ಕನ್ನಡ ಚಿತ್ರನಿರ್ಮಾಪಕ ರಮೇಶ್ ರೆಡ್ಡಿ ಅವರ ‘ದಿಲ್ ಹೈ ಗ್ರೇ’ ಹಿಂದಿ ಸಿನಿಮಾ ಜುಲೈನಲ್ಲಿ ತೆರೆಕಾಣಲಿದೆ. ಸುಸಿ ಗಣೇಶನ್ ನಿರ್ದೇಶನದ ಸೈಬರ್ ಕ್ರೈಂ – ಥ್ರಿಲ್ಲರ್ ಸಿನಿಮಾದ ನಾಯಕಿಯಾಗಿ ಊರ್ವಶಿ ರೌಟೇಲಾ ನಟಿಸಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ‘ಉಪ್ಪು ಹುಳಿ ಖಾರ’, ‘ನಾತಿಚರಾಮಿ’, ‘ಪಡ್ಡೆಹುಲಿ’, ‘100’, ‘ಗಾಳಿಪಟ 2’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಎಂ.ರಮೇಶ್ ರೆಡ್ಡಿ ಅವರ ಹಿಂದಿ ಚಿತ್ರವಿದು. ತಮ್ಮ ಸೂರಜ್ ಪ್ರೊಡಕ್ಷನ್ಸ್ನಡಿ ಅವರು ‘ದಿಲ್ ಹೈ ಗ್ರೇ’ ಸಿನಿಮಾ ನಿರ್ಮಿಸಿದ್ದು, ಸಿನಿಮಾ ಜುಲೈನಲ್ಲಿ ತೆರೆಕಾಣಲಿದೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾ. ಪ್ರಧಾನ ಮೂರು ಪಾತ್ರಗಳ ಹಿನ್ನೆಲೆಯಲ್ಲಿ ಸಿನಿಮಾದ ಕತೆ ಇರುತ್ತದೆ. ವಿನೀತ್ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾಣಿಸಿಕೊಂಡರೆ, ಅಕ್ಷಯ್ ಅವರಿಗೆ ಆನ್ಲೈನ್ನಲ್ಲಿ ಯುವತಿಯರನ್ನು ಬಲೆಗೆ ಬೀಳಿಸಿಕೊಳ್ಳುವ ಕಿಡಿಗೇಡಿ ಪಾತ್ರವಿದೆ. ‘ಐರಾವತ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಈ ಚಿತ್ರದ ಹಿರೋಯಿನ್.
ಸುಸಿ ಗಣೇಶನ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ತಾರಿಕ್ ಮಹಮ್ಮದ್, ನವೀನ್ ಪ್ರಕಾಶ್ ಚಿತ್ರಕಥೆಯಲ್ಲಿ ನೆರವಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡುವ ರಮೇಶ್ ರೆಡ್ಡಿ, “ಈ ಸಿನಿಮಾದಲ್ಲಿ ಕತೆಯೇ ಹೀರೋ. ಕ್ರೈಂ ಥ್ರಿಲ್ಲರ್ ಎಳೆಯಲ್ಲಿ ಸಾಗುವ ಸಿನಿಮಾ ಪ್ರಸ್ತುತ ಕಾಲಘಟ್ಟಕ್ಕೆ ಸೂಕ್ತವಾಗಿ ಹೊಂದಿಕೆಯಾಗುತ್ತದೆ. ಇಂಥ ಸಿನಿಮಾ ಕಟ್ಟಿಕೊಡುವಲ್ಲಿ ನಿರ್ದೇಶಕರು ಮತ್ತವರ ತಂಡ ಯಶಸ್ವಿಯಾಗಿದೆ. ಸದ್ಯ ಬಹುತೇಕ ಕೆಲಸಗಳು ಮುಕ್ತಾಯದ ಹಂತದಲ್ಲಿದ್ದು, ಜುಲೈನಲ್ಲಿ ತೆರೆಗೆ ಬರಲಿದ್ದೇವೆ” ಎನ್ನುತ್ತಾರೆ. “ಇಡೀ ಜಗತ್ತೇ ಆನ್ಲೈನ್ ಮಯವಾಗಿದೆ. ಆ ಆನ್ಲೈನ್ನಿಂದ ಅನುಕೂಲಗಳೆಷ್ಟಿವೆಯೋ ಅಷ್ಟೇ ಅನಾನುಕೂಲಗಳೂ ಇವೆ. ನಾವಿಲ್ಲಿ ಇಂಟರ್ನೆಟ್ನಿಂದ ಮಹಿಳೆಯರು ಎದುರಿಸುವ ಆತಂಕಕಾರಿ ಸಮಸ್ಯೆಗಳನ್ನು ತೋರಿಸಿದ್ದೇವೆ. ಸೈಬರ್ ಕ್ರೈಂನ ಮತ್ತೊಂದು ಮುಖ ಅನಾವರಣಗೊಳ್ಳಲಿದೆ” ಎನ್ನುತ್ತಾರೆ ಚಿತ್ರದ ನಿರ್ದೇಶಕ ಸುಸಿ ಗಣೇಶನ್.