ಸದ್ಯ ಬಹುತೇಕ ಭಾಷೆಗಳ ಯೂಟ್ಯೂಬ್, ಫೇಸ್ಬುಕ್, ವಾಟ್ಸ್ ಆಪ್, ಟ್ರೋಲು, ಮೀಮ್ಸ್‌ಗಳಲ್ಲೆಲ್ಲಾ ರಾಕಿ ಭಾಯ್‌ದೇ ಕಾರುಬಾರು. ಮೇಕಿಂಗ್‌ನಿಂದ ಗಮನ ಸೆಳೆದ ‘KGF2’ ಗಳಿಕೆಯ ವಿಚಾರದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಮತ್ತೊಂದೆಡೆ ಚಿತ್ರದ ಕುರಿತಾಗಿ ಕೆಲವರಿಂದ ಕೊಂಕು ಮಾತುಗಳೂ ಕೇಳಿಬರುತ್ತಿವೆ.

ಯಶಸ್ಸು ಎನ್ನುವುದು ಒಂದು ರೀತಿ ‘ಜಾದೂ’! ಸಿನಿಮಾ ಉದ್ಯಮಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನಂಬಿಕೆ ಮತ್ತು ಪ್ರೀತಿ ಇಲ್ಲ ಅಂದರೆ ಖಂಡಿತಾ ಯಶಸ್ಸು ಅಸಾಧ್ಯ. KGFನಂತಹ ಒಂದು ದೊಡ್ಡ ಸಿನಿಮಾ ಆಗೋದಕ್ಕೂ ಕೂಡ ಅದೇ ಕಾರಣ. ನಿರ್ದೇಶಕ ಪ್ರಶಾಂತ್‌ ನೀಲ್‌ ಅವರನ್ನು ಹೀರೋ ಯಶ್, ಯಶ್ ಅವರನ್ನು ಪ್ರಶಾಂತ್‌ ನೀಲ್‌, ಅವರಿಬ್ಬರ ಮೇಲೆ ನಂಬಿಕೆ ಇಟ್ಟು ಕೋಟಿ ಕೋಟಿ ಹಣ ಹಾಕಿದ ವಿಜಯ್ ಕಿರಗಂದೂರು, ಅವರೆಲ್ಲರೂ ಸೇರಿ ಪ್ರೇಕ್ಷಕರನ್ನು ನಂಬಿರಲಿಲ್ಲ ಅಂದರೆ… ಆ ಪ್ರೇಕ್ಷಕರೆಲ್ಲರಿಗೂ ಸಿನಿಮಾ ಮೇಲೆ ಪ್ರೀತಿ ಇರಲಿಲ್ಲ ಅಂದಿದ್ದರೆ.. KGF ಸುದ್ದಿಯಾಗುತ್ತಿರಲಿಲ್ಲ. ಸಿನಿಮಾ ಎಷ್ಟು ದಿನಗಳ ಕಾಲ ಚಿತೀಕರಣ ಆಯ್ತು? ಅದರಿಂದ ಎಷ್ಟು ಜನರ ಹೊಟ್ಟೆ ತುಂಬಿದೆ? ಎಷ್ಟು ಟೆಕ್ನೀಷಿಯನ್ಸ್‌ಗೆ ಕೆಲಸ ಸಿಕ್ಕಿದೆ? ಗಳಿಕೆಯಿಂದ ಸರ್ಕಾರಕ್ಕೆ ಎಷ್ಟು ಟ್ಯಾಕ್ಸ್‌ ಹೋಗುತ್ತಿದೆ? ಈ ಸಿನಿಮಾದ ಯಶಸ್ಸು ಎಷ್ಟು ನಿರ್ಮಾಪಕರು, ನಿರ್ದೇಶಕರಿಗೆ ಪ್ರೇರಣೆಯಾಗಿದೆ? ಎಷ್ಟು ಕಲಾವಿದರ ಕನಸುಗಳು ಅರಳುತ್ತಿವೆ? ಯಶಸ್ಸಿನ ಹಿಂದೆ ಇವೆಲ್ಲಾ ಲೆಕ್ಕಾಚಾರಗಳೂ ಇರುತ್ತವೆ.

ಸದ್ಯ ಚಿತ್ರಮಂದಿರದಿಂದ ಹಿಡಿದು ಬಹುತೇಕ ಭಾಷೆಗಳ ಯೂಟ್ಯೂಬ್, ಫೇಸ್ಬುಕ್, ವಾಟ್ಸ್ ಆಪ್, ಟ್ರೋಲು, ಮೀಮ್ಸ್‌ಗಳಲ್ಲೆಲ್ಲಾ ರಾಕಿ ಭಾಯ್‌ದೇ ಕಾರುಬಾರು. KGF2 ಗಳಿಕೆಯ ವಿಚಾರದಲ್ಲಿ ಕಾಲಿವುಡ್, ಟಾಲಿವುಡ್, ಮಾಲಿವುಡ್, ಬಾಲಿವುಡ್ ಎಲ್ಲೆಡೆ ವ್ಯಾಪಿಸಿಕೊಂಡು ಮೇಕಿಂಗ್ ಮತ್ತು ನರೇಷನ್‌ನಿಂದಾಗಿ ಗಮನ ಸೆಳೆಯುತ್ತಿದೆ. ಮತ್ತೊಂದೆಡೆ ಚಿತ್ರ, ಕತೆ ಬಗ್ಗೆ ಕೆಲವರಿಂದ ಕೊಂಕು ಮಾತುಗಳು ಕೇಳಿಬರುತ್ತಿವೆ. ತರ್ಕಕ್ಕೆ ಸಿಗದ ಮಾತುಗಳಿವು. ಹೆಲಿಕಾಪ್ಟರ್‌ ಹಾರಿಸೋದು ಓವರ್‌ ಬಿಲ್ಡ್‌ಅಪ್‌, ರೀನಾಳನ್ನು ಎಂಟರ್‌ಟೇನ್‌ಮೆಂಟ್‌ ಎನ್ನುವ ರಾಕಿ, ಪೊಲೀಸ್ ಸ್ಟೇಷನ್ ಧ್ವಂಸದ ಸೀನ್.. ಹೀಗೆ ಕೆಲವು ಸನ್ನಿವೇಶಗಳನ್ನು ಪ್ರಸ್ತಾಪಿಸುತ್ತಾ ಚಿತ್ರದ ಬಗ್ಗೆ ನಕಾರಾತ್ಮಕವಾಗಿ ಮಾತನಾಡುತ್ತಿದ್ದಾರೆ. ಈ ಪ್ರಶ್ನೆಗಳು ತಪ್ಪು ಅಂತೇನಿಲ್ಲ. ಇದೇ ವೇಳೆ ಚಿತ್ರ, ಚಿತ್ರಕಥೆಯಲ್ಲಿರುವ ಸೂಕ್ಷ್ಮಗಳನ್ನೂ ನಾವು ಗಮನಿಸುವುದು ಅವಶ್ಯ.

ನಿರ್ದೇಶಕ ಪ್ರಶಾಂತ್‌ ನೀಲ್‌, “ನಾನು ಈ ಚಿತ್ರದಲ್ಲಿ ಯಾವುದೇ ಸಂದೇಶ ಕೊಡುವುದಕ್ಕೆ ಹೊರಟಿಲ್ಲ. ಮನರಂಜಿಸುವುದಷ್ಟೇ ನನ್ನ ಉದ್ದೇಶ” ಎಂದು ಹೇಳಿದ್ದರು. ಇನ್ನು ಸಿನಿಮಾವನ್ನು ಹೇಗೆ ಗ್ರಹಿಸುತ್ತಾನೆ ಎನ್ನುವುದು ಪ್ರೇಕ್ಷಕನಿಗೆ ಬಿಟ್ಟ ವಿಷಯ. ಪ್ರೇಕ್ಷಕನ ಬುದ್ಧಿವಂತಿಕೆ, ಸಿನಿಮಾದೆಡೆಗಿನ ಅವನ ನಿಲುವು, ಅಭಿರುಚಿಯ ಆಧಾರದ ಮೇಲೆ ಅದು ನಿರ್ಧಾರವಾಗುತ್ತದೆ. ಅಂದರೆ ಸಿನಿಮಾ ನೋಡುವ ಪ್ರತಿಯೊಬ್ಬನೂ ಪ್ರಭುದ್ಧನಾಗಿರಲೇಬೇಕು ಎಂದಲ್ಲ. ಅಥವಾ ಈ ಸಿನಿಮಾ ಒಪ್ಪಿಕೊಳ್ಳದೇ ಇರುವವರು ಬುದ್ದಿವಂತರಲ್ಲ ಎಂದೂ ಅಲ್ಲ.

