ಕತೆ, ನಿರೂಪಣೆ ಮತ್ತು ಮೇಕಿಂಗ್ – ಮೂರೂ ವಿಭಾಗದಲ್ಲಿ ಸಿನಿಮಾ ಆಪ್ತವಾಗುತ್ತದೆ. ನಾಯಿಯನ್ನು ಪ್ರಮುಖ ಪಾತ್ರವನ್ನಾಗಿಸಿ ಕತೆ ಹೆಣೆಯುವಷ್ಟು ಸುಲಭವಲ್ಲ ಕತೆಯನ್ನು ತೆರೆಗೆ ತರುವುದು. ಈ ಸಿನಿಮಾದಲ್ಲಿ ಪ್ರೀತಿ ಮತ್ತು ತಾಳ್ಮೆಯಿಂದಲೇ ‘ಚಾರ್ಲಿ’ಯನ್ನು ಒಲಿಸಿಕೊಂಡಿದ್ದಾರೆ. ಆಕೆಯ ಭಾವನೆಗಳು ಸಹಜವಾಗಿಯೇ ಅಭಿವ್ಯಕ್ತಿಗೊಂಡಿವೆ.
ಅವನು ಧರ್ಮ. ಒಂದು ರೀತಿಯಲ್ಲಿ ಅನಾಥ. ಸ್ವಭಾವತಃ ಮುಂಗೋಪಿ. ಅವನು ಹೀಗೇಕಾದ ಎನ್ನುವುದಕ್ಕೆ ಅವನ ಬದುಕಿಗೊಂದು ದುರಂತದ ಫ್ಲ್ಯಾಶ್‌ಬ್ಯಾಕ್ ಇದೆ. ಸಿನಿಮಾದ ಟ್ರೈಲರ್‌ನಲ್ಲೇ ಹೇಳಿದಂತೆ ಫ್ಯಾಕ್ಟರಿ ಕೆಲಸ, ಎರಡು ಇಡ್ಲಿ, ಸಿಗರೇಟು, ಬಿಯರ್… ಇಷ್ಟೇ ಧರ್ಮನ ದಿನಚರಿ. ಹತ್ತಿರದ ಗೂಡಂಗಡಿಯ ಅಜ್ಜಿಗೆ ಧರ್ಮನನ್ನು ಕಂಡರೆ ಪ್ರೀತಿ. ಇವನು ಎರಡು ಇಡ್ಲಿ ಕೇಳಿದರೆ ಅಜ್ಜಿ ಮೂರು ಕಟ್ಟುತ್ತಾಳೆ. ಈ ಮೂರನೇ ಇಡ್ಲಿಯಿಂದಾಗಿ ನಾಯಿ ‘ಚಾರ್ಲಿ’, ಧರ್ಮನ ಬದುಕನ್ನು ಪ್ರವೇಶಿಸುತ್ತದೆ. ಏಕಾಂಗಿ, ಒಂಟಿಯಾಗಿದ್ದ ಧರ್ಮನ ಬದುಕಿಗೆ ‘ಚಾರ್ಲಿ’ ಬರುತ್ತಾಳೆ. ಮುಂದೆ ಧರ್ಮ ಮತ್ತು ಚಾರ್ಲಿ ಬದುಕಿನಲ್ಲಾಗುವ ಪಲ್ಲಟಗಳೇನು? ಇದು ‘777 ಚಾರ್ಲಿ’ ಸಿನಿಮಾ.
