ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶನದಲ್ಲಿ ರಜನೀಕಾಂತ್‌ರ 169ನೇ ಸಿನಿಮಾ ಸೆಟ್ಟೇರುತ್ತಿದೆ. ಈ ತಮಿಳು ಚಿತ್ರದ ಪ್ರಮುಖ ಪಾತ್ರದಲ್ಲಿ ಶಿವರಾಜಕುಮಾರ್‌ ಅಭಿನಯಿಸುವುದು ಖಾತ್ರಿಯಾಗಿದೆ. ಸದ್ಯ ‘Thalaivar 169’ ಶೀರ್ಷಿಕೆಯಡಿ ಸಿನಿಮಾ ಶುರುವಾಗಲಿದ್ದು, ಸೆಪ್ಟೆಂಬರ್‌ನಲ್ಲಿ ಶಿವರಾಜಕುಮಾರ್‌ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.

ಜನಪ್ರಿಯ ನಟ ರಜನೀಕಾಂತ್‌ ಅವರ 169ನೇ ಸಿನಿಮಾದ ಪ್ರಮಖ ಪಾತ್ರದಲ್ಲಿ ಶಿವರಾಜಕುಮಾರ್‌ ನಟಿಸುವುದು ಖಾತ್ರಿಯಾಗಿದೆ. ಸದ್ಯ ಈ ಚಿತ್ರಕ್ಕೆ ‘Thalaivar 169’ ಎಂದು ನಾಮಕರಣ ಮಾಡಲಾಗಿದೆ. ಸ್ವತಃ ಶಿವರಾಜಕುಮಾರ್‌ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಿವರಾಜಕುಮಾರ್‌, “ಯಾವ ನಟನಿಗೇ ಆಗಲಿ, ರಜನೀಕಾಂತ್‌ ಅವರೊಂದಿಗೆ ನಟಿಸುವ ಅವಕಾಶ ಬಹುದೊಡ್ಡದು. ಈ ಸಿನಿಮಾದಲ್ಲಿ ನನಗೆ ಈ ಅವಕಾಶ ಸಿಕ್ಕಿರುವುದು ನನಗೆ ಹೆಮ್ಮೆಯ ವಿಷಯ. ಅವರು ನನ್ನನ್ನು ಚಿಕ್ಕಂದಿನಿಂದಲೂ ನೋಡಿದ್ದಾರೆ. ಅವರೊಂದಿಗೆ ನನಗೆ ವಿಶೇಷ ಬಾಂಧವ್ಯವಿದೆ. ಪಾತ್ರ ಹೇಗೇ ಇರಲಿ, ಈ ಚಿತ್ರದ ಭಾಗವಾಗುವುದಕ್ಕೆ ನನಗೆ ಖುಷಿಯಿದೆ. ಅಭಿಮಾನಿಗಳು ರಜನೀಕಾಂತ್‌ರೊಂದಿಗೆ ದೊಡ್ಡ ಪರದೆ ಮೇಲೆ ನನ್ನನ್ನು ನೋಡಲು ಖುಷಿ ಪಡುತ್ತಾರೆ” ಎಂದಿದ್ದಾರೆ.

ಆಗಸ್ಟ್‌ನಲ್ಲಿ ಸಿನಿಮಾ ಸೆಟ್ಟೇರಲಿದ್ದು, ಸೆಪ್ಟೆಂಬರ್‌ನಲ್ಲಿ ಶಿವರಾಜಕುಮಾರ್‌ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಬೆಂಗಳೂರು ಇಲ್ಲವೇ ಮೈಸೂರಿನಲ್ಲಿ ಶಿವರಾಜಕುಮಾರ್‌ ಭಾಗದ ಸನ್ನಿವೇಶಗಳು ಚಿತ್ರಣಗೊಳ್ಳಲಿವೆ. ರಜನೀಕಾಂತ್‌ರ 169ನೇ ಸಿನಿಮಾ ಈ ವರ್ಷದ ಆರಂಭದಲ್ಲೇ ಘೋಷಣೆಯಾಗಿತ್ತು. ಆಗ ನಿರ್ದೇಶಕ ನೆಲ್ಸನ್‌ ದಿಲೀಪ್‌ ಕುಮಾರ್‌ ‘ಡಾಕ್ಟರ್‌’ ಸಿನಿಮಾದ ಯಶಸ್ಸಿನ ಹುಮ್ಮಸ್ಸಿನಲ್ಲಿದ್ದರು. ಮುಂದೆ ಅವರ ನಿರ್ದೇಶನದಲ್ಲಿ ವಿಜಯ್‌ ಅಭಿನಯಿಸಿದ್ದ ‘ಬೀಸ್ಟ್‌’ ಸಿನಿಮಾ ತೆರೆಕಂಡಿತು. ಈ ಚಿತ್ರಕ್ಕೆ ನೆಗೆಟಿವ್‌ ವಿಮರ್ಶೆಗಳು ಬಂದವು. ಇದರಿಂದ ರಜನೀಕಾಂತ್‌ ಸಿನಿಮಾ ಸೆಟ್ಟೇರದು ಎನ್ನುವ ವದಂತಿ ಹರಡಿತ್ತು. ವದಂತಿಗಳೆಲ್ಲವೂ ಸುಳ್ಳಾಗಿ ಇದೀಗ ನೆಲ್ಸನ್‌ ಅವರೇ ರಜನಿಯನ್ನು ನಿರ್ದೇಶಿಸಲಿದ್ದಾರೆ. ಮೊದಲ ಬಾರಿ ರಜನೀ ಜೊತೆ ತೆರೆ ಹಂಚಿಕೊಳ್ಳುತ್ತಿರುವ ಶಿವರಾಜಕುಮಾರ್‌ ಖುಷಿ ವ್ಯಕ್ತಪಡಿಸಿದ್ದಾರೆ.

LEAVE A REPLY

Connect with

Please enter your comment!
Please enter your name here