ಕಥಕ್‌ ನೃತ್ಯದ ಮೇರು ತಾರೆ ಬಿರ್ಜು ಮಹರಾಜ್‌ ಇಂದು ಅಗಲಿದ್ದಾರೆ. ಭಾರತೀಯ ಸಿನಿಮಾರಂಗದಲ್ಲೂ ಅವರ ಛಾಪು ಇದೆ. ಸಿನಿಮಾರಂಗದ ಹತ್ತಾರು ನೃತ್ಯ ಸಂಯೋಜಕರು ಅವರಲ್ಲಿ ಕಲಿತಿದ್ದರೆ, ಸ್ವತಃ ಬಿರ್ಜು ಮಹರಾಜ್‌ ಹಲವು ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ‘ವಿಶ್ವರೂಪಂ’ ತಮಿಳು ಚಿತ್ರದ ‘ಉನ್ನೈ ಕಾನಧು ನಾನ್‌’ ಗೀತೆಯ ನೃತ್ಯಸಂಯೋಜನೆಗೆ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿದೆ.

ಕಥಕ್‌ ನೃತ್ಯಪ್ರಕಾರ ಮೇರು ನೃತ್ಯಪಟು ಬಿರ್ಜು ಮಹರಾಜ್‌ (83 ವರ್ಷ) ಇಂದು ದಿಲ್ಲಿಯಲ್ಲಿ ಅಗಲಿದ್ದಾರೆ. ಪದ್ಮಭೂಷಣ ಪುರಸ್ಕೃತ ಬಿರ್ಜು ಮಹಾರಾಜ್‌ ಉತ್ತಮ ಗಾಯಕ, ಕವಿ ಮತ್ತು ಚಿತ್ರಕಲಾವಿದ ಕೂಡ ಹೌದು. ಅವರು ಸಿನಿಮಾಗೆ ಕೆಲಸ ಮಾಡಿದ್ದು ಕಡಿಮೆ. ಆದರೆ ನೃತ್ಯಸಂಯೋಜಿಸಿದ ಪ್ರತೀ ಹಾಡುಗಳಲ್ಲೂ ತಮ್ಮ ಗುರುತು ಮೂಡಿಸಿದ್ದಾರೆ. ಅವರೇ ಹೇಳಿಕೊಳ್ಳುವಂತೆ ನೃತ್ಯ ಕಲಿಕೆ ವಿಚಾರದಲ್ಲಿ ಅವರ ನೆಚ್ಚಿನ ನಟಿ ಮಾಧುರಿ ಧೀಕ್ಷಿತ್‌. ದಿಲ್‌ ತೋ ಪಾಗಲ್‌ ಹೈ, ದೇವದಾಸ್‌ ಮತ್ತು ದೇಡ್‌ ಇಶ್ಕ್‌ ಹಿಂದಿ ಸಿನಿಮಾಗಳ ಹಾಡುಗಳಿಗೆ ಮಾಧುರಿ ಅವರಿಗೆ ಕೊರಿಯೋಗ್ರಫಿ ಮಾಡಿದ್ದಾರವರು. ‘ವಿಶ್ವರೂಪಂ’ನಲ್ಲಿ ಕಮಲಹಾಸನ್‌, ‘ಬಾಜಿರಾವ್‌ ಮಸ್ತಾನಿ’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರಿಗೆ ನೃತ್ಯ ಸಂಯೋಜಿಸಿದ್ದಾರೆ.

ಬಿರ್ಜು ಮಹಾರಾಜ್‌ ಅವರ ಸಿನಿಮಾ ನಂಟು ಶುರುವಾಗಿದ್ದು ಸತ್ಯಜಿತ್‌ ರೇ ನಿರ್ದೇಶನದ ‘ಶತ್ರಂಜ್‌ ಕೆ ಖಿಲಾಡಿ’ (1977) ಹಿಂದಿ ಚಿತ್ರದೊಂದಿಗೆ. ಈ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿ, ಕೊರಿಯೋಗ್ರಫಿ ಮಾಡಿದ್ದರು. ಅಷ್ಟೇ ಅಲ್ಲ ಎರಡು ಗೀತೆಗಳನ್ನು ಹಾಡಿದ್ದರು ಕೂಡ. ವಾಜಿದ್‌ ಅಲಿ ಷಾ (ಅಮ್ಜದ್‌ ಖಾನ್‌) ತನ್ನ ರಾಣಿಯರೊಂದಿಗೆ ನರ್ತಿಸುವ ಚಿತ್ರದಲ್ಲಿನ ಬಹುಮುಖ್ಯವಾದ ಹಾಡಿಗೆ ಮಹಾರಾಜ್‌ ಮಾಡಿದ್ದ ಸಂಯೋಜನೆ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು.