ಜಾಗತಿಕ ಸಿನಿಮಾ ಕಂಡ ಶ್ರೇಷ್ಠ ನಟ, ನಿರ್ದೇಶಕ ಚಾರ್ಲಿ ಚಾಪ್ಲಿನ್ ಈ ಸಿನಿಮಾದ ಭಾಗವಾಗಿದ್ದಾರೆ. ತನ್ನ ಸಿನಿಮಾಗಳ ಮೂಲಕ ಚಾಪ್ಲಿನ್ ಹೇಳಿದ್ದೆಲ್ಲವೂ ಪ್ರೀತಿ, ಮನುಷ್ಯತ್ವ, ಅನುಕಂಪ, ಅಂತಃಕರಣ. ‘ಚಾರ್ಲಿ’ ಸಿನಿಮಾದುದ್ದಕ್ಕೂ ಚಾಪ್ಲಿನ್ ಕಾಣಿಸುತ್ತಾರೆ. ಗೋಡೆ ಮೇಲಿನ ಚಿತ್ರದ ಮೂಲಕ, ಟೀವಿಯಲ್ಲಿ ಮತ್ತು ಈ ಸಿನಿಮಾದ ಕಂಟೆಂಟ್‌ನಲ್ಲಿ. ಇಲ್ಲಿ ‘ಧರ್ಮ’ ಚಿತ್ರದ ಕಥಾನಾಯಕನಾದರೆ, ನಾಯಿ ‘ಚಾರ್ಲಿ’ ಕಥಾನಾಯಕಿ! ಇವರಿಬ್ಬರ ಮೂಲಕವೂ ಚಾಪ್ಲಿನ್ ನಮಗೆ ಕಾಣಿಸುತ್ತಾರೆ. ಶ್ರೇಷ್ಠ ನಟನೊಬ್ಬ ಇಲ್ಲವಾಗಿ ದಶಕಗಳೇ ಸಂದರೂ ಸಿನಿಮಾಗಳಲ್ಲಿ ಪ್ರಸ್ತಾಪವಾಗುವ ಮೂಲಕ ಮತ್ತೆ ಮತ್ತೆ ಕಾಡುತ್ತಾರೆ. ‘777 ಚಾರ್ಲಿ’ಯಲ್ಲಿ ಚಾಪ್ಲಿನ್ ತಮ್ಮ ಆಶಯಗಳ ಮೂಲಕ ನೆನಪಾಗುತ್ತಾರೆ.
ಕನ್ನಡ ಚಿತ್ರರಂಗದ ಮಟ್ಟಿಗೆ ಇದು ಮತ್ತೊಂದು ಅಪರೂಪದ, ಅನುಭೂತಿ ನೀಡುವಂತಹ ಸಿನಿಮಾ. ತಮ್ಮ ಸಿನಿಮಾ ಹೀಗೇ ಮೂಡಿಬರಬೇಕು, ಚಿತ್ರಕಥೆ ಬರೆದಂತೆಯೇ ಸಿನಿಮಾ ತೆರೆ ಮೇಲೆ ಮೂಡಬೇಕು ಎನ್ನುವ ತುಂಬು ಪ್ರೀತಿಯಿಂದ, ತುಂಬಾ ಸಮಾಧಾನದಿಂದ ತಂತ್ರಜ್ಞರು ಹಾಗೂ ಕಲಾವಿದರು ಕಟ್ಟಿರುವ ಸಿನಿಮಾ. ನಿರ್ದೇಶಕ ಕಿರಣ್ ರಾಜ್ ಹೇಳಿಕೊಂಡಂತೆ ಇದು ಸುಮಾರು ಐದು ವರ್ಷದ ಪ್ರಾಜೆಕ್ಟ್. ಶೂಟಿಂಗ್ ಶುರು ಮಾಡಬೇಕು ಎನ್ನುವಾಗ ಅಡಚಣೆಗಳು ಎದುರಾಗಿದ್ದು, ಅನಿರೀಕ್ಷಿತ ಬೆಳವಣಿಗೆಯಲ್ಲಿ ಸಿನಿಮಾದ ಬಜೆಟ್, ಕ್ಯಾನ್ವಾಸ್ ದೊಡ್ಡದಾಗಿದ್ದು, ಕೋವಿಡ್ ಸಂಕಷ್ಟಗಳಿಂದ ಶೂಟಿಂಗ್ ನಿಂತು, ನಿಂತು ನಡೆದದ್ದು.. ಹೀಗೆ ಒಟ್ಟಾರೆ ಈ ತಂಡದ ಸಿನಿಮಾ ಪ್ರೀತಿಯಿಂದಲೇ ‘777 ಚಾರ್ಲಿ’ ಒಂದೊಳ್ಳೆ ಸಿನಿಮಾ ಆಗಿ ರೂಪುಗೊಂಡಿದೆ.
