ಮನರಂಜನಾ ಕ್ಷೇತ್ರದಲ್ಲಿ OTT (Over The Top) ಪ್ಲಾಟ್ಫಾರ್ಮ್ ಇಂದು ಸಂಚಲನ ಸೃಷ್ಟಿಸುತ್ತಿದೆ. ಜಾಗತಿಕ ಸ್ಟ್ರೀಮಿಂಗ್ ಸರ್ವೀಸಸ್ಗಳ ಮಧ್ಯೆ ಭಾರತದ ಪ್ರಾದೇಶಿಕ ಭಾಷೆಗಳ ಓಟಿಟಿಗಳು ನಿಧಾನವಾಗಿ ನೆಲೆಯೂರುತ್ತಿವೆ. ಇಂತಹ ಹೊತ್ತಿನಲ್ಲಿ ಕನ್ನಡಕ್ಕೇ ತನ್ನದೇ ಆದ ಪ್ರಭಾವಶಾಲಿ ಹಾಗೂ ಸಕ್ರಿಯ ಓಟಿಟಿ ಇಲ್ಲ. ಇದೀಗ ಲಾಂಚ್ ಆಗಿರುವ Aneka Plus ಕನ್ನಡ ಓಟಿಟಿ ಪ್ಲಾಟ್ಫಾರ್ಮ್ ಈ ಕೊರತೆ ನೀಗಿಸಲಿದೆಯೇ?
ಇದು ಕಳೆದೆರೆಡು ವರ್ಷಗಳಿಂದೀಚೆಗಿನ ಬೆಳವಣಿಗೆ. ಕೋವಿಡ್ನಿಂದ ಸಿನಿಮಾ ಥಿಯೇಟರ್ಗಳು ಮುಚ್ಚಿದಾಗ ಜನರು ಓಟಿಟಿಯಲ್ಲಿ ಮನರಂಜನೆಗೆ ಮೊರೆ ಹೋದರು. ಅಲ್ಲಿಯವರೆಗೆ ಒಂದು ವರ್ಗಕ್ಕಷ್ಟೇ ಸೀಮಿತವಾಗಿದ್ದ ಓಟಿಟಿ ಪ್ಲಾಟ್ಫಾರ್ಮ್ ದೊಡ್ಡ ವೀಕ್ಷಕ ಬಳಗಕ್ಕೆ ತೆರೆದುಕೊಂಡಿತು. ಸಿನಿಮಾ ಜೊತೆಗೆ ವೆಬ್ ಸರಣಿ, ಡಾಕ್ಯುಮೆಂಟರಿ, ಟಾಕ್ ಶೋಗಳೂ ಅಲ್ಲಿ ಸಿಗುತ್ತವೆ ಎನ್ನುವುದು ಗೊತ್ತಾಗುತ್ತಿದ್ದಂತೆ ಜನರಿಗೆ ಓಟಿಟಿ ಮಾಧ್ಯಮವೇ ಮೊದಲ ಆದ್ಯತೆಯಾಯ್ತು. ಇನ್ನು ಇತ್ತೀಚೆಗೆ ಬಿಗ್ಬಾಸ್ ರಿಯಾಲಿಟಿ ಶೋ, ಕ್ರಿಕೆಟ್ ಮ್ಯಾಚ್ ಕೂಡ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ನಲ್ಲಿ ಸಿಗತೊಡಗಿವೆ. ಅಂಗೈಲಿರುವ ಮೊಬೈಲ್, ಲ್ಯಾಪ್ಟಾಪ್, ಟೀವಿ ಸ್ಕ್ರೀನ್ಗಳಲ್ಲಿ ವಿಧವಿಧ ಶೋಗಳು ಕೈಗೆಟುಕುವ ದರದಲ್ಲಿ ಜನರಿಗೆ ಲಭ್ಯವಾಗುತ್ತಿವೆ.