KGF2 ಗಮನಿಸುವುದಾದರೇ, ನಿರ್ದೇಶಕರು ಸಿನಿಮಾದ ಶುರುವಿನಲ್ಲಿ ಪ್ರೋಟಾಗಾನಿಸ್ಟ್ ಆಗಿರುವ ರಾಕಿ ಎಂಟ್ರಿಯ ಮೊದಲ ದೃಶ್ಯದಲ್ಲೇ ನೆಪೋಟಿಸಮ್‌ ಬಗ್ಗೆ ಮಾತನಾಡುತ್ತಾನೆ. ಅದೂ ಸಿನಿಮಾದ ಆ ದೃಶ್ಯಕ್ಕಾಗಲಿ, ಕತೆಗಾಗಲಿ ಪ್ರತ್ಯೇಕವಾಗಿ ಕಾಣಿಸುವುದಿಲ್ಲ. ಅದೇ ದೃಶ್ಯದಲ್ಲಿ ನಾಯಕಿಯ ಕುರಿತು ಎರಡು ಮಾತುಗಳು ಪ್ರಸ್ತಾಪವಾಗುತ್ತವೆ. ಅದೂ ಆ ಕ್ಷಣಕ್ಕೆ ತಪ್ಪು ಅನಿಸಬಹುದು. ಆದರೆ ಚಿತ್ರ ಸಾಗುತ್ತ ಮುಂದಿನ ದೃಶ್ಯಗಳಲ್ಲಿ ಅವನಾಡಿದ ಅದೇ ಮಾತುಗಳನ್ನು ನಾಯಕಿಯ ಪಾತ್ರದ ಮುಖಾಂತರ ಅವನಿಗೇ ಚುಚ್ಚುವಂತೆ ಮಾತನಾಡಿಸಿದ್ದಾರೆ. ಅದು ಬ್ಯಾಲೆನ್ಸಿಂಗ್ ಆಕ್ಟ್! ನಿರ್ದೇಶಕನ ಕಸುಬುಗಾರಿಕೆಯನ್ನು ಅದು ತೋರಿಸುತ್ತದೆ. ನಂತರದ ಒಂದು ದೃಶ್ಯದಲ್ಲಿ ರಾಕಿ ಮತ್ತು ಗುರು ಪಾಂಡಿಯನ್ ಇಬ್ಬರೂ ರಮಿಕಾ ಸೇನ್ ವಿಚಾರವಾಗಿ ಮಾತಾಡುವಾಗ, “ಹೆಣ್ಣಿಗೆ ಕ್ರೋಧ ಬಂದರೆ ಕೈ ಮಾಡಬಾರದು, ಅಲಂಕಾರ ಮಾಡಿ ಪೂಜೆ ಮಾಡಿ ಕೈ ಮುಗಿಯಬೇಕು” ಎನ್ನುವ ಸಂಭಾಷಣೆ ಬರುತ್ತದೆ. ಅಂದರೆ ರಾಕಿ ಹೆಣ್ಣಿನಾಳ್ವಿಕೆಯನ್ನು ದ್ವೇಷಿಸುವವನಲ್ಲ ಅನ್ನೋದನ್ನು ನಿರ್ದೇಶಕರು ಕಟ್ಟಿದ್ದಾರೆ.

