ಪೀಟರ್ ಫ್ಲಿಂಥ್ ನಿರ್ದೇಶನದಲ್ಲಿ ನಿಕೋಲಝ್ ಕೋಸ್ಟರ್ ನಟಿಸಿರುವ ಸರ್ವೈವಲ್ ಡ್ರಾಮಾ ‘ಎಗನೆಸ್ಟ್ ದಿ ಐಸ್’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ನೈಜ ಘಟನೆ ಆಧರಿಸಿದ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಮಾರ್ಚ್ 2ರಿಂದ ಸ್ಟ್ರೀಮ್ ಆಗಲಿದೆ.
ಡೆನ್ಮಾರ್ಕ್ ದೇಶದ ಬೃಹತ್ ದ್ವೀಪ ಗ್ರೀನ್‌ಲ್ಯಾಂಡ್. ದಶಕಗಳ ಹಿಂದೆ ಈ ದ್ವೀಪಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಡೆನ್ಮಾರ್ಕ್ ದೇಶಗಳ ಮಧ್ಯೆ ತಕರಾರಿತ್ತು. ಗ್ರೀನ್‌ಲ್ಯಾಂಡ್ ಎರಡು ದ್ವೀಪಗಳ ಸಮುಚ್ಛಯ ಎನ್ನುವುದು ಅಮೆರಿಕ ವಾದ. ದ್ವೀಪದ ಭೌಗೋಳಿಕ ಪ್ರದೇಶವನ್ನು ಕಬಳಿಸುವ ಹುನ್ನಾರ ಇದರ ಹಿಂದಿನದು. ಇದು ಒಂದೇ ದ್ವೀಪ ಎನ್ನುವ ಡೆನ್ಮಾರ್ಕ್ ಸಮರ್ಥನೆಗೆ ಆಗ ಸ್ಯಾಟಲೈಟ್ ತಂತ್ರಜ್ಞಾನ, ಮ್ಯಾಪಿಂಗ್ ಸೇರಿದಂತೆ ಸರಿಯಾದ ಅಳತೆಗೋಲು ಇರಲಿಲ್ಲ. ಆಗ ಡೆನ್ಮಾರ್ಕ್‌ನ ಪೋಲರ್ ಎಕ್ಸ್‌ಪ್ಲೋರರ್ ಎಜ್ನರ್ ಮಿಕೆಲ್ಸನ್ ತಮ್ಮ ಸಹೋದ್ಯೋಗಿ ಇವರ್ ಇವರ್ಸನ್ ಜೊತೆಗೂಡಿ ಗ್ರೀನ್‌ಲ್ಯಾಂಡ್ ಎಕ್ಸ್‌ಪೆಡಿಷನ್ ಕೈಗೊಳ್ಳುತ್ತಾರೆ. ಇದು ‘ಅಲಬಾಮ ಎಕ್ಸ್‌ಪೆಡಿಷನ್’ ಎಂದೇ ಹೆಸರಾಗಿದೆ. ಪೋಲಾರ್ ಪ್ರದೇಶದ ಈ ಜರ್ನೀ ಅತ್ಯಂತ ಕ್ಲಿಷ್ಟಕರವಾದ ಎಕ್ಸ್‌ಪೆಡಿಷನ್ ಆಯ್ತು. ಕೊನೆಗೆ ನೈಸರ್ಗಿಕ ವಿಕೋಪಕ್ಕೆ ಸಿಲುಕಿದ ಈ ಇಬ್ಬರನ್ನು ರಕ್ಷಿಸಲು ಸಾಕಷ್ಟು ಪ್ರಯಾಸ ಪಡಬೇಕಾಯ್ತು. ಎಜ್ನರ್ ಮಿಕೆಲ್ಸನ್ ಈ ಅನುಭವಗಳನ್ನು ಪುಸ್ತಕದಲ್ಲಿ ದಾಖಲಿಸಿದರು. ಈ ಕೃತಿಯನ್ನು ಆಧರಿಸಿ ‘ಎಗನೆಸ್ಟ್ ದಿ ಐಸ್’ ಸಿನಿಮಾ ತಯಾರಾಗಿದೆ.
‘ಗೇಮ್ ಆಫ್ ಥ್ರೋನ್ಸ್’ ಚಿತ್ರದಲ್ಲಿ ಜೈಮೆ ಲೆನ್ನಿಸ್ಟರ್ ಪಾತ್ರದಲ್ಲಿ ನಟಿಸಿದ್ದ ನಿಕೋಲಝ್ ಕೋಸ್ಟರ್ ‘ಎಗನೆಸ್ಟ್ ದಿ ಐಸ್’ನಲ್ಲಿ ಎಜ್ನರ್ ಮಿಕೆಲ್ಸನ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಬಿಡುಗಡೆಯಾಗಿರುವ ಟ್ರೈಲರ್ ಸಾಹಸಮಯ ಜರ್ನೀಯ ಕಿರುಪರಿಚಯ ಮಾಡಿಕೊಡುತ್ತದೆ. ಚಿತ್ರದ ಅಧಿಕೃತ ವಿವರಣೆ ಹೀಗಿದೆ – “ಇಬ್ಬರು ಸಾಹಸಿಗರ ಸ್ನೇಹ, ಪ್ರೀತಿ, ಸ್ಫೂರ್ತಿಯ ಕತೆ ಇದು. ಗ್ರೀನ್‌ಲ್ಯಾಂಡ್ ದ್ವೀಪದ ಭೌಗೋಳಿಕ ಪ್ರಶ್ನೆಗೆ ಉತ್ತರವಾದ ಜರ್ನೀ. ದುರ್ಗಮ ಸವಾಲುಗಳನ್ನು ಎದುರಿಸಿ ಕಾರ್ಯ ಸಾಧಿಸಿದ ಸಾಹಸಿಗರ ಸಿನಿಮಾ”. ಮಾರ್ಚ್ 2ರಿಂದ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ.