ಅದ್ಧೂರಿತನ, ಪ್ರಚಾರದಿಂದ ಸಿನಿಮಾವನ್ನು ಗೆಲ್ಲಿಸಲು ಸಾಧ್ಯವಿಲ್ಲ. ಪ್ರೊಮೋಷನ್‌ನಿಂದ ಆಕರ್ಷಿತರಾಗಿ ಥಿಯೇಟರ್‌ಗೆ ಬರುವ ಪ್ರೇಕ್ಷಕ ಸಿನಿಮಾ ರುಚಿಸದಾಗ ಬಯ್ದುಕೊಂಡು ಹೊರನಡೆಯುತ್ತಾನೆ. ಇದು ಇತರೆ ಸಿನಿಮಾಗಳ ಮೇಲೂ ಪರಿಣಾಮ ಬೀರುವುದರಿಂದ ಒಟ್ಟಾರೆ ಉದ್ಯಮಕ್ಕೆ ಹಿನ್ನಡೆಯಾಗುತ್ತದೆ.
ನಿರ್ದೇಶಕ ಪ್ರೇಮ್ ಸಿನಿಮಾಗಳು ಚಿತ್ರೀಕರಣದುದ್ದಕ್ಕೂ ಸುದ್ದಿ ಮಾಡುತ್ತವೆ ಮತ್ತು ಬಿಡುಗಡೆಗೆ ಮುನ್ನ ಪ್ರೊಮೋಷನ್ ಕೂಡ ಜೋರಾಗಿಯೇ ಇರುತ್ತದೆ. ‘ಏಕ್‌ಲವ್‌ಯಾ’ ಸಿನಿಮಾ ಕೂಡ ಘೋಷಣೆ ಆದಾಗಿನಿಂದಲೂ ಸುದ್ದಿಯಲ್ಲಿತ್ತು. ಸಹಜವಾಗಿಯೇ ನಿರೀಕ್ಷೆಯೂ ಹೆಚ್ಚೇ ಇತ್ತು. ತಿಂಗಳುಗಳ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ವೀಡಿಯೋ ಹಾಡುಗಳು ಜನರಿಗೆ ಇಷ್ಟವಾಗಿದ್ದವು. ಪ್ರೀತಿಯ ಕತೆಯಲ್ಲಿ ತಿರುವುಗಳಿರುತ್ತವೆ ಎನ್ನುವಂತಹ ಟ್ರೈಲರ್ ಕೂಡ ಕುತೂಹಲ ಕಾದಿರಿಸಿತ್ತು. ಈ ಹಿಂದಿನ ‘ವಿಲನ್’ ಚಿತ್ರದಲ್ಲಿ ನಿರೀಕ್ಷೆ ಹುಸಿಮಾಡಿದ್ದ ಅವರು ಈ ಬಾರಿ ಒಂದೊಳ್ಳೆಯ ಲವ್‌ಸ್ಟೋರಿ ಹೇಳಲಿದ್ದಾರೆ ಎಂದು ಸಿನಿಪ್ರೇಮಿಗಳು ಭಾವಿಸಿದ್ದರು. ಆದರೆ ಪ್ರೇಮ್ ಮತ್ತೆ ಎಡವಿದ್ದಾರೆ.
ಪ್ರೀತಿಯ ಕತೆ ಹೇಳಲು ಹೊರಟಿರುವ ಪ್ರೇಮ್ ದ್ವಿತಿಯಾರ್ಧದಲ್ಲಿ ಥ್ರಿಲ್ಲರ್ ಜಾನರ್‌ಗೆ ಹೊರಳುತ್ತಾರೆ. ಮೊದಲಾರ್ಧದಲ್ಲಿ ಕತೆಗೆ ಹಾಕಿದ್ದ ಅಡಿಪಾಯ ಸಡಿಲವಾಗುತ್ತದೆ. ಇಂಟರ್‌ವೆಲ್ ನಂತರ ಮತ್ತೊಂದು ಪ್ರತ್ಯೇಕ ಸಿನಿಮಾಗೆ ಆಗುವಷ್ಟು ಕತೆ, ತಿರುವುಗಳಿದ್ದು ಒಂದು ಹಂತದಲ್ಲಿ ಪ್ರೇಕ್ಷಕನಿಗೆ ಸಿನಿಮಾ ಬೋರು ಹೊಡೆಸುತ್ತದೆ. ತಮ್ಮ ಸಿನಿಮಾ ಮೂಲಕ ಸಮಾಜಕ್ಕೆ ಸಂದೇಶ ನೀಡುತ್ತಿದ್ದೇವೆ ಎಂದು ಬಹಳಷ್ಟು ನಿರ್ದೇಶಕರು ಹೇಳಿಕೊಳ್ಳುತ್ತಾರೆ. ಪ್ರೇಮ್ ಕೂಡ ಇಲ್ಲಿ ಹಾಗೆ ಅಂದುಕೊಂಡಿರಬಹುದು. ಪ್ರಜ್ಞಾಪೂರ್ವಕವಾಗಿಯೇ ಅವರು ಕ್ಲೈಮ್ಯಾಕ್ಸ್‌ನಲ್ಲಿ ನಾಯಕನಿಂದ ಅಂತಹ ಡೈಲಾಗ್‌ಗಳನ್ನು ಹೇಳಿಸುತ್ತಾರೆ. ಈ ಸಂದೇಶದ ವಿಚಾರದಲ್ಲಿ ಅವರ ಸಿನಿಮಾ ಪ್ರಸೆಂಟೇಷನ್ ವರ್ಕ್ ಆಗಿಲ್ಲ ಎಂದೇ ಹೇಳಬಹುದು.
ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಅಂಕಿ-ಅಂಶಗಳನ್ನು ಕೊಡುವ ನಿರ್ದೇಶಕರು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಶಯ ವ್ಯಕ್ತಪಡಿಸುತ್ತಾರೆ. ಆದರೆ ಈ ಸಂದೇಶವನ್ನು ವಾಚ್ಯವಾಗಿಸಿದರೆ ವ್ಯರ್ಥಪ್ರಲಾಪವಷ್ಟೆ. ಈ ಸಿನಿಮಾದಲ್ಲಿ ಆಗಿರುವುದೇ ಅದು. ಹೇಳುವುದನ್ನು ಅಂಡರ್‌ಕರೆಂಟ್ ಆಗಿ, ಸೂಕ್ಷ್ಮವಾಗಿ ದಾಟಿಸಿದಾಗ ಪ್ರೇಕ್ಷಕರಿಗೆ ಕನ್ವಿನ್ಸ್ ಆಗುತ್ತದೆ. ಬಹಳಷ್ಟು ಸಿನಿಮಾಗಳು ಗೆದ್ದಿರುವುದು ಈ ಗುಣದಿಂದಲೇ. ಕನ್ವಿನ್ಸಿಂಗ್ ಆದ ನಿರೂಪಣೆ ಇಲ್ಲದಿದ್ದರೆ ಪಾತ್ರಗಳೂ ಪೇಲವವಾಗುತ್ತವೆ. ನಾಯಕಿ, ಚರಣ್‌ರಾಜ್, ರಚಿತಾ ರಾಮ್ ಪಾತ್ರಗಳು ಈ ಸೈಡ್ ಎಫೆಕ್ಟ್‌ಗೆ ಬಲಿಯಾಗಿವೆ. ರಚಿತಾ ರಾಮ್ ಪಾತ್ರದ ಮೂಲಕ ಡೇಟಿಂಗ್‌ಗೆ ಸಂಬಂಧಿಸಿದಂತೆ ವಿಚಿತ್ರ ಪದವೊಂದನ್ನು ಹೇಳಿಸಿರುವುದು ಉತ್ತಮ ಅಭಿರುಚಿಯೇನಲ್ಲ.