ಪ್ರಸ್ತುತ ಸಮಾಜದಲ್ಲಿ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ತಿಕ್ಕಾಟವಾಗುತ್ತಿದೆ. ಆಜಾನ್, ಹಿಜಾಬ್ ಎಂದೆಲ್ಲಾ ಸಂಘರ್ಷ ನಡೆಯುತ್ತಿದೆ. ಇತ್ತ ರಾಕಿ ಭಾಯ್‌ ನರಾಚಿಯಲ್ಲಿ ಮುಸ್ಲಿಂ ಸಮುದಾಯದವರಿಗೆ ನಮಾಜ್‌ಗೆ ಅವಕಾಶ ಕಲ್ಪಿಸಿ ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸುತ್ತಾನೆ. ರಾಕಿಯನ್ನು ಬೆಳೆಸಿದ ಖಾಸಿಂ ಚಾಚಾ ರಾಕಿಯ ಮದುವೆಯನ್ನು ಹಿಂದೂ ಸಂಪ್ರದಾಯದ ಪ್ರಕಾರ ಮಾಡುತ್ತಾನೆ. ಅಲ್ಲಿ ಪರಸ್ಪರರ ಧರ್ಮಗಳನ್ನು ಗೌರವಿಸುವ, ಭಾವೈಕ್ಯತೆ ಸಾರುವ ಸನ್ನಿವೇಶಗಳಿವೆ. ಗ್ಯಾಂಗ್‌ವಾರ್‌ಗಳಲ್ಲಿ ಸ್ತ್ರೀಯರಿಗೆ, ಮಕ್ಕಳಿಗೆ ತೊಂದರೆಯಾಗಕೂಡದು ಎನ್ನುವ ನೀತಿ, ನರಾಚಿಯಲ್ಲಿ ಒಂದು ಕಾಲದಲ್ಲಿ ಪ್ರಾಣಿಗಳಂತೆ ಬದುಕುತ್ತಿದ್ದ ಕಾರ್ಮಿಕರೆಡೆಗಿನ ರಾಕಿಯ ಪ್ರೀತಿ, ಅವರಿಗೆ ಗೌರವಯುತ ಬದುಕು ಕಲ್ಪಿಸುವುದು.. ಹೀಗೆ ಸೂಕ್ಷ್ಮ ವಿಷಯಗಳನ್ನು ಗಮನಿಸಬಹುದು.

ಇನ್ನು ಚಿತ್ರರಂಗ, ಅದರ ನವೀಕರಣ, ಆಧುನೀಕರಣ ಕುರಿತು ನೋಡುವುದಾದರೆ ಆಯಾ ಕಾಲಕ್ಕೆ ತಕ್ಕಂತೆ ಸಿನಿಮಾಗಳ ಮೂಲ ಉದ್ದೇಶ ಬದಲಾಗುತ್ತಾ ಬಂದಿದೆ. ನಮ್ಮ ಕನ್ನಡ ಚಿತ್ರರಂಗದ ಕುರಿತು ಅವಲೋಕಿಸುವುದಾದರೆ, ಹಿಂದೊಂದು ಕಾಲದಲ್ಲಿ ಸಿನಿಮಾ ಎಂದರೆ ಸಮಾಜಕ್ಕೆ ಸಂದೇಶ ಕೊಡಬೇಕೆನ್ನುವ ಉದ್ದೇಶ ಹೊಂದಿರುತ್ತಿದ್ದವು. ಅದರಂತೆಯೇ ಉತ್ತಮ ಕಥೆಯಾಧಾರಿತ ಸಿನಿಮಾಗಳು ಆ ಸಮಯದಲ್ಲಿ ನಿರ್ಮಾಣಗೊಳ್ಳುತ್ತಿದ್ದವು. ಅನೇಕ ಕಾದಂಬರಿ ಆಧಾರಿತ ಸಿನಿಮಾಗಳು ಆದವು. ನಂತರದಲ್ಲಿ ಪ್ರೇಕ್ಷಕರಿಗೆ ಒಂದಿಷ್ಟು ರಂಜನೆಯನ್ನು ಕೊಡಲು ಸ್ಷಲ್ಪವೇ ಮಸಾಲೇ ಸೇರಿಸುತ್ತಾ ನೃತ್ಯ ಮತ್ತು ಸಾಹಸ ದೃಶ್ಯಗಳನ್ನು ಸೇರಿಸುತ್ತಾ ತಯಾರಿಸಲು ಆರಂಭಿಸಿದರು.