ಒಂದೆಡೆ ಜಾಗತಿಕ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳು ತರಹೇವಾರಿ ಶೋಗಳನ್ನು ಕೊಡುತ್ತಿರುವಾಗ ಪ್ರಾದೇಶಿಕತೆಯ ಸೊಗಡಿನ ಬಗ್ಗೆ ಪ್ರಶ್ನೆಗಳು ತಲೆ ಎತ್ತಿದವು. ತಮ್ಮ ನೆಲ, ಸಂಸ್ಕೃತಿ, ಭಾಷೆಯನ್ನು ಪೋರ್ಟ್ರೇ ಮಾಡುವ ಶೋಗಳು ಬೇಕು ಎನ್ನುವ ಡಿಮಾಂಡ್ ಶುರುವಾಗುತ್ತಿದ್ದಂತೆ ಪ್ರಾದೇಶಿಕ ಭಾಷೆಗಳಲ್ಲಿ ಓಟಿಟಿ ಪ್ಲಾಟ್ಫಾರ್ಮ್ಗಳಿಗೆ ಚಾಲನೆ ಸಿಕ್ಕಿತು. ಸದ್ಯ ಭಾರತದ ಕೆಲವು ಪ್ರಾದೇಶಿಕ ಭಾಷೆಗಳಲ್ಲಿ ಸ್ಟ್ರೀಮಿಂಗ್ ಸರ್ವೀಸಸ್ ಶುರುವಾಗಿದೆ. ದಕ್ಷಿಣ ಭಾರತದಲ್ಲಿ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಈಗಾಗಲೇ ಓಟಿಟಿ ಪ್ರಯೋಗಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಸಿನಿಮಾಗಳ ಜೊತೆ ಅಲ್ಲೀಗ ಒರಿಜಿನಲ್ ಕಂಟೆಂಟ್ ಕೂಡ ತಯಾರಾಗುತ್ತಿದೆ. ಸಹಜವಾಗಿಯೇ ಕನ್ನಡಕ್ಕೊಂದು ಪ್ರತ್ಯೇಕ ಓಟಿಟಿಯ ಅಗತ್ಯತೆ ಎಷ್ಟಿದೆ ಎನ್ನುವ ಪ್ರಶ್ನೆಗಳು ಎದ್ದಿವೆ.
ಭಾಷೆ ಉಳಿವಿಗೆ ಪ್ರಾದೇಶಿಕ ಓಟಿಟಿ ಅಗತ್ಯ
ಯಾವುದೇ ಒಂದು ಭಾಷೆಯ ಅಸ್ತಿತ್ವ ಉಳಿಯುವುದು ನಾಟಕ, ಸಂಗೀತ, ಜನಪದ, ಸಿನಿಮಾ ಸೇರಿದಂತೆ ಇನ್ನಿತರೆ ಪ್ರದರ್ಶನ ಕಲೆಗಳ ಸಾಂಸ್ಕೃತಿಕ ವೇದಿಕೆಯ ಮೂಲಕ. ಆಯಾ ಕಾಲಕ್ಕೆ ತಕ್ಕಂತೆ ಬದಲಾಗುವ ಸಂದರ್ಭ, ತಂತ್ರಜ್ಞಾನದೊಂದಿಗೆ ಈ ಪ್ರಕ್ರಿಯೆ ಸದಾ ಚಾಲ್ತಿಯಲ್ಲಿರಬೇಕು. ಈ ಬಗ್ಗೆ ಮಾತನಾಡುವ ಹಿರಿಯ ಚಿತ್ರನಿರ್ದೇಶಕ, ರಂಗಕರ್ಮಿ ಟಿ.ಎಸ್.ನಾಗಾಭರಣ, “ನಾವೇನೋ ಇಂದು ಗ್ಲೋಬಲ್ ಆಗಿದ್ದೇವೆ ಎಂದು ಹೇಳಿಕೊಳ್ಳುತ್ತೇವೆ. ನಾವೀಗ ಏನು ಪ್ಯಾನ್ ಇಂಡಿಯಾ ಎನ್ನುತ್ತೇವೋ ಅದು ರೀಜನಲ್ ಎಸೆನ್ಸ್ನೊಂದಿಗೆ ಜನರಿಗೆ ತಲುಪಬೇಕು. ಜಾಗತಿಕ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಅವರದ್ದೇ ಆದ ಮಾನದಂಡವಿರುತ್ತೇವೆ. ಅಲ್ಲಿ ನಮ್ಮ ಮಾತು ಕೇಳುವವರು ಯಾರು? ರೀಜನಲ್ ಬೇಸ್ ಇರುವಂತಹ ಓಟಿಟಿ ಔಟ್ಲೆಟ್ಗಳಿದ್ದರೆ ಇದು ಸಾಧ್ಯವಾಗುತ್ತದೆ” ಎನ್ನುತ್ತಾರೆ.
