ಚಿತ್ರದಲ್ಲಿ ಹಲವಾರು ತರ್ಕಕ್ಕೆ ಮೀರುವ ಘಟನೆಗಳು, ಸನ್ನಿವೇಶಗಳು ಇವೆ, ಆದರೆ ಚಿತ್ರದ ಕಾವ್ಯಾತ್ಮಕ ಭಾಷೆ ಅದೆಲ್ಲವನ್ನೂ ಮರೆಸುತ್ತದೆ. ಹೊಸತನದ ಮತ್ತು ಹೊಸರೀತಿಯ ಚಿತ್ರ ಎನ್ನುವ ಕಾರಣಕ್ಕಾಗಿ ಇದು ನೋಡಬೇಕಾದ ಚಿತ್ರವಾಗುತ್ತದೆ. ‘Cobalt Blue’ ಹಿಂದಿ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಅದೊಂದು ನಡುರಾತ್ರಿ ಅವನ ಪ್ರೀತಿ, ನಿದ್ರಿಸುತ್ತಿದ್ದ ಅವನ ಬೆರಳುಗಳಿಂದ ತನ್ನ ಕೈ ಬಿಡಿಸಿಕೊಂಡು ಹೊರಟು ಹೋಗಿಬಿಡುತ್ತದೆ. ಹೋಗುವಾಗ ಅವನ ಕತ್ತಿನ ಮೇಲೊಂದು ನೀಲಿ ಗುರುತು ಬರೆದಿಟ್ಟು ಹೋಗುತ್ತದೆ. ಅದರ ಭಾರ ಹೊತ್ತೇ ಬದುಕುತ್ತಾನೆ ಅವನು ಉಳಿದ ಬದುಕನ್ನು. Cobalt Blue ಒಂದು ರೀತಿಯಲ್ಲಿ ಪ್ರೀತಿಯ ಕಥೆ, ಇನ್ನೊಂದು ರೀತಿಯಲ್ಲಿ ಪಿತೃಪ್ರಧಾನ ವ್ಯವಸ್ಥೆ ಮತ್ತು ರೂಢಿಗತ ನಂಬಿಕೆಗಳ ಎದಿರು ಒಬ್ಬ ಸಲಿಂಗ ಸಂಬಂಧಿ ಯುವಕ, ಮನೆಯವರು ಹೊರೆಸುವ ನಿರೀಕ್ಷೆಗಳ ಹೊರೆ ಹೊರಲು ನಿರಾಕರಿಸುವ ಒಬ್ಬ ಯುವತಿ, ತನ್ನ ಬಯಕೆಗಳಿಗೆ ವಿರುದ್ಧವಾಗಿ ಬಲವಂತದಿಂದ ನನ್ ಆದ ಒಬ್ಬ ಕ್ರಿಶ್ಚಿಯನ್ ಯುವತಿ, ಸಲಿಂಗ ಸಂಬಂಧದ ಕಾರಣಕ್ಕೆ ತಂದೆಯ ಒಪ್ಪಿಗೆಯ ಮೇಲೆಯೇ ದಿನಗಟ್ಟಲೆ ಎಲೆಕ್ಟ್ರಿಕ್ ಶಾಕ್ಗೆ ಗುರಿಯಾದ, ಈಗ ಅಧ್ಯಾಪಕನಾಗಿರುವ ಒಬ್ಬಾತ ಎಲ್ಲರೂ ಎತ್ತುವ ಬಂಡಾಯದ ಬಿಗಿಮುಷ್ಟಿಯೂ ಹೌದು. ಮೇಲ್ಪದರದಲ್ಲಿ ಇದು ಪ್ರೀತಿಯ ಕಥೆಯಂತೆ ಕಂಡರೂ ಇದರೊಳಗೆ ಅಂತಸ್ಥವಾಗಿರುವುದು ಪ್ರತಿಭಟನೆ. ಈ ಪ್ರತಿಭಟನೆಗೆ ವೇಗವರ್ಧಕವಾಗಿ ಬರುವವನು ಒಬ್ಬ ಅನಾಮಿಕ ಕಲಾವಿದ.
