ಎರಡು ಭಾಗಗಳ ಈ ಸರಣಿಯಲ್ಲಿ ಮೊದಲನೆಯದು Modern and Mystic ಮತ್ತು ಎರಡನೆಯದು Nature’s Wonders. ನಿರ್ದೇಶಕ ಪರಮಾಂಗ್ಶು ಮುಖರ್ಜಿ ಇದನ್ನು ಒಂದು ಚೆಂದದ ಕ್ಯಾನ್ವಾಸಿನಲ್ಲಿ ಕೂರಿಸಿದ್ದಾರೆ. – ‘India From Above’ ಸರಣಿ Disneyplus hotstarನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಭಾರತವೆಂದರೆ ಏನೆಲ್ಲ ಮತ್ತು ಏನೇನೆಲ್ಲಾ… ಭಾರತ ಎಂದರೆ ಹಿಮಾಲಯ, ಲೇಹ್, ಲಡಾಕ್‌ಗಳ ಬೆಟ್ಟದ ಹಾದಿ, ಪಾಂಡಿಚೆರಿಯ ವಸುದೈವ ಕುಟುಂಬಕಂ ಎನ್ನುವ ಆರಿವೆಲೆ, ಸೋಮೇಶ್ವರದ ಸಮುದ್ರ, ಮಧುರೆ ಮೀನಾಕ್ಷಮ್ಮನ ದೇವಸ್ಥಾನ, ಗೋವಾದ ಬೆಸಿಲಿಕಾ, ಅಜ್ಮೇರದ ದರ್ಗಾ, ಅಲಹಾಬಾದ್‌ನ ಕುಂಭಮೇಳ, ಗೋವೆಯ ಬಿಂದಾಸ್ ಸಂಜೆಗಳು, ಜುಹುವಿನ ಬೀದಿ ತಿಂಡಿ, ರಾಜಾಸ್ತಾನದ ರಸ್ತೆ ಪಯಣ, ಖುಜರಹೋದ ಮಿಥುನಶಿಲ್ಪಗಳು… ಹೀಗೆ ಪಟ್ಟಿ ಬೆಳೆಸುತ್ತಾ ಹೋಗಬಹುದು.

2020ರಲ್ಲಿ ಬಂದ ಎರಡು ಭಾಗಗಳ ‘ಇಂಡಿಯಾ ಫ್ರಂ ಎಬೋವ್’ ಎನ್ನುವ ಈ ಸರಣಿ ಭಾರತದ ಆಯ್ದ ಭಾಗಗಳ ಮತ್ತು ಆಯ್ದ ಘಟನೆಗಳ ಪಕ್ಷಿನೋಟವನ್ನು ಕೊಡುತ್ತದೆ. ಇಲ್ಲಿ ನಾನು ‘ಆಯ್ದ’ ಎನ್ನುವ ಪದವನ್ನು ಒತ್ತಿ ಹೇಳಲು ಇಷ್ಟಪಡುತ್ತೇನೆ. ಏಕೆಂದರೆ ಇಲ್ಲಿ ಕಂಡು ಬರುವ ಭಾರತದ ಪಕ್ಷಿನೋಟ ಆಸಕ್ತಿ ಕೆರಳಿಸುವಂತಿದ್ದರೂ ಸಮಗ್ರವಲ್ಲ. ಜೊತೆಗೆ ಇದು ಪಕ್ಷಿನೋಟ ಎನ್ನುವ ಮಾತನ್ನೂ ನಾನು ಒತ್ತಿ ಹೇಳಲು ಬಯಸುತ್ತೇನೆ. ಏಕೆಂದರೆ ಇಲ್ಲಿ ಯಾವುದನ್ನೂ ವಿವರವಾಗಿ, ಆಳವಾಗಿ ಚಿತ್ರಿಸಿಲ್ಲ. ಆದರೆ ಈ ಸರಣಿ ಕೊಡುವ ಪಕ್ಷಿನೋಟ ಅಥವಾ ಡ್ರೋನ್ ನೋಟ ಇಲ್ಲಿರುವ ವಿಷಯಗಳಲ್ಲಿ ನಮಗೆ ಬೇಕಾದದ್ದರ ಬಗ್ಗೆ ಇನ್ನೂ ಹುಡುಕಿ, ತಿಳಿದುಕೊಳ್ಳಲು ನಮಗೆ ನೆರವು ನೀಡುತ್ತದೆ. ನ್ಯಾಶನಲ್ ಜಿಯೋಗ್ರಫಿಯ ಈ ಸರಣಿಗೆ ‘ಸ್ಲಂಡಾಗ್ ಮಿಲಿಯನೇರ್’ನ ದೇವ್ ಪಟೇಲ್ ಧ್ವನಿ ನೀಡಿದ್ದಾರೆ.