ಮುಂದೆ ಸಿನಿಮಾ ಮಾಧ್ಯಮದಲ್ಲಿ ಮನರಂಜನೆಯೇ ಪ್ರಧಾನವಾಗುತ್ತಾ ಹೋದಂತೆ ನೀತಿ, ಬೋಧನೆಯ ಸಿನಿಮಾಗಳು ಕಲಾತ್ಮಕ (ಆರ್ಟ್) ವರ್ಗಕ್ಕೆ ಸೇರ್ಪಡೆಗೊಂಡವು. ನಂತರ ಕಾಲ್ಪನಿಕ ಕತೆಗಳ ಮನರಂಜನೆಯ ಸಿನಿಮಾಗಳು ಹೆಚ್ಚಾಗಿ ನಿರ್ಮಾಣಗೊಳ್ಳುತ್ತಾ ಸಿನಿಮಾದ ವಾಣಿಜ್ಯದ ಆಯಾಮಕ್ಕೆ ಹೆಚ್ಚಿನ ಒತ್ತು ಸಿಗತೊಡಗಿತು. ಅನ್ಯ ಭಾಷೆ, ದೇಶಗಳ ಸಿನಿಮಾಗಳನ್ನು ನೋಡುವುದಲ್ಲದೇ ಅದರಂತೆ ನಮ್ಮಲ್ಲೂ ತಯಾರಾಗಬೇಕು ಎಂದುಕೊಳ್ಳುತ್ತ ಅಲ್ಲಿಯ ತಂತ್ರಜ್ಞಾನವನ್ನು ನಮ್ಮಲ್ಲೂ ಅಳವಡಿಸಿಕೊಳ್ಳತೊಡಗಿದೆವು. ಸಿನಿಮಾ ತಯಾರಿಕೆ ಜೊತೆಗೆ ಜನರನ್ನು ತಲುಪುವ ಮಾರ್ಗಗಳೂ ವಿಸ್ತರಿಸುತ್ತಾ ಹೋದವು. ದಶಕಗಳ ಹಿಂದೆಯೇ ಅಕ್ಕಪಕ್ಕದ ರಾಜ್ಯಗಳ ಸಿನಿಮಾಗಳು ಗಡಿದಾಟಿ ರಾಜ್ಯಕ್ಕೆ ಬರುತ್ತಿದ್ದವು. ಜನಮನ್ನಣೆ ಜೊತೆಗೆ ಹಣವನ್ನೂ ಗಳಿಸತೊಡಗಿದವು. ಕೆಲವೇ ಕೆಲವು ನಮ್ಮ ಸಿನಿಮಾಗಳು ಹೊರರಾಜ್ಯಗಳನ್ನು ತಲುಪಿದರೂ ಅಂತಹ ಗಳಿಕೆ ಮಾಡಲಿಲ್ಲ.

ನಮ್ಮಲ್ಲಿ ಸಿನಿಮಾ ತಯಾರಿಕೆ ಮತ್ತು ಗುಣಮಟ್ಟದಲ್ಲಿ ಪ್ರಯೋಗಗಳಾದರೂ ಭಾರತೀಯ ಚಿತ್ರರಂಗವೇ ಗುರುತಿಸುವಂತೆ ನಿರಂತರತೆ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಆ ಕಾಲಕ್ಕೆ ಚಿತ್ರರಂಗ ಕಟ್ಟಿ ಬೆಳೆಸುವುದೇ ದೊಡ್ಡ ಕನಸಾಗಿತ್ತು. ಚಿತ್ರದ ಪೋಸ್ಟ್‌ಪ್ರೊಡಕ್ಷನ್‌ಗೆ ಸಂಬಂಧಿಸಿದ ಡಬ್ಬಿಂಗ್, ಎಡಿಟಿಂಗ್, ಕಲರಿಂಗ್‌ ಮುಂತಾದ ತಂತ್ರಜ್ಞಾನವನ್ನು ನಮ್ಮಲ್ಲಿಗೆ ತರುವುದೇ ದೊಡ್ಡ ಕೆಲಸವಾಗಿತ್ತು. ಈಗ ಪರಿಸ್ಥಿತಿ ಹಿಂದಿನಂತಿಲ್ಲ. ಚಿತ್ರರಂಗ ಬೆಳೆದಿದೆ, ಬಹುತೇಕ ಎಲ್ಲ ವರ್ಗದ ಕೆಲಸಗಳೂ ಇಲ್ಲೇ ಆಗುತ್ತಿವೆ. ಆದರೆ ಇಂಡಿಯನ್‌ ಸಿನಿಮಾ ಎಂದಾಗ ಈ ಹೊತ್ತಿಗೂ ಪ್ರತಿನಿಧಿಯಾಗಿ ಕಾಣಿಸುವುದು ಹಿಂದಿ ಸಿನಿಮಾಗಳೇ. ಅದಕ್ಕೆ ಪೂರಕವಾದ ಕಾರಣಗಳು ಹಲವಾರು ಇರಬಹುದು.

