ಚಿತ್ರದಲ್ಲಿ ಮನರಂಜನೆಗೆ ಮೋಸವಿಲ್ಲ, ಆದರೆ ನೆನಪಲ್ಲಿ ಉಳಿಯಬಹುದಾದಂಥ ಗಟ್ಟಿತನವೂ ಇಲ್ಲ. ಸಿದ್ಧಾರ್ಥ್ ನಟನೆಗೋಸ್ಕರ ಒಮ್ಮೆ ನೋಡಬಹುದು. ‘ಟಕ್ಕರ್‌’ ತಮಿಳು ಸಿನಿಮಾ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ನಾಣ್ಯಕ್ಕೆ ಎರಡು ಮುಖಗಳು. ಹಣಕ್ಕೆ ಬಹಳ ಮುಖಗಳು. ಅದಕ್ಕಿಂತ ಹಣದ ಬಗ್ಗೆ ಹಣವನ್ನು ಹೊಂದಬಯಸುವವರಿಗೆ ಬಹಳಷ್ಟು ದೃಷ್ಟಿಕೋನಗಳು ಎಂದು ಹೇಳಿದರೆ ಸರಿಯೇನೋ. ಹಣದ ಬಗ್ಗೆ ಎರಡು ವಿಭಿನ್ನ, ವಿಪರೀತ ಮನೋಭಾವ ಇರುವ ಇಬ್ಬರು ವ್ಯಕ್ತಿಗಳು ಆಕಸ್ಮಿಕವಾಗಿ ಭೇಟಿ ಆದರೆ ಏನಾಗಬಹುದು? ಅವರ ಬದುಕಿನಲ್ಲಿ ಅವರು ಅಂದುಕೊಂಡ ತಿರುವು ಸಿಗಬಹುದೇ? ಈ ಪ್ರಶ್ನೆಗಳಿಗೆ ಉತ್ತರವಾಗಿ ‘ಟಕ್ಕರ್’ ತಮಿಳು ಸಿನಿಮಾ ನಮ್ಮ ಮುಂದೆ ಬಂದಿದೆ.

ಚಿತ್ರದ ಆರಂಭದಲ್ಲೇ ಹಣವೇ ಸರ್ವಸ್ವ, ಹಣವಿದ್ದರೆ ಎಲ್ಲವೂ, ಹಣದಿಂದಲೇ ಬದುಕಿಗೆ ಅರ್ಥ ಮತ್ತು ಬೆಲೆ ಬರುವುದು ಎನ್ನುವ ಮನೋಭಾವದ ನಾಯಕನ ಪಾತ್ರ ಪರಿಚಯವಾಗಿಬಿಡುತ್ತದೆ. ನಿರ್ದೇಶಕ ಕಾರ್ತಿಕ್ ಕ್ರಿಶ್ ಅವರ ಪಾತ್ರದ ಬಗೆಗಿನ ನಿಲುವು ಬಹಳವೇ ಸ್ಪಷ್ಟವಾಗಿ ನಿರೂಪಿತವಾಗಿದೆ. ಆದರೆ ಅದೇ ಸ್ಪಷ್ಟತೆ ಚಿತ್ರದ ಕಥಾನಿರೂಪಣೆಯಲ್ಲೂ ವ್ಯಕ್ತವಾಗಿದೆಯೇ? ಇಲ್ಲ ಅನ್ನುವುದೇ ಬೇಸರದ ವಿಚಾರ. ಆರಂಭದಲ್ಲಿ ಕುತೂಹಲಕರವಾಗಿ ತೆರೆದುಕೊಳ್ಳುವ ಕಥೆ ಸೂತ್ರವಿಲ್ಲದ ಗಾಳಿಪಟದಂತೆ ಎತ್ತೆತ್ತಲೋ ಸಾಗುತ್ತಾ ಅರ್ಥವಿಲ್ಲದ ಹಾಸ್ಯ ಮತ್ತು ವಿಡಂಬನೆಯ ದೃಶ್ಯಗಳಿಂದ ಮತ್ತೂ ನಿರಾಸಕ್ತಿ ಹುಟ್ಟಿಸುತ್ತಾ ಪೇಲವಗೊಳ್ಳುತ್ತಾ ಹೋಗುತ್ತದೆ.

