ಈ ಸರಣಿ ಮಾಹಿತಿಪೂರ್ಣ ಎನ್ನುವುದಂತೂ ನಿಜ. ಇಂತಹ ಸರಣಿಗಳ ಯಶಸ್ಸಿಗೆ ಇನ್ನೊಂದು ಮನೋವೈಜ್ಞಾನಿಕ ಕಾರಣವೂ ಇರಬಹುದು. ಈ ಡಾಕ್ಯುಡ್ರಾಮ ಆಸಕ್ತಿಯಿಂದ ನೋಡಿಸಿಕೊಂಡು ಹೋಗುತ್ತದೆ ಎನ್ನುವುದಂತೂ ಸುಳ್ಳಲ್ಲ. ‘Money Mafia’ ಸರಣಿ ಡಿಸ್ಕವರಿ ಪ್ಲಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಡಿಸ್ಕವರಿ ಚಾನೆಲ್ – ಮಕ್ಕಳು ಟಿವಿ ನೋಡುತ್ತಾ ಕೂತರೆ ಸಿಡಿಮಿಡಿಗೊಳ್ಳುತ್ತಾ, ಅದು ಡಿಸ್ಕವರಿ ಚಾನೆಲ್ ಎಂದರೆ ಇದ್ದಿದ್ದರಲ್ಲಿ ಸಮಾಧಾನಗೊಳ್ಳುತ್ತಾ ಇದ್ದ ಸಮಯವೂ ಒಂದಿತ್ತು! ಆದರೆ ಈಗ ಅದೇ ಡಿಸ್ಕವರಿ ಚಾನೆಲ್ ಸಹ ಮಾರುಕಟ್ಟೆಯ ಅಘೋಷಿತ ನಿಯಮಗಳಿಗೆ ಸಜ್ಜಾಗಿ, ಸಿಂಗಾರ ಮಾಡಿಕೊಂಡು, ಬಂಗಾರ ಹಾಕಿಕೊಂಡು ಓಟಿಟಿ ಮಾರುಕಟ್ಟೆಗೆ ಲಗ್ಗೆಯಿಟ್ಟು, ಅಂಗಡಿ ತೆರೆದು ಕೂತಿದೆ. 2020ರ ಮಾರ್ಚ್‌ನಲ್ಲಿ ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ಪ್ರಾರಂಭವಾದ ಇದು ನಂತರ ಯುರೋಪಿಗೆ ಕೈಚಾಚಿ, ಜನವರಿ 2021ರ ಸುಮಾರಿಗೆ ಅಮೇರಿಕಾದಲ್ಲೂ ತನ್ನ ಹೆಜ್ಜೆಯನ್ನಿಟ್ಟಿತು.

ಭಾರತದಲ್ಲಿ ಇದರ ಪ್ರಾರಂಭಿಕ ಚಂದಾ ಹಣ ವರ್ಷಕ್ಕೆ 299 ರೂಗಳು ಮಾತ್ರ. ತನ್ನಲ್ಲಿ ಈಗಾಗಲೇ ಇದ್ದ ಅಪಾರ ಮತ್ತು ವಿಭಿನ್ನ ಕಂಟೆಂಟ್ ಜೊತೆಗೆ ಭಾರತಕ್ಕೆಂದೇ ಹೊಸ ವಸ್ತುಗಳನ್ನಿಟ್ಟುಕೊಂಡು ಇದು ಡಾಕ್ಯುಮೆಂಟರಿ ಮತ್ತು ಡಾಕ್ಯೂಡ್ರಾಮಾಗಳನ್ನು ರೂಪಿಸುತ್ತಿದೆ. ಅತಿ ಶ್ರೀಮಂತ ವಧುಗಳು ತಮ್ಮ ವಿವಾಹದ ಬಟ್ಟೆ ಆರಿಸುವ, ಸೆಲೆಬ್ರಿಟಿಗಳು ಅಡಿಗೆ ಕಾರ್ಯಕ್ರಮದಲ್ಲಿ ಬಿಸಿನೀರು ಕಾಯಿಸಿ ಹೆಮ್ಮೆ ಪಡುವಂತಹ ವೈನೋದಿಕ ಕಾರ್ಯಕ್ರಮಗಳ ನಡುವೆ ಅನೇಕ ನೋಡಬೇಕಾದಂತಹ ಕಂಟೆಂಟ್ ಸಹ ಇಲ್ಲಿದೆ. ನಾವು ನೋಡದ ಭಾರತ, ಭುಜ್‌ನ ಭೂಕಂಪ, ಕುಂಭ ಮೇಳ, ಇತಿಹಾಸದ ಸೂಕ್ಷ್ಮಗಳು, ಮರೊಡೋನ ಬದುಕು …ಹೀಗೆ ಹುಡುಕಿದಷ್ಟೂ ಒಳ್ಳೆಯ ಕಾರ್ಯಕ್ರಮಗಳು ಸಿಗುತ್ತವೆ.

