ಪ್ರತಿಷ್ಠಿತ ಯಶ್‌ರಾಜ್‌ ಫಿಲ್ಮ್ಸ್ ನಿರ್ಮಾಣದ ‘ಶಮ್ಶೇರಾ’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಕರಣ್‌ ಮಲ್ಹೋತ್ರಾ ನಿರ್ದೇಶನದ ಪೀರಿಯಡ್‌ ಡ್ರಾಮಾದ ಮುಖ್ಯಭೂಮಿಕೆಯಲ್ಲಿ ರಣಬೀರ್‌ ಕಪೂರ್‌, ಸಂಜಯ್‌ ದತ್‌, ವಾಣಿ ಕಪೂರ್‌ ಅಭಿನಯಿಸಿದ್ದಾರೆ. ಜುಲೈ 22ರಂದು ಸಿನಿಮಾ ತೆರೆಕಾಣಲಿದೆ.

ರಣಬೀರ್‌ ಕಪೂರ್‌ ದ್ವಿಪಾತ್ರದಲ್ಲಿ ನಟಿಸಿರುವ ‘ಶಮ್ಶೇರಾ’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಇದು 1871ರ ಕಾಲಘಟ್ಟದ ಕತೆ. ತಂದೆಗೆ ಕೊಟ್ಟ ಮಾತನ್ನು ನೆರವೇರಿಸುವ ಪುತ್ರನ ರಿವೇಂಜ್‌ ಡ್ರಾಮಾ. ತಂದೆ – ಮಗನಾಗಿ ರಣಬೀರ್‌ ನಟಿಸಿದ್ದು, ಖಳ ಶುದ್ಧ್‌ ಸಿಂಗ್‌ ಪಾತ್ರದಲ್ಲಿ ಸಂಜಯ್‌ ದತ್‌ ಇದ್ದಾರೆ. ‘KGF2’ನಲ್ಲಿ ವಿಲನ್‌ ಆಗಿ ಮಿಂಚಿದ್ದ ಸಂಜಯ್‌ ದತ್‌ ಇಲ್ಲಿ ಮತ್ತೊಮ್ಮೆ ವಿಚಿತ್ರ ಮ್ಯಾನರಿಸಂನೊಂದಿಗೆ ಅಬ್ಬರಿಸುತ್ತಿದ್ದಾರೆ. ರಣಬೀರ್‌ ಕಪೂರ್‌ಗೆ ನಾಯಕಿಯಾಗಿ ವಾಣಿ ಕಪೂರ್‌ ಇದ್ದಾರೆ. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಸರಣಿ ಸಿನಿಮಾಗಳ ಪ್ರೇರಣೆ ಈ ಚಿತ್ರಕ್ಕೆ ಇರುವಂತಿದೆ. ಟ್ರೈಲರ್‌ನಲ್ಲಿರುವ ವಿಶ್ಯುಯೆಲ್ಸ್‌, ಪಾತ್ರಗಳು ‘ಬಾಹುಬಲಿ’ ಸರಣಿಗಳನ್ನು ನೆನಪು ಮಾಡುತ್ತವೆ. ಈ ಹಿಂದೆ YRF ಬ್ಯಾನರ್‌ನಡಿ ತಯಾರಾಗಿದ್ದ ಅಮೀರ್‌ ಖಾನ್‌, ಕತ್ರಿನಾ ಕೈಫ್‌ ಮತ್ತು ಅಮಿತಾಭ್‌ ಬಚ್ಚನ್‌ ಅಭಿನಯದ ‘ಥಗ್ಸ್‌ ಆಫ್‌ ಹಿಂದೂಸ್ತಾನ್‌’ ಬಾಕ್ಸ್‌ ಆಫೀಸ್‌ನಲ್ಲಿ ಶೋಚನೀಯವಾಗಿ ಸೋಲು ಕಂಡಿತ್ತು. ಹಾಗಾಗಿ ಈ ಬಾರಿ ಅವರು ಎಚ್ಚರಿಕೆಯಿಂದ ಸಿನಿಮಾ ಮಾಡಿದ್ದಾರೆ.

2018ರಲ್ಲಿ ‘ಸಂಜು’ ಸಿನಿಮಾ ನಂತರ ರಣಬೀರ್‌ ಕಪೂರ್‌ ಅಭಿನಯದ ಯಾವ ಚಿತ್ರವೂ ತೆರೆಕಂಡಿಲ್ಲ. ಅವರ ‘ಬ್ರಹ್ಮಾಸ್ತ್ರ’ ಸಿನಿಮಾ ಸೆಪ್ಟೆಂಬರ್‌ನಲ್ಲಿ ತೆರೆಕಾಣಲಿದೆ. ಕರಣ್‌ ಮಲ್ಹೋತ್ರಾ ನಿರ್ದೇಶನದ ‘ಶಮ್ಶೇರಾ’ ಕೋವಿಡ್‌ನಿಂದಾಗಿ ತೀರಾ ತಡವಾಗಿ ಬಿಡುಗಡೆಯಾಗುತ್ತಿದೆ. ಚಿತ್ರತಂಡದ ಯೋಜನೆಯಂತೆ ಈ ಸಿನಿಮಾ 2019ರ ಡಿಸೆಂಬರ್‌ನಲ್ಲಿ ತೆರೆಕಾಣಬೇಕಿತ್ತು. ಕೊನೆಗೆ ಮಾರ್ಚ್‌ 2022 ಎಂದು ನಿಗದಿಯಾಗಿದ್ದ ಬಿಡುಗಡೆ ದಿನಾಂಕ ಪೋಸ್ಟ್‌ಪೋನ್‌ ಆಗಿ ಜುಲೈ 22 ಆಗಿದೆ. ಹಿಂದಿ, ತಮಿಳು ಮತ್ತು ತೆಲುಗು ಅವತರಣಿಕೆಗಳಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here