ಭಾರತ ಸ್ವಾತಂತ್ರ್ಯೋತ್ಸವದ ಸುವರ್ಣ ಮಹೋತ್ಸವದ ಅಂಗವಾಗಿ ರೂಪುಗೊಂಡಿರುವ ‘The Season of Culture’ Indo – UK ವಿಶೇಷ ಸಾಂಸ್ಕೃತಿಕ ವೇದಿಕೆಯ ರಾಯಭಾರಿಯಾಗಿ ಎ.ಆರ್‌.ರೆಹಮಾನ್‌ ಆಯ್ಕೆಯಾಗಿದ್ದಾರೆ. ಕಲೆ, ಭಾಷೆ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವಿವಿಧ ದೇಶಗಳ ಜನರ ಮನಸ್ಸುಗಳನ್ನು ಬೆಸೆಯುವ ಕಾರ್ಯಕ್ರಮವಿದು.

ಖ್ಯಾತ ಸಂಗೀತಗಾರ ಎ.ಆರ್‌.ರೆಹಮಾನ್‌ ಅವರು ಭಾರತ – ಇಂಗ್ಲೆಂಡ್‌ ಸಾಂಸ್ಕೃತಿಕ ವೇದಿಕೆ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಭಾರತ ಸ್ವಾತಂತ್ರ್ಯೋತ್ಸವದ ಸುವರ್ಣ ಮಹೋತ್ಸವದ ಅಂಗವಾಗಿ ‘The Season of Culture’ ವಿಶೇಷ ಸಾಂಸ್ಕೃತಿಕ ವೇದಿಕೆಯೊಂದು ರೂಪುಗೊಂಡಿದೆ. ರೆಹಮಾನ್‌ ಅವರು ರಾಯಭಾರಿಯಾಗಿ ಈ ವೇದಿಕೆಯನ್ನು ಪ್ರತಿನಿಧಿಸಲಿದ್ದಾರೆ. ಬ್ರಿಟನ್‌ ಡೆಪ್ಯೂಟಿ ಹೈ ಕಮಿಷನರ್‌ (ಭಾರತ) ಜಾನ್‌ ಥಾಮಸ್‌ ಮತ್ತು ಬ್ರಿಟೀಷ್‌ ಕೌನ್ಸಿಲ್‌ ಡೈರೆಕ್ಟರ್‌ (ಭಾರತ) ಬಾರ್ಬರಾ ವಿಕ್‌ಹ್ಯಾಮ್‌ ಅವರಿಂದ ಈ ಕುರಿತು ಅಧಿಕೃತ ಘೋಷಣೆ ಹೊರಬಿದ್ದಿದೆ.

ಕಲೆ, ಭಾಷೆ ಮತ್ತು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳ ಮಧ್ಯೆಯ ಕೊಡು – ಕೊಳ್ಳುವಿಕೆಯನ್ನು ಗಟ್ಟಿಗೊಳಿಸುವುದು ವೇದಿಕೆಯ ಉದ್ದೇಶ. “ನಾನೊಬ್ಬ ಸಂಗೀತಗಾರನಾಗಿ ಇದನ್ನು ದೊಡ್ಡ ಗೌರವವೆಂದು ಭಾವಿಸಿದ್ದೇನೆ. ಯುವ ಪೀಳಿಗೆಯಲ್ಲಿ ಕ್ರಿಯಾಶೀಲತೆ ರೂಪಿಸುವಲ್ಲಿ ಮತ್ತು ಅವರಲ್ಲಿನ ಪ್ರತಿಭೆ ಹೊರಗೆಡಹಲು ಇದೊಂದು ಅಪರೂಪದ ವೇದಿಕೆಯಾಗಲಿದೆ. ಕಲೆ, ಸಂಸ್ಕೃತಿಯ ಮೂಲಕ ದೇಶಗಳ ಮಧ್ಯೆಯ ಬಾಂಧವ್ಯ ಉತ್ತಮಗೊಳ್ಳಲಿದೆ. ವೇದಿಕೆಯಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲು ಉತ್ಸುಕನಾಗಿದ್ದೇನೆ” ಎಂದಿರುವ ರೆಹಮಾನ್‌ ಈ ಸುದ್ದಿಯನ್ನು ಟ್ವೀಟ್‌ ಮಾಡಿದ್ದಾರೆ.

‘The Season of culture’ ಸುಮಾರು 1,400ಕ್ಕೂ ಹೆಚ್ಚು ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಜನರಿಗೆ ಮನರಂಜನೆ ನೀಡಲಿದ್ದಾರೆ. ಭಾರತ, ಬ್ರಿಟನ್‌, ಸ್ಕಾಟ್‌ಲ್ಯಾಂಡ್‌, ವೇಲ್ಸ್‌, ಉತ್ತರ ಐರ್ಲ್ಯಾಂಡ್‌ ದೇಶಗಳಲ್ಲಿ ನಾಟಕ, ನತ್ಯ, ವಿಶ್ಯುಯೆಲ್‌ ಆರ್ಟ್ಸ್‌, ಸಾಹಿತ್ಯ, ಸಂಗೀತ, ಫ್ಯಾಷನ್‌, ಟೆಕ್‌ – ಆರ್ಟ್‌, ನ್ಯೂ ಮೀಡಿಯಾ ಆರ್ಟ್‌ ಸೇರಿದಂತೆ ವಿವಿಧ ಪ್ರಕಾರಗಳ ಮೂಲಕ ವಿವಿಧ ದೇಶಗಳ ಜನರ ಮನಸ್ಸುಗಳನ್ನು ಬೆಸೆಯಲಿದ್ದಾರೆ. ಬ್ರಿಟೀಷ್‌ ಕೌನ್ಸಿಲ್‌ ನಿರ್ದೇಶಕ ಬಾರ್ಬರಾ ವಿಕ್‌ಹ್ಯಾಮ್‌, “ರೆಹಮಾನ್‌ ಅವರ ಅನುಭವ ಮತ್ತು ಕ್ರಿಯಾಶೀಲತೆ The Season of Culture ಕಾರ್ಯಕ್ರಮಕ್ಕೆ ಬಲ ನೀಡಲಿದೆ. ಕಲೆ ಮೂಲಕ ವಿವಿಧ ದೇಶಗಳ ಮನಸ್ಸುಗಳು ಬೆಸೆಯಲಿವೆ” ಎಂದಿದ್ದಾರೆ.

LEAVE A REPLY

Connect with

Please enter your comment!
Please enter your name here