ಈ ವೇದಿಕೆಯಲ್ಲಿ ಎರಡು ಸೀಸನ್‌ಗಳಲ್ಲಿ ಬಂದ ಕಾರ್ಯಕ್ರಮ Money Mafia. ಭಾರತದ ಮಣ್ಣಿನಲ್ಲಿ ನಡೆದ ಆರ್ಥಿಕ ಅಪರಾಧಗಳು ಈ ಸರಣಿಯ ಸಾಮಾನ್ಯ ಕಥಾವಸ್ತು. ಒಂದು ಘಟನೆಯನ್ನು ಹೊರತು ಪಡಿಸಿದರೆ ಮಿಕ್ಕೆಲ್ಲಾ ಪ್ರಕರಣಗಳಲ್ಲೂ ಬಹುತೇಕ ಭಾದೆಗೊಳಗಾದವರು ಭಾರತೀಯರೇ. ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡು ಒಂದಿಷ್ಟು ಬುದ್ಧಿವಂತರು ಹೂಡುವ ಹೂಟಕ್ಕೆ ಜನ ಬಲಿಯಾಗುತ್ತಾರೆ. ಅವೆಲ್ಲಕ್ಕೂ ಒಂದು ಸಾಮಾನ್ಯ ಮೋಡಸ್ ಆಪರೆಂಡಿ ಇರುತ್ತದೆ, ಮೊದಲಿಗೆ ಜನರ ವಿಶ್ವಾಸ ಗಳಿಸುವುದು, ಅವರನ್ನು ನಂಬಿಸುವುದು, ಆಮೇಲೆ ಅವರಾಗಿಯೇ ಅವರ ಹಣವನ್ನು ಇವರಿಗೆ ಒಪ್ಪಿಸುವಂತೆ ಮಾಡುವುದು.

ಕೇರಳದ ಪಾಪ್ಯುಲರ್ ಫೈನಾನ್ಸ್ ಮೋಸಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ ಒಬ್ಬರು ಹೀಗೆ ಹೇಳುತ್ತಾರೆ, ’ನಮ್ಮ ಕಡೆ ಜನ ನಿಮ್ಮ ಪ್ರೈವೇಟ್ ಜೆಟ್, ಹಡಗು, ಕೋಟ್ಯಾಂತರ ರೂಗಳ ಕಾರು, ಗಡಿಯಾರ ಇದೆಲ್ಲಾ ನೋಡಿ ಬಲೆಗೆ ಬೀಳುವುದಿಲ್ಲ ಸರ್. ನೀವು ನಮ್ಮ ಚರ್ಚಿಗೆ ಬರಬೇಕು, ಸಣ್ಣಪುಟ್ಟ ಸಾಮಾಜಿಕ ಕಾರ್ಯಕ್ರಮಗಳಲ್ಲಿ, ಉತ್ಸವಗಳಲ್ಲಿ ಭಾಗಿಯಾಗಬೇಕು, ಆಗ ಜನರಿಗೆ ನಿಮ್ಮ ಬಗ್ಗೆ ನಂಬಿಕೆ ಕುದುರುತ್ತದೆ.’ ನನಗೆ ಹೌದಲ್ಲ ಅನ್ನಿಸಿತು. ಯಾವುದೇ ಮತ, ಧರ್ಮ, ಜಾತಿಗೆ ಸೇರಿರಲಿ – ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೋಸಗಾರರು ಒಂದು ರೆಡಿಮೇಡ್ ಗುಡ್‌ವಿಲ್ ಹಿಡಿದುಕೊಂಡೇ ಬರುತ್ತಾರೆ. ಭಕ್ತರಿಗಿಂತಾ ಮೊದಲು ಅದು ಈ ಗಂಟುಕಳ್ಳರಿಗೆ ಅರ್ಥವಾಗಿಬಿಟ್ಟಿದೆ! ಮೃದುವಾದ ಮಾತು, ಗೌರವಪೂರ್ಣ ನಡೆನುಡಿ ಮತ್ತು ಅಪಾರವಾದ ಆತ್ಮವಿಶ್ವಾಸ ಈ ಎಲ್ಲಾ ಗಂಟುಕಳ್ಳರ ಮೂಲ ಬಂಡವಾಳ.

