ಕತೆ ಕೂತಲ್ಲೇ ಹೊಳೆಯಬಹುದು, ಅಥವಾ ಕಣ್ಣೆದುರು ಕಾಣುವುದೇ ಕತೆಯಾಗಬಹುದು. ಆದರೆ ಚಿತ್ರಕಥೆಗೆ ಸಾಕಷ್ಟು ಸಿದ್ಧತೆ ಬೇಕು. ಅಲ್ಲಿ ಕೊರತೆಯಾದರೆ ಸಿನಿಮಾ ಸಂದೇಶ ನೀಡುವುದಿಲ್ಲ, ಅದನ್ನು ಪ್ರೇಕ್ಷಕನೇ ಹೆಕ್ಕಿ ತೆಗೆದುಕೊಳ್ಳಬೇಕಷ್ಟೇ. ಅದು ಹೇಗೆ ಎಂದು ತಿಳಿಯಲು Netflixನಲ್ಲಿ ಸ್ಟ್ರೀಮ್ ಆಗುತ್ತಿರುವ ‘ಜನಗಣಮನ’ ನೋಡಬೇಕು.
ತತ್ವ ಮರೆತ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು, ಗಾಳಿ ಬೀಸುವ ಕಡೆಗೆ ಮೈಯೊಡ್ಡಿ ನಿಂತು ತಂಪಾಗುವ ಮಾಧ್ಯಮಗಳು – ಈ ಮೂರೂ ವರ್ಗ ಒಂದೆಡೆ ಸೇರಿದರೆ ಎಂಥಾ ಅನಾಹುತಗಳೂ ನಡೆಯಬಹುದು. ದೂರ ನಿಂತು ನೋಡುವ ಜನಸಾಮಾನ್ಯರಿಗೆ ಅಲ್ಲಿ ನಡೆದದ್ದು ಅನಾಹುತವೆಂದೂ ತಿಳಿಯದಂತೆ ಮರೆಮಾಚಿ ಅವರಿಂದಲೇ ಉಘೇ ಉಘೇ ಅನ್ನಿಸಬಹುದು. ಈ ಎರಡು ವಾಕ್ಯಗಳಲ್ಲಿ ಅಡಗಿರುವ ಕತೆ ಸಿನಿಮಾವಾದರೆ ರೋಚಕತೆ, ಕೌತುಕ, ಭೀಕರತೆ ಎಲ್ಲವೂ ತೆರೆಯ ಮೇಲೆ ತೆರೆದುಕೊಳ್ಳಬಹುದಲ್ಲವೇ? ಅಷ್ಟಕ್ಕೂ ಸಿನಿಮಾಕ್ಕೆ ಮುಖ್ಯವಾಗಿ ಬೇಕಿರುವುದು ಗಟ್ಟಿ ಕತೆ, ಸತ್ವಯುತ ಸಂಭಾಷಣೆ, ಉತ್ತಮ ತಾಂತ್ರಿಕತೆ ಹಾಗೂ ಭಾವಾಭಿವ್ಯಕ್ತಿಯ ಸಾಮರ್ಥ್ಯವಿರುವ ಒಳ್ಳೆಯ ಕಲಾವಿದರು. ಅವೆಲ್ಲ ಇದ್ದೂ ಚಿತ್ರಕಥೆ ಹಿಡಿತ ತಪ್ಪಿದರೆ ಏನೆಲ್ಲ ಆಗಬಹುದೋ ಅವೆಲ್ಲವೂ ಸುಸ್ಪಷ್ಟ ಕಾಣುವ ಸಿನಿಮಾ ‘ಜನಗಣಮನ’.
ಪೃಥ್ವಿರಾಜ್ ಅಭಿನಯದ ‘ಜನಗಣಮನ’ ಇತ್ತೀಚಿನ ಕೆಲ ವರ್ಷಗಳಲ್ಲಿ ನಡೆದ ನೈಜ ಪ್ರಕರಣಗಳನ್ನು ತೆರೆಗೆ ತರುತ್ತದೆ. ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಪ್ರಹಾರ, ಹೈದರಾಬಾದಿನಲ್ಲಿ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಸಜೀವ ದಹನ, ಪೊಲೀಸರಿಂದ ಆರೋಪಿಗಳ ಎನ್ಕೌಂಟರ್ – ಈ ಘಟನೆಗಳನ್ನು ಕತೆಗೆ ತಕ್ಕಂತೆ ಅಳವಡಿಸಲಾಗಿದೆ.
