ಇಂಟರ್‌ನಟ್‌ ಬಳಕೆ ಹೆಚ್ಚಾದಂತೆಲ್ಲ ಸೈಬರ್ ಅಪರಾಧಗಳೂ ಹೆಚ್ಚುತ್ತಿವೆ. ಆ ಪೈಕಿ‌ ಸೈಬರ್ ಲೋಕದೊಳಗೆ ನಡೆಯುವ ಲೈಂಗಿಕ ಶೋಷಣೆಯಂತೂ ನಾಗರಿಕ ಸಮಾಜದ ಕಪ್ಪುಚುಕ್ಕಿ. ವಿದ್ಯಾವಂತ ಕ್ರಿಮಿನಲ್‌ನಷ್ಟು ಅಪಾಯಕಾರಿ ಬೇರಾರೂ ಇಲ್ಲ‌ ಎಂಬುದು ಮನದಟ್ಟು ಮಾಡುತ್ತದೆ Netflixನಲ್ಲಿ ಸ್ಟ್ರೀಮ್‌ ಆಗುತ್ತಿರುವ ‘ಸೈಬರ್ ಹೆಲ್’.

ನಮಗೆ ಕಾಣುವುದು ನಮಗೆ ತಿಳಿದ ಪ್ರಪಂಚ. ಆದರೆ ತಿಳಿಯದ ಭೂಗತ‌ ಜಗತ್ತೊಂದು ಅಸ್ತಿತ್ವದಲ್ಲಿದೆ. ಅಲ್ಲಿನದ್ದು ನಮಗೆ ತಿಳಿಯದ ನೀತಿ ನಿಯಮ, ಅಲ್ಲಿ ಒಳಿತು-ಕೆಡುಕಿಗೆ ಬೇರೆಯದ್ದೇ ವ್ಯಾಖ್ಯಾನ, ಅದು ಕತ್ತಲ ಜಗತ್ತು, ನಾವೆಂದೂ ಹತ್ತಿರ ಸುಳಿಯದ ಜಗತ್ತು ಎಂದು ಅದರ ಬಗ್ಗೆ ಕಡೆಗಣಿಸಿ ನಮ್ಮಷ್ಟಕ್ಕೇ ದೂರ ಉಳಿಯಬಹುದು. ಆದರೆ ಡಿಜಿಟಲ್ ಜಗತ್ತು ಹಾಗಲ್ಲ. ನಾವು ನಿತ್ಯ ಒಳ ಹೋಗಿ ಹೊರ ಬರುವ ಆ ಜಗತ್ತೂ ಮೂಲತಃ ಭೂಗತ. ಇಲ್ಲಿ ನಮಗೆ ಕಾಣುವ ಬೆಳಕಿನ ಪ್ರಮಾಣಕ್ಕಿಂತ ಕಾಣದ ಅಂಧಾಕಾರವೇ ಬಹು ವಿಶಾಲ, ಬಹುರೂಪಿ. ಡಿಜಿಟಲ್ ಜಗದ ಅಪರಾಧಗಳ ಸುಳಿಗೆ ನಾವು ಸ್ವತಃ ಸಿಲುಕುವವರೆಗೂ ಅದು ಅಪರಿಚಿತ ಜಗತ್ತು, ಅಕಸ್ಮಾತ್ ಅದರೊಳಗೆ ಸಿಲುಕಿದರೆ ಅಯೋಮಯ ಬದುಕು. ಅದನ್ನು ಪರಿಚಯ ಮಾಡಿಕೊಡುತ್ತದೆ ‘ಸೈಬರ್ ಹೆಲ್’ ಎಂಬ ನೆಟ್‌ಫ್ಲಿಕ್ಸ್ ಡಾಕ್ಯುಮೆಂಟರಿ.

