ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ‘ಪೆದ್ರೊ’ ಕನ್ನಡ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ತಿಂಗಳುಗಳ ಹಿಂದೆ ಚೀನಾದ ಪಿಂಗ್ಯಾವೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಸಿನಿಮಾ ಗೌರವಕ್ಕೆ ಪಾತ್ರವಾಗಿತ್ತು. ಚಿತ್ರದ ನಿರ್ದೇಶನಕ್ಕಾಗಿ ನಟೇಶ್ ಹೆಗ್ಡೆ ಪ್ರಶಸ್ತಿ ಪಡೆದಿದ್ದರು.

“ಈ ಸಿನಿಮಾ ನೋಡಿ ನಾನು ಬೆರಗಾದೆ. ಇದರಲ್ಲಿ ಸಿನಿಮಾ ಭಾಷೆ ಮತ್ತು ಸಿನಿಮಾದಲ್ಲಿನ ಭಾಷೆಯನ್ನು ಬಹಳ ಸಶಕ್ತವಾಗಿ ಬಳಕೆ ಮಾಡಿದ್ದಾರೆ” ಎಂದರು ಹಿರಿಯ ಚಿತ್ರನಿರ್ದೇಶಕ ಗಿರೀಶ್‌ ಕಾಸರವಳ್ಳಿ. ನಟೇಶ್‌ ಹೆಗ್ಡೆ ನಿರ್ದೇಶನದ ‘ಪೆದ್ರೊ’ ಸಿನಿಮಾದ ಟ್ರೈಲರ್‌ ಬಿಡುಗಡೆ ಮಾಡಿದ ಅವರು ಚಿತ್ರದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ರಿಷಬ್‌ ಶೆಟ್ಟಿ ನಿರ್ಮಾಣದ ಈ ಸಿನಿಮಾ ಹಲವು ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಇತ್ತೀಚೆಗೆ ಚೀನಾದ ಪಿಂಗ್ಯಾವೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಚಿತ್ರಕ್ಕೆ ಗೌರವ ಲಭಿಸಿತ್ತು. ಅತ್ಯುತ್ತಮ ನಿರ್ದೇಶನಕ್ಕಾಗಿ ನಟೇಶ್‌ ಹೆಗ್ಡೆ ಪ್ರಶಸ್ತಿ ಪಡೆದಿದ್ದರು. ಖ್ಯಾತ ತಮಿಳು ಚಿತ್ರನಿರ್ದೇಶಕ ವೆಟ್ರಿಮಾರನ್‌ ಈ ಚಿತ್ರವನ್ನು ಪ್ರಸೆಂಟ್‌ ಮಾಡುತ್ತಿರುವುದು ವಿಶೇಷ.

ಈ ಸಂದರ್ಭದಲ್ಲಿ ಮಾತನಾಡಿದ ಗಿರೀಸ್‌ ಕಾಸರವಳ್ಳಿಯವರು, “ಹಿಂದೊಂದು ಕಾಲವಿತ್ತು. ಬೆಂಗಳೂರು ಕನ್ನಡ ಹೊರತಾಗಿ ಇತರೆ ಕನ್ನಡ ಭಾಷೆಯನ್ನು ಗೇಲಿ ಮಾಡೋದಕ್ಕೆ ಬಳಸೋರು. ಈಗ ಭಾಷೆಯಲ್ಲಿರೋ ಅಂತಃಸತ್ವ ಇಟ್ಕೊಂಡು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅದರ ಸೊಗಡು ಸಿಗುತ್ತೆ. ಸಿನಿಮಾದಲ್ಲಿ ಆಡು ಮಾತಲ್ಲದೆ ಬುಕ್ಕಿಶ್‌ ಆದ ಸಂಭಾಷಣೆ ಹೇಳಬೇಕು ಎಂದು ಆಗ ಹೇಳೋರು. ಈಗ ಆಡುಮಾತಿನ ಬೆಲೆ ಕೊಡಬೇಕು ಎಂದು ನಿರ್ದೇಶಕರು ಆಲೋಚಿಸುತ್ತಿದ್ದಾರೆ. ಆಡುಮಾತು ಕೇವಲ ಭಾಷೆಯಲ್ಲ, ಅದು ಜೀವನ ಕ್ರಮವನ್ನು ಹೇಳುತ್ತದೆ. ಒಂದು ರೀತಿಯ ದರ್ಶನ ಕೊಡುತ್ತೆ. ಈ ಬೆಳವಣಿಗೆ ಖುಷಿ ಕೊಡುತ್ತೆ. ‘ಪೆದ್ರೊ’ದಲ್ಲಿ ನನಗೆ ಇಲ್ಲಿಯವರೆಗೆ ಪರಿಚಿತವಲ್ಲದ ಸಿನಿಮಾ ಭಾಷೆಯನ್ನು ನೋಡಿದೆ. ಒಂದು ಕಾಲದಲ್ಲಿ ಸಿನಿಮಾ ಭಾಷೆ ಅಂದರೆ ಎಲ್ಲವೂ ನಮ್ಮನ್ನು ಆವರಿಸಿಕೊಳ್ಳಬೇಕು ಅಂತ. ಕತೆ ಕಟ್ತಾ ಕಟ್ತಾ ನಮ್ಮನ್ನು ಆವರಿಸಿಕೊಳ್ಳಬೇಕು ಅಂತ. ಅದಲ್ಲ, ಇಲ್ಲಿ ನಾನು ಘಟನೆಗಳನ್ನು ಒಂದೊಂದಾಗಿ ಬಿಚ್ಚಿಡ್ತಾ ಇದೀನಿ. ಆರಿಸಿಕೊಳ್ಳುವ ಹಕ್ಕು ಪ್ರೇಕ್ಷಕನಿಗಿದೆ. ಆ ರೀತಿ ಸಿನಿಮಾ ಕಟ್ಟುವ ಕ್ರಮ ಇದೆಯಲ್ಲಾ ಅದನ್ನು ನಾವು ಈಗ ನೋಡ್ತಾ ಇದೀವಿ” ಎಂದು ಅವರು ಇತ್ತೀಚಿನ ಕೆಲವು ಪ್ರಯೋಗಶೀಲ ಸಿನಿಮಾಗಳನ್ನು ಪ್ರಸ್ತಾಪಿಸಿದರು.