ಪ್ರಾದೇಶಿಕ ಓಟಿಟಿ ಮೂಲಕ ನಮ್ಮ ನೆಲ, ಸಂಸ್ಕೃತಿ, ಕಲೆಯ ಅಸ್ತಿತ್ವದೊಂದಿಗೆ ಗುರುತಿಸಿಕೊಳ್ಳಬಹುದು ಎನ್ನುವುದು ನಾಗಾಭರಣರ ಪ್ರತಿಪಾದನೆ. ನಮ್ಮ ಭಾಷೆ, ಕಲ್ಚರ್ ಹೇಳುವಂತಹ ಎರಡಾದರೂ ಪ್ರಾದೇಶಿಕ ಓಟಿಟಿ ಪ್ಲಾಟ್ಫಾರ್ಮ್ಗಳ ಅವಶ್ಯಕತೆ ಇದೆ ಎನ್ನುತ್ತಾರವರು. ಸಿನಿಮಾ ಜೊತೆಜೊತೆಗೆ ನಮ್ಮತನವನ್ನು ಗಟ್ಟಿಯಾಗಿ ಹೇಳುವಂತಹ ಕಂಟೆಂಟ್ ಕೂಡ ಅಲ್ಲಿದ್ದರೆ ಚೆನ್ನ ಎನ್ನುವ ನಿಲುವು ಅವರದು. “ನಮ್ಮ ಓಟಿಟಿಗಳಲ್ಲಿ ನಾವು ಏನನ್ನು ಕ್ಯಾಟರ್ ಮಾಡುತ್ತೇವೆ ಅನ್ನೋದು ಕೂಡ ಮುಖ್ಯ. ನಮ್ಮ ನಾಡಿನಲ್ಲಿ ವೆರೈಟಿ ಡಯಲೆಕ್ಟ್ಗಳಿವೆ. ಒಂದು ರೀತಿ ನಮ್ಮ ನಾಡೇ ಒಂದು ಮಿನಿ ಭಾರತ. ಆಕ್ಷನ್, ಥ್ರಿಲ್ಲರ್, ಕ್ರೈಂ ಜೊತೆ ಕಲೆ, ಸಾಹಿತ್ಯ ಜನಪದವೂ ಅಲ್ಲಿ ಸಿಗಬೇಕು. ಪ್ರಾದೇಶಿಕ ಓಟಿಟಿ ಔಟ್ಲೆಟ್ಗಳಿದ್ದಾಗ ಅದು ಸಾಧ್ಯವಾಗುತ್ತದೆ” ಎನ್ನುತ್ತಾರೆ ನಾಗಾಭರಣ.