ಎರಡು ಭಾಗಗಳ ಈ ಸರಣಿಯಲ್ಲಿ ಮೊದಲನೆಯದು Modern and Mystic ಮತ್ತು ಎರಡನೆಯದು Nature’s Wonders. ನಿರ್ದೇಶಕ ಪರಮಾಂಗ್ಶು ಮುಖರ್ಜಿ ಇದನ್ನು ಒಂದು ಚೆಂದದ ಕ್ಯಾನ್ವಾಸಿನಲ್ಲಿ ಕೂರಿಸಿದ್ದಾರೆ. ಏರಿಯಲ್ ಸಿನಿಮಾಟೋಗ್ರಫಿ ಮೂಲಕ ನಾವು ಕಾಣದ ಭಾರತದ ಕಿರುನೋಟವನ್ನುನಮಗಿತ್ತ ಅಭಿಕ್ ವಾಧ್ವಾ ಅವರ ಕೆಲಸಕ್ಕೆ ಮನಸ್ಸು ಮಾರು ಹೋಗುತ್ತದೆ. ಒಂಟೆಗಳ ಕಸರತ್ತು, ಚಿರಾಪುಂಜಿಯ ಹಸಿರಿನ ನಡುವೆ ಯಾರೋ ‘ಇಳಿದು ಬಾ ತಾಯಿ ಇಳಿದು ಬಾ’ ಎಂದು ಕೂಗಿ ಕರೆದ ದನಿಗೆ ಓಗೊಟ್ಟು, ಆಗಸದಿಂದ ಗಂಗೆ ಧುಮುಕಿದ ಪರಿಯನ್ನು ನೆನಪಿಸುವ ಜಲಪಾತಗಳು, ಕಚ್‌ನ ಉಪ್ಪಿನ ಹೊಲಗಳು, ಲಡಾಕ್‌ನ ದುರ್ಗಮ ಬೆಟ್ಟಗಳ ನಡುವಿನ ರಸ್ತೆಗಳು… ಅದಕ್ಕೆ ನೆರವಾಗುವುದು ಕನಿಷ್ಕ ಸೇತ್ ಅವರ ಸಂಗೀತ. ಸರಣಿಯ ಎರಡು ಭಾಗಗಳನ್ನು ಕುರಿತ ಕಿರುಪರಿಚಯವನ್ನು ಇಲ್ಲಿ ನೀಡುತ್ತಿದ್ದೇನೆ.