ಈ ಕಥೆ ನಡೆಯುವುದು ಕೇರಳದ ಕೊಚ್ಚಿಯ ಹಸಿರಿನ ನಡುವೆ. ಚಿತ್ರದ ಕಾಲ, ಸಲಿಂಗ ಸಂಬಂಧ ಇನ್ನೂ ಕ್ರಿಮಿನಲ್ ಅಪರಾಧವೇ ಆಗಿದ್ದ ಆರ್ಟಿಕಲ್ 377 ರ ಸಮಯ. ಅಲ್ಲಿ ಹಾದಿಬೀದಿಯಲ್ಲಿ ಬಣ್ಣಗಳ ಚಂಡೆಮದ್ದಳೆ. ಮನೆಯ ಹಿತ್ತಲಿನಲ್ಲಿ ಒಂದು ಮುದ್ದಾದ ಕೊಳ. ಮನೆಗಳಲ್ಲಿ ಬಣ್ಣ ತುಂಬಿದ ಮರದ ಗೊಂಬೆಗಳು. ಚಿತ್ರದ ಮೂರು ಪಾತ್ರಗಳು ಮೂರು ಪ್ರಾಥಮಿಕ ಬಣ್ಣಗಳ ಮೂಲಕ ನಮ್ಮೆಡೆಗೆ ಬರುತ್ತಾರೆ. ಕೆಂಪು ಬಣ್ಣದ ಅಂಗಿ ತೊಟ್ಟ ಅಧ್ಯಾಪಕ, ಹಸಿರು ಅಂಗಿಯ ವಿದ್ಯಾರ್ಥಿ ತನಯ್ ಮತ್ತು ನೀಲಿ ಬಣ್ಣದ ಸೈಕಲ್ ಏರಿ ಬರುವ ಆ ಕಲಾವಿದ. ಈ ಮೂರು ಪ್ರಾಥಮಿಕ ಬಣ್ಣಗಳ ಮಿಲನ ಮತ್ತು ಮಿಶ್ರಣ ಮತ್ತೂ ಅನೇಕ ವರ್ಣಗಳನ್ನು ಹುಟ್ಟಿಸುತ್ತಾ ಹೋಗುತ್ತದೆ. ಇಡೀ ಚಿತ್ರದಲ್ಲಿ ಬಣ್ಣ ಹಾಗು ಕವಿತೆ ಎರಡೂ ಮೌನವಾಗಿಯೇ ಮಾತನಾಡುತ್ತವೆ, ಕಥೆಯನ್ನು ಮುನ್ನಡೆಸುತ್ತವೆ.
ಸಲಿಂಗ ಸಂಬಂಧದ ಚಿತ್ರಗಳಿರಲಿ, ಕಥೆಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದ ನಮ್ಮಲ್ಲಿ, ಈ ಸಂಬಂಧ ಹಾಸ್ಯವಾಗಿಯೋ, ಅತಿರೇಕವಾಗಿಯೋ ಕಾಣಿಸಿಕೊಂಡಿರುವುದೇ ಹೆಚ್ಚು. ಇಲ್ಲಿ ಈ ಸಂಬಂಧ ಆ ಯಾವುದೇ ಆಸರೆ ಇಲ್ಲದೆ ತಾನೇತಾನಾಗಿ ರಂಗದ ಮೇಲೆ ಬರುತ್ತದೆ. ಸಚಿನ್ ಕುಡೇಲ್ಕರ್ ಅವರ ಮರಾಠಿ ಕಾದಂಬರಿಯನ್ನು ಆಧರಿಸಿದ ಚಿತ್ರ ಇದು. ಅವರೇ ನಿರ್ದೇಶಿಸಿದ ಚಿತ್ರವೂ ಹೌದು. ಈ ಚಿತ್ರಕ್ಕೊಂದು ಹೊಸ ಧ್ವನಿ ಇದೆ, ಹೊಸ ಚಿತ್ರಭಾಷೆ ಇದೆ, ಇಡೀ ಚಿತ್ರದಲ್ಲಿ ಸಿದ್ಧಸೂತ್ರಗಳನ್ನು ಮೀರಿದ ಹೊಸತನ ಇದೆ. ಆ ಕಾರಣಕ್ಕಾಗಿ ಈ ಚಿತ್ರ ಮುಖ್ಯವಾಗುತ್ತದೆ. ಈ ಚಿತ್ರ ‘Call me by your name’ ಎನ್ನುವ ಸಲಿಂಗಸಂಬಂಧದ ಚಿತ್ರವನ್ನು ನೆನಪಿಸುತ್ತದೆ ಎನ್ನುವ ಮಾತು ಸಹ ಇದೆ. ಆದರೆ ನಾನು ಆ ಚಿತ್ರವನ್ನು ಇನ್ನೂ ನೋಡಿಲ್ಲವಾಗಿ ಅದಕ್ಕೆ ಹೋಲಿಸಿ ಬರೆಯಲಾರೆ.