ಸಿನಿಮಾ ಮಾರುಕಟ್ಟೆಗೆ ಬೇಕು ಓಟಿಟಿ
OTT ಮಾಧ್ಯಮ ಸಿನಿಮೋದ್ಯಮಕ್ಕೆ ಒತ್ತಾಸೆಯಾಗಿ ನಿಂತಿದೆ. ಕೋವಿಡ್ ದಿನಗಳಲ್ಲಿ ಥಿಯೇಟರ್ಗಳು ಮುಚ್ಚಿದಾಗ ಸಂಕಷ್ಟಕ್ಕೀಡಾದ ಸಿನಿಮಾ ನಿರ್ಮಾಪಕರು ಹಾಗೂ ತಂತ್ರಜ್ಞರಿಗೆ ಒತ್ತಾಸೆಯಾಗಿದ್ದು ಓಟಿಟಿ. ಆಗ ಥಿಯೇಟರ್ನಲ್ಲಿ ತೆರೆಕಂಡ ಸಿನಿಮಾಗಳಿಗೆ ಪ್ರೇಕ್ಷಕರ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಈ ಚಿತ್ರಗಳು ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಗೆದ್ದವು. ಇನ್ನೊಂದೆಡೆ ಹತ್ತಾರು ಸಿನಿಮಾಗಳು ನೇರವಾಗಿ ಓಟಿಟಿಯಲ್ಲಿ ಸ್ಟ್ರೀಮ್ ಆದವು. ಅಲ್ಲಿಂದ ಮುಂದೆ ಓಟಿಟಿಗಾಗಿಯೇ ಸಿನಿಮಾ ನಿರ್ಮಿಸುವ ಪರಿಪಾಠ ಶುರುವಾಗಿ ಈಗ ಅದಕ್ಕೆಂದೇ ಬಿಸ್ನೆಸ್ ಸ್ಟ್ರ್ಯಾಟಜಿಗಳು ನಡೆದಿವೆ. ಹಿಂದಿ ಚಿತ್ರಗಳ ನಂತರ ಪ್ರಾದೇಶಿಕ ಭಾಷೆಗಳ ಸಿನಿಮಾಗಳು ಕೂಡ ಈಗ ಓಟಿಟಿಗೆಂದೇ ತಯಾರಾಗತೊಡಗಿವೆ. ಈ ಮೂಲಕ ಸಿನಿಮಾ ಮಾರುಕಟ್ಟೆಯ ವ್ಯಾಖ್ಯಾನ ರೀಡಿಫೈನ್ ಆಗಿದೆ.
“ಸಿನಿಮಾ ನಿರ್ದೇಶಕನಾಗಿ ನನಗೆ ಉದ್ಯಮದ ಕಷ್ಟ-ಸುಖಗಳ ಸ್ಪಷ್ಟ ಅರಿವಿದೆ. ಬದಲಾದ ದಿನಗಳಲ್ಲಿ ನಮ್ಮ ಸಿನಿಮಾ ಮಾರುಕಟ್ಟೆಯ ಹಿತದೃಷ್ಟಿಯಿಂದ ನಮ್ಮದೇ ಆದೊಂದು ರೀಜನಲ್ ಓಟಿಟಿ ಪ್ಲಾಟ್ಫಾರ್ಮ್ನ ಅಗತ್ಯತೆ ಇದೆ. ಅಮೇಜಾನ್, ನೆಟ್ಫ್ಲಿಕ್ಸ್ನಂತಹ ಓಟಿಟಿಗಳು ನಮಗೆ ಸೂಕ್ತ ರೀತಿಯಲ್ಲಿ ರೆಸ್ಪಾನ್ಸ್ ಮಾಡೋಲ್ಲ. ನಮ್ಮ ಸಂವೇದನೆಗಳು ಅವರಿಗೆ ಅರ್ಥವಾಗೋಲ್ಲ. ನಮ್ಮ ಐಡಿಯಾಗಳನ್ನು ಎಕ್ಸಿಗ್ಯೂಟ್ ಮಾಡಲು ನಮ್ಮದೇ ಆದ ವೇದಿಕೆ ಬೇಕು” ಎನ್ನುತ್ತಾರೆ ಯುವ ಚಿತ್ರನಿರ್ದೇಶಕ ಸಿಂಪಲ್ ಸುನಿ. ಈ ಹಾದಿಯಲ್ಲಿ ಪ್ರಾದೇಶಿಕ ಭಾಷೆಯ ಕಂಟೆಂಟ್ಗಳನ್ನು ರೂಪಿಸುವ, ಕನ್ನಡ ಸಿನಿಮಾಗಳಿಗೆ ಇಂಬು ನೀಡುವ ಉದ್ದೇಶಗಳೊಂದಿಗೆ ಮೊನ್ನೆಯಷ್ಟೇ ಲಾಂಚ್ ಆಗಿರುವ Aneka Plus ಕನ್ನಡ ನೆಲದ ಓಟಿಟಿ ಪ್ಲಾಟ್ಫಾರ್ಮ್ ಬಗ್ಗೆ ಅವರು ಆಶಾದಾಯಕ ಮಾತುಗಳನ್ನಾಡುತ್ತಾರೆ. “ಓಟಿಟಿ ದುಬಾರಿ ವ್ಯವಹಾರ. ಇಲ್ಲಿ ಸಾಕಷ್ಟು ಸವಾಲುಗಳಿವೆ. Aneka Plus ಈ ಸವಾಲುಗಳನ್ನು ಮೀರಿ ಬೆಳೆಯಲಿ” ಎಂದು ಹಾರೈಸುತ್ತಾರೆ.
ದುಬಾರಿ ವ್ಯವಹಾರ
“ಅಫ್ಕೋರ್ಸ್, ಎರಡು ದಶಕಗಳ ಹಿಂದೆ ನಾವು ನೋಡುತ್ತಿದ್ದ ಕನ್ನಡ ಸಿನಿಮಾ ಬಿಸ್ನೆಸ್ಗೂ, ಈಗಿನ ವ್ಯವಹಾರಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ನಿಜಕ್ಕೂ ಕನ್ನಡ ಚಿತ್ರರಂಗದ ಬೆಳವಣಿಗೆ ಬಗ್ಗೆ ಖುಷಿಯಾಗುತ್ತದೆ. ಆದಾಗ್ಯೂ ನಮ್ಮ ಸಿನಿಮಾ ಮಾರುಕಟ್ಟೆಗೆ ಮಿತಿಗಳಿವೆ” ಎಂದು ಇಲ್ಲಿನ ಸಿನಿಮಾ ಮಾರುಕಟ್ಟೆ ಕುರಿತು ಮಾತನಾಡುತ್ತಾರೆ ನಟ, ನಿರ್ದೇಶಕ ಚಿ.ಗುರುದತ್. “ಓಟಿಟಿ ಪ್ಲಾಟ್ಫಾರ್ಮ್ಗಳು ದೊಡ್ಡ ಬ್ಯಾನರ್ ಸಿನಿಮಾಗಳನ್ನಷ್ಟೇ ಖರೀದಿಸುತ್ತವೆ. ಸಣ್ಣ ಮತ್ತು ಮೀಡಿಯಂ ಬಜೆಟ್ ಸಿನಿಮಾಗಳ ನಿರ್ಮಾಪಕರು ಥಿಯೇಟರ್ ಲಭ್ಯತೆ, ಪ್ರೊಮೋಷನ್ ಖರ್ಚುಗಳಿಂದ ಬಸವಳಿಯುತ್ತಾರೆ. ಓಟಿಟಿ ಮಾರುಕಟ್ಟೆಯಿಂದ ಸಿನಿಮಾಗೆ ಹೂಡಿದ ಬಂಡವಾಳದ ಒಂದು ಪಾಲು ವಾಪಸಾಗುತ್ತದೆ ಎಂದು ಧೈರ್ಯ ಮಾಡುವ ಪರಿಸ್ಥಿತಿಯಲ್ಲಿ ನಮ್ಮ ನಿರ್ಮಾಪಕರಿಲ್ಲ. ನಮ್ಮದೇ ಆದೊಂದು ಪ್ರಾದೇಶಿಕ ಓಟಿಟಿ ಔಟ್ಲೆಟ್ ಇದ್ದಾಗ ಈ ಸಮಸ್ಯೆಗಳು ತಿಳಿಯಾಗುತ್ತವೆ. ಆದರೆ ದುಬಾರಿ ಇನ್ವೆಸ್ಟ್ಮೆಂಟ್ ಬೇಡುವ ಓಟಿಟಿ ಪ್ಲಾಟ್ಫಾರ್ಮ್ ಶುರುಮಾಡಲು ಯಾರು ಮುಂದಾಗುತ್ತಾರೆ?” ಎಂದು ಅವರು ಪ್ರಶ್ನಿಸುತ್ತಾರೆ.