ಚಿತ್ರದ ಮೊದಲಾರ್ಧದಲ್ಲಿ ಲವಲವಿಕೆಯಿದೆ. ನಿರ್ದೇಶಕ ಪ್ರೇಮ್ ಸಾಮಾನ್ಯವಾಗಿ ತಮ್ಮ ಚಿತ್ರಗಳಲ್ಲಿ ಹಾಡುಗಳ ಬಗ್ಗೆ ವಿಶೇಷ ಆಸ್ಥೆ ವಹಿಸುತ್ತಾರೆ. ‘ಏಕ್‌ಲವ್‌ಯಾ’ದಲ್ಲೂ ಈ ಪ್ರಯತ್ನ ಗೆದ್ದಿದೆ. ಚಿತ್ರದ ನಾಲ್ಕು ಹಾಡುಗಳು ಸಂಗೀತ ಮತ್ತು ಮೇಕಿಂಗ್‌ನಿಂದ ಗಮನ ಸೆಳೆಯುತ್ತವೆ. ಇದಕ್ಕಾಗಿ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಮತ್ತು ಛಾಯಾಗ್ರಾಹಕ ಮಹೇಂದ್ರ ಸಿಂಹ ಅವರಿಗೆ ಅಭಿನಂದನೆ ಸಲ್ಲಬೇಕು. ದ್ವಿತಿಯಾರ್ಧದಲ್ಲಿ ನಿರೂಪಣೆಯಲ್ಲಿ ಪ್ರೇಮ್ ಎಡವಿದಾಗೆಲ್ಲಾ ಪ್ರೇಕ್ಷಕರಿಗೆ ಸಿನಿಮಾವನ್ನು ಸಹನೀಯವಾಗಿಸುವುದು ಮಹೇಂದ್ರ ಸಿಂಗ ಅವರ ಛಾಯಾಗ್ರಹಣ. ‘ಎದೆಬಡಿತ ಜೋರಾಗಿದೆ’ ಹಾಡಿನ ನೃತ್ಯ ಸಂಯೋಜನೆ ಚೆನ್ನಾಗಿದ್ದು, ಈ ಗೀತೆಗೆ ದನಿಯಾಗಿರುವ ಪ್ರೇಮ್‌ರನ್ನು ಉತ್ತಮ ಗಾಯನಕ್ಕಾಗಿ ಪ್ರತ್ಯೇಕವಾಗಿ ಅಭಿನಂದಿಸಬಹುದು. ವಿದೇಶದಲ್ಲಿ ಚಿತ್ರಿಸಿರುವ ಡ್ಯೂಯೆಟ್ ಹಾಡೊಂದರಲ್ಲಿ ಗ್ರಾಫಿಕ್ಸ್ ಬಳಕೆ ಮಾಡಿ ಅದರ ಅಂದ ಹಾಳು ಮಾಡಲಾಗಿದೆ.
ನಿರ್ದೇಶಕ ಪ್ರೇಮ್‌ರಿಗೆ ತಮ್ಮ ಕತೆ, ನಿರೂಪಣೆ, ನಿಲುವುಗಳ ಬಗ್ಗೆ ಸ್ಪಷ್ಟತೆ ಇದ್ದಂತಿಲ್ಲ. ಜೈಲಿನ ದೃಶ್ಯಗಳು ಸೇರಿದಂತೆ ಮತ್ತೊಂದೆರೆಡು ಲಾಜಿಕ್ ಇಲ್ಲದ ಸನ್ನಿವೇಶಗಳನ್ನೇನೋ ಮರೆತುಬಿಡಬಹುದು. ಆದರೆ ಸಂದೇಶ ಹೇಳಲು ಹೊರಟ ಅವರು ಯೂನಿಫಾರ್ಮ್‌ನಲ್ಲಿರುವ ಪೊಲೀಸ್ ಇನ್‌ಸ್ಟೆಕ್ಟರ್‌ಗೆ ಸದಾ ಹೆಗಲ ಮೇಲೊಂದು ಬಣ್ಣದ ಶಾಲು ಹಾಕಿಸಿರುವುದು, ಮಗಳಿಗೆ ಅನ್ಯಾಯವಾಯ್ತೆಂದು ತಂದೆಯೇ ದುಷ್ಕರ್ಮಿಗೆ ಗುಂಡು ಹಾರಿಸುವಂತಹ ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ. ಲವ್ ಸಿನಿಮಾದಲ್ಲಿ ಹೀರೋ – ಹಿರೋಯಿನ್ ಇಬ್ಬರೂ ಮಿಂಚಬೇಕು. ಇಲ್ಲಿ ಅದೇಕೋ ನಾಯಕಿ ಪಾತ್ರಪೋಷಣೆ ಕಳೆಗುಂದಿದೆ. ಅದ್ಧೂರಿತನ, ಪ್ರಚಾರದಿಂದ ಸಿನಿಮಾವನ್ನು ಗೆಲ್ಲಿಸಲು ಸಾಧ್ಯವಿಲ್ಲ. ಪ್ರೊಮೋಷನ್‌ನಿಂದ ಆಕರ್ಷಿತರಾಗಿ ಥಿಯೇಟರ್‌ಗೆ ಬರುವ ಪ್ರೇಕ್ಷಕ ಸಿನಿಮಾ ರುಚಿಸದಾಗ ಬಯ್ದುಕೊಂಡು ಹೊರನಡೆಯುತ್ತಾನೆ. ಇದು ಇತರೆ ಸಿನಿಮಾಗಳ ಮೇಲೂ ಪರಿಣಾಮ ಬೀರುವುದರಿಂದ ಒಟ್ಟಾರೆ ಉದ್ಯಮಕ್ಕೆ ಹಿನ್ನಡೆಯಾಗುತ್ತದೆ.