ಹೀಗೆ ಅನೇಕ ಮೋಸದಾಟಗಳನ್ನು, ಮೋಸದ ಸ್ಕೀಂಗಳನ್ನು, ಕಾಲ್ ಸೆಂಟರ್ ಹುನ್ನಾರಗಳನ್ನು, ಆನ್ಲೈನ್ ಮೋಸಗಳನ್ನು ಈ ಸರಣಿ ಡಾಕ್ಯುಮೆಂಟರಿಯ ಸ್ವರೂಪದಲ್ಲಿ ಕಟ್ಟಿಕೊಡುತ್ತದೆ. ಇದಕ್ಕೆ ಪೂರಕವಾಗಿ ಇವುಗಳಲ್ಲಿ ಮೋಸಕ್ಕೊಳಗಾದವರು, ಆ ಕ್ಷೇತ್ರದ ಅನುಭವಿಗಳು, ವಕೀಲರು, ಸರ್ಕಾರಿ ಅಧಿಕಾರಿಗಳು, ಪೋಲಿಸರು, ತನಿಖಾಧಿಕಾರಿಗಳು ಎಲ್ಲರ ನೆರವನ್ನೂ ಪಡೆಯುತ್ತಾರೆ. ಇದು ಆ ಮೋಸದ ಸಂಪೂರ್ಣ ವರದಿ ಎನ್ನುವಂತಿಲ್ಲ, ಒಂದೊಂದು ಪ್ರಕರಣವೂ ಒಂದು ಎಪಿಸೋಡ್‌ಗೆ ಮಾತ್ರ ಸೀಮಿತವಾಗಿರುವುದರಿಂದ ಇಲ್ಲಿ ಆಯಾ ಪ್ರಕರಣದ ಮುಖ್ಯಾಂಶಗಳನ್ನು ಮಾತ್ರ ಕೊಡಲಾಗುತ್ತದೆ. ಇದು ಒಂದು ರೀತಿಯಲ್ಲಿ ಪ್ರಕರಣದ ಪರಿಚಯ ಮತ್ತು ಸಂಕ್ಷಿಪ್ತ ವಿವರ ಎಂದು ಹೇಳಬಹುದು.