ಕೊಚ್ಚಿಯಲ್ಲಿ ನೆಲೆಸಿರುವ ಒಂದು ಮರಾಠಿ ಕುಟುಂಬ. ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳು. ಅಪ್ಪ ಇಡೀ ಕುಟುಂಬವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳ ಬಯಸುವವ ಮತ್ತು ಅದಕ್ಕಾಗಿ ಧರ್ಮ ಮತ್ತು ಸಂಪ್ರದಾಯಗಳನ್ನು ಬಳಸಿಕೊಳ್ಳುವವನು. ಅವನನ್ನು ಟೈಂ ಮಶೀನಿನಲ್ಲಿ ಕೂರಿಸಿ ಒಂದು 30 ವರ್ಷಗಳು ಹಿಂದೆ ಹೋದರೆ ಹೇಗಿದ್ದನೋ ಅವನ ದೊಡ್ಡ ಮಗ ಈಗ ಹಾಗಿದ್ದಾನೆ. ಥೇಟ್ ಅಪ್ಪನದೇ ಪಡಿಯಚ್ಚು. ಅಮ್ಮನಿಗೆ ಹೊಂದಿಕೊಂಡು ಬದುಕಿದರೇನೇ ಸುಖ ಎನ್ನುವುದನ್ನು ಅಪ್ಪ ಮತ್ತು ಅವನ ಅಪ್ಪ ಇಷ್ಟು ವರ್ಷಗಳಲ್ಲಿ ಸರಿಯಾಗಿ ‘ಕಲಿಸಿ’ದ್ದಾರೆ. ಎರಡನೆಯ ಮಗ ತನಯ್. ಯಾವಾಗಲೂ ಯಾವುದೋ ಲೋಕದಲ್ಲಿರುವವನು, ಫುಟ್ ಬಾಲ್ ಆಡುವ ಗಂಡು ಹುಡುಗರನ್ನು ಆಸೆ ಕಣ್ಣುಗಳಿಂದ ನೋಡುವವನು, ತನ್ನ ಒಬ್ಬ ಅಧ್ಯಾಪಕನೊಂದಿಗೆ ಲೇಸಾಗಿ ಫ್ಲರ್ಟ್ ಮಾಡುವವನು, ಕಪಾಟಿನೊಳಗೆ ಮಾಯಶ್ಚರೈಸರ್, ಡಿಯೋಡರೆಂಟ್ ಇಟ್ಟುಕೊಂಡವನು. ಅವನ ನಡೆನುಡಿಯಲ್ಲಿ ಒಂದು ಲಾಲಿತ್ಯ ಇದೆ. ಮಗಳು ಅನುಜಾ, ಹಾಕಿ ಆಟದಲ್ಲಿ ಕೇರಳವನ್ನು ಪ್ರತಿನಿಧಿಸಿದವಳು. ಹೆಣ್ಣುಮಕ್ಕಳ ಅಲಂಕಾರ, ಸೀರೆ ಇವೆಲ್ಲವುಗಳಿಂದ ದೂರ.