ಸರಣಿ ಪ್ರಾರಂಭವಾಗುವುದು ಪ್ರಯಾಗದ ಕುಂಭಮೇಳದ ದೃಶ್ಯಗಳಿಂದ. ಗಂಗಾರತಿಯಂತೂ ಜಗತ್ಪ್ರಸಿದ್ಧ, ಆದರೆ ಈ ಸಲ ಆಗಸದಲ್ಲಿ ಡ್ರೋನ್‌ಗಳ ಮೂಲಕ ಇನ್ನೊಂದು ಆರತಿ ನಡೆಯುತ್ತದೆ. ಅದೊಂದು ಮಾಯಾಲೋಕವನ್ನೇ ಸೃಷ್ಟಿಸುತ್ತದೆ. ಅಲ್ಲಿಂದ ಕ್ಯಾಮೆರಾ ನೇರ ಹಾರುವುದು ಡಿಸೆಂಬರ್‌ನಲ್ಲಿ ಗೋವೆಯಲ್ಲಿ ನಡೆಯುವ ‘sunburn festival’ಗೆ. ಏಷ್ಯಾದಲ್ಲೇ ಅತ್ಯಂತ ದೊಡ್ಡ ಹಬ್ಬವಾದ ಇದರ ಬಗ್ಗೆ ಹೆಚ್ಚಿನ ವಿವರಗಳೇನೂ ಸಿಗುವುದಿಲ್ಲ. ಒಂದೆರಡು ದೃಶ್ಯಗಳಲ್ಲೇ ಅದನ್ನು ಅಂದಾಜು ಮಾಡಿಕೊಳ್ಳಬೇಕು. ಅದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಿತ್ತು ಎನ್ನುವ ತಕರಾರಿದೆ. ಮುಂದಿನದ್ದು ವಸಂತ ಋತುವನ್ನು ಸ್ವಾಗತಿಸಲು ನಂದಗಾವ್‌ನಲ್ಲಿ ನಡೆಯುವ ‘ಲಾತ್ ಮಾರ್ ಹೋಲಿ’ಯ ಚಿತ್ರಣ!

ಇದೇನು ‘ಲಾತ್ ಮಾರ್’?! ಇದಕ್ಕೊಂದು ಸುಂದರವಾದ ಹಿನ್ನೆಲೆ ಇದೆ. ಶ್ಯಾಮಲ ವರ್ಣದ ಕೃಷ್ಣ, ರಾಧಿಕೆಯ ಬಿಳಿಬಿಳಿ ಮುಖದ ರಂಗನ್ನು ಬದಲಾಯಿಸಲೆಂದು ಅವಳ ಮುಖದ ಮೇಲೆ ರಂಗನ್ನೆರೆಚಲು ಗೆಳೆಯರೊಂದಿಗೆ ಬರುತ್ತಾನೆ. ರಾಧ ತನ್ನ ಗೆಳತಿಯರೊಡನೆ ಅವರನ್ನು ಸ್ವಾಗತಿಸುತ್ತಾಳೆ, ಹೇಗೆ? ಕೈಯಲ್ಲಿ ದೊಡ್ಡದೊಡ್ಡ ಲಾಠಿಗಳನ್ನು ಹಿಡಿದು! ಈಗಲೂ ರಂಗನ್ನೆತ್ತಿಕೊಂಡು ಬರುವ ಊರಿನ ಪುರುಷರು ತಲೆ ಮೇಲೆ ಅಡ್ಡಕವಚವನ್ನು ಇಟ್ಟುಕೊಂಡು ರಂಗೆರೆಚಲು ಪ್ರಯತ್ನಿಸಿದರೆ, ಊರಿನ ಹೆಣ್ಣುಮಕ್ಕಳು ಚೆಂದವಾಗಿ ಸಿಂಗರಿಸಿಕೊಂಡು ಲಾಠಿ ಹಿಡಿದು ಅವರನ್ನು ಓಡಿಸಲು ಯತ್ನಿಸುತ್ತಾರೆ.