ಮೊದಲ ಸೀಸನ್‌ನ ಮೊದಲ ಪ್ರಕರಣ ನಮ್ಮ ಬೆಳಗಾವಿಯವರೇ ಆದ ಕರೀಂಲಾಲ್ ತೆಲಗಿಯದು. ಆಗ ತನಿಖಾಧಿಕಾರಿಯಾಗಿದ್ದವರು ಆರ್ ಶ್ರೀಕುಮಾರ್ ಅವರು. ಖಾನಾಪುರ ರೈಲ್ವೆನಿಲ್ದಾಣದಲ್ಲಿ ಹಣ್ಣು ಮಾರುತ್ತಿದ್ದ ತೆಲಗಿ ದೇಶದ ಆರ್ಥಿಕ ವ್ಯವಸ್ಥೆಗೆ ಸೆಡ್ಡು ಹೊಡೆಯುವ ಮಟ್ಟದಲ್ಲಿ ಬೆಳೆಯಲು ಅವನ ನೆರವಿಗೆ ಅದೇ ವ್ಯವಸ್ಥೆಯ ಪ್ರತಿನಿಧಿಗಳು ಹೇಗೆ ನೆರವಾದರು ಎನ್ನುವುದನ್ನು ಕೆಲವು ಸಲ ನೇರವಾಗಿ, ಕೆಲವು ಸಲ ಸೂಚ್ಯವಾಗಿ ಡಾಕ್ಯುಮೆಂಟರಿ ಹೇಳುತ್ತದೆ.

ಎರಡನೆಯ ಪ್ರಕರಣ ಸ್ಮಾರ್ಟ್ ಫೋನ್ ಹೊಂದಿರುವ ಬಹುತೇಕರಿಗೆ ಒಂದಲ್ಲ ಒಂದು ಸಂದರ್ಭದಲ್ಲಿ ಎದುರಾಗಿರಬಹುದಾದ ಫಿಶಿಂಗ್‌ಗೆ ಸಂಬಂಧಿಸಿದ್ದು. ನಿಮ್ಮ ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆ, ನಿಮ್ಮ ಅಕೌಂಟ್ ನಂಬರ್, ನೀವು ನಿಮ್ಮ ಮೊಬೈಲ್‌ನಲ್ಲಿ ಒತ್ತುವ ಯಾವುದೋ ಒಂದು ಲಿಂಕ್ ನಿಮ್ಮನ್ನು ನೇರ ಈ ಲೂಟಿಕಾರರ ಗುರಿಯಾಗಿಸಿ ಬಿಡಬಹುದು. ಈ ಇಡೀ ಮೋಸದ ಜಾಲದ ಕೇಂದ್ರ ಭಾಗ ಮೇವತ್, ಭರತ್ ಪುರ್ ಮತ್ತು ಮಥುರಾ. ಅಲ್ಪಸ್ವಲ್ಪ ಓದಿರುವವರು, ಒಂದು ಮೊಬೈಲ್, ಹಲವಾರು ಸಿಮ್‌ಕಾರ್ಡ್‌ಗಳನ್ನಿಟ್ಟುಕೊಂಡು ಆಡುವ ಈ ಆಟ ಒಂದು ಸುಲಭವಾದ ಮತ್ತು ಸರಳವಾದ ಜೂಜು.

ಹಾಗೆ ಆಡುವವರು ಸಹ ಇದರಿಂದ ವೈಭವೋಪೇತ ಜೀವನ ನಡೆಸುತ್ತಿರುವ ಹಾಗೂ ಕಾಣುವುದಿಲ್ಲ. ಹಾಗಾದರೆ ಈ ಹಣವೆಲ್ಲ ಎಲ್ಲಿಗೆ ಹೋಗುತ್ತದೆ? ಇದು ಹಣ ತೆಗೆದುಕೊಂಡು ಮಾಡುವ ಮೋಸವಾದರೆ, ಇತ್ತೀಚಿನ ದಿನಗಳಲ್ಲಿ ಹಣ ಕೊಟ್ಟು ಮಾಡುವ ಸುಲಿಗೆ ಶುರುವಾಯಿತು. ಮುಖ್ಯವಾಗಿ ಚೈನೀಸ್ ಆಪ್‌ಗಳು ಈ ಸುಲಿಗೆ ಮಾಡುತ್ತಿದ್ದವು. ಅದೇ ಆಪ್ ಗಳ ಮೂಲಕ ಸಣ್ಣ ಮೊತ್ತದ ಹಣ ಸಾಲ ಕೊಡುವ ವ್ಯವಸ್ಥೆ. ಮೊದಲು ಊರಲ್ಲಿದ್ದ ಸಾಹುಕಾರ ಪುಡಿಕಾಸು ಸಾಲ ಕೊಟ್ಟು, ಬಡ್ಡಿ-ಚಕ್ರಬಡ್ಡಿ ಹಾಕಿ ಸಾಲಗಾರರ ರಕ್ತ ಹೀರುತ್ತಿದ್ದರೆ ಈಗ ಜಗತ್ತಿನ ಇನ್ಯಾವುದೋ ಮೂಲೆಯಲ್ಲಿ ಕೂತ ಕಂಪನಿಗಳು ಈ ಕೆಲಸ ಮಾಡುತ್ತವೆ. ಕೊಟ್ಟ ಸಾಲಕ್ಕೆ ಅವರು ಹೇರುತ್ತಿದ್ದ ಮಾನಸಿಕ ಒತ್ತಡ ತಾಳಲಾರದೆ ಹಲವರು ಆತ್ಮಹತ್ಯೆ ಸಹ ಮಾಡಿಕೊಳ್ಳುತ್ತಿದ್ದರು ಎನ್ನುವುದು ಇದರ ಭೀಕರತೆಯನ್ನು ಹೇಳುತ್ತದೆ.