ಬಳಕೆದಾರರ ಖಾಸಗಿತನ, ಗೋಪ್ಯತೆ ಕಾಪಾಡುವಲ್ಲಿ ಮೆಸೇಜಿಂಗ್ ಆ್ಯಪ್ ಟೆಲಿಗ್ರಾಂನದ್ದು ಎತ್ತಿದ ಕೈ. ಆ ಬಗ್ಗೆ ಅಷ್ಟಾಗಿ ಜ್ಞಾನವಿಲ್ಲದ ಸಾಮಾನ್ಯ ಬಳಕೆದಾರರಿಗೆ ವಾಟ್ಸಾಪ್ ಮತ್ತು ಟೆಲಿಗ್ರಾಂ ನಡುವಿನ ಅಂತರ ಕೇವಲ‌ ಕೆಲವು ಸೌಲಭ್ಯಗಳಷ್ಟೇ. ಆದರೆ‌‌ ಕ್ರಿಮಿನಲ್‌ಗಳ ಪಾಲಿಗೆ ಅಂಥ ಪ್ರತಿಯೊಂದು ಸೌಲಭ್ಯವೂ ಶೋಷಣೆಯ ಸಲಕರಣೆ. ಟೆಕ್ ಜಗತ್ತನ್ನ ಆಳವಾಗಿ ಬಲ್ಲ ವಿದ್ಯಾವಂತರು ಜತೆಯಲ್ಲಿ ಕ್ರಿಮಿನಲ್ ಮನಸ್ಥಿತಿ ಬೆಳೆಸಿಕೊಂಡಾಗ ಆಗುವ ಅನಾಹುತಗಳಿಗೆ ಎಲ್ಲೆಯಿಲ್ಲ ಎಂಬುದಕ್ಕೆ ದಕ್ಷಿಣ ಕೊರಿಯಾದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಹುಯಿಲೆಬ್ಬಿಸಿದ ಚಾಟ್ ರೂಮ್ ಉದಾಹರಣೆ.

ಟೆಲಿಗ್ರಾಂನಲ್ಲಿ Nth Room ಹೆಸರಿನಲ್ಲಿದ್ದ ಒಂದು ಚಾಟ್ ರೂಮ್ ಇದ್ದಕ್ಕಿದ್ದಂತೆ ರಾಷ್ಟ್ರದ ಗಮನ ಸೆಳೆಯಲು ಆರಂಭಿಸಿತು. ಹದಿಹರೆಯದ ವಯಸ್ಸಿನವರಷ್ಟೇ ಅಲ್ಲದೆ ಮಕ್ಕಳೂ ನಗ್ನ ಫೋಟೋಗಳನ್ನು ಹಂಚಿಕೊಳ್ಳುವುದು ಮತ್ತು ವಿಲಕ್ಷಣ ಕ್ರಿಯೆಗಳಲ್ಲಿ ಭಾಗವಹಿಸಿ ಆ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಚಾಟ್ ರೂಮ್‌ನ ನಿರ್ವಾಹಕರು ಸಂತ್ರಸ್ಥೆಯರನ್ನು ಖೆಡ್ಡಾಕ್ಕೆ ಕೆಡವಿ ಬೆದರಿಕೆ ತಂತ್ರಗಳ ಮೂಲಕ ಅಂಥ ಕ್ರಿಯೆಗೆ ತಮ್ಮನ್ನು ತಾವು ಒಡ್ಡಿಕೊಳ್ಳುವಂತೆ ಮಾಡುತ್ತಿದ್ದರು. ವಿವಿಧ ಭಂಗಿಗಳ ನಗ್ನ ಪೋಟೋಗಳಷ್ಟೇ ಅಲ್ಲದೆ ಸಂತ್ರಸ್ಥೆಯರು ಸಾರ್ವಜನಿಕ ಶೌಚಾಲಯಗಳಿಗೆ ಹೋಗಿ ಅಲ್ಲಿ ನೆಲವನ್ನು ನೆಕ್ಕುವ ವಿಲಕ್ಷಣ ವಿಡಿಯೋಗಳನ್ನು ಸ್ವತಃ ಚಿತ್ರಿಸಿ ಚಾಟ್‌ರೂಮಿಗೆ ಅಪ್‌ಲೋಡ್ ಮಾಡುತ್ತಿದ್ದರು. ಅರುವತ್ತು ಸಾವಿರಕ್ಕೂ ಅಧಿಕ ಮಂದಿ ಚಂದದಾರರಿದ್ದ ಆ ಟೆಲಿಗ್ರಾಂ ಗ್ರೂಪನ್ನು ಅನಾಮಧೇಯರಿಬ್ಬರು ಮರೆಯಲ್ಲಿ ಕೂತು ನಿರ್ವಹಿಸುತ್ತಿದ್ದರು. ಭಾಕ್ಸ್ ಹಾಗೂ ಗಾಡ್‌ಗಾಡ್ ಎಂಬ ಹುಸಿ ಹೆಸರಿನೊಂದಿಗೆ ಗುರುತಿಸಿಕೊಂಡಿದ್ದ ಅವರಿಬ್ಬರು ತಮ್ಮ ನಿಜಗುರುತನ್ನು ಚಾಣಾಕ್ಷತನದಿಂದ ಮರೆ ಮಾಚಿದ್ದರು. ಅಂಥ ವಿಲಕ್ಷಣ ಗ್ರೂಪ್‌ಗೆ ಚಂದಾದಾರರಾಗಲು ಹಣವನ್ನೂ ನಿಗದಿಪಡಿಸಿದ್ದ ಆಗಂತುಕರು ನೂರಾರು ಹುಡುಗಿಯರ ಬದುಕಲ್ಲಿ ಬಿರುಗಾಳಿ ಎಬ್ಬಿಸಿದ್ದರು.