ಈ ಮಲಯಾಳಂ ಸಿನಿಮಾದ ಕಥೆ ನಡೆಯುವುದು ನಮ್ಮ ರಾಮನಗರದಲ್ಲಿ. ಅಲ್ಲಿನ ಸೆಂಟ್ರಲ್ ಯುನಿವರ್ಸಿಟಿಯಲ್ಲಿ (ಕಲ್ಪಿತ) ಸಭಾಃ ಮರಿಯಮ್ ಎಂಬಾಕೆ ಪ್ರೊಫೆಸರ್. ಒಂದು ರಾತ್ರಿ ಅವಳನ್ನು ದುಷ್ಕರ್ಮಿಗಳು ಅತ್ಯಾಚಾರಗೈದು ಜೀವಂತ ಸುಡುತ್ತಾರೆ. ಮಾಧ್ಯಮಗಳಲ್ಲಿ ಆ ವಿಚಾರ ಪ್ರೈಮ್ ಟೈಮ್ ಚರ್ಚೆಗೆ ಒಳಪಡುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತದೆ. ಅಪರಾಧಿಗಳ ಶೀಘ್ರ ಪತ್ತೆಗೆ ಒತ್ತಡ ಹೇರಲು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ಮಾಡುತ್ತಾರೆ. ಅವರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡುತ್ತಾರೆ. ಪೊಲೀಸರ ಈ ನಡೆ ದೇಶಾದ್ಯಂತ ವಿದ್ಯಾರ್ಥಿ ಸಮೂಹವೇ ಪ್ರತಿಭಟನೆಗಿಳಿಯಲು ದಾರಿಯಾಗುತ್ತದೆ. ಉಪನ್ಯಾಸಕರೇ ಅವರು ರೊಚ್ಚಿಗೇಳಲು ಪ್ರೇರಣೆ ನೀಡುತ್ತಾರೆ. ಪ್ರಕರಣ ವಿವಾದದ ರೂಪ ಪಡೆದಾಗ ಒತ್ತಡಕ್ಕೆ ಬೀಳುವ ಕರ್ನಾಟಕ ಸರ್ಕಾರ ಎಸಿಪಿ ಸಜ್ಜನ್ ಕುಮಾರ್ರನ್ನು ತನಿಖಾಧಿಕಾರಿಯಾಗಿ ನೇಮಿಸುತ್ತದೆ. ಸಜ್ಜನ್ ಕುಮಾರ್ ಬಹುಬೇಗ ನಾಲ್ಕು ಆರೋಪಿಗಳನ್ನು ತೆಕ್ಕೆಗೆ ತೆಗೆದುಕೊಳ್ಳುತ್ತಾರೆ. ಮೇಲಾಧಿಕಾರಿಗಳಿಗೆ ತಿಳಿಸಿದರೆ ಅವರ ವಿಚಾರಣೆಗೆ ಕಿರಿಕಿರಿ ಒಡ್ಡಬಹುದೆಂಬ ಕಾರಣಕ್ಕೆ ತನಿಖೆಯಲ್ಲಿ ಗೋಪ್ಯತೆ ಕಾಪಾಡುತ್ತಾರೆ. ಆದರೂ ಆರೋಪಿಗಳ ಬಂಧನದ ಸುದ್ದಿ ಮಾಧ್ಯಮಗಳಿಗೆ ಸಿಕ್ಕುಬಿಡುತ್ತದೆ.