ಗುಜರಾತಿನ ವೇರಾವೇಲ್ ಎನ್ನುವ ಊರಿನಲ್ಲಿ ಮನ್ಸೂರ್ ಖುರೇಶಿ ಎನ್ನುವ ಹಡಗುಗಳನ್ನು ಕಟ್ಟುವವರೊಬ್ಬರಿದ್ದಾರೆ. ಅವರ ವಂಶದವರಿಗೆ ಮಾತ್ರ ಗೊತ್ತಿರುವ ಕಲೆ ಇದು. ಮರದ ಹಲಗೆಗಳಿಂದ ಅವರು ಬೃಹತ್ ಗಾತ್ರದ ಹಡಗುಗಳನ್ನು ಕಟ್ಟುತ್ತಾರೆ. ಅವುಗಳ ತಾಕತ್ತು 40ರಿಂದ 1500 ಟನ್ ತೂಕವನ್ನು ಭರಿಸುವ ಕ್ಷಮತೆ. ಅವರು ಚಿತ್ರೀಕರಣದ ಸಮಯದಲ್ಲಿ ಕಾಣಿಸುವ ಹಡಗನ್ನು 3 ವರ್ಷಗಳಿಂದ ಕಟ್ಟುತ್ತಿದ್ದಾರೆ! ವರ್ಷದ ಒಂದು ಸಮಯದಲ್ಲಿ ನದಿಯ ಭರತ ಏರಿದಾಗ ಅವರ ಹಡಗು ಕಟ್ಟುವ ಕಾರ್ಖಾನೆಯವರೆಗೂ ನೀರು ಬರುತ್ತದೆ. ಅವರ ಮಟ್ಟಿಗೆ ಅದೇ ಡೆಡ್‌ಲೈನ್‌ ಆಗ ಹಡಗನ್ನು ನೀರಿಗಿಳಿಸಿ, ಕಳಿಸಬೇಕು. ಇಲ್ಲವಾದರೆ ಸಾಗಣಿಕೆ ವೆಚ್ಚ ವಿಪರೀತವಾಗುತ್ತದೆ. ಮರದ ಒಂದು ತುಂಡಿನಿಂದ ಪ್ರಾರಂಭವಾಗುವ ಹಡಗಿನ ಆ ಯಾತ್ರೆ ನೀರಿಗಿಳಿಯುವ ತನಕವೂ ನೆಲದ ಮೇಲೆ, ನಂತರ ನೀರಿನ ಮೇಲೆ ಸಾಗುತ್ತದೆ. ಇದು ಪಶ್ಚಿಮದ ಒಂದು ತುದಿಯಾದರೆ, ಅತ್ಯಂತ ಹೆಚ್ಚಿನ ಬಿಸಿಲು ಸುರಿಯುವ ತಮಿಳು ನಾಡಿನ ಕಾಮುಟಿ ಎನ್ನುವಲ್ಲಿ 2500 ಹೆಕ್ಟರ್ ವಿಸ್ತೀರ್ಣದಲ್ಲಿ ಇನ್ನೊಂದು ವ್ಯವಸಾಯ ನಡೆಯುತ್ತಿದೆ. ಅದು ಸೋಲಾರ್ ಫಾರ್ಮ್. ಇದಕ್ಕೆ ಬಳಸುವ ತಾಂತ್ರಿಕತೆ ನವನವೀನವಾದದ್ದು.

ಮುಂದಿನ ಪಯಣ ಲಡಾಕ್ ಲೇಹ್‌ನ ಬೆಟ್ಟಕಣಿವೆಗಳ ಹಾದಿಯಲ್ಲಿನಡೆಯುವ ಖರ್ದುಂಗ್ಲಾ ಮ್ಯಾರಥಾನ್‌ಗೆ. ಬೆಟ್ಟಗಳ ದಾರಿಯಲ್ಲಿ, ಆಮ್ಲಜನಕದ ಪ್ರಮಾಣ ಅರ್ಧಕ್ಕಿಂತ ಹೆಚ್ಚು ಕುಸಿದಾಗ, ಓಡುವುದಿರಲಿ, ನಡಿಯುವುದು ಕೂಡಾ ಸುಲಭವಲ್ಲ. ಜಗತ್ತಿನೆಲ್ಲೆಡೆಯಿಂದ ಓಟಗಾರರು ಇಲ್ಲಿ ಬಂದು ಸೇರುತ್ತಾರೆ. ಕಳೆದ ಎರಡು ವರ್ಷಗಳಿಂದ ಗೆದ್ದಿರುವ ಶಬ್ಬೀರ್ ಹುಸೇನ್‌ಗೆ ಈ ಸಲವೂ ಇದನ್ನು ಗೆಲ್ಲಬೇಕೆನ್ನುವ ಕನಸು. 4 ಹಂತಗಳಲ್ಲಿ ನಡೆಯುವ ಈ ಓಟ ಜೀವನ್ಮರಣದ ಹೋರಾಟವೇ ಸರಿ. ಮೊದಲ ಹಂತದಲ್ಲೇ ಸುಮಾರು 20 ಮೈಲಿಗಳ ಬೆಟ್ಟದ ಏರು ಹಾದಿ. ರಾತ್ರಿಗಳಲ್ಲಿ ಜೊತೆಗೆ ಬರುವ ವಾಹನಗಳ ಬೆಳಕಿನಲ್ಲಿ ಇಕ್ಕಟ್ಟಿನ ರಸ್ತೆಗಳಲ್ಲಿ ಓಟ. ಒಂದು ಬದಿಗೆ ಆಳವಾದ ಕಂದರ.