ಇವರ ಮನೆಯ ಮಹಡಿಯ ಕೋಣೆಗೆ ಪೇಯಿಂಗ್ ಗೆಸ್ಟ್ ಆಗಿ ಬರುವ ಕಲಾವಿದ ಪ್ರತೀಕ್ ಬಬ್ಬರ್. ಅವನು ಚಿತ್ರ ಬಿಡಿಸುತ್ತಾನೆ, ಲ್ಯಾಂಪ್ ಶೇಡ್ ತಯಾರಿಸುತ್ತಾನೆ, ಫೋಟೋಗ್ರಫಿ ಮಾಡುತ್ತಾನೆ, ಆರ್ಟ್ ಇನ್ಸ್ಟಾಲೇಶನ್ ಮಾಡುತ್ತಾನೆ ಮತ್ತು ಬಂದ ಕೂಡಲೆ ತನಯ್ನನ್ನು ಇನ್ನಿಲ್ಲದಂತೆ ಸೆಳೆಯುತ್ತಾನೆ. ಮನೆಗೆ ಹೆಜ್ಜೆಯಿಟ್ಟ ಕೂಡಲೆ ನೀಲಿ ಬಣ್ಣದಲ್ಲಿ ತನ್ನ ಕೈ ಮುಳುಗಿಸಿ ಮನೆಯ ಗೋಡೆಯ ಮೇಲೆ ಅವನು ಮೂಡಿಸುವ ಬೆರಳ ಗುರುತು ತನಯ್ನ ಮೇಲೆ ಬಿದ್ದಿರುತ್ತದೆ. ಅವನ ಕುತ್ತಿಗೆಯ ಹತ್ತಿರಕ್ಕೆ ಮೆಲ್ಲಗೆ ಸರಿಯುವ ತನಯ್ ಅವನ ಪರಿಮಳವನ್ನು ಆಘ್ರಾಣಿಸಿ ಎದೆಗಿಳಿಸುವ ದೃಶ್ಯ ಮನೋಹರವಾಗಿ ಮೂಡಿಬಂದಿದೆ. ಅಂತಹ ಸುಮಾರು ದೃಶ್ಯಗಳು ಕವಿತೆಯ ಹಾಗೆ ಚಿತ್ರದುದ್ದಕ್ಕೂ ಇವೆ, ಜೊತೆಗೆ ಕವಿತೆಗಳೂ ಇವೆ!
ಇವರಿಬ್ಬರ ನಡುವೆ ಸಂಬಂಧ ಬೆಳೆಯುತ್ತಿದೆ. ಆ ದೃಶ್ಯಗಳನ್ನು ಸಹ ಅತ್ಯಂತ ಸಹಜವಾಗಿ ಪ್ರಕೃತಿಯ ನಡುವೆ ಚಿತ್ರಿಸಿದ್ದಾರೆ. ’No offences, no defences…a tale that I will never tell…..the morning dew is cobalt blue’ – ಕೋಬಾಲ್ಟ್ ನೀಲಿ ಬಣ್ಣ ಮುಂಜಾನೆಯ ಮಂಜಿನ ಹನಿಯಂತೆ, ಮೋಹಕ ಆದರೆ ಕ್ಷಣಿಕ. ಆ ಕಲಾವಿದನ ಪಾತ್ರಕ್ಕೆ ಒಂದು ಗೂಢತೆ ಇದೆ. ಅವನು ಮನೆಗೆ ಬರದಿರುವ ರಾತ್ರಿಗಳಿವೆ, ಅವನು ಉತ್ತರ ಕೊಡದಿರುವ ಪ್ರಶ್ನೆಗಳಿವೆ, ಊಟಕ್ಕೆ ಕೂತಾಗ ಅವನು ಎದ್ದುಹೋಗಿ ಮಾತನಾಡಿ ಬರುವ ಟೆಲಿಫೋನ್ ಕರೆಗಳಿವೆ. ಮತ್ತು ಅವನ ಕೋಣೆಯಲ್ಲಿನ ಹಲವು ಚಿತ್ರಗಳ ನಡುವೆ ಅವನಮ್ಮ ಸ್ಮಿತಾ ಪಾಟಿಲ್ ಚಿತ್ರ ಇರುವುದು, ಕೇರಳದಲ್ಲಿ ನಡೆಯುವ ಮದುವೆಯಲ್ಲಿ ವಾದ್ಯದವರು ’ಭಾಗ್ಯಲಕ್ಷ್ಮಿ ಬಾರಮ್ಮ’ ಎಂದು ಪುರಂದರ ದಾಸರ ಕೀರ್ತನೆ ನುಡಿಸುವುದು ಅನಿರೀಕ್ಷಿತ ಬೋನಸ್ಗಳು!