‘ದಿಲ್‌ ತೋ ಪಾಗಲ್‌ ಹೈ’ (1997) ಚಿತ್ರದಲ್ಲಿ ಕಥಕ್‌ ಮತ್ತು ಕಂಟೆಂಪರರಿ ಶೈಲಿಯ ನೃತ್ಯದೊಂದಿಗೆ ನಟಿ ಮಾಧುರಿ ಇಂಟ್ರಡಕ್ಷನ್‌ ಸನ್ನಿವೇಶವನ್ನು ಸಿನಿಪ್ರೇಮಿಗಳು ಮರೆತಿರಲಾರರು. ಬಿರ್ಜು ಮೊದಲ ಬಾರಿಗೆ ಈ ಹಾಡಿನಲ್ಲಿ ಮಾಧುರಿಗೆ ನೃತ್ಯ ಸಂಯೋಜಿಸಿದ್ದರು. ಮುಂದೆ ಬಿರ್ಜು ಅವರ ಸಂಯೋಜನೆಯಲ್ಲಿ ಮೂಡಿಬಂದ ‘ದೇವದಾಸ್‌’ ಚಿತ್ರದ ‘ಕಾಹೆ ಛೆಡ್‌ ಮೋಹೆ’ ದೊಡ್ಡ ಯಶಸ್ಸು ಕಂಡಿತು. ಅಪ್ಪಟ ಶಾಸ್ತ್ರೀಯ ನೃತ್ಯ ಸಂಯೋಜನೆಯ ಈ ಗೀತೆ ಮಾಧುರಿ ವೃತ್ತಿ ಬದುಕಿನ ಪ್ರಮುಖ ನೃತ್ಯಗಳಲ್ಲೊಂದಾಯ್ತು. ಮುಂದೆ ‘ದೇಡ್‌ ಇಶ್ಕ್‌’ ಚಿತ್ರದಲ್ಲಿ ಅವರು ಮತ್ತೊಮ್ಮೆ ಮಾಧುರಿಗೆ ನೃತ್ಯ ಸಂಯೋಜಿಸಿದ್ದರು.

https://youtu.be/QfAFHZ2usIo

‘ಬಾಜಿರಾವ್‌ ಮಸ್ತಾನಿʼ ಚಿತ್ರದ ‘ಮೋಹೆ ರಂಗ್‌ ದೇ’ ಹಾಡಿನಲ್ಲಿ ದೀಪಿಕಾ ಪಡುಕೋಣೆಗೆ ಬಿರ್ಜು ಕೊರಿಯೋಗ್ರಫಿ ಮಾಡಿದ್ದರು. “ದೀಪಿಕಾ ಒಳ್ಳೆಯ ನಟಿ, ಆದರೆ ನೃತ್ಯದಲ್ಲಿ ಅವರು ಕಲಿಯುವುದು ಸಾಕಷ್ಟಿದೆ” ಎಂದಿದ್ದ ಬಿರ್ಜು ಮಹರಾಜ್‌ ನೃತ್ಯ ಸಂಯೋಜನೆಯೊಂದಿಗೆ ‘ಮೋಹೆ ರಂಗ್‌ ದೇ’ ಹಾಡು ಕಳೆಗಟ್ಟಿತ್ತು. ಈ ಹಾಡಿನ ಕೊರಿಯೋಗ್ರಫಿಗಾಗಿ ಅವರಿಗೆ ಫಿಲ್ಮ್‌ಫೇರ್‌ ಗೌರವ ಸಂದಿತ್ತು. ‘ಗದರ್‌ ಏಕ್‌ ಪ್ರೇಮ್‌ಕಥಾ’ ಚಿತ್ರ ದ ‘ಆನ್‌ ಮಿಲೊ ಸಜನಾ’ ಹಾಡಿಗೆ ಬಿರ್ಜು ಅವರ ಸಂಯೋಜನೆ ಚಿತ್ರಕತೆಯ ಭಾಗವೇ ಆಗಿದ್ದು ವಿಶೇಷ.

“ಪ್ರತಿಭಾವಂತ ಕಲಾವಿದ ಕಮಲಹಾಸನ್‌ ನೃತ್ಯ ಕಲಿಕೆಗೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಕೆಲವೇ ಕ್ಷಣಗಳಲ್ಲಿ ನಾನು ಹೇಳಿಕೊಟ್ಟ ಸ್ಟೆಪ್‌ಗಳನ್ನು ಕಲಿಯುತ್ತಿದ್ದರು. ಸಿನಿಮಾದಲ್ಲಿ ನಾನು ಕೊರಿಯೋಗ್ರಫಿ ಮಾಡಿದ ಏಕೈಕ ನಟ ಅವರು” ಎಂದಿದ್ದರು ಬಿರ್ಜು ಮಹರಾಜ್‌. ‘ವಿಶ್ವರೂಪಂ’ ತಮಿಳು ಚಿತ್ರದಲ್ಲಿ ಕಮಲ ಹಾಸನ್‌ ಅವರಿಗೆ ಬಿರ್ಜು ಕೊರಿಯೋಗ್ರಫಿ ಮಾಡಿದ್ದರು. ಈ ಚಿತ್ರದಲ್ಲಿನ ‘ಉನ್ನೈ ಕಾನಧು ನಾನ್‌’ ಹಾಡಿನ ಅತ್ಯುತ್ತಮ ನೃತ್ಯ ಸಂಯೋಜನೆಗೆ ಬಿರ್ಜು ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಬಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್‌ ಖಾನ್‌ ಸೇರಿದಂತೆ ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿರುವ ಹಲವರು ಬಿರ್ಜು ಅವರಲ್ಲಿ ಕಥಕ್‌ ಕಲಿತಿದ್ದಾರೆ. “ನೃತ್ಯದೊಂದಿಗೆ ಸಾಕ್ಷಾತ್ಕಾರ ಸಾಧಿಸಬೇಕು ಎನ್ನುವ ನಿಲುವು ನನ್ನದು. ನೋಡುಗರನ್ನು ಪ್ರಚೋದಿಸುವ, ಮೈದೋರುವ ಸಿನಿಮಾ ಹಾಡುಗಳ ನೃತ್ಯ ಸಂಯೋಜನೆಯಿಂದ ನಾನು ಸದಾ ದೂರವಿರುತ್ತೇನೆ” ಎಂದಿದ್ದರು ಬಿರ್ಜು ಮಹಾರಾಜ್‌.

LEAVE A REPLY

Connect with

Please enter your comment!
Please enter your name here