ಇದಾಗುತ್ತಿದ್ದಂತೆ ಸಜ್ಜನ್ ಕುಮಾರ್ ಮೇಲೆ ಒತ್ತಡ ಶುರು. ಪ್ರಕರಣವನ್ನು ಬೇರೊಂದು ಠಾಣಾಧಿಕಾರಿಗೆ ವರ್ಗಾಯಿಸಲು ಮೇಲಿಂದ ಆದೇಶ. ಅದರಂತೆ ಬೇರೆಡೆಗೆ ವರ್ಗಾಯಿಸಲು ಕೊಂಡೊಯ್ಯುವ ದಾರಿ ಮಧ್ಯೆ ಎಸಿಪಿ ಸಜ್ಜನ್ ಕುಮಾರ್ ಆ ನಾಲ್ಕೂ ಮಂದಿ ಆರೋಪಿಗಳನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡುತ್ತಾನೆ. ಅತ್ಯಾಚಾರಿಗಳನ್ನು ಗುಂಡಿಟ್ಟು ಕೊಂದ ಪೊಲೀಸರ ನಡೆಗೆ ದೇಶವ್ಯಾಪಿ ಶಹಬ್ಬಾಸ್ಗಿರಿ ಬರುತ್ತದೆ. ಆದರೆ ಮಾನವ ಹಕ್ಕುಗಳ ಸಮಿತಿ, ಪ್ರಕರಣವನ್ನು ನ್ಯಾಯಾಲಯದ ಮೆಟ್ಟಿಲೇರಿಸುತ್ತದೆ.
ಘಟನೆ ನಡೆಯುವ ಸ್ಥಳ ರಾಮನಗರವಾದ ಕಾರಣ ತುಂಬಾ ಕಡೆಗಳಲ್ಲಿ ಕನ್ನಡ ಕೇಳಿಬರುತ್ತದೆ. ಆದರೆ ಅಕ್ಷರಕ್ಷರದಲ್ಲೂ ಮಲಯಾಳಿ ಛಾಪು ಅಚ್ಚೊತ್ತಿರುವ ಕಾರಣ ಕನ್ನಡ ಗೊತ್ತಿರುವವರಿಗೆ ಅದನ್ನು ಕೇಳುವುದೊಂದು ಶಿಕ್ಷೆಯೇ. “ನೀವು ದೇವಿಟ್ಟು ನಾ ಹೇಳದು ಕೇಳಲಿ. ನೀವು ಸಹಗರಿಸಿದರೆ ಮಾತ್ರ ನಮಗೆ ಮುಂದೆ ಹೋಗಬಉದು” ಎಂಬ ಸಂಭಾಷಣೆಕಾರನ ಜತೆ ಸಹಕರಿಸುವುದು ಕನ್ನಡದ ಪ್ರೇಕ್ಷಕನಿಗೆ ತುಸು ಕಷ್ಟ. ಕೋಯಿಕ್ಕೋಡಿನಿಂದ ಬೆಂಗಳೂರಿಗೆ ಹೋಗುವ ಬಸ್ಸಿಗೆ ಬಹುಶಃ ರಾಮನಗರದಲ್ಲಿ ಸ್ಟಾಪಿಲ್ಲ. ಏಕೆಂದರೆ ರಾಮನಗರದಲ್ಲಿ ತಮಿಳು ಭಾಷಿಗರು ಸಾಕಷ್ಟಿದ್ದಾರೆ ಎಂದು ಚಿತ್ರತಂಡ ತೀರ್ಮಾನಕ್ಕೆ ಬಂದಿದೆ. ಅಲ್ಲಿನ ಸ್ಥಳೀಯ ಶಾಸಕನೂ ತಮಿಳ.
