ಚಿತ್ರದ ಮೊದಲಾರ್ಧ ಮಳೆ, ದ್ವಿತಿಯಾರ್ಧ ಮಂಜು. ಸದಾ ಮಳೆ ಸುರಿಯುವ ‘ನೀರುಕೋಟೆ’ ಕಾಲೇಜಿನಿಂದ ಶುರುವಾಗುವ ಕತೆ ಯೂರೋಪ್ ದೇಶಗಳ ಮಂಜಿನ ಮಧ್ಯೆ ಕರೆದೊಯ್ಯುತ್ತದೆ. ನಡುನಡುವೆ ಹಾರಾಡುವ ಗಾಳಿಪಟಗಳು. ಮುಗಿಲೆತ್ತರದಲ್ಲಿ ಹಾರಾಡುವ ಗಾಳಿಪಟಗಳು, ಕೆಲವು ಬಾರಿ ಸೂತ್ರ ಹರಿದ ಪಟಗಳೊಂದಿಗೆ ಚಿತ್ರದ ಸನ್ನಿವೇಶಗಳು ಸಮೀಕರಣಗೊಳ್ಳುತ್ತವೆ.
ತಮಾಷೆ, ತುಂಟತನ, ವಿಡಂಬನೆ ಜೊತೆ ಕತೆ ಹೇಳೋದು ನಿರ್ದೇಶಕ ಯೋಗರಾಜ್ ಭಟ್ ಶೈಲಿ. ಬರವಣಿಗೆ ಮೇಲೆ ನಂಬಿಕೆ ಇಟ್ಟು ಬಿಗಿಯಾದ ಚಿತ್ರಕಥೆಯೊಂದಿಗೆ ಭಟ್ಟರು ಸಿನಿಮಾ ಚಿತ್ರಿಸುತ್ತಾರೆ. ಕಾಗದದ ಮೇಲೆ ಅರ್ಥಗರ್ಭಿತವಾಗಿ ಕಾಣಿಸುವ ಸನ್ನಿವೇಶಗಳನ್ನು ಅಷ್ಟೇ ಸೂಕ್ಷ್ಮವಾಗಿ ತೆರೆಗೆ ತರುವುದು ಕಷ್ಟ. ಅದರಲ್ಲೂ ವಿಡಂಬನೆ ಪ್ರಕಾರಕ್ಕೆ ಹೆಚ್ಚಿನ ಸವಾಲು. ಅದೊಂಥರಾ ಕತ್ತರಿ ಮೇಲಿನ ನಡಿಗೆ. ಒಂಚೂರು ವ್ಯತ್ಯಾಸವಾದರೂ ಸಿನಿಮಾ ನೋಡುತ್ತಿರುವ ಪ್ರೇಕ್ಷಕ ತಲೆಕೆರೆದುಕೊಂಡು ಆಕಳಿಸತೊಡಗುತ್ತಾನೆ. ‘ಗಾಳಿಪಟ 2’ ನಲ್ಲಿ ಯೋಗರಾಜ ಭಟ್ಟರು ತಮ್ಮ ಬರವಣಿಗೆಯನ್ನು ತೆರೆಯ ಮೇಲೂ ಯಶಸ್ವಿಯಾಗಿ ದಾಟಿಸಿದ್ದಾರೆ. ಇಲ್ಲಿ ವಿಶಿಷ್ಟ ಪಾತ್ರಗಳೊಂದಿಗೆ ಬದುಕಿನ ಆಟ – ಪಾಠಗಳು ಅನಾವರಣಗೊಂಡಿವೆ. ಎರಡೂವರೆ ಗಂಟೆಗಳ ಸಿನಿಮಾ ತಂಪು ತಂಪು ಕೂಲ್ ಕೂಲ್!
ಚಿತ್ರದ ಮೊದಲಾರ್ಧ ಮಳೆ, ದ್ವಿತಿಯಾರ್ಧ ಮಂಜು. ಸದಾ ಮಳೆ ಸುರಿಯುವ ‘ನೀರುಕೋಟೆ’ ಕಾಲೇಜಿನಿಂದ ಶುರುವಾಗುವ ಕತೆ ಯೂರೋಪ್ ದೇಶಗಳ ಮಂಜಿನ ಮಧ್ಯೆ ಕರೆದೊಯ್ಯುತ್ತದೆ. ನಡುನಡುವೆ ಹಾರಾಡುವ ಗಾಳಿಪಟಗಳು. ಮುಗಿಲೆತ್ತರದಲ್ಲಿ ಹಾರಾಡುವ ಗಾಳಿಪಟಗಳು, ಕೆಲವು ಬಾರಿ ಸೂತ್ರ ಹರಿದ ಪಟಗಳೊಂದಿಗೆ ಚಿತ್ರದ ಸನ್ನಿವೇಶಗಳು ಸಮೀಕರಣಗೊಳ್ಳುತ್ತವೆ. ಸುಂದರ ಪರಿಸರದ ಜೊತೆ ಕನ್ನಡ ಭಾಷೆಯ ಕುರಿತ ಕಾಳಜಿಯ, ಅಭಿಮಾನದ ಮಾತುಗಳೂ ಇಲ್ಲಿವೆ. ಕತೆ, ಪಾತ್ರಗಳಷ್ಟೇ ಅಲ್ಲದೆ ಬಜೆಟ್ ದೃಷ್ಟಿಯಿಂದಲೂ ಈಗಿನ ‘ಗಾಳಿಪಟ’ದ ಕ್ಯಾನ್ವಾಸ್ ದೊಡ್ಡದು.