ತನಯ್ ಪಾತ್ರ ಮಾಡಿರುವ ನೀಲಿ ಮೆಹಂದಳೆ ನಿರಾಯಾಸವಾಗಿ ತಮ್ಮ ಪಾತ್ರ ನಿಭಾಯಿಸಿದ್ದಾರೆ. ಕಥೆಗೊಂದು ತಿರುವು ಸಿಗುವುದು ಅನುಜಾ ಆ ಕಲಾವಿದನೊಂದಿಗೆ ನಡುರಾತ್ರಿಯಲ್ಲಿ ಓಡಿಹೋದಾಗ. ತನಯ್ಗೆ ಅದೊಂದು ನಂಬಲಾಗದ ಆಘಾತ. ಹೋದಂತೆಯೇ ಆ ಹುಡುಗಿ ಸ್ವಲ್ಪ ದಿನಗಳಲ್ಲೇ ವಾಪಸ್ ಬಂದುಬಿಡುತ್ತಾಳೆ. ಅಷ್ಟು ದಿನ ತನಯ್ಗೆ ಒಂದು ದೂರದ ಆಸೆ ಇರುತ್ತದೆ, ತನ್ನ ಪ್ರೇಮಿ ತಂಗಿಯ ಜೊತೆಗೆ ಹೋಗಿರಲಿಕ್ಕಿಲ್ಲ ಎಂದು. ಆದರೆ ಆತ ಹೋಗಿದ್ದು ಹೌದು ಮತ್ತು ಅವರಿಬ್ಬರ ನಡುವೆ ಸಂಬಂಧ ಇದ್ದದ್ದು ಹೌದು ಎನ್ನುವಾಗ ಅವನ ಕಣ್ಣುಗಳಲ್ಲಿ ಕಣ್ಣೀರು ಸುರಿಯುತ್ತದೆ. ಆದರೆ ಹಾಗೆ ಆ ಕಲಾವಿದ ತಂಗಿಯ ಜೊತೆ ಹೋಗುವ ಕಾರಣ ಅಥವಾ ಅದಕ್ಕೆ ಪೂರಕವಾಗುವ ಯಾವುದೇ ದೃಶ್ಯ ಚಿತ್ರದಲ್ಲಿ ಇಲ್ಲ ಎನ್ನುವುದು ಬರವಣಿಗೆಯ ಮಿತಿ ಆಗುತ್ತದೆ.
