ಇದು ಲೇಯರ್ ಬೈ ಲೇಯರ್ ಬಿಚ್ಚಿಕೊಳ್ತಾ ಹೋಗುವ ನಿರೂಪಣೆ. ಈರುಳ್ಳಿ ಸಿಪ್ಪೆಯ ಹಾಗೆ. ಎಲೆಕೋಸಿನ ಹಾಗೆ. ಇನ್ನೊಂದು ಮತ್ತೊಂದು ಬಿಡಿಸಿದಷ್ಟೂ ಒಳಗೊಂದೊಂದೇ ಹೊಸ ಹಾಳೆ. ಅಲ್ಲಿ ಹೊಸದೇ ಕತೆ! ‘ಸುಝಲ್- ದಿ ವರ್ಟಿಕ್ಸ್’ ಸರಣಿ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಅಬ್ಬಾ. ಇದು ತಮಿಳು ನೆಲದಲ್ಲಿ ಹುಟ್ಟಿದ ಇಂಡಿಯಾನಾ ಜೋನ್ಸ್ ಥರದ ಥ್ರಿಲ್ಲರ್ ಸರಣಿ. ಇದು ಲೀಡ್, ಇದು ಕ್ಲೈಮ್ಯಾಕ್ಸ್, ಇವನು ಅಪರಾಧಿ, ಇವನು ಆ ಕಾಣದ ಕೈ ಅಂತ ನಾವು ಊಹಿಸಲು ಪೂರ್ಣ ಅವಕಾಶ ಕೊಟ್ಟು ಥಟ್ ಅಂತ ಅದನ್ನು ಸುಳ್ಳಾಗಿಸಿ ಮತ್ತೆ ಹೊಸ ಟ್ವಿಸ್ಟ್ ಕೊಡುತ್ತಾ ಹೋಗುವ ರೋಚಕ ತಿರುವುಗಳ ಕತೆ. ಇದು ಲೇಯರ್ ಬೈ ಲೇಯರ್ ಬಿಚ್ಚಿಕೊಳ್ತಾ ಹೋಗುವ ನಿರೂಪಣೆ. ಈರುಳ್ಳಿ ಸಿಪ್ಪೆಯ ಹಾಗೆ. ಎಲೆಕೋಸಿನ ಹಾಗೆ. ಇನ್ನೊಂದು ಮತ್ತೊಂದು ಬಿಡಿಸಿದಷ್ಟೂ ಒಳಗೊಂದೊಂದೇ ಹೊಸ ಹಾಳೆ. ಅಲ್ಲಿ ಹೊಸದೇ ಕತೆ!

ಒಂದು ಚಿಕ್ಕ ಊರು, ದೊಡ್ಡ ಫ್ಯಾಕ್ಟರಿ. ದೈವವನ್ನು ನಂಬುವ ಜನ, ಜಾತ್ರೆ! ಫ್ಯಾಕ್ಟರಿ ಸುಟ್ಟುಹೋಗುತ್ತದೆ. ಅವತ್ತೇ 15ರ ಹುಡುಗಿ ಕಾಣೆಯಾಗುತ್ತಾಳೆ. ಫ್ಯಾಕ್ಟರಿ ಸುಟ್ಟುಹೋದದ್ದಕ್ಕೆ ಮೊದಲು ಕಾಣುವ ಕತೆಯೇ ಬೇರೆ, ಕಾರಣವೇ ಬೇರೆ. ಹುಡುಗಿ ಕಾಣೆಯಾದದ್ದಕ್ಕೂ. ಪಾತ್ರಗಳೂ ಅಷ್ಟೆ. ಒಂದೇ ಕ್ಯಾರೆಕ್ಟರ್ ಅದರ ಕ್ಯಾರೆಕ್ಟರೈಸೇಷನ್ ಎಲ್ಲವೂ ನಮ್ಮ ತಲೆಯಲ್ಲಿ ಗಟ್ಟಿಯಾಗಿ ಕೂತ ಮೇಲೆ ಕತೆಯ ತಿರುವು ಕ್ಯಾರೆಕ್ಟರಿನ ಇನ್ನೊಂದು ಮುಖ ತೋರಿಸುತ್ತದೆ. ಮನಸ್ಸು ಮಾಡಿದ್ದರೆ ಇದೇ ಕತೆಯನ್ನು ಯಾವುದಾದರೂ ದೊಡ್ಡ ನಗರದ ಹಿನ್ನೆಲೆಯಲ್ಲಿ ಚಿತ್ರೀಕರಿಸಿದ್ದರೆ ಇದು ಜಗತ್ತಿನ ಯಾವ ಭಾಷೆಗೂ ಅನ್ವಯಿಸಬಹುದಾದ ಕತೆಯಾಗುತ್ತಿತ್ತು.