ಲವರ್ ಬಾಯ್ ಇಮೇಜಿನ ಖ್ಯಾತಿಯ ಸಿದ್ಧಾರ್ಥ್ ಈ ಚಿತ್ರದ ನಾಯಕ. ಬಡತನದ ಕೀಳರಿಮೆಯಿಂದ ಬೇಸತ್ತ ಕೆಳಮಧ್ಯಮ ವರ್ಗದ ಹುಡುಗ ಗುಣಶೇಖರನ ಪಾತ್ರ ಮಾಡಿದ್ದಾರೆ. ಆದರೆ ನಾಯಕ ಗುಣಶೇಖರ ಗುಣಕ್ಕಿಂತಲೂ ಹಣ ಶೇಖರಣೆ ಮುಖ್ಯ, ಕಣ್ ಮುಚ್ಚಿ ಕಣ್ ಬಿಡುವುದರೊಳಗಾಗಿ ಬಹಳ ಹಣ ಮಾಡಬೇಕು. ಹಣದಿಂದಲೇ ಸಮಾಜದಲ್ಲಿ ಗೌರವಯುತವಾಗಿ ಬದುಕಲು ಸಾಧ್ಯ ಎನ್ನುವುದನ್ನೇ ಧೇನಿಸುತ್ತಾ ತನ್ನ ಗುರಿಯನ್ನು ಬೆನ್ನತ್ತಿ ಚೆನ್ನೈ ನಗರಕ್ಕೆ ಬರುತ್ತಾನೆ. ತನ್ನ ಮುಂಗೋಪದ ಕಾರಣದಿಂದ ಸಿಕ್ಕ ಕೆಲಸಗಳನ್ನೆಲ್ಲಾ ಕಳೆದುಕೊಂಡು ಕೊನೆಗೆ ಕ್ಯಾಬ್ ಕಂಪನಿಯೊಂದರಲ್ಲಿ ಡ್ರೈವರ್ ಕೆಲಸಕ್ಕೆ ಸೇರುತ್ತಾನೆ. ಹೆಣ್ಣುಮಕ್ಕಳನ್ನು ಅಪಹರಿಸಿ ಲೈಂಗಿಕ ದಂಧೆ ನಡೆಸುವ ರೌಡಿ ಗ್ಯಾಂಗಿನೊಂದಿಗೆ ಆಕಸ್ಮಿಕವಾಗಿ ಸಹವಾಸಕ್ಕೆ ಬಿದ್ದು ಅವರ ದುಡ್ಡಿನ ಆಮಿಷಕ್ಕೆ ಬಲಿಯಾಗಿ ಸಂಕಷ್ಟದಲ್ಲಿ ಸಿಲುಕುತ್ತಾನೆ.

ಇನ್ನೇನು ತನ್ನ ಜೀವನವೇ ಮುಗಿಯಿತು ಎಂದು ವಿಪರೀತವಾದ ನಿರ್ಧಾರಕ್ಕೆ ಬರುವ ಹೊತ್ತಲ್ಲೇ ನಾಯಕಿಯ ಭೇಟಿ ಆಗುತ್ತದೆ. ದುಡ್ಡಿನಿಂದಲೇ ತನ್ನ ಜೀವನ ಸರ್ವನಾಶವಾಯಿತು ಎಂಬ ಮನೋಭಾವದ ನಾಯಕಿ ಮತ್ತು ದುಡ್ಡೇ ಸರ್ವಸ್ವ ಎನ್ನುವ ನಾಯಕ. ಈ ಎರಡು ವಿಭಿನ್ನ ಧ್ರುವಗಳು ಒಟ್ಟಿಗೆ ಸೇರುತ್ತವೆ. ಇಬ್ಬರ ಜೀವನದಲ್ಲಿ ಏನಾಗುತ್ತದೆ, ಹಣದ ಬಗ್ಗೆ ಇಬ್ಬರ ಮನೋಭಾವವೂ ಬದಲಾಗುತ್ತದಾ? ವೈಪರೀತ್ಯ ಮೀರಿ ಸಮಸ್ಥಿತಿ ಬೆಳೆಸಿಕೊಳ್ಳುತ್ತಾರಾ? ತಮ್ಮ ತಮ್ಮ ಸಂಕಷ್ಟಗಳಿಂದ ಹೊರಗೆ ಬಂದು ಇಬ್ಬರೂ ಒಂದಾಗುತ್ತಾರಾ ಎನ್ನುವುದನ್ನು ತಿಳಿಯಲು ಚಿತ್ರವನ್ನು ನೋಡಬೇಕು.

