ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ ಕುರಿತು ಸೆಕ್ಸಿಸ್ಟ್‌ ಟ್ವೀಟ್‌ ಮಾಡಿದ್ದಾರೆ ಎನ್ನುವ ವಿವಾದಕ್ಕೆ ಗುರಿಯಾಗಿದ್ದ ನಟ ಸಿದ್ದಾರ್ಥ್‌ ಕ್ಷಮೆಯಾಚಿಸಿದ್ದಾರೆ. ತಮ್ಮ ಟ್ವೀಟ್‌ ಅನ್ನು ತಾವು ಸಮರ್ಥಿಸಿಕೊಳ್ಳಲು ಹೋಗುವುದಿಲ್ಲ ಎಂದಿರುವ ಅವರು ನೈನಾ ಎಂದಿಗೂ ತಮಗೆ ‘ಚಾಂಪಿಯನ್‌’ ಎಂದಿದ್ದಾರೆ.

ಖ್ಯಾತ ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ ಮೊನ್ನೆ ಒಂದು ಟ್ವೀಟ್‌ ಮಾಡಿದ್ದರು. ಪಂಜಾಬ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ರಕ್ಷಣೆಗೆ ಸಂಬಂಧಿಸಿದಂತೆ ಆಗಿದ್ದ ಲೋಪದ ಬಗ್ಗೆ ಅವರು ಪ್ರಶ್ನೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ನಟ ಸಿದ್ದಾರ್ಥ್‌ ಟ್ವೀಟ್‌ ಮೂಲಕ ಸೈನಾರ ನಿಲುವನ್ನು ಪ್ರಶ್ನಿಸಿದ್ದರು. ಈ ಟ್ವೀಟ್‌ನಲ್ಲಿ ನಟ ಸೆಕ್ಸಿಸ್ಟ್‌ ಪದಗಳನ್ನು ಬಳಕೆ ಮಾಡಿದ್ದಾರೆ ಎನ್ನುವ ಕುರಿತು ವಿವಾದ ಸೃಷ್ಟಿಯಾಗಿತ್ತು. “ಅವರು ಏನು ಹೇಳುತ್ತಿದ್ದಾರೆ ಎನ್ನುವುದರ ಬಗ್ಗೆ ನನಗೆ ಸ್ಪಷ್ಟವಾದ ತಿಳುವಳಿಕೆ ಇಲ್ಲ. ನಟನಾಗಿ ಅವರು ಇಷ್ಟವಾಗುತ್ತಾರೆ. ತಮ್ಮ ಅಭಿಪ್ರಾಯವನ್ನು ಅವರು ಉತ್ತಮ ಪದಗಳ ಮೂಲಕ ವ್ಯಕ್ತಪಡಿಸಬಹುದಾಗಿತ್ತು” ಎಂದಿದ್ದರು ಸೈನಾ. ವುಮನ್‌ ನ್ಯಾಷನಲ್‌ ಕಮಿಷನ್‌ ಫಾರ್‌ ವುಮೆನ್‌ (NCW) ಅಧ್ಯಕ್ಷೆ ರೇಖಾ ಶರ್ಮಾ, “ಟ್ವಿಟರ್‌ ಸಂಸ್ಥೆ ಸಿದ್ದಾರ್ಥ್‌ ಅಕೌಂಟ್‌ ನಿಷೇಧಿಸಬೇಕು” ಎಂದು ಒತ್ತಾಯಿಸಿದ್ದರು. “ತಾವು ಟ್ವೀಟ್‌ನಲ್ಲಿ ಬಳಕೆ ಮಾಡಿರುವ ಪದಗಳನ್ನು ತಪ್ಪಾಗಿ ಅರ್ಥೈಸಲಾಗಿದೆ” ಎಂದಿದ್ದರು ಸಿದ್ದಾರ್ಥ್‌.

ಹಲವು ಸಂದರ್ಭಗಳಲ್ಲಿ ತಾವು ಸ್ತ್ರೀವಾದಿ ಎಂದೇ ನಟ ಸಿದ್ಧಾರ್ಥ್‌ ತಮ್ಮನ್ನು ಬಿಂಬಿಸಿಕೊಂಡಿದ್ದಾರೆ. ಈ ಟ್ವೀಟ್‌ ವಾರ್‌ನಿಂದ ಅವರಿಗೆ ಇರುಸುಮುರುಸಾಗಿತ್ತು. ಅಂತಿಮವಾಗಿ ಅವರು ಕ್ಷಮೆಯ ಟ್ವೀಟ್‌ನೊಂದಿಗೆ ಪ್ರಕರಣಕ್ಕೆ ಇತ್ಯರ್ಥ ಹಾಡಿದ್ದಾರೆ. “ಪ್ರೀತಿಯ ಸೈನಾ, ನಿಮ್ಮ ಟ್ವೀಟ್‌ಗೆ ಪ್ರತಿಕ್ರಿಯಿಸುತ್ತಾ ನಾನು ಮಾಡಿದ ಕೆಟ್ಟ ಜೋಕ್‌ನ ಟ್ವೀಟ್‌ಗಾಗಿ ನಿಮ್ಮಲ್ಲಿ ಕ್ಷಮೆಯಾಚಿತ್ತೇನೆ. ನಾನು ಖಂಡಿತವಾಗಿ ನನ್ನ ಟ್ವೀಟ್‌ ಅನ್ನು ಸಮರ್ಥಿಸಿಕೊಳ್ಳುವುದಿಲ್ಲ. ಒಂದು ತಮಾಶೆಯನ್ನು ವಿವರಿಸಬೇಕಾದ ಸಂದರ್ಭ ಎದುರಾದರೆ, ಖಂಡಿತ ಅದು ಒಳ್ಳೆಯ ಜೋಕ್‌ ಅಲ್ಲ. ಓರ್ವ ಮಹಿಳೆ ಎನ್ನುವುದನ್ನು ಗುರಿಯಾಗಿಸಿಕೊಂಡು ಮಾಡಿದ ಟ್ವೀಟ್‌ ಇದಲ್ಲ. ನೀವು ನನ್ನ ಮನವಿಯನ್ನು ಪರಿಗಣಿಸುತ್ತೀರಿ ಎನ್ನುವ ವಿಶ್ವಾಸವಿದೆ. ನೀವು ನನಗೆ ಸದಾ ಚಾಂಪಿಯನ್‌ ಆಗಿಯೇ ಇರುತ್ತೀರಿ” ಎಂದು ಸಿದ್ದಾರ್ಥ್‌ ಟ್ವೀಟ್‌ ಮಾಡಿದ್ದಾರೆ. ಸಿದ್ದಾರ್ಥ್‌ರ ಈ ನಿಲುವನ್ನು ಅವರ ಅಭಿಮಾನಿಗಳು ಸ್ವಾಗತಿಸಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ನಟನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Previous articleನಟ ಅನೀಶ್‌ ಹೊಸ ಸಿನಿಮಾ ‘ಬೆಂಕಿ’; ಬರ್ತ್‌ಡೇಗೆ ರಿವೀಲ್‌ ಆಯ್ತು ಫಸ್ಟ್‌ ಲುಕ್‌
Next articleಅಬ್ಬರದ ಚುನಾವಣೆಯಂಥ ಭರ್ಜರಿ ಮನರಂಜನೆ ಮಂಡೇಲಾ

LEAVE A REPLY

Connect with

Please enter your comment!
Please enter your name here