ನಿರ್ದೇಶಕ ಡಿಜೋ ಜೋಸ್ ಅಂಥೋನಿಗಿದು ಎರಡನೇ ಸಿನಿಮಾ. ಮೊದಲಾರ್ಧದಲ್ಲಿ ಪ್ರಸ್ತುತ ವಿದ್ಯಮಾನಗಳನ್ನು ತೆರೆಗೆ ತಂದ ಬಗೆಯಲ್ಲಿ ನೈಜತೆಯಿದೆ. ಆದರೆ ಅದು ಭಾವಕೇಂದ್ರಕ್ಕೆ ಒಂದು ಸಾಕ್ಷ್ಯಚಿತ್ರದಂತೆ ತಲುಪುತ್ತದೆಯೇ ವಿನಃ ಸಿನಿಮಾದಂತೆ ಪರಿಣಾಮ ಬೀರುವುದಿಲ್ಲ. ಮೃತಪಟ್ಟ ಪ್ರೊ. ಸಭಾಃ ಮರಿಯಮ್ಳ ಒಳ್ಳೆಯತನ, ನ್ಯಾಯಪರತೆ, ವಿದ್ಯಾರ್ಥಿಗಳೆಡೆಗಿನ ಸ್ಪಂದನೆ, ಇವ್ಯಾವುವೂ ತೆರೆಯ ಮೇಲೆ ಮೊದಲಿಗೇ ಕಾಣದ ಕಾರಣ ಆ ಪಾತ್ರದ ಸಾವು ಪ್ರೇಕ್ಷಕನ ಪಾಲಿಗೆ ಮತ್ತೊಂದು ಪ್ರಕರಣವೇ ಹೊರತು ಮನ ಕಲಕುವುದಿಲ್ಲ. ಟಿವಿ ಚರ್ಚೆ-ಅಭಿಪ್ರಾಯಗಳು ಅಲ್ಲಲ್ಲಿ ಬರುವ ಕಾರಣ ಪ್ರೊ. ಸಭಾಃ ಹೃದಯಕ್ಕೆ ತಾಗುವುದಿಲ್ಲ.
ವಿರಾಮದ ನಂತರ ಮಗ್ಗಲು ಬದಲಿಸುತ್ತದೆ. ಉತ್ತರಾರ್ಧದಲ್ಲಿ ಪ್ರವೇಶ ಪಡೆಯುವ ಪೃಥ್ವಿರಾಜ್ ನಿರ್ವಹಿಸಿದ ಅರವಿಂದ ಸ್ವಾಮಿನಾಥನ್ ಪಾತ್ರ ಸಿನಿಮಾಕ್ಕೆ ಹೊಸ ಉಸಿರು ನೀಡುತ್ತದೆ. ಇಲ್ಲೊಂದು ವಿಶೇಷ ಪ್ರಸ್ತಾಪಿಸಲೇಬೇಕು. ಅಲ್ಲಿಯವರೆಗೆ ನೈಜ ಘಟನೆಯಿಂದ ಪ್ರೇರಿತವಾಗಿ ಹೆಣೆದ ದೃಶ್ಯಗಳು ಭಾವ ಕಲಕುವುದಿಲ್ಲ. ಆದರೆ ನೈಜತೆಗಿಂತ ನಾಟಕೀಯತೆ ಹೆಚ್ಚಿರುವ ಕೋರ್ಟ್ ದೃಶ್ಯಗಳು ಭಾವ ಕೇಂದ್ರಕ್ಕೆ ಹತ್ತಿರವಾಗುತ್ತವೆ. ಪೊಲೀಸರು ನಡೆಸಿರುವುದು ಹುಸಿ ಎನ್ಕೌಂಟರ್, ವಾಸ್ತವದಲ್ಲಿ ಆ ನಾಲ್ಕೂ ಮಂದಿ ಆರೋಪಿಗಳು ಕೊಲೆಗಾರರಲ್ಲ ಎಂದು ವಾದಿಸುವ ಪಾತ್ರವದು. ಪೊಲೀಸರಿಂದ ಕಾನೂನು ಉಲ್ಲಂಘನೆ ಆಗಿದೆಯೇ, ಹಾಗೆ ಆದ ಪಕ್ಷದಲ್ಲಿ ಕಾನೂನು ಏನು ಹೇಳುತ್ತದೆ ಎಂಬುದು ಸತ್ರ ನ್ಯಾಯಾಲಯಗಳಲ್ಲಿ ವಾಸ್ತವದಲ್ಲಿ ಆಗುವ ವಾದವಿವಾದ. ಆದರೆ ಇಲ್ಲಿ ಸರ್ಕಾರಿ ಅಭಿಯೋಜಕರು ಕತೆ ಹೇಳುತ್ತಾರೆ. ಪಾಟಿ ಸವಾಲಿನ ಸ್ವಾಮಿನಾಥನ್ ಕಾನೂನಿನ ಬಗೆಗೆ ಆಡುವ ಮಾತುಗಳು ಕೋರ್ಟಿನಲ್ಲಿ ನಡೆಯುವಂಥದ್ದಲ್ಲ, ವಿಧಾನಸಭೆಯಲ್ಲಿ ನಡೆಯುವಂಥವು. ಆದಾಗ್ಯೂ ಅಲ್ಲಿ ಭಾವಾಭಿವ್ಯಕ್ತಿಗೆ ಮಹತ್ವ ಕೊಟ್ಟ ಕಾರಣ ಅಲ್ಲೊಂದು ಸಿನಿಮಾದ ಭಾವ ಮೂಡುತ್ತದೆ.