ಇಂಥದ್ದೊಂದು ಘಟನೆ ಡಿಜಿಟಲ್ ಜಗದೊಳಗೆ ಗುಪ್ತವಾಗಿ ನಡೆಯುತ್ತಿದೆ ಎಂಬ ಮಾಹಿತಿಯ ಜಾಡು ಹಿಡಿದು ಮೊದಲಿಗೆ ಹೊರಟದ್ದು ದ ಹ್ಯಾನ್ಯೋರೆ ಎಂಬ ಪತ್ರಿಕೆ. ಭಾಕ್ಸ್ ಮತ್ತು ಗಾಡ್‌ಗಾಡ್ ಎಂಬ ಇಬ್ಬರು ಆಗಂತುಕರು ಮೊದಲಿಗೆ ಹುಡುಗಿಯರಿಗೆ ತಾತ್ಕಾಲಿಕ ಉದ್ಯೋಗ ನೀಡುವ ನೆಪದಲ್ಲಿ‌ ಸಂದೇಶ ಕಳಿಸಿ ಅದೇ ಕಾರಣ ನೀಡಿ ಅವರ ಐಡಿ‌ ಪಡೆದು ಇಟ್ಟುಕೊಳ್ಳುತ್ತಾರೆ. ನಂತರ ‘ನಿಮ್ಮ‌ ಕೆಲವು ಖಾಸಗಿ ಪೋಟೋಗಳು ಇಂಥಲ್ಲಿ‌ ಹರಿದಾಡುತ್ತಿವೆ’ ಎಂದು ಸೂಚಿಸಿ ಅದರದ್ದೊಂದು ಲಿಂಕ್ ಕಳಿಸುತ್ತಾರೆ. ವಾಸ್ತವದಲ್ಲಿ ಅದೊಂದು ಹ್ಯಾಕಿಂಗ್ ಲಿಂಕ್. ಅದನ್ನು ಒತ್ತಿದ ಕೂಡಲೇ ಅವರ ಪೋನ್ ಹ್ಯಾಕ್ ಆಗಿ ಅದರಲ್ಲಿನ ಅಷ್ಟೂ ದತ್ತಾಂಶ ಹ್ಯಾಕರ್‌ಗಳ ಪಾಲಾಗುತ್ತದೆ. ಆ ಯಾವ ಸುಳಿವೂ‌ ಇಲ್ಲದೆ ಲಿಂಕ್ ಒತ್ತುವ ಮುಗ್ಧೆಯರು ಸ್ವತಃ ಖೆಡ್ಡಾಕ್ಕೆ ಬೀಳುತ್ತಾರೆ. ಅಲ್ಲಿಂದ ನಂತರ ಪೂರ್ಣಪ್ರಮಾಣದ ಬ್ಲ್ಯಾಕ್‌ಮೇಲ್ ತಂತ್ರ ಆರಂಭ. ‘ಇನ್ನು ಹತ್ತು ಸೆಕೆಂಡುಗಳಲ್ಲಿ‌ ನಿನ್ನ ಇಂತಿಂಥಾ ಫೋಟೋ ಕಳಿಸು. ಇಲ್ಲದಿದ್ದರೆ ನಿನ್ನೆಲ್ಲಾ ಮಾಹಿತಿ ಬಹಿರಂಗ ಮಾಡುತ್ತೇನೆ’ ಎಂದು ಬೆದರಿಸುತ್ತಿದ್ದ ಭಾಕ್ಸ್, ಹುಡುಗಿಯರನ್ನು ತನ್ನ ಕೈಗೊಂಬೆ ಮಾಡಿಕೊಂಡಿದ್ದ.