ಸಿನಿಮಾ ಉದ್ಯಮದಂತೆ ಓಟಿಟಿ ವ್ಯವಹಾರದಲ್ಲಿ ವರ್ಷದೊಳಗೆ ಲಾಭ-ನಷ್ಟಗಳ ಲೆಕ್ಕಾಚಾರ ಸಿಗುವುದಿಲ್ಲ. ಇಲ್ಲಿಯದ್ದೇ ಬೇರೆಯ ರೀತಿಯ ಬಿಸ್ನೆಸ್ ಸ್ಟ್ರ್ಯಾಟಜಿ. ಈ ಕಾರಣಕ್ಕಾಗಿಯೇ ಸ್ಯಾಂಡಲ್ವುಡ್ ನಿರ್ಮಾಪಕರು ಓಟಿಟಿ ಬಗ್ಗೆ ಯೋಚಿಸಲಿಕ್ಕೆ ಮುಂದಾಗಿರಲಿಕ್ಕಿಲ್ಲ. ಒರಿಜಿನಲ್ ಕಂಟೆಂಟ್ ತಯಾರಿಕೆ, ಸಬ್ಸ್ಕ್ರಿಪ್ಶನ್ ಮಾಡ್ಯೂಲ್, ತಾಂತ್ರಿಕ ತೊಡಕುಗಳು… ಹೀಗೆ ಇಲ್ಲಿ ಹಲವು ಅಡಚಣೆಗಳು. “ದಕ್ಷಿಣದ ಇತರೆ ಪ್ರಾದೇಶಿಕ ಭಾಷೆಗಳಲ್ಲಿನ ಓಟಿಟಿ ಮಾರುಕಟ್ಟೆ ನೇರವಾಗಿ ಸಿನಿಮಾರಂಗದ ಜೊತೆ ವ್ಯವಹರಿಸುತ್ತದೆ. ನಮ್ಮಲ್ಲೂ ಇಂಥದ್ದೊಂದು ಅವಕಾಶ ಸೃಷ್ಟಿಯಾಗಲಿ” ಎಂದು ಗುರುದತ್ ಆಶಿಸುತ್ತಾರೆ.
ಪ್ರತಿಭಾವಂತರಿಗೆ ಅವಕಾಶ
ಓಟಿಟಿ ಪ್ಲಾಟ್ಫಾರ್ಮ್ಗಳು ಮನರಂಜನಾ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಿವೆ. ವೆಬ್ ಸರಣಿ, ಡಾಕ್ಯುಮೆಂಟರಿಗಳಿಗಾಗಿ ಸೃಜನಶೀಲರು ದೊಡ್ಡ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಚಿತ್ರನಿರ್ದೇಶಕರು, ನಿರ್ಮಾಪಕರು, ಚಿತ್ರಕಥೆ ಬರಹಗಾರರು, ಕಲಾವಿದರು, ತಂತ್ರಜ್ಞರಿಗೆ ಸಾಕಷ್ಟು ಅವಕಾಶಗಳಿದ್ದು, ಇದು ಅಲ್ಲಿನ ಸೃಜನಶೀಲ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಬರಹಗಾರರು ಹಾಗೂ ತಂತ್ರಜ್ಞರು ಕಿರುತೆರೆ ಮಾಧ್ಯಮದಲ್ಲಿ ನೆಲೆ ಕಂಡುಕೊಂಡಿದ್ದರು. ಕೆಲಸದ ಭದ್ರತೆ ಇದ್ದರೂ ತಮ್ಮ ಸೃಜನಶೀಲ ಐಡಿಯಾಗಳನ್ನು ಎಕ್ಸಿಗ್ಯೂಟ್ ಮಾಡಲು ಅಲ್ಲಿ ಅವರಿಗೆ ಹೆಚ್ಚಿನ ಅವಕಾಶಗಳು ಇರಲಿಲ್ಲ. ಈಗ ಓಟಿಟಿಯಲ್ಲಿ ಈ ಸಾಧ್ಯತೆಗಳು ಒದಗಿಬಂದಿವೆ.