ಅನುಜಾಗೆ ಇಬ್ಬರು ಗೆಳತಿಯರು. ಒಬ್ಬಾಕೆ ಬುಲೆಟ್ ಓಡಿಸುವ ಮುಸ್ಲಿಂ ಹೆಣ್ಣುಮಗಳು, ಇನ್ನೊಬ್ಬಳು ನನ್. ದೃಶ್ಯವೊಂದರಲ್ಲಿ ಪೀರಿಯಡ್ಸ್ ಆಗಿ ಬಟ್ಟೆ ಕಲೆಯಾಗಿರುವ ಅನುಜಾಳನ್ನು ಆ ಇಬ್ಬರು ಗೆಳತಿಯರು ಬೈಕ್ನಲ್ಲಿ ಕರೆದುಕೊಂಡು ಹೋಗುವ ದೃಶ್ಯ ಮುಚ್ಚಟೆಯಾಗಿದೆ. ಆಗ ನನ್ ಜೊತೆ ಚರ್ಚಿಗೆ ಹೋಗುವ ಅನುಜಾ ಬಟ್ಟೆ ಬದಲಾಯಿಸಿಕೊಳ್ಳುತ್ತಾಳೆ. ಆಗ ನನ್ ಕಪಾಟು ತೆಗೆದರೆ ಅಲ್ಲಿ ಆಕೆ ತನ್ನ ಚಿತ್ರದೊಂದಿಗೆ ಸಿನಿಮಾ ನಟ ನಾಗಾರ್ಜುನನ ಚಿತ್ರ ಅಂಟಿಸಿಕೊಂಡಿರುತ್ತಾಳೆ! ಮುಂದೊಮ್ಮೆ ಅನುಜಾಳಿಗೆ ನಿನ್ನ ಭವಿಷ್ಯಕ್ಕಾಗಿ ನೀನು ಯಾವ ರಿಸ್ಕ್ ತೆಗೆದುಕೊಂಡರೂ ನಾನು ನಿನ್ನೊಂದಿಗಿರುತ್ತೇನೆ. ನಿನ್ನ ಬದುಕು ನನ್ನ ಬದುಕಿನ ರೀತಿ ಆಗಬಾರದು ಎಂದು ಅತೀವ ಕಳಕಳಿಯಿಂದ ಹೇಳುವ ನನ್ ಮುಖದಲ್ಲಿ ಅದೆಷ್ಟು ನೋವಿರುತ್ತದೆ…
ಬಿಡಿಬಿಡಿ ಪಾತ್ರಗಳೂ ಹೀಗೆ ಕಥೆ ಹೇಳುತ್ತವೆ. ಹಾಗೆ ಕಥೆ ಹೇಳುವ ಇನ್ನೊಂದು ಪಾತ್ರ ತನಯ್ನ ಅಧ್ಯಾಪಕನದು. ಅವರಿಬ್ಬರ ನಡುವೆ ಒಂದು ಅನಿರ್ವಚನೀಯ ಸಂಬಂಧ ಬೆಳೆಯುತ್ತಿರುತ್ತದೆ. ಆ ಕಲಾವಿದನೊಂದಿಗೆ ತನಯ್ ಸಂಬಂಧ ಶುರು ಆದಮೇಲೆ ಆತ ಆ ಅಧ್ಯಾಪಕನನ್ನು ದೂರ ಸರಿಸುತ್ತಾನೆ. ತಂಗಿ ವಾಪಸ್ ಬಂದ ಮೇಲೆ, ಪ್ರೇಮಿಯ ಮೇಲಿನ ಸಿಟ್ಟಿನ ರೊಚ್ಚಿನಿಂದ ಎನ್ನುವಂತೆ ಹೋಗಿ ಆ ಅಧ್ಯಾಪಕನನ್ನು ಕೂಡುತ್ತಾನೆ, ಆದರೆ ಖಾಲಿಯಾಗಿಯೇ ಉಳಿಯುತ್ತಾನೆ. ಅಧ್ಯಾಪಕನ ಪಾತ್ರದಲ್ಲಿ ನೀಲ್ ಭೂಪಾಳಂ ಎದೆ ಕರಗಿಸುವ ಅಭಿನಯ ನೀಡುತ್ತಾರೆ. ’ನನ್ನ ಪ್ರೇಮಿ ಒಬ್ಬ ಹೆಣ್ಣಿನ ಜೊತೆಗೆ ಓಡಿಹೋಗಿದ್ದಾನೆ’ ಎಂದು ತನಯ್ ವಿಲಪಿಸುವಾಗ ಆತ ಹೇಳುವುದು ’women take away every man you love’ …ಅವನ ದುಃಖ ಅದೆಷ್ಟು ಆಳವಾಗಿರಬಹುದು. ಕಾಮದ ವಿಷಯ ಪಕ್ಕಕ್ಕಿಡು, ಒಂದು ಸ್ನೇಹಕ್ಕಾಗಿ, ಸಾಹಚರ್ಯಕ್ಕಾಗಿ ಅದೆಷ್ಟು ಒದ್ದಾಡುವೆ ಗೊತ್ತೆ ಎಂದು ಅವನು ನಿಟ್ಟುಸಿರಿಡುತ್ತಾನೆ. ‘Drink every drop you get, but don’t make any plans with your lover’ – ಇದು ಸಹ ಈ ಚಿತ್ರದಲ್ಲೆ ಬರುವ ಕವಿತೆಯ ಒಂದು ಸಾಲು. ಇಂತಹ ಹಲವಾರು ಸಾಲುಗಳು ಚಿತ್ರವನ್ನು ಕಾವ್ಯಮಯವಾಗಿಸುತ್ತದೆ.