ಇನ್ನು ಎರಡನೆಯ ಸರಣಿಯ ವಿಷಯಕ್ಕೆ ಬರುವುದಾದರೆ ಇಲ್ಲಿ ನಾಲ್ಕು ಪ್ರಕರಣಗಳಿವೆ. ಮೊಟ್ಟಮೊದಲಿಗೆ ನಾವು ನೋಡುವುದು ಭಾರತೀಯ ಮೂಲದ ಒಬ್ಬ ವ್ಯಕ್ತಿ ಒಂದು ಕಾಲ್ ಸೆಂಟರ್ ಇಟ್ಟುಕೊಂಡು ನೂರಾರು ಅಮೇರಿಕನ್ನರಿಗೆ ಐಆರ್‌ಎಸ್‌ ಹೆಸರಿನಲ್ಲಿ 300 ದಶಲಕ್ಷ ಡಾಲರ್ ವಂಚಿಸಿದ ಕಥೆ. ಕಾಲ್ ಸೆಂಟರ್ ಮೂಲಕ ಅಮೇರಿಕನ್ನರಿಗೆ ಕರೆ ಮಾಡುವ ಇವರು ನಿಮ್ಮ ತೆರಿಗೆ ಬಾಕಿ ಉಳಿದಿದೆ, ಇಂತಿಷ್ಟು ಮೊತ್ತವನ್ನು ಈ ಕೂಡಲೇ ಕಟ್ಟದಿದ್ದರೆ ನೀವು ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಹೇಳುತ್ತಾರೆ. ಇವರ ಮಾತುಗಳು ಎಷ್ಟು ಪರಿಣಾಮಕಾರಿಯಾಗಿರುತ್ತದೆ ಎಂದರೆ ಇವರು ಮಾಡಿದ ಕರೆಯನ್ನು ಕತ್ತರಿಸದೆಯೇ ಅವರು ಇವರು ಹೇಳಿದ ಖಾತೆಗಳಿಗೆ ಹಣ ತುಂಬಿಸುತ್ತಿರುತ್ತಾರೆ. ಮುಂಬೈನ ಥಾಣೆ ಮತ್ತು ಮೀರಾ ರೋಡ್ ಪ್ರದೇಶದಲ್ಲಿ ಸುಮಾರು 700 ಜನರ ಒಂದು ಕಾಲ್ ಸೆಂಟರ್ ಈ ಕೆಲಸವನ್ನು ಮಾಡುತ್ತಿರುತ್ತದೆ.

