ಕರ್ಣೇಶ್‌ ಮತ್ತು ಅನುಷ್ಕಾ ಶರ್ಮಾ ತಮ್ಮ Clean Slate Filmz ಸಂಸ್ಥೆಯಡಿ ಮಹಿಳಾ ಪ್ರಧಾನ OTT ಪ್ಲಾಟ್‌ಫಾರ್ಮ್‌ ‘Clean OTT’ ಲಾಂಚ್‌ ಮಾಡಿದ್ದಾರೆ. ಈ ವೇದಿಕೆಯಲ್ಲಿ ಮುಂದಿನ ವರ್ಷದಿಂದ ಕಂಟೆಂಟ್‌ ಸ್ಟ್ರೀಮ್‌ ಆಗಲಿದ್ದು, ಇದು ಜಗತ್ತಿನ ಮೊದಲ ಸ್ತ್ರೀಪ್ರಧಾನ ಓಟಿಟಿ ಎನಿಸಿಕೊಂಡಿದೆ.

ಅಣ್ಣ – ತಂಗಿ ಕರ್ಣೇಶ್‌ ಮತ್ತು ಅನುಷ್ಕಾ ಶರ್ಮಾ ಅವರ ಒಡೆತನದ ಸಂಸ್ಥೆ – ಕ್ಲೀನ್‌ ಸ್ಲೇಟ್‌ ಫಿಲ್ಮ್ಸ್‌. ಈ ಸಂಸ್ಥೆಯಡಿ ವರ್ಷಗಳ ಹಿಂದೆ ‘NH10’, ‘ಪರಿ’ ಹಿಂದಿ ಸಿನಿಮಾಗಳು ತಯಾರಾಗಿದ್ದವು. ಎರಡೂ ಸಿನಿಮಾಗಳಲ್ಲಿ ಅನುಷ್ಕಾ ಶರ್ಮಾ ನಟಿಸಿದ್ದಾರೆ. ನೆಟ್‌ಫ್ಲಿಕ್ಸ್‌ಗಾಗಿ ‘ಬುಲ್‌ಬುಲ್‌’, ಅಮೇಜಾನ್‌ ಪ್ರೈಮ್‌ ವೀಡಿಯೋಗಾಗಿ Clean Slate Filmz ‘ಪಾತಾಳ್‌ ಲೋಕ್‌’ ಸರಣಿ ನಿರ್ಮಿಸಿತ್ತು. ಇದೀಗ ಈ ಸಂಸ್ಥೆ ‘Clean OTT’ ಲಾಂಚ್‌ ಮಾಡಿದೆ. ಇದು ಜಗತ್ತಿನ ಏಕೈಕ ಸ್ತ್ರೀಪ್ರಧಾನ ಒರಿಜಿನಲ್‌ ಕಂಟೆಂಟ್‌ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌’ ಎಂದು ಅವರು ಹೇಳಿಕೊಂಡಿದ್ದಾರೆ. ಮುಂದಿನ ವರ್ಷಾರಂಭದಲ್ಲಿ Clean OTTಯಲ್ಲಿ ಕಂಟೆಂಟ್‌ ಸ್ಟ್ರೀಮ್‌ ಆಗಲಿದೆ. ಸಿನಿಮಾಗಳು, ವೆಬ್‌ ಸರಣಿ, docu-series ಸೇರಿದಂತೆ ಅಂತರಾಷ್ಟ್ರೀಯ ಹಾಗೂ ಪ್ರಾದೇಶಿಕವಾಗಿ ತಯಾರಾದ ವಿವಿಧ ಫಾರ್ಮ್ಯಾಟ್‌ಗಳ ಕಂಟೆಂಟ್‌ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