ದುರಾದೃಷ್ಟವಶಾತ್ ಕೆಟ್ಟ ರಾಜಕಾರಣ ಹಾಗೂ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಜಾತೀಯತೆಯಂಥ ಗಂಭೀರ ವಿಚಾರಗಳು ದಾಖಲಾಗುವುದು ಚಿತ್ರದ ಕೊನೆಕೊನೆಗೆ. ವಿದ್ಯಾ ಎಂಬ ದಲಿತ ವಿದ್ಯಾರ್ಥಿನಿಯ ಸಂಶೋಧನಾ ಮಹಾಪ್ರಬಂಧದಲ್ಲಿ ಆಕೆಯ ಪ್ರೊಫೆಸರ್ ಕೇವಲ ಜಾತಿಯ ಕಾರಣದಿಂದ ಹುಡುಕುವ ತಪ್ಪುಗಳು, ಅದರಿಂದ ಆಕೆಗೆ ಆಗುವ ಮಾನಸಿಕ ಆಘಾತ, ತತ್ಪರಿಣಾಮ ಆತ್ಮಹತ್ಯೆ, ಅದನ್ನೆತ್ತಿ ಆಡಳಿತ ಮಂಡಳಿಯೆದುರು ಪ್ರೊ. ಸಭಾಃ ನಡೆಸುವ ಏಕಾಂಗಿ ಹೋರಾಟದ ವಿಚಾರ ಬರುವ ಹೊತ್ತಿಗೆ ಸಿನಿಮಾ ಸಾಕಷ್ಟು ಸಮಯ ಹಾಳು ಮಾಡಿದೆ. ಅಂಥ ವಿಚಾರಗಳಿಗೆ ಇಂದಿನ ಗೌಜಿ-ಗದ್ದಲದ ಮಾಧ್ಯಮ ಲೋಕ ಸ್ಥಳಾವಕಾಶ ನೀಡುವುದಿಲ್ಲ. ನೀಡಿದರೂ ಇತರೆ ಸುದ್ದಿ-ಸದ್ದುಗಳ ನಡುವೆ ಜನರಿಗೆ ನಾಟುವುದೇ ಇಲ್ಲ. ದುರಂತವೆಂದರೆ ಸಿನಿಮಾದಲ್ಲಿಯೂ ಈ ವಿಚಾರಕ್ಕೆ ಭೂಮಿಕೆ ಸಿದ್ಧವಾಗುವಾಗ ಅದಾಗಲೇ ನೂರಿಪ್ಪತ್ತು ನಿಮಿಷ ಕಳೆದಿರುತ್ತದೆ. ಜತೆಗೆ ಪ್ರೊ. ಸಭಾಳದ್ದು ಮೊದಲಾರ್ಧದಲ್ಲಿ ಬಂದಂತೆ ಅತ್ಯಾಚಾರವೇ ಅಲ್ಲ. ಅದೊಂದು ವ್ಯವಸ್ಥಿತ ಕೊಲೆ ಎಂಬುದೂ ಜತೆಜತೆಗೆ ಬಿಚ್ಚಿಕೊಳ್ಳುವ ಕಾರಣ ನೋಡುಗರ ಭಾವನೆಯನ್ನು ಕೇಂದ್ರೀಕೃತಗೊಳಿಸುವುದಿಲ್ಲ.
