ಮತದಾನದ ಹಕ್ಕಿರುವ ಎಲ್ಲರೂ ನೋಡಲೇಬೇಕಾದ ಸಿನಿಮಾವಿದು. ಮನರಂಜನೆಗೆ ಒಂದಿನಿತೂ ಮೋಸ ಮಾಡದ ಈ ಸಿನಿಮಾವನ್ನು ಪರಿಣಾಮಕಾರಿಯಾಗಿ ಮತದಾನದ ಜಾಗೃತಿ ಮೂಡಿಸಲು ಚುನಾವಣಾ ಪ್ರಾಧಿಕಾರ ಬಳಸಬಹುದು ಎಂದರೆ ಅತಿಶಯೋಕ್ತಿಯೇನೂ ಆಗದು. ‘ಮಂಡೇಲಾ’ ತಮಿಳು ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಪ್ರಜಾಪ್ರಭುತ್ವ ಎಂದ ಮೇಲೆ ಎಲ್ಲದರಲ್ಲೂ ರಾಜಕೀಯ ಇದ್ದೇ ಇದೆ. ಯಾವ ಬಸ್ಸು ಎಲ್ಲಿಗೆ ಹೋಗಬೇಕು? ಯಾವ ರಸ್ತೆಗೆ ತೇಪೆ ಬೇಕು? ಕುಡಿಯುವ ನೀರು ಘಟಕ ಇಲ್ಲಿಯೇ ಬೇಕು ಎಂಬ ಒಣ ರಾಜಕೀಯ, ಕಟ್ಟಡದ ಉದ್ಘಾಟನೆಗೆ ಇಂಥವರೇ ಬರಬೇಕು ಎಂಬ ಬಣ ರಾಜಕೀಯ, ಎಲ್ಲದಕ್ಕೂ ಅಗ್ರಗಣಿ ಜಾತಿ ರಾಜಕೀಯ. ಹೀಗೆ ರಾಜಕೀಯದ ಹೊರತಾಗಿ ಜನಜೀವನವಿಲ್ಲ. ಇಂಥ ರಾಜಕೀಯ ಮೇಲಾಟ, ಕೀಳಾಟ, ಹುಚ್ಚಾಟಗಳ ವಿಡಂಬನೆಯ ಹಾಸ್ಯಮಯ ನಿರೂಪಣೆ ಮಾಡುತ್ತದೆ ತಮಿಳು ಸಿನಿಮಾ ‘ಮಂಡೇಲಾ’. ಕತೆ-ಚಿತ್ರಕತೆ ಬರೆದು ನಿರ್ದೇಶನವನ್ನೂ ಮಾಡಿರುವ ಮಡೋನ್ ಅಶ್ವಿನ್ ಇದು ತಮ್ಮ ಚೊಚ್ಚಲ ನಿರ್ದೇಶನ ಎಂಬ ಸುಳಿವೇ ಸಿಗದಂತೆ ಸಿನಿಮಾವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ‘ಮಂಡೇಲಾ’ ಎಂಬ ಹೆಸರಿಗೂ ಕಾರಣವಿದೆ. ಅದಕ್ಕೆ ನಂತರ ಬರೋಣ.
‘ಮಂಡೇಲಾ’ದ ಕತೆ ನಡೆಯುವ ಆ ಗ್ರಾಮದಲ್ಲಿ ಒಬ್ಬ ಕ್ಷೌರಿಕನಿದ್ದಾನೆ. ಜಾತಿ ವ್ಯವಸ್ಥೆಯಲ್ಲಿ ಆತ ಕೆಳಜಾತಿಯವ. ತನ್ನವನೆಂದು ಹತ್ತಿರ ಕರೆಸಿಕೊಳ್ಳದ ಎಲ್ಲರಿಗೂ ತಲೆಗೆ ಕತ್ತರಿ ಹಾಕಿ, ಗಡ್ಡ ಕೆರೆದು ಒಪ್ಪ-ಓರಣ ಮಾಡಲು ಅವನೇ ಬೇಕು. ಆದರೆ ಆತ ಯಾರಿಗೂ ಬೇಡದವ. ಅವನಿಗೆ ಸ್ವಂತದ್ದು ಎಂದು ಹೇಳಿಕೊಳ್ಳಲು ಒಂದು ಹೆಸರೂ ಇಲ್ಲ. ಊರವರು ಇಟ್ಟ ಅಡ್ಡ ಹೆಸರು ಇಳಿಚ್ಚವಾಯನ್. ಕರೆದವರ ಮನೆಗೆ ಹೋಗಿ ಕ್ಷೌರ ಮಾಡಿ, ಕೊಟ್ಟಿದ್ದನ್ನು ಪಡೆದು, ಊರಾಚೆಗಿನ ಆಲದ ನೆರಳನ್ನೇ ಮನೆ ಮಾಡಿದ ಆತ ಇದ್ದುದರಲ್ಲೇ ಹಾಯಾಗಿರುವ ಅಲ್ಪತೃಪ್ತ.