ಆ ಸುದ್ದಿ ಪತ್ರಿಕೆಯಲ್ಲಿ ಬರುತ್ತಿದ್ದಂತೆ ಅಂಥ ಚಾಟ್ ರೂಮ್‌ಗಳು ತೆರೆಮರೆಗೆ ಸೇರುತ್ತವೆ ಎಂದು ವರದಿಗಾರ ಕಿಂ-ವಾನ್ ಅಂದುಕೊಂಡಿದ್ದ. ಆದರೆ ಆದದ್ದು ವ್ಯತಿರಿಕ್ತ ಪರಿಣಾಮ. ತನ್ನ ಗುರುತನ್ನು ಯಾವ ಕಾರಣಕ್ಕೂ ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂದು ನಂಬಿದ್ದ ಭಾಕ್ಸ್ ತನ್ನ ವಿಲಕ್ಷಣ ಕಾರ್ಯಕ್ಕೆ ಇನ್ನಷ್ಟು ವೇಗ ನೀಡುತ್ತಾನೆ. ಅಷ್ಟೇ‌ ಅಲ್ಲದೆ ‘ತಾಕತ್ತಿದ್ದರೆ ನನ್ನನ್ನು ಹಿಡಿಯಿರಿ’ ಎಂಬ ಸವಾಲನ್ನೂ ಟೆಲಿಗ್ರಾಂ ಗ್ರೂಪ್‌ನಲ್ಲಿ ಹಾಕುತ್ತಾನೆ. ತಾನೆಲ್ಲಿದ್ದೇನೆ ಎಂಬ ಮಾಹಿತಿಯನ್ನು ಆತ ಯಾರೊಂದಿಗೂ ಹಂಚಿಕೊಂಡಿರಲಿಲ್ಲ. ಜತೆಗೆ ಚಂದಾದಾರಿಕೆ ಹಣವನ್ನು ಕ್ರಿಪ್ಟೋ ಕರೆನ್ಸಿ ಮೂಲಕ ಪಡೆಯುತ್ತಿದ್ದ ಕಾರಣ ಬ್ಯಾಂಕಿಂಗ್ ವ್ಯವಹಾರದ ಹೆಜ್ಜೆ ಗುರುತುಗಳ ಮೂಲಕ ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂಬುದು ಅವನಿಗೂ ತಿಳಿದಿತ್ತು. ಹಾಗಾಗಿ ಪತ್ರಿಕಾ ವರದಿ Nth ರೂಮನ್ನು ತೆರೆಮರೆಗೆ ಸರಿಸುವ ಬದಲು ಅದಕ್ಕೆ ಜಾಹೀರಾತು ಕೊಟ್ಟು ಪ್ರಭಾವ ಉಂಟು ಮಾಡಿತು. ವಿಲಕ್ಷಣ ಮನಸ್ಥಿತಿಯ ಇನ್ನಷ್ಟು ಮಂದಿ ಆ ಗ್ರೂಪಿನ ಚಂದಾದಾರರಾದರು.