ಮುಂದಿನ ಚಿತ್ರ ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ಒಂದು ಸಲಾಮ್ ಹೇಳುವಂಥದ್ದು. ಗಿರ್ ಅರಣ್ಯ ಪ್ರಾಂತ್ಯದಲ್ಲಿ ಬೆಟ್ಟದ ಮೇಲೆ ಒಂದು ಏಕಾಕಿ ಶಿವನ ದೇಗುಲ. ಅಲ್ಲಿಗೆ ಒಬ್ಬ ಪೂಜಾರಿ. ಆತ ದೇವಸ್ಥಾನ ಬಿಟ್ಟು ಊರಿಗೆ ಹೋಗುವುದಿಲ್ಲ. ಅಲ್ಲಿಗೆ ಬರುವ ಭಕ್ತಾದಿಗಳು ತರುವ ದಿನಸಿ, ಕಾಡಿನ ಹಣ್ಣುಗಳು ಪೂಜಾರಿಯ ಆಹಾರ. 5 ವರ್ಷಗಳಿಗೊಮ್ಮೆ ಮಾತ್ರ ದೇವಸ್ಥಾನದ ಫಾಸಲೆಯಿಂದ ಹೊರಗೆ ಬರುವ ಪೂಜಾರಿ ತೆರಳುವುದು ಮತಗಟ್ಟೆಗೆ, ಚುನಾವಣೆಯ ಸಂದರ್ಭದಲ್ಲಿ ಮಾತ್ರ. ಈ ಪೂಜಾರಿಗಾಗಿಯೇ ಒಂದು ಪೂಲಿಂಗ್ ಬೂತ್, ಅದಕ್ಕಾಗಿ ಸಿಬ್ಬಂದಿ.. ಮಹಾಂತ ಬಂದು ಓಟು ಹಾಕಿದ ಮೇಲೆ, ಸಿಬ್ಬಂದಿ ಸೆಲ್ಫಿ ತೆಗೆದುಕೊಂಡು ಅಲ್ಲಿಂದ ವಾಪಸ್!
ನಂತರ ದೆಹಲಿಯ ಗಣರಾಜ್ಯೋತ್ಸವದ ಪೆರೇಡ್. ಅಲ್ಲಿನ ವಿಶೇಷ ಒಂಟೆಗಳ ಪರೇಡ್. ಅಲ್ಲಿಂದ ನೇರ ಹಾರುವುದು ಆ ಒಂಟೆಗಳಿಗೆ ತರಬೇತಿ ನೀಡುವ ರಾಜಸ್ಥಾನದ ಮರಳುಗಾಡಿಗೆ. ದೇಶದಲ್ಲಿ ಅಲ್ಲಿ ಮಾತ್ರ ಒಂಟೆಗಳ ದಳ ಇದೆ. ಅವುಗಳ ತರಬೇತಿ, ಕೋ ಆರ್ಡಿನೇಶನ್ ಎಲ್ಲವೂ ನೋಡಲು ಸೊಗಸು.

ಇದು ಮೊದಲ ಭಾಗ. ಇನ್ನು ಎರಡನೆಯ ಭಾಗದಲ್ಲಿ :