ಅದೇ ಆಲದ ಮರದ ಅಡಿಯಲ್ಲಿ ಅವನ ದಿವಂಗತ ಅಪ್ಪನ ಬಯಕೆಯಂತೆ ಒಂದು ಸೆಲೂನ್ ಕಟ್ಟುವುದು ಇಳಿಚ್ಚವಾಯನ್‌ಗೆ ಇರುವ ಏಕೈಕ ಆಸೆ. ಅದಕ್ಕಾಗಿ ಕೂಡಿಟ್ಟ ಪುಡಿಗಾಸಿನ ಮೇಲೆ ಕಳ್ಳ ಕಾಕರ ವಕ್ರ ದೃಷ್ಟಿ. ಭದ್ರತೆಗಾಗಿ ಪೋಸ್ಟಾಫೀಸಲ್ಲಿ ಅಕೌಂಟ್ ತೆರೆದರೆ ಹಣವನ್ನು ಭದ್ರವಾಗಿ ಇಡಬಹುದು ಎಂದು ಯಾರೋ ತಿಳಿಸಿದ ಮೇಲಷ್ಟೇ ಅವನಿಗೆ ತಿಳಿದಿದೆ. ಅಲ್ಲಿಗೆ ಹೋಗಿ ವಿಚಾರಿಸಿದರೆ ಆಧಾರ್ ಕಾರ್ಡ್ ಬೇಕೆನ್ನುತ್ತಾರೆ. ಆಧಾರ್ ಮಾಡಿಸಲು ಹೋದರೆ ರೇಷನ್ ಕಾರ್ಡ್ ಕೇಳುತ್ತಾರೆ, ರೇಷನ್ ಕಾರ್ಡ್ ಮಾಡಲು ವೋಟರ್ ಐಡಿ ಅಗತ್ಯ. ಸರಿ, ಹಾಗಾದರೆ ವೋಟರ್ ಐಡಿ ಮಾಡಿಸುವುದು ಹೇಗೆಂದು ಕೇಳಿದಾಗ ‘ಆಧಾರ್ ಕಾರ್ಡ್ ಕೊಟ್ಟರೆ ಮಾಡಿಕೊಡ್ತೇವೆ’ ಎಂಬ ದಿಟ್ಟ ಉತ್ತರವನ್ನು ಕೊಡುತ್ತದೆ ಸರ್ಕಾರಿ ಯಂತ್ರ.
ಕೊನೆಗೆ ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ಹೊಸ ಹೆಸರನ್ನೇ ಹುಡುಕೋಣ ಎಂಬ ಸಲಹೆ ನೀಡುವುದು ಅಂಚೆಯಕ್ಕ. ಹೌದು, ಆ ಊರಿನ ಅಂಚೆ ಕಚೇರಿಯಲ್ಲಿ ಇರುವುದು ಪೋಸ್ಟ್ ಮ್ಯಾನ್ ಅಲ್ಲ, ಪೋಸ್ಟ್ ವುಮನ್ ತೆನ್ಮೋಳಿ. ಹೆಸರಿಲ್ಲದ ಈತನಿಗೆ ವಿವಿಧ ಹೆಸರು ಆಯ್ಕೆ ಮಾಡಿದರೂ ಯಾವುದೂ ಹೊಂದುವುದಿಲ್ಲ. ಆಗ ಅಚಾನಕ್ಕಾಗಿ ಕಣ್ಣಿಗೆ ಬೀಳುವುದು ನೆಲ್ಸನ್ ಮಂಡೇಲಾ ಚಿತ್ರವಿರುವ ಅಂಚೆಚೀಟಿ. ‘ಆತ ನೋಡಲೂ ನನ್ನ ಹಾಗೆಯೇ ಇದ್ದಾನಲ್ಲ’ ಎಂದು ಇಳಿಚ್ಚವಾಯನ್‌ಗೆ ಅನಿಸಿದಾಗ ಆ ಹೆಸರನ್ನೇ ಅಂತಿಮ ಮಾಡಲಾಗುತ್ತದೆ. ಕೆಳವರ್ಗವನ್ನು ಪ್ರತಿನಿಧಿಸುವ ದೊಡ್ಡ ಮನುಷ್ಯ ನೆಲ್ಸನ್ ಮಂಡೇಲಾರನ್ನು ಹೀಗೆ ಕೈ ಹಿಡಿದು ಕರೆದಷ್ಟು ಸುಲಭವಾಗಿ ಚಿತ್ರಕತೆಗೆ ಎಳೆದು ತಂದದ್ದು ಅಶ್ವಿನ್ ಪ್ರತಿಭೆಯ ಪ್ರತಿಬಿಂಬ.