ಮಹಿಳೆಯರು ಪ್ರಮುಖ ಪಾತ್ರ ನಿರ್ವಹಿಸುವ ಅರ್ಥಪೂರ್ಣ ಕಂಟೆಂಟ್‌ ತಯಾರಿಸುವುದು, ಕಲಾವಿದರು ಮತ್ತು ತಂತ್ರಜ್ಞರ ವಿಚಾರದಲ್ಲಿನ ಪುರುಷ ಪ್ರಧಾನ ಗುರುತುಗಳನ್ನು ಪ್ರಜ್ಞಾಪೂರ್ವಕವಾಗಿ ಮೀರುವುದು, ಮನರಂಜನೆ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆಯರ ಪ್ರತಿಭೆ ಗುರುತಿಸುವುದು ಹಾಗೂ ಅವರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ Clean OTT ಕೆಲಸ ಮಾಡಲಿದೆ ಎಂದು Clean Slate Filmz ಹೇಳಿಕೊಂಡಿದೆ. “ಸ್ತ್ರೀಯರಿಗೆ ಸಂಬಂಧಿಸಿದಂತೆ ಓಟಿಟಿ ವೇದಿಕೆಗಳಲ್ಲಿ ಏಕತಾನತೆಯ ಕಂಟೆಂಟ್‌ ಸ್ಟ್ರೀಮ್‌ ಆಗುತ್ತಿದೆ. ಬಹುಪಾಲು ರೊಮ್ಯಾಂಟಿಕ್‌ ಕಾಮಿಡಿ, ದಬ್ಬಾಳಿಕೆಯ ವಸ್ತು – ವಿಷಯದ ಸುತ್ತ ಸ್ತ್ರೀಯರ ಕತೆ ಹೆಣೆಯುತ್ತಾರೆ. ಇದನ್ನು ಮೀರಿ ಮಹಿಳೆಯರ ಧ್ವನಿಯಾಗಿ, ಅವರ ಸಾಮಾಜಿಕ, ಆರ್ಥಿಕ, ರಾಜಕೀಯ ನಿಲುವುಗಳನ್ನು ಪ್ರತಿನಿಧಿಸಬೇಕಾದ ಅಗತ್ಯತೆ ಇದೆ. ಈ ಹಾದಿಯಲ್ಲಿ Clean OTT ಕೆಲಸ ಮಾಡಲಿದೆ” ಎನ್ನುತ್ತಾರೆ Clean Slate Filmz ನ ಮುಖ್ಯಸ್ಥರಾದ ಕರ್ಣೇಶ್‌ ಶರ್ಮಾ.

Clean Slate Filmz ಮತ್ತು ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಲ ದೇಶಗಳ ನಿರ್ಮಾಣ ಸಂಸ್ಥೆಗಳು ತಯಾರಿಸುವ ಕಂಟೆಂಟ್‌ Clean OTT ಯಲ್ಲಿ ಸ್ಟ್ರೀಮ್‌ ಅಗಲಿದೆ. ಅನುಭವಿ ನಿರ್ದೇಶಕರು ಹಾಗೂ ಬರಹಗಾರರು ಓಟಿಟಿ ಪ್ಲಾಟ್‌ಫಾರ್ಮ್‌ ಜೊತೆ ಗುರುತಿಸಿಕೊಂಡಿದ್ದು, ಯುವ ಪ್ರತಿಭೆಗಳಿಗೆ ಇಲ್ಲಿ ಹೆಚ್ಚು ಅವಕಾಶಗಳಿವೆ. SVOD (subscription video-on-demand) ಮಾಡೆಲ್‌ನಲ್ಲಿ ಸಬ್‌ಸ್ಕ್ರಿಪ್ಶನ್‌ ಇರಲಿದ್ದು, 2023ರ ಮೊದಲ ತ್ರೈಮಾಸಿಕದಲ್ಲಿ ಸಬ್‌ಸ್ಕ್ರಿಪ್ಶನ್‌ ಪ್ಲ್ಯಾನ್‌ಗಳು ಶುರುವಾಗಲಿದೆ. ಸದ್ಯ ಭಾರತಕ್ಕೆ ತನ್ನ ಕಾರ್ಯಚಟುವಟಿಕೆ ಸೀಮಿತಗೊಳಿಸಿಕೊಂಡಿರುವ Clean OTT ಮುಂದಿನ ದಿನಗಳಲ್ಲಿ ಇಂಗ್ಲೆಂಡ್‌, ಅಮೆರಿಕ, ಕೆನಡಾ, ಯುಎಇ ಸೇರಿದಂತೆ ಇತರೆ ದೇಶಗಳಿಗೆ ಕಾರ್ಯಚಟುವಟಿಕೆ ವಿಸ್ತರಿಸಲಿದೆ.

LEAVE A REPLY

Connect with

Please enter your comment!
Please enter your name here