತು. ‘ಕಪ್ಪು ಜನಾಂಗ ಹಾಗೂ ಇತರೆ ಹಿಂದುಳಿದ ವರ್ಗಗಳನ್ನೂ ಪ್ರತಿನಿಧಿಸುವ ಮಂದಿಯನ್ನು ಸಮಿತಿಯಲ್ಲಿ‌ ಸೇರ್ಪಡೆಗೊಳಿಸಲಾಗುವುದು’ ಎಂದು ಒಕ್ಕೂಟ ಹೇಳಿಕೆ ಕೊಡಲೇಬೇಕಾದ ಅನಿವಾರ್ಯತೆ ಕಳೆದ ವರ್ಷ ಉಂಟಾಯಿತು. ಆದರೆ ಇಂದಿಗೂ ತನ್ನ ಹೇಳಿಕೆಯನ್ನು ಸಾಕಾರಗೊಳಿಸುವಲ್ಲಿ ಹೆಜ್ಜೆ ಇಡಲಾಗಿಲ್ಲ ಎಂಬುದು ಈ ವರ್ಷದ ಬಹಿಷ್ಕಾರಕ್ಕೆ ಮುಖ್ಯ ಪ್ರೇರಣೆ.

ಜನಾಂಗೀಯ ತಾರತಮ್ಯವೆಂಬುದು ಸಮಿತಿ ಸದಸ್ಯರ ಆಯ್ಕೆಗಷ್ಟೇ ಸೀಮಿತವಾಗಿಲ್ಲ. ಸಮಿತಿಯ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಫಿಲಿಪ್ ಬರ್ಕ್ ಎಂಬಾತನ ಜನಾಂಗೀಯ ಪೂರ್ವಾಗ್ರವೂ ಪ್ರಶ್ನಾರ್ಹ. ಕಪ್ಪು ಜನಾಂಗದ ಶೋಷಣೆಯ ವಿರುದ್ಧದ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಆಂದೋಲನವನ್ನು ಜನಾಂಗಿಯ ದ್ವೇಷದ ಆಂದೋಲನ ಎಂದು ಬಣ್ಣಿಸಿದ ವರದಿಯೊಂದನ್ನು ಫಿಲಿಪ್ ತನ್ನ ಸಹ ಸದಸ್ಯರ ಜತೆ ಇ ಮೇಲ್ ಮೂಲಕ ಹಂಚಿಕೊಂಡ ವಿಚಾರ ಬಹಿರಂಗವಾದದ್ದು ಗೋಲ್ಡನ್ ಗ್ಲೋಬಿನ ಹಿತ್ತಾಳೆ ಬಣ್ಣವನ್ನು ಹೊರಹಾಕಿದ ಪ್ರಮುಖ ಘಟನೆಗಳಲ್ಲಿ ಒಂದು.

ಇಷ್ಟರ ಮೇಲೆ ಹೆಸರಿಗೆ ಪತ್ರಕರ್ತರ ಒಕ್ಕೂಟವೆಂದಿರುವ ಹಾಲಿವುಡ್ ಫಾರಿನ್ ಪ್ರೆಸ್ ಅಸೋಸಿಯೇಷನ್ ಸದಸ್ಯತ್ವ ನಿಯಮಗಳೂ ಪಾರದರ್ಶಕವಾಗಿಲ್ಲ. ತನ್ನ ಸದಸ್ಯತ್ವ ಮನವಿಯನ್ನು ಪದೇ ಪದೆ ನಿರಾಕರಿಸಲಾಗಿದೆ ಎಂದು ನಾರ್ವೇ ಮೂಲದ ಜೆರ್ಸ್ಟಿ‌ ಫ್ಲಾ ಎಂಬ ಪತ್ರಕರ್ತೆ ಕಳೆದ ವರ್ಷ ದಾವೆ ಹೂಡಿದ್ದಳು. ತಾಂತ್ರಿಕ ಕಾರಣಕ್ಕೆ ಆ ಮೊಕದ್ದಮೆಯನ್ನು ನ್ಯಾಯಾಲಯ ಮನ್ನಿಸಲಿಲ್ಲವಾದರೂ ಸಮಿತಿಯ ಸದಸ್ಯತ್ವ ಅಪಾರದರ್ಶಕವಾಗಿದೆ‌ ಎಂಬುದು ಜಾಹೀರಾಯಿತು. ಸಮಿತಿಯ ಹೆಚ್ಚಿನ ಸದಸ್ಯರು ಅಸಲಿಗೆ ಪತ್ರಕರ್ತರೇ ಅಲ್ಲ ಎಂಬ ಗುಟ್ಟು ರಟ್ಟಾಯಿತು.