ದಶಕದ ಹಿಂದೆ ತೆರೆಕಂಡ ‘ಗಾಳಿಪಟ’ಕ್ಕೂ, ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಅಲ್ಲಿನ ಹೀರೋಗಳ ಪೋಲಿತನ, ತುಂಟಾಟ ಇಲ್ಲಿ ಹೆಚ್ಚಾಗಿದೆ ಎನ್ನುವುದು ವಿಶೇಷ. ಜಯಂತ ಕಾಯ್ಕಿಣಿ ಅವರು ಕೊಂಚ ಹೆಚ್ಚೇ ರೊಮ್ಯಾಂಟಿಕ್ ಆಗಿ ಹಾಡು ಬರೆದಿದ್ದರೆ, ಭಟ್ಟರು ಕೊಂಚ ಹೆಚ್ಚೇ ಸೆನ್ಶುಯೆಸ್ ಅಗಿ ಚಿತ್ರಿಸಿದ್ದಾರೆ. ಕಾಯ್ಕಿಣಿಯವರು ‘ಪರೀಕ್ಷೆ’ ಹಾಡಿನ ಮಧ್ಯೆ ಕಾಣಿಸಿಕೊಂಡು ರುಜು ಹಾಕಿ ಹೋಗುತ್ತಾರೆ! ತಮಾಷೆ, ವಿಷಾದ, ನೋವು – ನಲಿವಿನ ಜೊತೆ ಸಿನಿಮಾದ ಕತೆಯಲ್ಲಿ ಬದುಕಿನ ಅನಿಶ್ಚಿತತೆಯ ಕುರಿತ ಸಂದರ್ಭಗಳು ಧುತ್ತನೆ ಎದುರುಗೊಳ್ಳುತ್ತವೆ. ಭಟ್ಟರು ತಮ್ಮ ಎಂದಿನ ವಿಶಿಷ್ಟ ಸಂಭಾಷಣೆಗಳೊಂದಿಗೆ ವಿಷಾದದ ಸನ್ನಿವೇಶಗಳ ಪರಿಣಾಮ ಹೆಚ್ಚಿಸುತ್ತಾರೆ. ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಸಂತೋಷ್ ರೈ ಪತಾಜೆ ಛಾಯಾಗ್ರಹಣ ಚಿತ್ರದ ಅಂದವನ್ನು ಹೆಚ್ಚಿಸಿವೆ.
ಯೋಗರಾಜ ಭಟ್ಟರು ಬರೆದ ಸಂಭಾಷಣೆಗಳನ್ನು ಕ್ಲೀಷೆ ಅನ್ನಿಸದಂತೆ ಗಣೇಶ್ ತುಂಬಾ ಸೊಗಸಾಗಿ ಮಾತನಾಡುತ್ತಾರೆ. ಅದು ಇಬ್ಬರ ಮಧ್ಯೆಯ ಹೊಂದಾಣಿಕೆ. ಇಲ್ಲಿಯೂ ಇಬ್ಬರ ಜುಗಲ್ಬಂಧಿ ಪ್ರೇಕ್ಷಕರಿಗೆ ಮುದ ನೀಡುತ್ತದೆ. ಚಿತ್ರದಲ್ಲಿ ವಿಶೇಷವಾಗಿ ದಿಗಂತ್ ಪಾತ್ರ ಗಮನಸೆಳೆಯುತ್ತದೆ. ‘ಅಘೋರಿ’ ಅವತಾರದಲ್ಲಿ ಅವರು ತಮ್ಮ ಪಾತ್ರವನ್ನು ಬಿಡುಬೀಸಾಗಿ ನಿಭಾಯಿಸಿದ್ದಾರೆ. ಮಾಜಿ ಪ್ರೇಯಸಿಯೊಂದಿಗೆ ಜಗಳ ಮಾಡುತ್ತಾ, ಅನ್ಯಮನಸ್ಕ ಅಘೋರಿಯಾಗಿ ದಿಗಂಗ್ ತಮ್ಮ ಪಾತ್ರವನ್ನು ಶ್ರದ್ಧೆಯಿಂದ ನಿಭಾಯಿಸಿದ್ದಾರೆ. ನಾಯಕಿಯರಾದ ವೈಭವಿ ಶಾಂಡಿಲ್ಯ ಮತ್ತು ಶರ್ಮಿಳಾ ಮಾಂಡ್ರೆ ಅವರಿಗೆ ಈ ಚಿತ್ರದ ನಂತರ ಅವಕಾಶಗಳು ಹೆಚ್ಚಾಗುವ ಸಾಧ್ಯತೆಗಳಿವೆ. ವೈಭವಿ ಶಾಂಡಿಲ್ಯ ಅವರು ಗ್ಲಾಮರ್ ಜೊತೆ ನಟನೆಯಲ್ಲೂ ಮುಂದು. ತಮ್ಮೊಳಗೊಬ್ಬ ಉತ್ತಮ ನಟನಿದ್ದಾನೆ ಎನ್ನುವುದನ್ನು ನಿರ್ದೇಶಕ ಪವನ್ ಕುಮಾರ್ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಎಂದಿನಂತೆ ಅನಂತನಾಗ್ ಅವರದ್ದು ಎಲ್ಲರಿಗೂ ಪ್ರಿಯವಾಗುವ ನಟನೆ. ಈ ಬಾರಿ ಕನ್ನಡ ಮೇಷ್ಟ್ರಾಗಿ, ಬದುಕನ್ನು ಗಾಳಿಪಟ್ಟಕ್ಕೆ ಸಮೀಕರಿಸಿ ಮಾತನಾಡುವ ಫಿಲಾಸಫರ್ ಆಗಿ ಅವರು ಹೆಚ್ಚು ಇಷ್ಟವಾಗುತ್ತಾರೆ. ರಂಗಾಯಣ ರಘು ಮತ್ತು ಸುಧಾ ಬೆಳವಾಡಿ ಪಾತ್ರಗಳು ಬೋನಸ್!