ಇಷ್ಟಾಗುತ್ತಿದ್ದಂತೆ ಅವರನ್ನು ಬಯಲಿಗೆಳೆಯುವ ಕಾರ್ಯಕ್ಕೆ ಟಿವಿ ಚಾನಲ್ ಕೈ ಹಾಕಿತು. ಈ ಹಂತದಲ್ಲಂತೂ ಭಾಕ್ಸ್ ನೇರವಾಗಿ ಟಿವಿ ವರದಿಗಾರನ ಜತೆಗೇ ಚಾಟ್ ಮೂಲಕ ಮಾತುಕತೆಗೆ ಇಳಿಯುತ್ತಾನೆ. ಅಷ್ಟೇ ಅಲ್ಲ, ಈ ವರದಿ‌ಯನ್ನು ಪ್ರಸಾರ ಮಾಡಿದರೆ ನಿಮ್ಮ ಚಾನಲ್‌ನ ಕಟ್ಟಡದಿಂದಲೇ ಹುಡುಗಿಯೊಬ್ಬಳು ಹಾರಿ ಪ್ರಾಣ ಬಿಡುತ್ತಾಳೆ ಎಂಬ ಬೆದರಿಕೆಯನ್ನೂ ಹಾಕುತ್ತಾನೆ.

ಭಾರತಕ್ಕೆ ಹೋಲಿಸಿದರೆ ದಕ್ಷಿಣ ಕೊರಿಯಾ ಬಹು ಮೊದಲೇ‌ ಸಂಪರ್ಕ ಕ್ರಾಂತಿಗೆ ತೆರೆದುಕೊಂಡ ದೇಶ. ಸ್ಯಾಮ್‌ಸಂಗ್, ಎಲ್‌ಜಿಯಂಥ ದೈತ್ಯ ಕಂಪನಿಗಳು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕವಾಗಿ ಬೇರೂರಲು ಆಸ್ಪದ ಮಾಡಿಕೊಟ್ಟ ದೇಶವದು. ನಮ್ಮಲ್ಲಿ‌ ಮಕ್ಕಳು ಸರಿಯಾಗಿ ಎಬಿಸಿಡಿ ಬರೆಯುವ ಹೊತ್ತಿಗೆ ಅಲ್ಲಿನ ಮಕ್ಕಳು ಕೋಡಿಂಗ್‌ ಕಲಿಯಲು ಪೂರಕ ವಾತಾವರಣ ಅಲ್ಲಿದೆ. ಸಮಾಜದಲ್ಲಿ ಕ್ರಿಮಿನಲ್‌ಗಳ ಸಂಖ್ಯೆ ಹೆಚ್ಚಾಗಲು ಶಿಕ್ಷಣದ ಕೊರತೆ ಕಾರಣವೆಂದು ಇಂದಿಗೂ ನಂಬಿದ ಸಮಾಜ‌ ನಮ್ಮದು. ಆದರೆ ವಿದ್ಯಾವಂತ ಕ್ರಿಮಿನಲ್‌ನಷ್ಟು ಅಪಾಯಕಾರಿ ಬೇರಾರೂ ಇಲ್ಲದಿರುವುದು ವಿದ್ಯಾವಂತ ಸಮಾಜದ ವಾಸ್ತವ. ಹಾಗಾಗಿ ಭಾಕ್ಸ್ ಮತ್ತು ಗಾಡ್‌ಗಾಡನ್ನು ಹಿಡಿಯುವುದು ಅಲ್ಲಿನ ಪೊಲೀಸ್ ವ್ಯವಸ್ಥೆಗೆ ಸುಲಭ ಸಾಧ್ಯವಾಗುವುದಿಲ್ಲ. ಐಪಿ‌ ಅಡ್ರೆಸ್ ಪತ್ತೆ ಹಚ್ಚಿ ಆಗಂತುಕನನ್ನು ಹಿಡಿದೇ ಬಿಟ್ಟೆವು ಅಂದುಕೊಳ್ಳುವ ಹೊತ್ತಿಗೆ ಆತ ಬಳಕೆ ಮಾಡುತ್ತಿದುದು ಸಾರ್ವಜನಿಕ ವೈಫೈ‌ ಸಂಪರ್ಕ ಎಂಬುದು ತಿಳಿಯುತ್ತದೆ. ಪದೇ‌ಪದೆ ಪೋನ್‌ಗಳನ್ನೂ ಬದಲಿಸುತ್ತಿದ್ದ ಗಾಡ್‌ಗಾಡ್ ಎಂಬ ಕ್ರಿಮಿನಲ್ಲನ್ನು ಬಯಲಿಗೆಳೆಯಲು ಪೊಲೀಸರೂ ಹ್ಯಾಕರ್‌ಗಳ ಮೊರೆ ಹೋಗಬೇಕಾಗುತ್ತದೆ.