ಈ ಎಲ್ಲಾ ಅಪಸವ್ಯಗಳ ನಡುವೆಯೂ ಕವುಚಿ ಬಿದ್ದರೂ ಮೂಗು ಮೇಲೆ ಎಂಬಂತೆ 79ನೇ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ ಭಾನುವಾರ ಘೋಷಣೆಯಾಗಿದೆ. ಪ್ರಮುಖ ಪ್ರಶಸ್ತಿಗಳು ಹೀಗಿವೆ:

ಸಿನಿಮಾ ವಿಭಾಗ | ದ ಪವರ್ ಆಫ್ ಡಾಗ್ – ಅತ್ಯತ್ತಮ ಸಿನಿಮಾ(ಡ್ರಾಮಾ). ಅದೇ ಸಿನಿಮಾದ ನಿರ್ದೇಶಕ ಜೇನ್ ಚಾಂಪಿಯನ್ ಅತ್ಯುತ್ತಮ ನಿರ್ದೇಶಕ | ಅತ್ಯುತ್ತಮ ನಟ ಪ್ರಶಸ್ತಿ (ಡ್ರಾಮಾ) – ಕಿಂಗ್ ರಿಚರ್ಡ್‌ನಲ್ಲಿನ ಅಭಿನಯಕ್ಕಾಗಿ ವಿಲ್ ಸ್ಮಿತ್ | ವೆಸ್ಟ್ ಸೈಡ್ ಸ್ಟೋರಿ – ಅತ್ಯತ್ತಮ ಸಿನಿಮಾ (ಕಾಮಿಡಿ/ಮ್ಯೂಸಿಕಲ್), ರೇಚಲ್ ಝೆಗ್ಲರ್‌ ಅತ್ಯುತ್ತಮ ನಟಿ, ಅರಿಯಾನ ಡಿ’ಬೋಸ್‌ಗೆ ಅತ್ಯುತ್ತಮ ಪೋಷಕ ನಟಿ | ಅತ್ಯುತ್ತಮ ನಟ (ಕಾಮಿಡಿ/ಡ್ರಾಮಾ) – ಟಿಕ್, ಟಿಕ್, ಭೂಮ್‌ನಲ್ಲಿನ ಅಭಿನಯಕ್ಕೆ ಆ್ಯಂಡ್ರೂ ಗಾರ್ಫೀಲ್ಡ್

ಟಿವಿ ವಿಭಾಗ | ಸಕ್ಸೆಶನ್ – ಬೆಸ್ಟ್ ಡ್ರಾಮಾ ಸೀರೀಸ್ ಅವಾರ್ಡ್, ಜೆರೆಮಿ ಸ್ಟ್ರಾಂಗ್ ಅತ್ಯತ್ತಮ ನಟ, ಸಾರಾ ಸ್ನೂಕ್ ಅತ್ಯುತ್ತಮ ಪೋಷಕ ನಟಿ | ಹ್ಯಾಕ್ಸ್: ಬೆಸ್ಟ್ ಕಾಮಿಡಿ ಸೀರೀಸ್ | ಜೇಸನ್ ಸುಡೀಕಿಸ್ – ಟೆಡ್ ಲಾಸ್ಸೋನಲ್ಲಿನ ಅಭಿನಯಕ್ಕೆ ಅತ್ಯುತ್ತಮ ನಟ | ಒ‌ ಯೆಯಾಂಗ್ಸು – ಸ್ವಿಡ್ ಗೇಮ್‌ ಅಭಿನಯಕ್ಕೆ ಅತ್ಯುತ್ತಮ ಪೋಷಕ ನಟ

‘ದಿ ಪವರ್‌ ಆಫ್‌ ದಿ ಡಾಗ್‌’ ಸಿನಿಮಾ


LEAVE A REPLY

Connect with

Please enter your comment!
Please enter your name here