ಎರಡನೆಯ ಪ್ರಕರಣವೇ ಈ ಮೊದಲು ಹೇಳಿದ ಪಾಪ್ಯುಲರ್ ಫೈನಾನ್ಸ್ ಪ್ರಕರಣ. ಇದಂತೂ ಸುಮಾರು 2000 ಕೋಟಿ ರೂಗಳ ವಂಚನೆ. ಮಕ್ಕಳು ಆರಬ್ ದೇಶಗಳಲ್ಲಿ ಕೆಲಸ ಮಾಡುತ್ತಾ ಕಳಿಸಿದ ಹಣವನ್ನು ಇಲ್ಲಿ ಹೂಡಿಕೆ ಮಾಡಿದ ಹಿರಿಯ ನಾಗರೀಕರು, ನಿವೃತ್ತಿಯ ಮೊತ್ತವನ್ನು ಇಲ್ಲಿ ಹೂಡಿದವರು, ಪ್ರತಿ ತಿಂಗಳ ಉಳಿತಾಯದ ಹಣವನ್ನು ತೊಡಗಿಸಿದವರು, ಮುಂದೆ ಮಕ್ಕಳ ವಿದ್ಯಾಭ್ಯಾಸಕ್ಕೆ, ಮದುವೆಗೆ, ಖಾಯಿಲೆಯ ಖರ್ಚಿಗೆ ಆದೀತು ಎಂದು ಹಣ ಕೂಡಿಟ್ಟವರು ಎಲ್ಲರೂ ಇಲ್ಲಿ ಬಲಿಪಶುಗಳೆ. ಊರಿಗೆ ಹತ್ತು, ಬಡಾವಣೆಗೆ ಹಲವು ಬ್ಯಾಂಕುಗಳಿರುವ ಈ ಕಾಲದಲ್ಲೂ ಹೆಚ್ಚಿನ ಬಡ್ಡಿಯ ಆಸೆ ಇವರೆಲ್ಲರನ್ನೂ ಅಲ್ಲಿಗೆ ಸೆಳೆದಿರುತ್ತದೆ. ಕೆಲವು ಕಂಪನಿಗಳು ತೋರಿಸುವ ಬಡ್ಡಿಯ ಮೊತ್ತ ಯಾವುದೇ ಗಣಿತದ ಲೆಕ್ಕಾಚಾರಗಳಿಗೂ ಮೀರಿದ್ದು ಎಂದು ಗೊತ್ತಿದ್ದರೂ ಜನ ಸಾಲುಗಟ್ಟಿ ಇಲ್ಲಿ ಹಣ ತುಂಬುವುದು ನಾವು ನಮ್ಮಲ್ಲೂ ನೋಡಿದ್ದೇವೆ.

ಮೂರನೆಯ ಪ್ರಕರಣ ಕೆತನ್ ಪಾರೇಖ್ ಕೊಲ್ಕತ್ತಾ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಬೇರೆಯವರ ಹಣದಿಂದ ಆಡಿದ ಜೂಜಿನ ಕಥೆ. ಇಷ್ಟರಲ್ಲಾಗಲೇ ಹರ್ಷದ್ ಮೆಹ್ತಾ ಪ್ರಕರಣ ಆಗಿರುತ್ತದೆ, ಆದರೆ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಇನ್ನೂ ತಮ್ಮ ಪಾಠ ಕಲಿತಿರುವುದಿಲ್ಲ. ಈ ಪಾರೇಖ್ ಒಂದು ರೀತಿಯಲ್ಲಿ ಹರ್ಷದ್‌ನ ಶಿಷ್ಯನೂ ಹೌದು. ಈತನ ಆಟ ಮತ್ತೊಮ್ಮೆ ದೇಶದ ಹಣಕಾಸು ಸಂಸ್ಥೆಗಳನ್ನಷ್ಟೇ ಅಲ್ಲ ಆಗ ಹಣಕಾಸು ಮಂತ್ರಿಯಾಗಿದ್ದ ಯಶವಂತ್ ಸಿನ್ಹಾರನ್ನು ಸಹ ಸುತ್ತಿಕೊಳ್ಳುತ್ತದೆ.