ಎಲ್ಲರೂ ಎಲ್ಲರಿಗೂ ತಿಳಿದಿರುವ, ನಿಗದಿತ ಜನಸಂಖ್ಯೆಯ ಗ್ರಾಮ ಪಂಚಾಯ್ತಿಗೆ ಚುನಾವಣೆ ಘೋಷಣೆಯಾಗುತ್ತದೆ. ಕಣಕ್ಕಿಳಿಯುವುದು ಇಬ್ಬರು ಅಭ್ಯರ್ಥಿಗಳು. ಅವರ ಹಿಂದೆ ಎರಡು ಗುಂಪು. ಊರಿನ ಒಂದೊಂದು ಮತವೂ ಯಾರ್ಯಾರಿಗೆ ಹೋಗುತ್ತದೆ ಎಂಬ ಲೆಕ್ಕಾಚಾರ ಹಾಕುವಲ್ಲಿ ಇಬ್ಬರೂ ಅಭ್ಯರ್ಥಿಗಳು ನಿಸ್ಸೀಮರು. ಅಳೆದೂ ತೂಗಿ ಕೂಡಿ ಕಳೆದಾಗ ಇತ್ತಂಡಗಳೂ ಕಂಡುಕೊಳ್ಳುವ ಸತ್ಯ ಇಬ್ಬರೂ ಸಮಬಲರು ಎಂಬುದು. ಹೀಗಿರುವ ಪರಿಸ್ಥಿತಿಯಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರುವವನೇ ಹೊಸ ಹೆಸರಿನ ಮಂಡೇಲಾ. ಅಲ್ಲಿಂದ ಶುರುವಾಗುವುದೇ ಓಲೈಕೆ ರಾಜಕಾರಣ. ಯಾವ್ಸೀಮೆ ಹೆಸರೆಂದು ಮೂದಲಿಸಿದವರ ಬಾಯಲ್ಲೇ ಆತ ಮಂಡೇಲಾ ಸಾರ್ ಆಗುತ್ತಾನೆ.
ಪ್ರಜಾಪ್ರಭುತ್ವದ ಹೆಸರಲ್ಲಿ ಏನೆಲ್ಲಾ ಸರ್ಕಸ್ಸುಗಳು ನಡೆಯುತ್ತವೋ ಅವೆಲ್ಲವನ್ನೂ ತೋರಿಸುವ ಈ ಚಲನಚಿತ್ರ ಅನಿರೀಕ್ಷಿತ ಸನ್ನಿವೇಶಗಳಲ್ಲೇ ನಗಿಸುತ್ತದೆ. ಮಕ್ಕಳ ಶಾಲೆಯ ಚೀಲದ ಹಿಂದೆ, ಕುಡಿಯುವ ನೀರಿನ ಮೇಲೆ, ಕಡೆಗೆ ಸಂಡಾಸಿನ ಚೆಂಬಿನ ಮೇಲೂ ರಾಜಕಾರಣಿಗಳ ಪ್ರಾಯೋಜಕತ್ವ ಕಾಣುವಾಗ ನಗುವಿನ ಜತೆಗೇ ಸಣ್ಣದೊಂದು ವಿಷಾದವೂ ಆವರಿಸುತ್ತದೆ. ಮೂರು ಚದರಡಿ ಶೌಚಾಲಯದ ಉದ್ಘಾಟನೆಯಲ್ಲಿ ನೂರು ಚದರಡಿ ಫ್ಲೆಕ್ಸ್‌ಗಳು ರಾರಾಜಿಸುವುದು ವಾಸ್ತವ ಬಿಂಬಿಸುವ ಹಾಸ್ಯ. ತಳವರ್ಗದ ಪ್ರತಿನಿಧಿಯಾಗಿ, ಬೇಡಿಕೆಯ ಮತದಾರನಾಗಿ ರಾಜಕೀಯ ದಾಳಕ್ಕೆ ಸಿಗುವ ಮಂಡೇಲಾನ ಪಾತ್ರ ನಿಜ ಸಮಾಜದ ವಿಕಟಹಾಸ್ಯ.