ತಮಿಳು ಕತೆಗಳ ಹೆಗ್ಗಳಿಕೆ ಏನೆಂದರೆ ಅವರು ಎಲ್ಲ ಕತೆಗಳಲ್ಲೂ ನೆಲದ ಗುಣ ಉಳಿಸಿಕೊಳ್ಳುತ್ತಾರೆ. ಈ ಇಡೀ ಕತೆಯ, ನಿರೂಪಣೆಯ ಹಿನ್ನೆಲೆಯಲ್ಲಿ ಸ್ಥಳೀಯರು ನಂಬುವ ನವರಾತ್ರಿಯ ಮಾದರಿಯ ಮಾಯಕೊಲ್ಲಮ್ ಎಂಬ ದೇವತಾ ಹಬ್ಬವೊಂದನ್ನು ಜೋಡಿಸಿಕೊಳ್ಳಲಾಗಿದೆ. ಆ ಹಬ್ಬ ಮೊದಲ ದಿನ ಎರಡನೇ ದಿನಾ ನಡೆಯುತ್ತಾ ಇಲ್ಲಿ ಕತೆಯೂ ಅರಳುತ್ತಾ ಹೋಗುತ್ತದೆ. ಹಬ್ಬದ ಕಡೆಯ ದಿನವೇ ಕತೆ ಕ್ಲೈಮ್ಯಾಕ್ಸ್. ಅಲ್ಲಿಯೂ ದುಷ್ಟಧಮನ ಮತ್ತು ಇಲ್ಲಿಯೂ. ಜೋಡಿಸುವಿಕೆ ಸಿಕ್ಕಾಪಟ್ಟೆ ಇಷ್ಟವಾಯ್ತು. ಮತ್ತು ಕತೆ ತಾನೂ ಬಿಚ್ಚಿಕೊಳ್ತಾ ಪಾತ್ರಗಳ ಮನೋಲೋಕವೂ ಬಿಚ್ಚಿಕೊಳ್ತಾ ಹೋಗ್ತದೆ. ಈ ಕತೆಯ ಒಟ್ಟು ಸಾಗುವಿಕೆ ಹೇರ್ಪಿನ್ ತಿರುವುಗಳ ಹಾಗನಿಸುತ್ತದೆ.

ಒಂದು ಪುಟ್ಟ ಊರಲ್ಲಿ ಇಷ್ಟೆಲ್ಲ ಘಟನೆಗಳು, ನಮಗೆ ಚೆನ್ನಾಗಿ ಗೊತ್ತು ಅಂದುಕೊಂಡವರೇ ಹೊಸಮನುಷ್ಯರಾಗಿ ಕಾಣುವುದರ ಬಗ್ಗೆ ಅಚ್ಚರಿಪಡುತ್ತಾನೆ ಸಕ್ಕರೈ (ಇನ್ಸ್ಪೆಕ್ಟರ್) . ನಂದಿನಿ ಪಾತ್ರದ ಐಶ್ವರ್ಯದು ಬಾಕ್ಸ್ ತೋರಿಸುತ್ತಾರೆ. ಅದು ಒಂದು ಕಡೆಯಿಂದ ಚತುರ್ಭುಜವೂ ಬದಿಯಿಂದ ಷಡ್ಬುಜವೂ ಆಗಿರುತ್ತದೆ. ಅದನ್ನು ತೋರಿಸಿ ಮನುಷ್ಯರೂ ಹೀಗೆ ಅನ್ನುವ ಉದಾಹರಣೆ ಮನಮುಟ್ಟುತ್ತದೆ. ಆದರೆ ಅವಳು ಕೊಟ್ಟ ಉದಾಹರಣೆ ಅವಳೇ ಆಗಿಬಿಡೋದಿದೆಯಲ್ಲ. ಅದು ಕತೆಯ ರೋಚಕತೆ. ಹೆಂಡತಿಯ ಪ್ರೇಮವನ್ನು ಗಂಡನೇ ಒಪ್ಪುತ್ತಾನೆ. ಅವಳು ಅವನೊಂದಿಗೆ ಖುಷಿಯಾಗಿದ್ದಾಳೆ. ಇರಲಿ ಅನ್ನುತ್ತಾನೆ. ಮನೆ ಬಿಟ್ಟು ಆಶ್ರಮಕ್ಕೆ ಹೋಗಿದ್ದ ಪಾತ್ರ ಮತ್ತೆ ಸಂಸಾರಕ್ಕೆ ಮರಳುವುದನ್ನು ಆಕೆ ತನ್ನ ಸೀರೆಯ ಬಣ್ಣ ಬದಲಿಸುವ ಮೂಲಕ ರೂಪಕವಾಗಿ ಹೇಳುವುದು, 15ರ ಹರೆಯದ ಪ್ರೇಮಿಗಳು, ಅವರ ತುಂಟತನ, ದೊಡ್ಡವರ ಆಸೆ, ದುರಾಸೆ, ನಿರಾಸೆ, ಬಲಿ, ಅಬ್ಬಾ..

ಈ ಸೀರೀಸ್ ಭಾವುಕತೆ ಮತ್ತು ಬುದ್ದಿವಂತಿಕೆಯ ಗುಚ್ಛ! ಗಾಯತ್ರಿ ಮತ್ತು ಪುಷ್ಕರ್ ಎಂಬ ಕಥಾಪ್ರತಿಭೆಗಳಿಗೆ ಹ್ಯಾಟ್ಸಾಫ್ ಹೇಳಲೇಬೇಕು. ಸಂಗೀತ ಕೂಡ ಚೆನ್ನಾಗಿದೆ. ಕಪ್ಪುಬಟ್ಟಲು ಕಂಗಳ ಹುಡುಗ ಕತಿರ್ ಪೋಲೀಸ್ ಆಫೀಸರ್‌ ಆಗಿ, ಶ್ರೇಯಾ ರೆಡ್ಡಿ, ಐಶ್ವರ್ಯಾ, ಪರ್ತಿಭಟ್ ಎಲ್ಲರೂ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಇದು ಖಂಡಿತವಾಗಿ ಈ ವರ್ಷದ ಯಶಸ್ವೀ ಸೀರೀಸ್‍ಗಳಲ್ಲೊಂದು. ಬಹುಶಃ ಅಗ್ರಸ್ಥಾನ ಪಡೆಯಬಹುದಾದ್ದು!

LEAVE A REPLY

Connect with

Please enter your comment!
Please enter your name here