ಕತೆ, ನಿರೂಪಣೆ ಮತ್ತು ಮೇಕಿಂಗ್ – ಮೂರೂ ವಿಭಾಗದಲ್ಲಿ ಸಿನಿಮಾ ಆಪ್ತವಾಗುತ್ತದೆ. ನಾಯಿಯನ್ನು ಪ್ರಮುಖ ಪಾತ್ರವನ್ನಾಗಿಸಿ ಕತೆ ಹೆಣೆಯುವಷ್ಟು ಸುಲಭವಲ್ಲ ಕತೆಯನ್ನು ತೆರೆಗೆ ತರುವುದು. ಆ ಜೀವಿಗಳಿಗೆ ಅವುಗಳದ್ದೇ ಆದೊಂದು ಪ್ರಪಂಚವಿರುತ್ತದೆ. ಈ ಸಿನಿಮಾದಲ್ಲಿ ಪ್ರೀತಿ ಮತ್ತು ತಾಳ್ಮೆಯಿಂದಲೇ ‘ಚಾರ್ಲಿ’ಯನ್ನು ಒಲಿಸಿಕೊಂಡಿದ್ದಾರೆ. ಆಕೆಯ ಭಾವನೆಗಳು ಸಹಜವಾಗಿಯೇ ಅಭಿವ್ಯಕ್ತಿಗೊಂಡಿವೆ. ಈ ಹಿಂದೆ ಹೇಳಿದಂತೆ ‘ಚಾರ್ಲಿ’ಯಲ್ಲೂ ನಟ ಚಾಪ್ಲಿನ್ ಕಾಣಿಸುತ್ತಾರೆ. ‘ಚಾರ್ಲಿ’ ತರಬೇತುದಾರರಿಗೆ ಮತ್ತು ಆಕೆಯನ್ನು ಪ್ರೀತಿಯಿಂದ ನೋಡಿಕೊಂಡು ಸಹಜಾಭಿನಯ ಪಡೆದುಕೊಂಡ ಚಿತ್ರತಂಡಕ್ಕೂ ಅಭಿನಂದನೆಗಳು ಸಲ್ಲಬೇಕು.
ನಿರ್ದೇಶಕ ಕಿರಣ್ ರಾಜ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಅವರು ದಶಕದ ಹಿಂದೆ ಕಂಡ ಕನಸಿದು. ಇದರ ಹಿಂದೆ ಸಾಕಷ್ಟು ಪರಿಶ್ರಮವಿದೆ. ತಾವು ಕಂಡ ಕನಸನ್ನು ಅವರು ಜತನದಿಂದ ಕಾಪಾಡಿಕೊಂಡು ಸಿನಿಮಾ ಮಾಡಿದ್ದಾರೆ. ಸ್ವತಃ ನಿರ್ದೇಶಕರೂ ಆದ್ದರಿಂದ ಹೀರೋ ರಕ್ಷಿತ್ ಶೆಟ್ಟಿ ಅವರಿಗೆ ಈ ಸಿನಿಮಾದ ಆಶಯಗಳು ಅರ್ಥವಾಗಿವೆ. ಅವರು ಕಿರಣ್ ರಾಜ್ ಕನಸಿಗೆ ಹೆಗಲಾಗಿದ್ದಾರೆ. ನಿರ್ಮಾಪಕರನ್ನು ಹುಡುಕಿಕೊಂಡು ಬಂದು ತಾವೂ ಹಣ ಹಾಕಿ, ಉತ್ತಮ ತಂತ್ರಜ್ಞರನ್ನು ಒಂದೆಡೆ ಸೇರಿಸಿ ಸಿನಿಮಾ ಮಾಡಿದ್ದಾರೆ. ಖಂಡಿತವಾಗಿ ಅವರ ವೃತ್ತಿಬದುಕಿನಲ್ಲಿ ಇದೊಂದು ಅಪೂರ್ವವಾದ ಸಿನಿಮಾ.