“ಈಗ ಯುವ ತಂತ್ರಜ್ಞರು ಹಾಗೂ ಬರಹಗಾರರು ವಿನೂತನ ಐಡಿಯಾಗಳೊಂದಿಗೆ ಕಂಟೆಂಟ್ ರೂಪಿಸುತ್ತಿದ್ದಾರೆ. ಓಟಿಟಿಯಲ್ಲಿ ಅವರ ಐಡಿಯಾಗಳು ಚಾನಲೈಸ್ ಆಗುವಂತಹ ಸೆಗ್ಮೆಂಟ್ಗಳಿವೆ. ಅವಕಾಶಗಳ ಜೊತೆಗೆ ಸೃಜನಶೀಲತೆಗೂ ಅಲ್ಲಿ ಜಾಗವಿದೆ” ಎನ್ನುತ್ತಾರೆ ಚಿತ್ರಸಾಹಿತಿ, ಚಿತ್ರನಿರ್ದೇಶಕ ಕವಿರಾಜ್. ಕನ್ನಡದ್ದೇ ಆದ ಒಂದು OTT ಅಗತ್ಯತೆ ಬಗ್ಗೆ ಪ್ರಸ್ತಾಪಿಸುವ ಅವರು Aneka Plus ಬಗ್ಗೆ ಭರವಸೆಯ ಮಾತುಗಳನ್ನಾಡುತ್ತಾರೆ. “ಸಿನಿಮಾ ಬರಹಗಾರನಾಗಿ ಓಟಿಟಿ ಮಾಧ್ಯಮದ ಸಾಧ್ಯತೆಗಳ ಬಗ್ಗೆ ನನಗೆ ತಿಳಿದಿದೆ. ಸೂಕ್ತ ಸಮಯದಲ್ಲಿ Aneka Plus ಕನ್ನಡ ಓಟಿಟಿ ಕಾರ್ಯಾರಂಭ ಮಾಡಿದೆ. ಈ ವೇದಿಕೆ ಮೂಲಕ ನೂರಾರು ಪ್ರತಿಭಾವಂತರು ಬೆಳಕಿಗೆ ಬರುವಂತಾಗಲಿ” ಎಂದು ಆಶಿಸುತ್ತಾರೆ.
