ಸತೀಶ್ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್ ಅಭಿನಯದ ‘ಡಿಯರ್ ವಿಕ್ರಂ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಕ್ರಾಂತಿಕಾರಿ ಹೋರಾಟದ ಹಿನ್ನೆಲೆಯಲ್ಲಿ ಹೆಣೆದಿರುವ ಪ್ರೇಮಕತೆಯಿದು. ಜೂನ್ 30ರಂದು ನೇರವಾಗಿ VootSelectನಲ್ಲಿ ಸ್ಟ್ರೀಮ್ ಆಗಲಿದೆ.
ಮುಹೂರ್ತದ ಸಂದರ್ಭದಲ್ಲಿ ‘ಗೋದ್ರಾ’ ಎಂದಿದ್ದ ಶೀರ್ಷಿಕೆ ಇತ್ತೀಚೆಗೆ ‘ಡಿಯರ್ ವಿಕ್ರಂ’ ಎಂದು ಬದಲಾಗಿತ್ತು. ಕ್ರಾಂತಿಕಾರಿಯೊಬ್ಬನ ಹೋರಾಟದ ಹಿನ್ನೆಲೆಯಲ್ಲಿ ಹೆಣೆದ ಪ್ರೀತಿಯ ಕತೆ. ಕನ್ನಡದ ಮಟ್ಟಿಗೆ ಒಂದು ಭಿನ್ನ ಕಥಾವಸ್ತು. ಸದ್ಯ ಬಿಡುಗಡೆಯಾಗಿರುವ ಟ್ರೈಲರ್‌ನಲ್ಲಿ ಇದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ. ಉತ್ತಮ ಚಿತ್ರಗಳನ್ನು ನಿರ್ದೇಶಿಸಿರುವ ಜೇಕಬ್ ವರ್ಗೀಸ್ ತಂಡದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವಿ ಕೆ.ಎಸ್.ನಂದೀಶ್ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ, ಹಾಸನ, ಭಟ್ಕಳ, ಕರ್ನೂಲ್ ಅಲ್ಲದೆ ಮಲೇಷ್ಯಾದಲ್ಲೂ ಚಿತ್ರೀಕರಣ ನಡೆಸಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಥಿಯೇಟರ್‌ನಲ್ಲಿ ತೆರೆಕಾಣಬೇಕಿತ್ತು. ಆರ್ಥಿಕ ಅಡಚಣೆ ಮತ್ತು ಸಾಲುಸಾಲಾಗಿ ಬಿಡುಗಡೆಯಾಗುತ್ತಿರುವ ಚಿತ್ರಗಳಿಂದಾಗಿ ನಿರ್ಮಾಪಕರಲ್ಲೊಬ್ಬರಾದ ಹೀರೋ ಸತೀಶ್ ಓಟಿಟಿ ಮೊರೆ ಹೋಗಿದ್ದಾಗಿ ಹೇಳುತ್ತಾರೆ. ಇದು ಅವರ ಮನಸ್ಸಿಗೆ ಹತ್ತಿರವಾದ ಚಿತ್ರವೂ ಹೌದು. ಶ್ರದ್ಧಾ ಶ್ರೀನಾಥ್ ಅವರೊಂದಿಗೆ ಇದು ಅವರ ಮೊದಲ ಸಿನಿಮಾ. ಹಿರೋಯಿನ್ ಶ್ರದ್ಧಾ ಶ್ರೀನಾಥ್, “ವಾಸ್ತವವನ್ನು ಬಣ್ಣದ ಕನ್ನಡಕದೊಳಗಿನಿಂದ ಮಾತ್ರ ನೋಡಿ ಬೆಳೆದ ಹುಡುಗಿಯ ಪಾತ್ರ ನನ್ನದು. ಈ ಪಾತ್ರವನ್ನು ಎಂದೂ ಮರೆಯೋಕಾಗಲ್ಲ” ಎನ್ನುತ್ತಾರೆ. ವಸಿಷ್ಠ ಸಿಂಹ, ಸೋನು ಗೌಡ, ಅಚ್ಯುತ್ ಕುಮಾರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ.
ನಿರ್ದೇಶಕ ನಂದೀಶ್ ಚಿತ್ರೀಕರಣದ ವೇಳೆ ನಡೆದ ಘಟನೆಯೊಂದನ್ನು ಬಿಚ್ಚಿಡುತ್ತಾರೆ. ಶೂಟಿಂಗಿಗೆ ಹೋಗುವಾಗ ಮೊಣಕಾಲೆತ್ತರ ಇದ್ದ ನದಿ ನೀರು ವಾಪಾಸ್ ಬರುವಾಗ ಎದೆ ಮಟ್ಟಕ್ಕೆ ಏರಿದಾಗ ಚಿತ್ರತಂಡಕ್ಕಾದ ಆತಂಕವನ್ನು ಅವರು ಸುದ್ದಿಗೋಷ್ಠಿಯಲ್ಲಿ ನೆನಪಿಸಿಕೊಂಡರು. ಆಗ ಭಯವಾಗಿದ್ದರೂ ಈಗದು ಹಿತವಾದ ನೆನಪು ಎನ್ನುತ್ತಾರೆ. ಕಲರ್ಸ್ ವಾಹಿನಿ ಮುಖ್ಯಸ್ಥರಾದ ಪರಮೇಶ್ ಗುಂಡ್ಕಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ‘ಡಿಯರ್ ವಿಕ್ರಮ್’ ಜೂನ್ 30ರಂದು VootSelectನಲ್ಲಿ ನೇರವಾಗಿ ಬಿಡುಗಡೆಯಾಗಲಿದೆ.