ಈ ಸರಣಿಯ ಕಡೆಯ ಮತ್ತು ನಮ್ಮ ನೆನಪಿಗೆ ಅತ್ಯಂತ ಹತ್ತಿರವಾಗಿರುವ ಪ್ರಕರಣ ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದ್ದು. ಅಸಲಿಗೆ ಈ ಕ್ರಿಪ್ಟೋ ಕರೆನ್ಸಿ ಎಂದರೆ ಏನು, ಅಲ್ಲಿ ಬಳಸುವ ಮೈನಿಂಗ್ ಪದದ ಅರ್ಥ ಏನು, ಇದರ ಬಗ್ಗೆ ಅಲ್ಲಿ ಹಣ ಹೂಡಿದವರು ಏನು ಹೇಳುತ್ತಾರೆ ಅಲ್ಲಿ ನಿಜಕ್ಕೂ ಹಣ ಗಳಿಸಿದವರು ಯಾರು, ಕಳೆದುಕೊಂಡವರೆಷ್ಟು ಜನ ಎಲ್ಲದರ ಬಗ್ಗೆ ಎಪಿಸೋಡ್ ಮಾತನಾಡುತ್ತದೆ. ಈ ಮೊದಲೇ ಹೇಳಿದ ಹಾಗೆ ಇದು ಯಾವುದಾದರೂ ಹಣಕಾಸಿಗೆ ಸಂಬಂಧಿಸಿದ ಪತ್ರಿಕೆ ಮಾಡಬಹುದಾದ ತನಿಖಾ ವರದಿಯಷ್ಟು ಆಳವಾಗಿ ಅಥವಾ ವಿಸ್ತೃತವಾಗಿ ಇಲ್ಲದಿದ್ದರೂ, ಈ ಲೋಕದ ಬಗ್ಗೆ ಹೆಚ್ಚೇನೂ ಓದಿಕೊಳ್ಳದ ನನ್ನಂಥವರಿಗೂ ಅರ್ಥವಾಗುವ ಹಾಗೆ ಈ ವಿಷಯವನ್ನು ವಿವರಿಸುತ್ತದೆ.

ಈ ಸರಣಿ ಮಾಹಿತಿಪೂರ್ಣ ಎನ್ನುವುದಂತೂ ನಿಜ. ಆದರೆ ಇಂತಹ ಸರಣಿಗಳ ಯಶಸ್ಸಿಗೆ ಇನ್ನೊಂದು ಮನೋವೈಜ್ಞಾನಿಕ ಕಾರಣವೂ ಇರಬಹುದು. ಸದಾ ಮೋಸಗಾರರು ಮಾಡುವ ಮೋಸಕ್ಕೆ ಪಕ್ಕಾಗುತ್ತಲೇ ಹೋಗುವ ಜನರಿಗೆ ಆ ಮೋಸವನ್ನು ಕುರಿತ ವಿವರಣೆ, ತರ್ಕ ಅಕಾರಣ ಆಸಕ್ತಿಯನ್ನು ಕೆರಳಿಸುತ್ತಿದ್ದರೆ, ಈ ಮೋಸಗಾರರು ಎಲ್ಲೋ ಯಾವಾಗಲೋ ಸಿಕ್ಕಿಬೀಳುತ್ತಾರೆ ಎನ್ನುವುದು ಎಲ್ಲೋ ಒಂದು ಕಡೆ ಸಾಂತ್ವನ ಸಹ ಕೊಡುತ್ತದೆ ಅನ್ನಿಸುತ್ತದೆ. ಬಹುಶಃ ಅದೊಂದು ರೀತಿಯಲ್ಲಿ ದೈವಿಕ ನ್ಯಾಯ ಎನ್ನುವ ಸಮಾಧಾನವೂ ಆಗಬಹುದು! ಕಾರಣ ಏನೇ ಇರಲಿ ಈ ಡಾಕ್ಯುಡ್ರಾಮ ಆಸಕ್ತಿಯಿಂದ ನೋಡಿಸಿಕೊಂಡು ಹೋಗುತ್ತದೆ ಎನ್ನುವುದಂತೂ ಸುಳ್ಳಲ್ಲ.

LEAVE A REPLY

Connect with

Please enter your comment!
Please enter your name here