ಇಪ್ಪತ್ತು-ಇಪ್ಪತ್ತೆರಡರ ವಯಸ್ಸಿನ ಆ‌ ಕ್ರಿಮಿನಲ್‌ಗಳು ಕೊನೆಗೂ ಪೊಲೀಸರ ಅತಿಥಿಗಳಾಗುತ್ತಾರೆ. ಅಲ್ಲಿಗೆ ನ್ಯಾಯ ಸಿಕ್ಕಿತು ಎಂದು ಷರಾ ಬರೆದರೂ ಅಂಥ ಟೆಲಿಗ್ರಾಂ ಗ್ರೂಪುಗಳಿಗೆ ಹಣ ನೀಡಿ ಚಂದಾದಾರಿಕೆ ಪಡೆದ ಸಾವಿರಾರು ವಿಲಕ್ಷಣ ಮನಸ್ಥಿತಿಯವರು ಅಪರಾಧಿಗಳು ಎಂದು ಪರಿಗಣಿತವಾಗುವುದೇ ಇಲ್ಲ. ಅಂಥದ್ದೊಂದು‌ ವಿದ್ಯಾವಂತ ಸಮಾಜದ ಅನಾವರಣ ಕೆಲವು‌ ಸಂದರ್ಶನಗಳು, ಸ್ಕ್ರೀನ್ ಶಾಟ್‌ಗಳು, ಲೈವ್ ಚಾಟ್‌ಗಳ ಮೂಲಕ ‘ಸೈಬರ್ ಹೆಲ್’ ಅನಾವರಣಗೊಳಿಸುತ್ತದೆ. ತೀರಾ ವಿಲಕ್ಷಣ ಪೋಟೋಗಳನ್ನು‌ ತೋರಿಸಬೇಕಾದ ಸಂದರ್ಭ ಬಂದಾಗ ನವ್ಯಕಲಾ ರೂಪಕಗಳ ಮೊರೆ ಹೋಗಲಾಗಿದೆ. ಹಾಗಿದ್ದೂ ಡಾಕ್ಯುಮೆಂಟರಿ ನೋಡುವಾಗ ಅಲ್ಲಲ್ಲಿ ಹೊಟ್ಟೆ ತೊಳೆಸಿದ ಅನುಭವ ಆಗುತ್ತದೆ. ಗಟ್ಟಿ ಮನಸ್ಸಿದ್ದವರು ಮಾತ್ರ ನೋಡಬಹುದಾದ ಡಾಕ್ಯುಮೆಂಟರಿಯಿದು.

LEAVE A REPLY

Connect with

Please enter your comment!
Please enter your name here