ಚಿತ್ರದ ವಿಷಯವೇನೋ ಚೆನ್ನಾಗಿದೆ, ಆದರೆ ಚಿತ್ರ ಸಲೀಸಾಗಿ ನೋಡಿಸಿಕೊಂಡು ಹೋಗುವುದಿಲ್ಲ. ಯರ್ರಾಬಿರ್ರಿ ಎನಿಸುವಂತಹ ದೃಶ್ಯವಿನ್ಯಾಸ ನೋಡುಗರಿಗೆ ಚಿತ್ರದ ಮೇಲೆ ಗಮನವಿಟ್ಟು ನೋಡಲು ಆಗದಂತೆ ಮಾಡಿದೆ. ಬಲವಂತವಾಗಿ ತುರುಕಿದಂತಹ ಘಟನಾವಳಿಗಳು ಚಿತ್ರದ ಓಘಕ್ಕೆ ಪೆಟ್ಟು ಕೊಟ್ಟಿವೆ. ವಿಷಯ ಕುತೂಹಲಕರವಾಗಿದ್ದರೂ ನಿರೂಪಣೆ ಅಯೋಮಯವಾಗಿದೆ.ಇರುವುದರಲ್ಲಿ ಯೋಗಿ ಬಾಬು ಅವರ ಹಾಸ್ಯ ಸ್ವಲ್ಪ ನಗು ತರಿಸಿದರೂ ಚಿತ್ರಕ್ಕೆ ವಿಶೇಷ ಸಹಾಯವೇನೂ ಆಗಿಲ್ಲ ಎಂದೇ ಹೇಳಬಹುದು.ನಾಯಕ ನಟ ಸಿದ್ಧಾರ್ಥರ ಅಭಿನಯವೇ ಚಿತ್ರಕ್ಕೆ ತುಸು ಮಟ್ಟಿಗೆ ಜೀವಾಳವಾದರೂ ಕಥೆಯೇ ಗಟ್ಟಿಯಿಲ್ಲವಾದ್ದರಿಂದ ಚಿತ್ರ ಅಂದುಕೊಂಡ ಮಟ್ಟಕ್ಕೆ ಪರಿಣಾಮ ಬೀರುವುದಿಲ್ಲ. ಚಿತ್ರ ಮುಗಿದ ಮೇಲೂ ನೆನಪಲ್ಲಿ ಉಳಿಯುವುದು ಅವರ ಅಭಿನಯ ಮಾತ್ರ.

ಕಥೆಯ ಜೀವಾಳವಾಗಬೇಕಿದ್ದ ನಾಯಕ ನಾಯಕಿಯ ಪ್ರೇಮಕಥಾನಕ ಸುಮ್ಮನೆ ಬಿಟ್ಟ ಸ್ಥಳ ತುಂಬಿರಿ ಎನಿಸುವಂತೆ ಬಳಕೆಯಾಗಿರುವುದು ದುರದೃಷ್ಟಕರ. ಸಿದ್ಧಾರ್ಥರ ಲವರ್ ಬಾಯ್ ಇಮೇಜಿಗೆ ಕೂಡ ಆದ ಅನ್ಯಾಯ. ನಾಯಕಿ ದಿವ್ಯಾಮ್ಷ ಕೌಶಿಕ್ ಅವರದ್ದು ಆಟಕ್ಕುಂಟು ಲೆಕ್ಕಕ್ಕಿಲ್ಲ ಥರದ ಪಾತ್ರವಾದರೂ ಅವರ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಚಿತ್ರದ ಕೆಲವು ಹಾಡುಗಳು ಮತ್ತು ಸಂಗೀತ ಪರಿಣಾಮಕಾರಿಯಾಗಿದ್ದು ಕಥೆಯಲ್ಲಿನ ಕೊರತೆಗಳನ್ನು ಮುಚ್ಚಲು ಸಹಾಯ ಮಾಡಿವೆ ಎಂದೇ ಹೇಳಬಹುದು. ಒಟ್ಟಾರೆ ಹೇಳಬೇಕೆಂದರೆ ಚಿತ್ರದಲ್ಲಿ ಮನರಂಜನೆಗೆ ಮೋಸವಿಲ್ಲ, ಆದರೆ ನೆನಪಲ್ಲಿ ಉಳಿಯಬಹುದಾದಂಥ ಗಟ್ಟಿತನವೂ ಇಲ್ಲ. ಸಿದ್ಧಾರ್ಥ್ ನಟನೆಗೋಸ್ಕರ ಒಮ್ಮೆ ನೋಡಬಹುದು. ಸಿನಿಮಾ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here