ಆದರೆ ಈಗ ನಾವು ಬಹಳಷ್ಟು ಅಭಿವೃದ್ದಿ ಹೊಂದಿದ್ದೇವೆ. ಅಕ್ಕಪಕ್ಕದ ರಾಜ್ಯಗಳು ಪ್ಯಾನ್ಇಂಡಿಯಾ ಸಿನಿಮಾ ಮಾಡಿ ದಾರಿ ತೋರಿಸಿದ ಮೇಲೂ ಕೈ ಕಟ್ಟಿ ಕೂರಲು ಸಾಧ್ಯವೆ? ಅಂತೆಯೇ ಈಗ ನಮ್ಮಲ್ಲಿರುವ ತಂತ್ರಜ್ಞಾನ ಬಳಸಿಕೊಂಡು ಒಂದು ವಿಭಿನ್ನ ಪ್ರಯತ್ನ ಮಾಡಿರುವುದು ತಪ್ಪೆ? ಹಿಂದಿ ಚಿತ್ರರಂಗವನ್ನೇ ಭಾರತೀಯ ಸಿನಿಮಾ ಎಂದು ಬಿಂಬಿಸಿ ದಕ್ಷಿಣದ ಸಿನಿಮಾಗಳನ್ನು ಪ್ರಾದೇಶಿಕ ಚಿತ್ರಗಳು ಎಂದು ಬಿಂಬಿಸಿರುವುದು, ಬಿಂಬಿಸುತ್ತಿರುವುದು ಸರಿಯೇ? ಕನ್ನಡ ಚಿತ್ರರಂಗ ಬೆಳೆಯುವುದು ಸರಿ, ಆದರೆ ಕಂಟೆಂಟ್‌ ಬೇರೆಯದ್ದೇ ಆಗಬೇಕು ಎನ್ನುವ ಒತ್ತಡ, ವಾದಗಳು ಸಮಂಜಸವೇ? ಹೌದು, ‘ಅಸುರನ್’, ‘ಜೈಭಿಮ್’, ‘ಕಾಮಾಟಿಪಡಂ’, ‘ಸರಪಟ್ಟ ಪರಂಪರೈ’ ಮುಂತಾದ ಸಿನಿಮಾಗಳು ಕಂಟೆಂಟ್‌ ದೃಷ್ಟಿಯಿಂದ ಭಿನ್ನ. ಮುಂದಿನ ದಿನಗಳಲ್ಲಿ ನಮ್ಮಲ್ಲೂ ಇಂತಹ ಸಿನಿಮಾಗಳು ತಯಾರಾಗಲಿವೆ. ಈ ಹಂತದಲ್ಲಿ ಇತರರನ್ನು ಕನ್ನಡ ಸಿನಿಮಾದತ್ತ ಸೆಳೆಯುತ್ತಿರುವ ‘KGF2’ ಬಗ್ಗೆಯೂ ಪ್ರೀತಿ ಇರಲಿ.

LEAVE A REPLY

Connect with

Please enter your comment!
Please enter your name here