ಚಿತ್ರದಲ್ಲಿ ಧರ್ಮ ಮತ್ತು ಚಾರ್ಲಿ ಜರ್ನೀ ಮಧ್ಯೆ ಹಲವು ಪಾತ್ರಗಳು ಮನಸ್ಸಿಗೆ ತಾಕುತ್ತವೆ. ಪ್ರಮುಖವಾಗಿ ಹಿರಿಯ ಕಲಾವಿದರಾದ ಎಚ್.ಜಿ.ಸೋಮಶೇಖರ ರಾವ್ ಮತ್ತು ಭಾರ್ಗವಿ ನಾರಾಯಣ್ ಪಾತ್ರಗಳು ತುಂಬಾ ಇಷ್ಟವಾಗುತ್ತವೆ. ಈ ಹಿರಿಯರಿಬ್ಬರೂ ಈಗ ನಮ್ಮೊಂದಿಗಿಲ್ಲ. ಸಿನಿಮಾ ಬಿಡುಗಡೆಯ ಹೊತ್ತಿನಲ್ಲಿ ಅವರು ನಮ್ಮೊಂದಿಗೆ ಇರಬೇಕಿತ್ತು. ನಾಯಕಿ ಸಂಗೀತಾ ಶೃಂಗೇರಿ, ವೆಟರ್ನರಿ ಡಾಕ್ಟರ್ ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ, ತಮಿಳು ನಟ ಬಾಬ್ಬಿ ಸಿಂಹರ ಪಾತ್ರಗಳು ಸಿನಿಮಾದ ಕತೆಗೆ ಬೆಸೆದುಕೊಂಡಿವೆ. ಈ ಎಲ್ಲಾ ಪಾತ್ರಗಳಲ್ಲೂ ನಟ ಚಾಪ್ಲಿನ್ ಜೀವನ ಪ್ರೀತಿ ಕಾಣಿಸುತ್ತದೆ. ಈ ಚಿತ್ರವೇ ಒಂದು ಉತ್ತಮ ಸಂದೇಶ. ಅದಾಗ್ಯೂ ಕೊನೆಯಲ್ಲಿ ವಾಚ್ಯವೆನಿಸುವಂತೆ ಸಂದೇಶವೊಂದನ್ನು ಹೇಳುವ ಅಗತ್ಯತೆ ಯಾಕೆ ಸೃಷ್ಟಿಯಾಯ್ತೋ? ಇರಲಿ… ಸಂಗೀತ ಸಂಯೋಜಕ ನೋಬಿನ್ ಪೌಲ್ ಸೇರಿದಂತೆ ಚಿತ್ರದ ಎಲ್ಲಾ ತಂತ್ರಜ್ಞರಿಗೆ ಅಭಿನಂದನೆಗಳು. ಅರವಿಂದ ಕಶ್ಯಪ್ ಸಿನಿಮಾಟೋಗ್ರಫಿಯನ್ನು ಸವಿಯಬೇಕಾದರೆ ದೊಡ್ಡ ಪರದೆ ಮೇಲೆಯೇ ಸಿನಿಮಾ ವೀಕ್ಷಿಸಿ. ಒಂದು ಹಿತವಾದ ಅನುಭವ ‘777 ಚಾರ್ಲಿ’. Don’t miss it!