ಚಿತ್ರದ ಪ್ರಮುಖ ಪಾತ್ರದಲ್ಲಿ (ಪೆದ್ರೊ) ನಟೇಶ್ ಹೆಗ್ಡೆ ಅವರ ತಂದೆ ಗೋಪಾಲ್ ಹೆಗ್ಡೆ ಅಭಿನಯಿಸಿದ್ದಾರೆ. ನಟ ರಾಜ್‌ ಬಿ. ಶೆಟ್ಟಿ, ರಾಮಕೃಷ್ಣಭಟ್ ದುಂಡಿ, ಮೇದಿನಿ ಕೆಳಮನೆ, ನಾಗರಾಜ್ ಹೆಗ್ಡೆ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಶಿರಸಿ ಬಳಿಯ ಉಮ್ಮಚಿಗಿ ಗ್ರಾಮದ ನಟೇಶ್ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ‘ಕುರ್ಲಿ’, ‘ನಮಗೆ ನಾವು ಗೋಡೆಗೆ ಮಣ್ಣು’ ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ಅವರಿಗೆ ‘ಪೆದ್ರೊ’ ಮೊದಲ ಫೀಚರ್ ಫಿಲ್ಮ್‌. ತಮ್ಮೂರಿನ ಸುತ್ತಮುತ್ತಲೇ ಸಿನಿಮಾ ಚಿತ್ರಿಸಿದ್ದಾರೆ. ಕ್ರಿಶ್ಚಿಯನ್ ಧರ್ಮದ ಎಲೆಕ್ಟ್ರೀಷಿನ್‌ ಆಕಸ್ಮಿಕವೊಂದರಲ್ಲಿ ಗೋವಿನ ಸಾವಿಗೆ ಕಾರಣನಾಗುತ್ತಾನೆ. ಈ ಘಟನೆಯ ನಂತರ ಸುತ್ತಲಿನ ಸಮಾಜ ಅವನನ್ನು ನೋಡುವ ಬಗೆ, ಆತನ ತಳಮಳಗಳನ್ನು ನೂರಾ ಎಂಟು ನಿಮಿಷಗಳ ಸಿನಿಮಾದಲ್ಲಿ ಹಿಡಿದಿಟ್ಟಿದ್ದಾರೆ ನಟೇಶ್‌. ಕತೆ, ಚಿತ್ರಕಥೆ ರಚನೆ ನಟೇಶ್ ಹೆಗ್ಡೆ ಅವರದೆ. ವಿಶೇಷವೆಂದರೆ ಚಿತ್ರದಲ್ಲಿ ಪ್ರತ್ಯೇಕವಾಗಿ ಹಿನ್ನೆಲೆ ಸಂಗೀತ ಬಳಕೆ ಮಾಡಿಲ್ಲ. ಸ್ವಾಭಾವಿಕವಾದ ಸದ್ದೇ ಚಿತ್ರದಲ್ಲಿದ್ದು, ಶ್ರೇಯಾಂಕ್ ನಂಜಪ್ಪ ಧ್ವನಿ ವಿನ್ಯಾಸಕಾರರಾಗಿ ಕೆಲಸ ಮಾಡಿದ್ದಾರೆ. ವಿಕಾಸ್ ಅರಸ್‌ ಛಾಯಾಗ್ರಹಣ ಇದ್ದು, ಪರೇಶ್ ಕಾಮದಾರ್ ಮತ್ತು ನಟೇಶ್ ಹೆಗ್ಡೆ ಸಂಕಲನವಿದೆ.

LEAVE A REPLY

Connect with

Please enter your comment!
Please enter your name here