ತನ್ನ ಒಂದು ವೋಟಿನ ಮಹಿಮೆ ಅರಿಯದ ಮತದಾರ ಓಲೈಕೆಯ ನೆಪದಲ್ಲೇ ಹೇಗೆ ಮೈಮರೆಯುವಂತೆ ಶೋಷಣೆಗೆ ಒಳಗಾಗುತ್ತಾನೆ ಎಂಬುದನ್ನು ಈ ಸಿನಿಮಾ ತೋರಿಸುತ್ತದೆ. ಅದೇ ಮತದಾರ ತನ್ನ ಒಂದು ವೋಟಿನ ಮಹಿಮೆ ಅರಿತರೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನೂ ಸಿನಿಮೀಯ ನೈಜತೆ ಕಟ್ಟಿಕೊಡುತ್ತದೆ. ಇಂಥದ್ದೊಂದು ಕತೆ ಹೇಳುವಾಗ ಹಾಡುಗಳನ್ನು ಯಾವ ರೀತಿ ಬಳಸಬೇಕು ಎಂಬ ಸ್ಪಷ್ಟ ಜ್ಞಾನ ನಿರ್ದೇಶಕರಿಗೆ ಇದೆ. ಭರತ್ ಶಂಕರ್ ಸಂಗೀತ ಚಿತ್ರಕತೆಗೆ ಅಗತ್ಯವಿರುವಲ್ಲೆಲ್ಲ ವೇಗ ನೀಡುತ್ತದೆ.
ತನ್ನ ಸಿನಿಪಯಣದಲ್ಲಿ ಪಾತ್ರಗಳನ್ನು ಬುದ್ಧಿಪೂರ್ವಕವಾಗಿಯೇ ಆಯ್ಕೆ ಮಾಡಿಕೊಂಡು ಬಂದ ತೆನ್ಮೋಳಿ ಪಾತ್ರಧಾರಿ ಶೀಲಾ ರಾಜ್ಕುಮಾರ್ ಸಹಜ ಅಭಿನಯದಿಂದ ಆಪ್ತವಾಗುತ್ತಾರೆ. ನಾಟಕೀಯ ಸನ್ನಿವೇಶದ ಹಾಸ್ಯ ಪಾತ್ರಗಳಲ್ಲೇ ಹೆಚ್ಚಾಗಿ ಅವಕಾಶ ಪಡೆದ ಯೋಗಿ ಬಾಬು ಮಂಡೇಲಾ ಪಾತ್ರವನ್ನು ಅರೆದು ಕುಡಿದಿದ್ದಾರೆ. ಹೀರೋ ಮಂಡೇಲಾಗೂ, ಹೀರೋಯಿನ್ ತೆನ್ಮೋಳಿಗೂ ನಡುವೆ ಇಲ್ಲಿ ಲವ್ ಇಲ್ಲ, ಬದಲಾಗಿ ಒಲವಿದೆ.
ಮತದಾರರ ಚೀಟಿ ಇರುವವರು, ಸದ್ಯದಲ್ಲೇ ಮತದಾನದ ಹಕ್ಕು ಪಡೆಯಲಿರುವವರು, ಹಕ್ಕು ಇದ್ದೂ ಮತ ಹಾಕದವರು, ದಿನಪೂರ್ತಿ ನ್ಯೂಸ್ ಚಾನಲ್ ನೋಡುವವರು, ಮೇಲಿಂದ ಮೇಲಷ್ಟೇ ದಿನಪತ್ರಿಕೆ ಓದುವವರು ಮತ್ತು ಹಾಗೇ ಸುಮ್ಮನೇ ಒಂದಿಷ್ಟು ನಗಬೇಕು ಅಂದುಕೊಂಡವರು, ಹೀಗೆ ಎಲ್ಲಾ ವರ್ಗದವರೂ ನೋಡಲೇಬೇಕಾದ ಸಿನಿಮಾವಿದು.
ಸಿನಿಮಾ : ಮಂಡೇಲಾ | ಚಿತ್ರಕತೆ-ನಿರ್ದೇಶನ : ಮಡೋನ್ ಅಶ್ವಿನ್ | ಛಾಯಾಗ್ರಹಣ : ವಿಧು ಅಯ್ಯಣ್ಣ | ಸಂಗೀತ : ಭರತ್ ಶಂಕರ್ | ತಾರಾಗಣ : ಯೋಗಿ ಬಾಬು, ಶೀಲಾ ರಾಜ್ಕುಮಾರ್, ಸಂಗಿಲಿ ಮುರುಗನ್, ಜಿ. ಎಂ. ಸುಂದರ್, ಕಣ್ಣಾ ರವಿ