ಇದು ಗುಜರಾತಿನ ರಣ್‌ನಲ್ಲಿನ ಉಪ್ಪು ವ್ಯವಸಾಯದ ಕಥೆ. ರಣ್ ಎಂದರೆ ಮರುಭೂಮಿ. ಒಂದು ಕಾಲದಲ್ಲಿ ಇಲ್ಲಿದ್ದ ಸಮುದ್ರದ ನೀರೆಲ್ಲಾ ಇಂಗಿ ಭೂಮಿಯ ಒಡಲಿನೊಳಗೆ ಈಗ ಉಪ್ಪಿನ ಕಡಲು. ವರ್ಷದ ಒಂದು ಕಾಲದಲ್ಲಿ ಮಳೆಯ ನೀರು ಮಣ್ಣಿನೊಳಗೆ ಇಂಗಿ, ಆ ಉಪ್ಪನ್ನು ಕರಗಿಸುತ್ತದೆ. ಆ ನೀರನ್ನು ಮೇಲೆಕ್ಕೆಳೆದುಕೊಳ್ಳುವ ಅಗರಿಯಾ ಸಮುದಾಯದ ಜನ ಅದನ್ನು ಮಣ್ಣಿನಲ್ಲಿ ಪಾತಿ ಕಟ್ಟಿ ಬಿಡುತ್ತಾರೆ. ಅಂದಹಾಗೆ ಅಗರ್ ಎಂದರೆ ಉಪ್ಪು. ಸುಮಾರು 50 ಡಿಗ್ರಿಗಳಷ್ಟು ಏರುವ ತಾಪಮಾನದಲ್ಲಿ ನೀರು ಆವಿಯಾದ ಹಾಗೆಲ್ಲಾ ಪಾತಿಕಟ್ಟಿದ ನೆಲದ ಮೇಲೆ ಉಳಿಯುವುದು ಬೆಳ್ಳನೆಯ ಕಲ್ಲುಪ್ಪು. ಗುಜರಾತ್‌ನ ರಣ್ ಪೂರಾ ಈ ಬಿಳಿಬಿಳಿ ಮರಳ್ಗಾಡು. ಇಲ್ಲಿ ತಯಾರಾಗುವ ಉಪ್ಪು ದೇಶದ 3/4 ಉಪ್ಪಿನ ಬೇಡಿಕೆಯನ್ನು ಪೂರೈಸುತ್ತದೆ ಎಂದು ಈ ಸಾಕ್ಷ್ಯಚಿತ್ರ ಹೇಳುತ್ತದೆ.

ರಾಜಾಸ್ತಾನದ ಒಂದು ಊರು ಖಿಚನ್. ಇಲ್ಲಿ ವರ್ಷಕ್ಕೊಮ್ಮೆ ದೇವಲೋಕದ ಅತಿಥಿಗಳು ಬರುತ್ತಾರೆ! ಅವು ನೀಳಕೊರಳಿನ ಡೆಮೋಸೆಲ್ ಕೊಕ್ಕರೆಗಳು. ಪ್ರತಿ ವರ್ಷದ ಸೆಪ್ಟೆಂಬರ್‌ನಲ್ಲಿ ಮಂಗೋಲಿಯದಿಂದ, ಹಿಮಾಲಯವನ್ನು ದಾಟಿ ಬರುವ ಈ ನೂರಾರು ಹಕ್ಕಿಗಳೊಳಗೆ ಜೀಪಿಎಸ್ ಇಟ್ಟವರ್ಯಾರು?! ಊರಿನಲ್ಲಿ ಭನ್ವರ್ ರಾಮ್ ಎನ್ನುವ ಮುತ್ತಜ್ಜ ಪ್ರತಿ ವರ್ಷ ಬರುವ ಹಕ್ಕಿಗಳಿಗಾಗಿ ಅಂಗಳದ ತುಂಬಾ ಧಾನ್ಯಗಳನ್ನು ತುಂಬುತ್ತಾರೆ. ಅವರಂತೆ ಅನೇಕರು ಈ ಸೇವೆಯಲ್ಲಿ ತೊಡಗುತ್ತಾರೆ. ಈ ಹಳ್ಳಿಯಲ್ಲಿ ಇದಕ್ಕಾಗಿ ಪ್ರತಿ ವರ್ಷ ಬಳಕೆಯಾಗುವ ಧಾನ್ಯ ಸುಮಾರು 1,30,000 ಕೇಜಿ! ಇದೆಲ್ಲಾ ಹಕ್ಕಿಗಳ ಭೋಜನಕ್ಕಾಗಿಯೆಂದೇ ದಾನವಾಗಿ ಬಂದ ಕಾಳುಗಳು. ಅಷ್ಟು ಹಕ್ಕಿಗಳು ಒಂದಾಗಿ ಬಂದು, ನೆಲದ ಮೇಲೆ ಇಳಿಯುವುದನ್ನು ನೋಡುವುದೇ ಒಂದು ಖುಷಿ. ‘ಇವೆಲ್ಲಾ ಹೋದಮೇಲೆ ಹಳ್ಳಿ ಪೂರ್ತಿ ಖಾಲಿ, ಅವುಗಳ ಸದ್ದಿಲ್ಲ, ಓಡಾಟ ಇಲ್ಲ’ ಎಂದು ಅಜ್ಜ ಕನವರಿಸುವಾಗ ನನಗೆ ನೆನಪಾದದ್ದು ನಮ್ಮ ಕೊಕ್ಕರೆ ಬೆಳ್ಳೂರಿನಲ್ಲಿ ಜನ ಹೀಗೆ ಕೊಕ್ಕರೆಗಳನ್ನು ಕಾದು ಆರೈಕೆ ಮಾಡುವ ಪ್ರೀತಿ…

