ಅಮೇಜಾನ್ ಪ್ರೈಮ್ ವೀಡಿಯೋದ ‘Unpaused: Naya Safar’ ಆಂಥಾಲಜಿ ಟ್ರೈಲರ್ ಬಿಡುಗಡೆಯಾಗಿದೆ. ಸಕೀಬ್ ಸಲೀಂ, ಶ್ರೇಯಾ ಧನ್ವಂತರಿ, ನೀನಾ ಕುಲಕರ್ಣಿ, ಪ್ರಿಯಾನ್ಶು ಪೈನ್ಯುಲಿ ಮತ್ತಿತರರು ನಟಿಸಿರುವ ಕಿರುಚಿತ್ರಗಳು ಜನವರಿ 21ರಿಂದ ಸ್ಟ್ರೀಮ್ ಆಗಲಿವೆ.
ಕಳೆದ ವರ್ಷ ಅಮೇಜಾನ್ ಪ್ರೈಮ್ನಲ್ಲಿ ಸ್ಟ್ರೀಮ್ ಆಗಿದ್ದ ‘Unpaused’ ಆಂಥಾಲಜಿ ಸರಣಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಯಶಸ್ಸಿನ ಬೆನ್ನಲ್ಲೇ ಪ್ರೈಮ್ನಿಂದ ‘Unpaused: Naya Safar’ ಸೀಕ್ವೆಲ್ ತಯಾರಾಗಿದೆ. ಜನವರಿ 21ರಿಂದ ಐದು ಕಿರುಚಿತ್ರಗಳು ಸ್ಟ್ರೀಮ್ ಆಗಲಿದ್ದು, ಇಂದು ಟ್ರೈಲರ್ ರಿಲೀಸ್ ಆಗಿದೆ. ಖ್ಯಾತ ಚಿತ್ರನಿರ್ದೇಶಕ ನಾಗರಾಜ್ ಮಂಜುಲೆ, ‘ಬೇವಕೂಫಿಯಾ’ ಖ್ಯಾತಿಯ ನೂಪುರ್ ಆಸ್ತಾನಾ, ‘ಜಸ್ಸಿ ಜೈಸಿ ಕೋಯಿ ನಹೀ’ ಕಿರುತೆರೆ ಶೋಗೆ ಸಂಭಾಷಣೆ ಬರೆದಿದ್ದ ಶಿಖಾ ಮಕಾನ್, ‘ಲಿಟ್ಲ್ ಥಿಂಗ್ಸ್’ ನಿರ್ದೇಶಕ ರುಚಿರ್ ಅರುಣ್ ಮತ್ತು ‘ದಿ ಗೆಸ್ಟ್’ ಕಿರುಚಿತ್ರ ನಿರ್ದೇಶಿಸಿದ್ದ ಅಯ್ಯಪ್ಪ ಕೆ.ಎಂ. ಆಂಥಾಲಜಿಯ ನಿರ್ದೇಶನದ ಕಿರುಚಿತ್ರಗಳು ಆಂಥಾಲಜಿಯಲ್ಲಿವೆ. ಕೋವಿಡ್ ದಿನಗಳಲ್ಲಿನ ಜನರ ಸಂಕಷ್ಟಗಳು, ಇವುಗಳಿಂದ ಹೊರಬರಲು ಅವರು ಪಟ್ಟ ಪಡಿಪಾಟಲು, ಲಾಕ್ಡೌನ್ನಿಂದ ದುರ್ಬಲಗೊಂಡ ಇಲ್ಲವೇ ಬೆಸೆದ ಸಂಬಂಧಗಳು ಈ ಆಂಥಾಲಜಿಯ ಕಥಾವಸ್ತು.
ನಾಗರಾಜ್ ಮಂಜುಲೆ ನಿರ್ದೇಶನ ‘ವೈಕುಂಠ್’ ಕಿರುಚಿತ್ರದಲ್ಲಿ ಅರ್ಜುನ್ ಕರ್ಚೆ ಮತ್ತು ಹನುಮಂತ್ ಭಂಡಾರಿ ನಟಿಸಿದ್ದಾರೆ. ಆಸ್ತಾನಾ ನಿರ್ದೇಶಿಸಿರುವ ‘ದಿ ಕಪಲ್’ ಕಿರುಚಿತ್ರದಲ್ಲಿ ಶ್ರೇಯಾ ಧನ್ವಂತರಿ ಮತ್ತು ಪ್ರಿಯಾಂನ್ಶು ಪೈನುಲಿ ನಟಿಸಿದ್ದಾರೆ. ಅಯ್ಯಪ್ಪ ಕೆ.ಎಂ. ನಿರ್ದೇಶನದ ‘ವಾರ್ ರೂಂ’ನಲ್ಲಿ ಗೀತಾಂಜಲಿ ಕುಲಕರ್ಣಿ, ರಸಿಕಾ ಅಗಾಸೆ, ಪೂರ್ಣಾನಂದ್ ಪಾಂಡೇಖರ್, ಶಾರ್ವರಿ ದೇಶಪಾಂಡೆ ನಟಿಸಿದ್ದಾರೆ. ರುಚಿರ್ ಅರುಣ್ ನಿರ್ದೇಶನದ ‘ತೀನ್ ತಿಗಡ’ದಲ್ಲಿ ಸಕೀಬ್ ಸಲೀಂ, ಆಶಿಷ್ ವರ್ಮಾ, ಸ್ಯಾಮ್ ಮೋಹನ್ ಇದ್ದಾರೆ. ಶಿಖಾ ಮಕಾನ್ ನಿರ್ದೇಶನದ ‘ಗೋಂಡ್ ಕೆ ಲಡ್ಡು’ ಕಿರುಚಿತ್ರದಲ್ಲಿ ನೀನಾ ಕುಲಕರ್ಣಿ, ದರ್ಶನಾ ರಾಜೇಂದ್ರನ್, ಲಕ್ಷವೀರ್ ಸಿಂಗ್ ಶರಣ್ ನಟಿಸಿದ್ದಾರೆ. “ಈ ಕತೆಗಳು ನೊಂದ ಜನರಿಗೆ ವಿಶ್ವಾಸ ತುಂಬಲಿವೆ. ಮತ್ತೊಂದೆಡೆ ಇಂಡಿಪೆಂಡೆಂಟ್ ಫಿಲ್ಮ್ ಮೇಕರ್ಗಳಿಗೆ ವೇದಿಕೆ ಒದಗಿಸಲಿದೆ” ಎಂದು ಅಮೇಜಾನ್ ಪ್ರೈಮ್ ಪತ್ರಿಕಾ ಹೇಳಿಕೆಯಲ್ಲಿ ಹೇಳಿದೆ.