ಓಟಿಟಿ ಸಾಧ್ಯತೆಗಳು, ಮಾರುಕಟ್ಟೆ ಕುರಿತು ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಕನ್ನಡದ್ದೇ ಆದ ‘Aneka Plus’ ಓಟಿಟಿ ಪ್ಲಾಟ್ಫಾರ್ಮ್ ಕಾರ್ಯಾರಂಭ ಮಾಡಿದೆ. ಕಳೆದ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ‘ಮಾಧ್ಯಮ ಅನೇಕ’ ಮೀಡಿಯಾ ಹೌಸ್ನ ಮಹತ್ವಾಕಾಂಕ್ಷೆಯ ವೆಂಚರ್ ಇದು. ಈ ಬಗ್ಗೆ ‘Aneka Plus’ ಮುಖ್ಯಸ್ಥರಾದ ಅರವಿಂದ ಮೋತಿ ಅವರು ಮಾತನಾಡುತ್ತಾ, “ನಮ್ಮ ‘ಮಾಧ್ಯಮ ಅನೇಕ’ ಮೀಡಿಯಾ ಹೌಸ್ನಿಂದ ನಿರ್ಮಾಣವಾದ ಟಾಕ್ಶೋ, ವೆಬ್ಸರಣಿ, ಡಾಕ್ಯುಮೆಂಟರಿ ಸೀರೀಸ್ಗಳನ್ನು ಕನ್ನಡಿಗರು ಮೆಚ್ಚಿದ್ದಾರೆ. ಈಗ ‘ಮಾಧ್ಯಮ ಅನೇಕ’ ಡಿಜಿಟಲ್ ವೇದಿಕೆ ಪ್ರವೇಶಿಸಿದ್ದು ಮೀಡಿಯಾ ಹೌಸ್ನಿಂದ ‘Aneka Plus’ OTT ರೂಪಿಸಿದ್ದೇವೆ. ಕನ್ನಡದ ವೈವಿಧ್ಯಮಯ ಒರಿಜಿನಲ್ ಕಂಟೆಂಟ್ ಇಲ್ಲಿ ಸ್ಟ್ರೀಮ್ ಆಗಲಿದೆ. ಜೊತೆಗೆ ಮನರಂಜನಾ ಉದ್ಯಮದ ಸೃಜನಶೀಲರಿಗೆ ಉತ್ತಮ ವೇದಿಕೆಯಾಗಿಯೂ ಕಾರ್ಯನಿರ್ವಹಿಸಲಿದೆ” ಎನ್ನುತ್ತಾರೆ.
ಇಂದಿನ ಸ್ಟ್ರೀಮಿಂಗ್ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ‘ಮಾಧ್ಯಮ ಅನೇಕ’ ದೂರದೃಷ್ಟಿಯಿಂದ ಆರಂಭಿಸಿರುವ OTT ‘Aneka Plus’. ಕಳೆದ ನಾಲ್ಕು ವರ್ಷಗಳ ಪೂರ್ವಸಿದ್ಧತೆ, ಪರಿಶ್ರಮದಿಂದ ‘Aneka Plus’ ರೂಪುಗೊಂಡಿದ್ದು ಕನ್ನಡಿಗರಿಗೆ ಈ ಪ್ರಯತ್ನ ಇಷ್ಟವಾಗಲಿದೆ ಎನ್ನುವ ಭರವಸೆ ಅರವಿಂದ ಮೋತಿ ಅವರದ್ದು. “ಕನ್ನಡದ ಪ್ರತಿಭಾವಂತ ಆಸಕ್ತ ಚಿತ್ರಕಥಾ ಬರಹಗಾರರು, ಕತೆಗಾರರಿಗೆ ‘Aneka Plus’ ಒಂದೊಳ್ಳೆಯ ವೇದಿಕೆಯಾಗಲಿ ಎಂದು ನಾವು ಆಶಿಸುತ್ತೇವೆ. ತಮ್ಮ ಯಾವುದೇ ಕಥಾವಸ್ತುವನ್ನಾಗಲಿ ಅಥವಾ ತಮ್ಮ ಸಿದ್ಧ ಚಿತ್ರಕಥೆ / ಪರಿಕಲ್ಪನೆಗಳನ್ನು ಅವರು ‘ಮಾಧ್ಯಮ ಅನೇಕ’ ಕಂಟೆಂಟ್ ಕ್ಯುರೇಟರ್ಗಳಿಗೆ ಕಳುಹಿಸಬಹುದು. ಇದರ ವಸ್ತು, ವಿಷಯ ವೆಬ್ ಸರಣಿ ಅಥವಾ ಡಾಕ್ಯುಮೆಂಟರಿಗೆ ಪೂರಕವಾಗಿರಬೇಕು. ‘Aneka Plus’ ಜೊತೆಗೂಡಿ ಅವರು ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬಹುದು” ಎಂದು ಸೃಜನಶೀಲರಿಗೆ ಅವರು ಕರೆ ಕೊಡುತ್ತಾರೆ.