ಅವರ ಮೇಲೆ ಸಮಾಜ ಹೇರಿರುವ ಬಂಧನವನ್ನು ತನಯ್ ಮತ್ತು ಅನುಜಾ ಇಬ್ಬರೂ ತಮ್ಮದೇ ಆದ ರೀತಿಯಲ್ಲಿ ಬಿಡಿಸಿಕೊಳ್ಳುತ್ತಾರೆ. ತನಯ್ ಅಧ್ಯಾಪಕನಿಂದ ಒಂದು ಲೆಟರ್ ಹೆಡ್ ಪಡೆದು, ಫೇಕ್ ಪತ್ರ ಸೃಷ್ಟಿಸಿಕೊಂಡು, ಯಾವುದೋ ಸಾಹಿತ್ಯಿಕ ಕ್ಲಬ್ ಹೆಸರಿನಲ್ಲಿ ಮನೆ ಬಿಟ್ಟರೆ, ಅನುಜಾ ಹಾಕಿ ತರಬೇತುದಾರಳ ಕೆಲಸ ಸಂಪಾದಿಸಿಕೊಂಡು ಮನೆಯಿಂದ ಓಡುತ್ತಾಳೆ. ಅವಳನ್ನು ಮನೆಯಿಂದ ಕರೆದುಕೊಂಡು ಹೋಗುವುದು ಅದೇ ಮುಸ್ಲಿಂ ಗೆಳತಿ. ಅವಳ ಕೈಲಿ ಅಮ್ಮ ಹೇರಿರುವ ಎಲ್ಲಾ ಒಡವೆಗಳನ್ನು ಬಿಚ್ಚು ಕೊಟ್ಟು ಹಡಗೇರುವ ಅನುಜಾ ಆ ಮಟ್ಟಿಗೆ ಮುಕ್ತಳಾಗುತ್ತಾಳೆ. ಅವಳು ನೋಡಲಿ ಎಂದೆ ತನಯ್ ಅವಳ ಬ್ಯಾಗಿನಲ್ಲಿ ತನ್ನ ಹಾಗು ಆ ಕಲಾವಿದನ ಖಾಸಗಿ ಚಿತ್ರಗಳನ್ನು ಇಟ್ಟಿರುತ್ತಾನೆ. ಹಾಗಾದರೆ ಅವಳು ಆ ನೆನಪಿನಿಂದಲೂ ಮುಕ್ತಿ ಪಡೆದಳೆ? ಗೊತ್ತಿಲ್ಲ..
ಚಿತ್ರದಲ್ಲಿ ಹಲವಾರು ತರ್ಕಕ್ಕೆ ಮೀರುವ ಘಟನೆಗಳು, ಸನ್ನಿವೇಶಗಳು ಇವೆ, ಆದರೆ ಚಿತ್ರದ ಕಾವ್ಯಾತ್ಮಕ ಭಾಷೆ ಅದೆಲ್ಲವನ್ನೂ ಮರೆಸುತ್ತದೆ. ಜೊತೆಗೆ ಚಿತ್ರದ ವಸ್ತು ಮತ್ತು ಅದರ ನಿರ್ವಹಣೆಯಲ್ಲಿನ ನಾವಿನ್ಯತೆ ಸಹ ಚಿತ್ರದ ಪರವಾಗಿ ಕೆಲಸ ಮಾಡುತ್ತದೆ. ಹೊಸತನದ ಮತ್ತು ಹೊಸರೀತಿಯ ಚಿತ್ರ ಎನ್ನುವ ಕಾರಣಕ್ಕಾಗಿ ಇದು ನೋಡಬೇಕಾದ ಚಿತ್ರವಾಗುತ್ತದೆ.