ಅಷ್ಟೂ ಹೊತ್ತು ವಾದ ಮಾಡಿ ಪ್ರಕರಣವನ್ನು ಆ ಹಂತಕ್ಕೆ ತಂದ ಸ್ವಾಮಿನಾಥನ್ ಹಿನ್ನೆಲೆ ಮುನ್ನೆಲೆಗೆ ಬರುವಾಗ ಹೊತ್ತು ಮತ್ತೂ ದಾಟುತ್ತದೆ. ಆತ ಮೂಲತಃ ಕಾನೂನು ಪದವೀಧರ. ಆದಾಗ್ಯೂ ಕಾನೂನಿನ ಅನುಷ್ಠಾನ ಮಾಡುವುದು ಪೊಲೀಸ್ ಇಲಾಖೆ ಎಂಬ ಆದರ್ಶದೊಂದಿಗೆ ಐಪಿಎಸ್ ತೇರ್ಗಡೆ ಹೊಂದಿ ಆಯ್ಕೆಯಾಗಿದ್ದ ಪ್ರತಿಭಾವಂತ. ಆತ 2013ರಲ್ಲಿ ರಾಮನಗರದಲ್ಲೇ ನಿಯೋಜನೆಗೊಂಡಿರುತ್ತಾನೆ. ಆ ವೇಳೆಗೆ ಅಲ್ಲೊಂದು ದಂಗೆ ನಡೆಸಿರುತ್ತದೆ. ಅದು ಕೇಸರಿ ಶಾಲು ಧರಿಸುವ, ತಮಿಳು ಮಾತನಾಡುವ, ರಾಮನಗರದ ರಾಜಕಾರಣಿಯ ರಾಜಕೀಯ ದುರುದ್ದೇಶಕ್ಕೆ ನಡೆದ ದಳ್ಳುರಿ. ಅದನ್ನು ಮುಚ್ಚಿ ಹಾಕಲು ಒತ್ತಡಗಳು ಬಂದರೂ ಆತ ಮಣಿಯುವುದಿಲ್ಲ. ಅದರಿಂದಾಗಿ ಆತ ಕೆಲಸ ಕಳೆದುಕೊಳ್ಳುವದಷ್ಟೇ ಅಲ್ಲ, ಜೈಲನ್ನೂ ಕಾಣಬೇಕಾಯಿತು. ಜತೆಗಿದ್ದ ಹೆಂಡತಿಯೂ ಸಾಯಬೇಕಾಯಿತು. ಅವೆಲ್ಲದರ ಮಧ್ಯೆ ಆತನದ್ದು ಏಕಾಂಗಿ ಹೋರಾಟ.
ಸಿನಿಮಾ ನೋಡುತ್ತಾ ನೂರೈವತ್ತನೇ ನಿಮಿಷ ಕಳೆದು, ವಿದ್ಯಾರ್ಥಿನಿ ವಿದ್ಯಾಳ ಸಾವು ಕಂಡು, ಪ್ರೊ. ಸಭಾಃಳ ಕೊಲೆಯ ಕಾರಣ ತಿಳಿದು, ಎಸಿಪಿ ಸಜ್ಜನ್ ಕುಮಾರ್ ದುರ್ಜನ ಆಗುವುದನ್ನು ಕಂಡು, ಆತ ಮತ್ತೆ ಅವನದೇ ದಾರಿಯಲ್ಲಿ ದೇವರನ್ಯಾಯ ಹುಡುಕುವುದನ್ನೆಲ್ಲ ನೋಡಿದ ಮೇಲೆ ಸ್ವಾಮಿನಾಥನ್ನ ಹಿನ್ನೆಲೆ ಕತೆ ಬರುವ ಕಾರಣ ಕೊಂಡಿಗಳನ್ನು ಜೋಡಿಸಲು ಪ್ರೇಕ್ಷಕನೂ ಕಷ್ಟಪಡಬೇಕು. ಹಾಗಾಗಿ ಸ್ವಾಮಿನಾಥನ್ನದ್ದು ಅಕ್ಷರಶಃ ಏಕಾಂಗಿ ಹೋರಾಟ.