ಅಂತಹ ಇನ್ನೂ ಹಲವು ವಿಶೇಷಗಳಿರುವ ಸಾಕ್ಷ್ಯಚಿತ್ರ ಇದು. 3500 ಮೆಟ್ಟಿಲುಗಳ ಚಿತ್ತಾರದ ಬಾವಿ, ಮಣಿಪುರದ ತೇಲುವ ಶಾಲೆ, ಕೇರಳದ ಮೀನುಗಾರರು ಸಮುದ್ರದ, ಮೋಡದ ದನಿಯನ್ನು ಆಲಿಸುವ ರೀತಿ, ಚಿರಾಪುಂಜಿಯ ಬೇರುಗಳ ಸೇತುವೆ, ಮಧ್ಯ ಪ್ರದೇಶದ ಭೋಡಾಘಾಟ್‌ನ ಮೆದು ಶಿಲೆಯ ಬೆಟ್ಟಗಳು, BSFನ ಮಹಿಳಾ ಸೆಂಟ್ರಿಗಳ ಬೆಟಾಲಿಯನ್… ಎಲ್ಲವೂ ಆಸಕ್ತಿ ಕೆರಳಿಸುತ್ತವೆ. ಮೊದಲೇ ಹೇಳಿದ ಹಾಗೆ, ಇದು ಸಮಗ್ರ ಭಾರತದ ಚಿತ್ರಣ ಅಲ್ಲ. ಇದು ಕೇವಲ ‘ಚೆಂದ’ವಾದದನ್ನೇ ಆಯ್ದು, ಮತ್ತಷ್ಟು ಚೆಂದಗೊಳಿಸಿ ತೆಗೆದ ಚಿತ್ರ. ನೋಡಬೇಕಾ ಎಂದರೆ ಖಂಡಿತಾ ಹೌದು, ಇದು ಮತ್ತು ಇದಷ್ಟು ಮಾತ್ರವೇ ಸತ್ಯವಲ್ಲ ಎನ್ನುವ ಎಚ್ಚರವನ್ನು ಮನಸ್ಸಿನಲ್ಲಿಟ್ಟುಕೊಂಡು ನೋಡಬೇಕಾದ ಸಾಕ್ಷ್ಯಚಿತ್ರ ಇದು. ಗಾಲೀಬನ ಕವಿತೆಯ ಸಾಲುಗಳೊಂದಿಗೆ ಬರವಣಿಗೆ ಮುಗಿಸುತ್ತೇನೆ :
ಹಮ್ ಕೋ ಮಾಲೂಮ್ ಹೈ ಜನ್ನತ್ ಕಿ ಹಕೀಕತ್ ಲೇಕಿನ್
ದಿಲ್ ಕೊ ಖುಶ್ ರಖ್ ನೆ ಕೊ ‘ಗಾಲಿಬ್’ ಏ ಖಯಾಲ್ ಅಚ್ಛಾ ಹೈ!

LEAVE A REPLY

Connect with

Please enter your comment!
Please enter your name here