ಮಂದಿರಾ ಬೇಡಿ ನಡೆಸಿಕೊಡುವ ‘ದಿ ಲವ್ ಲಾಫ್‌ ಲೈವ್‌’ ಶೋನಲ್ಲಿ ನಟಿ ಶ್ರುತಿ ಹಾಸನ್‌ ತಮ್ಮ ಬಾಯ್‌ಫ್ರೆಂಡ್‌ ಸಂತನು ಹಝಾರಿಕಾ ಕುರಿತು ಹೇಳಿಕೊಂಡಿದ್ದಾರೆ. ಪ್ರೀತಿಯ ವಿಚಾರದಲ್ಲಿ ಗೋಪ್ಯತೆ ಕಾಪಾಡುವುದು ಸಂಗಾತಿಗೆ ನೀಡುವ ಅಗೌರವ ಎನ್ನುವುದು ಅವರ ಗ್ರಹಿಕೆ.

ಬಹುಭಾಷಾ ನಟಿ ಶ್ರುತಿ ಹಾಸನ್‌ ಇಲ್ಲಿಯವರೆಗೆ ತಮ್ಮ ಲವ್‌ ಲೈಫ್ ಕುರಿತು ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಚಿತ್ರಕಲಾವಿದ ಸಂತನು ಹಝಾರಿಕಾ ಜೊತೆ ಅವರು ಓಡಾಡುತ್ತಿದ್ದುದು ಹೌದು. ಸಂತನು ಜೊತೆಗಿನ ಶ್ರುತಿ ಫೋಟೊಗಳು ಅಲ್ಲಲ್ಲಿ ಕಾಣಿಸುತ್ತಿದ್ದವು. ಈಗ ನಟಿ, ನಿರೂಪಕಿ ಮಂದಿರಾ ಬೇಡಿ ಅವರು ‘ದಿ ಲವ್ ಲಾಫ್ ಲೈವ್‌’ ಶೋನಲ್ಲಿ ತಮ್ಮ ಲವ್‌ಸ್ಟೋರಿ ಮತ್ತು ಸಂಗಾತಿಯ ಬಗ್ಗೆ ಹೇಳಿಕೊಂಡಿದ್ದಾರೆ. “ಕಾಮನ್‌ ಫ್ರೆಂಡ್‌ ಒಬ್ಬರ ಮೂಲಕ ಪರಿಚಯವಾದ ಸಂತನು ಉತ್ತಮ ಚಿತ್ರಕಲಾವಿದ. ಪರಿಚಯವಾದ ಕೆಲವು ದಿನ ಚಾಟಿಂಗ್ ಮಾಡುವಾಗ ಇಬ್ಬರಲ್ಲೂ ಕೆಲವು ಸಮಾನ ಆಸಕ್ತಿಗಳಿರುವುದು ಅರಿವಾಯ್ತು. ಚಿತ್ರಕಲೆ, ಸ್ವೀಡಿಷ್ ಮೆಟಲ್ ಬ್ಯಾಂಡ್‌, ಗ್ರಾಫಿಕ್ ನಾವೆಲ್‌ ಬಗ್ಗೆ ಇಬ್ಬರೂ ಸಾಕಷ್ಟು ಚರ್ಚಿಸುತ್ತಿದ್ದೆವು. ನನ್ನ ಆಸಕ್ತಿಗಳೂ ಅವರಲ್ಲೂ ಇದ್ದವು. ಸಂತನು ಹತ್ತಿರವಾಗಲು ಬಹುಶಃ ಈ ಅಂಶವೇ ಕಾರಣವಾಗಿರಬಹುದು” ಎಂದಿದ್ದಾರೆ ಶ್ರುತಿ.

ನಟಿ ಶ್ರುತಿ ತಮ್ಮ ಸಂಗಾತಿ ಕುರಿತು ಹೇಳಿಕೊಳ್ಳಲು ಹಿಂಜರಿಯುತ್ತಿದ್ದರೇ? ಈ ಬಗ್ಗೆ ನಟಿಯನ್ನು ಮಂದಿರಾ ಪ್ರಶ್ನಿಸಿದರು. “ಹಿಂದೆ ಬೇರೆ ಸಾಕಷ್ಟು ವಿಚಾರಗಳನ್ನು ನಾನು ಮುಚ್ಚಿಟ್ಟಿದ್ದಿದೆ. ಆದರೆ ಪ್ರೀತಿ, ಸಂಗಾತಿ ವಿಚಾರದಲ್ಲಿ ಹಾಗೆ ಮಾಡುವುದು ಅಗೌರವ. ಅದು ನಮ್ಮ ಸಂಗಾತಿಗೆ ನಾವು ಮಾಡುವ ದ್ರೋಹ. ನಮ್ಮ ಹತ್ತಿರದ ವ್ಯಕ್ತಿಗಳನ್ನು ಗೌರವದಿಂದ ಕಾಣುವುದು ಬಹುಮುಖ್ಯ” ಎಂದಿದ್ದಾರೆ ಶ್ರುತಿ. ಅವರೀಗ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್‌’ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ನಟನೆಯ ಈ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿದೆ.

LEAVE A REPLY

Connect with

Please enter your comment!
Please enter your name here