ಉಳಿದಂತೆ ತಾಂತ್ರಿಕವಾಗಿ ಸಿನಿಮಾದಲ್ಲಿ ದೋಷಗಳಿಲ್ಲ. ರಾತ್ರಿಯ ದೃಶ್ಯಗಳಂತೂ ನೈಜತೆಗೆ ತೀರಾ ಹತ್ತಿರ. ಕ್ಯಾಮರಾ ಕಣ್ಣಿಗೆ ಬೀಳುವ ಬೋರ್ಡುಗಳಲ್ಲೆಲ್ಲ ಕನ್ನಡವನ್ನೇ ಕಾಣಿಸಲು ಕಲಾ ವಿಭಾಗವೂ ಒಳ್ಳೆಯ ಕೆಲಸವನ್ನೇ ಮಾಡಿದೆ. ಹಾಡುಗಳೂ ಚೆನ್ನಾಗಿವೆ. ಆದರೆ ಅಯೋಮಯವಾದ ಚಿತ್ರಕತೆಯಲ್ಲಿ ಅವೆಲ್ಲ ಅಸ್ತಂಗತವಾಗಿವೆ. ಅದೇ ಕಾರಣದಿಂದ ಸಂಭಾಷಣೆ ಹೆಕ್ಕಿ ತೆಗೆದು ನೋಡಿದಾಗ ಕಾಲಕ್ಕೆ ಪ್ರಸ್ತುತವೆನಿಸುತ್ತದೆ. ಆದರೆ ದೃಶ್ಯದೊಳಗೆ ತುರುಕಿದಂತೆ ಭಾಸವಾಗುತ್ತದೆ. ರಾಜಕಾರಣಕ್ಕೆ ಬೇಕಾಗಿ ನೋಟೂ ಬಂದ್ ಮಾಡುವೆ, ವೋಟೂ ಬಂದ್ ಮಾಡುವೆ ಎಂಬ ರಾಜಕಾರಣಿ ವಿಲನ್ ರೂಪದಲ್ಲಿ ಕಾಣದೆ ಉದಾತ್ತ ಚಿಂತಕನ ಸೋಗಿನಲ್ಲಿ ಕಂಡಾಗ ಪರಿಣಾಮ ಹೆಚ್ಚು. ಆರು ವರ್ಷದ ಮಕ್ಕಳ ಪಠ್ಯ ಪುಸ್ತಕದಲ್ಲಿ ವರ್ಣಭೇದದ ನೀತಿಯ ಕುರಿತ ಸಾಕ್ಷ್ಯ ಕೋರ್ಟಿನಲ್ಲಿ ಎನ್ಕೌಂಟರ್ ಪ್ರಕರಣದ ವಾದವಿವಾದದ ಮಧ್ಯೆ ಬರಬೇಕಾದ್ದಲ್ಲ, ಅದು ವಿದ್ಯಾಳ ಕಥಾನಕದ ವೇಳೆ ಬಂದಿದ್ದರೆ ಇನ್ನಷ್ಟು ಪರಿಣಾಮಕಾರಿ.
ಅಂದಹಾಗೆ ಎಸಿಪಿ ಸಜ್ಜನ್ ಕುಮಾರ್ ಆ ನಾಲ್ವರು ಆರೋಪಿಗಳನ್ನು ರಾಮನಗರ ಠಾಣೆಯಿಂದ ಕರೆದೊಯ್ಯುವುದು ಎಸ್ಎಲ್ ಪುರ ಠಾಣೆಗೆ. ಹಿಂದಿನಿಂದ ಬರುತ್ತಿರುವ ಸಬ್ ಇನ್ಸ್ಪೆಕ್ಟರ್ಗೆ ಮುಂದೆ ಹೋಗಲು ಆತ ವಯರ್ಲೆಸ್ ಸಂದೇಶ ನೀಡುತ್ತಾನೆ. ನಂತರ ಕೆಂಪುದೀಪ ಆರಿಸಿ ಎಡಕ್ಕೆ ತಿರುಗುವ ಪೊಲೀಸ್ ಜೀಪು ಹೋಗಿ ನಿಲ್ಲುವುದು ರಾಮನಗರದ ಬಳಿಯಿರುವ ಒಂದು ವಿಶಾಲ ಸಮುದ್ರದ ದಂಡೆಯ ಮೇಲೆ! ಅಲ್ಲಿ ಲೈಟ್ಹೌಸ್ ಬಳಿ ಆ ನಾಲ್ವರ ಎನ್ಕೌಂಟರ್ ನಡೆಯುತ್ತದೆ ಎಂಬುದು ಚಿತ್ರಕಥೆಯ ಹಿಂದಿನ ಸಿದ್ಧತೆಗೆ ದಿಕ್ಸೂಚಿ ದೀಪಸ್ತಂಭ.