ಕನ್ನಡ ಚಿತ್ರರಂಗದ ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ತಮ್ಮ ವೃತ್ತಿ ಬದುಕಿನಲ್ಲಿ ಸೆರೆಹಿಡಿದಿರುವ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಆಯೋಜನೆಗೊಂಡಿದೆ. ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿಯಲ್ಲಿ ಫೋಟೊಗಳು ಪ್ರದರ್ಶನಗೊಳ್ಳಲಿವೆ. ಸೆಪ್ಟೆಂಬರ್ 2ರಂದು ಕಾರ್ಯಕ್ರಮಕ್ಕೆ ಚಾಲನೆ ಸಿಗುತ್ತಿದ್ದು, ಸೆಪ್ಟೆಂಬರ್ 4ರವರೆಗೆ ಪ್ರದರ್ಶನ ನಡೆಯಲಿದೆ.
ಅದು ಎಪ್ಪತ್ತರ ದಶಕದ ಆರಂಭ. ಕನ್ನಡ ಚಿತ್ರರಂಗ ನಿಧಾನವಾಗಿ ಮದರಾಸಿನಿಂದ ಕರ್ನಾಟಕಕ್ಕೆ ಶಿಫ್ಟ್ ಆಗುತ್ತಿತ್ತು. ಈ ಹಂತದಲ್ಲಿ ಎಲ್ಲಾ ವಿಭಾಗಗಳಿಗಿಂತ ಮುನ್ನ ‘ಪ್ರಗತಿ’ ಸ್ಟುಡಿಯೋ ಮೂಲಕ ಸ್ಟಿಲ್ ಫೋಟೊಗ್ರಫಿ ನಾಡಿಗೆ ಕಾಲಿಟ್ಟಿತು. ಸಹೋದರರಾದ ನಾಗೇಶ್ ಬಾಬ ಮತ್ತು ಅಶ್ವತ್ಥ ನಾರಾಯಣ 1972ರಲ್ಲಿ ಬೆಂಗಳೂರು ಗಾಂಧಿನಗರದ 6ನೇ ಕ್ರಾಸ್‌ನಲ್ಲಿ ‘ಪ್ರಗತಿ’ ಸ್ಟುಡಿಯೋ ಆರಂಭಿಸಿದರು. ಈ ಮೂಲಕ ಪೂರ್ಣ ಪ್ರಮಾಣದಲ್ಲಿ ಕನ್ನಡ ನಾಡಿನಲ್ಲಿ ನೆಲೆ ಕಂಡುಕೊಂಡ ಮೊದಲ ಪ್ರೊಫೆಷನ್ ಎನ್ನುವ ಹೆಗ್ಗಳಿಕೆಗೆ ‘ಸ್ಟಿಲ್ ಫೋಟೊಗ್ರಫಿ’ ಪಾತ್ರವಾಯ್ತು.
ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ‘ಪ್ರಗತಿ’ ಸ್ಟುಡಿಯೋ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ. ಸ್ಥಿರಚಿತ್ರ ಛಾಯಾಗ್ರಹಣದ ಮೂಲಕ ನಾಲ್ಕು ದಶಕಗಳ ಕಾಲ ‘ಪ್ರಗತಿ’ ಕನ್ನಡ ಚಿತ್ರಜಗತ್ತಿನ ಭಾಗವಾಗಿದೆ. ಅಶ್ವತ್ಥ ನಾರಾಯಣ ಅವರ ಸ್ಥಿರಚಿತ್ರ ಛಾಯಾಗ್ರಹಣ ವೃತ್ತಿ ಆರಂಭವಾಗಿದ್ದು (1965) ಮದರಾಸಿನಲ್ಲಿ ‘ಬೆಳ್ಳಿಮೋಡ’ ಚಿತ್ರದೊಂದಿಗೆ. ಅವರಿಗೆ ಒತ್ತಾಸೆಯಾಗಿ ನಿಂತದ್ದು ಮದರಾಸಿನಲ್ಲೇ ಇದ್ದ ಸಹೋದರ, ಚಿತ್ರನಿರ್ದೇಶಕ ನಾಗೇಶ್ ಬಾಬ. ಅಶ್ವತ್ಥರು ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಕನ್ನಡ ಚಿತ್ರರಂಗ ಕಂಡ ಪ್ರಮುಖ ಚಿತ್ರನಿರ್ದೇಶಕರ ಸಿನಿಮಾಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ‘ಪ್ರಗತಿ’ಯಲ್ಲಿ ಹತ್ತಾರು ಛಾಯಾಗ್ರಾಹಕರು ತಯಾರಾಗಿದ್ದಾರೆ. ಸಿನಿಮಾ ಸ್ಥಿರಚಿತ್ರ, ಸಿನಿಮಾಗೆ ಸಂಬಂಧಿಸಿದ ಇತರೆ ಫೋಟೋ, ಸ್ಟುಡಿಯೋ ಹಾಗೂ ಚಿತ್ರೀಕರಣದ ಸಂದರ್ಭದ ಕ್ಲಿಪಿಂಗ್, ಚಿತ್ರೋದ್ಯಮದ ಕಾರ್ಯಕ್ರಮಗಳು, ನಟ – ನಟಿಯರ ಭಾವ ಚಿತ್ರ, ಕಲಾವಿದರ ಕುಟುಂಬಗಳ ವೈಯಕ್ತಿಕ ಸಮಾರಂಭಗಳು, ಹೀಗೆ ಅವರ ಸಂಗ್ರಹದಲ್ಲಿರುವ ಅಸಂಖ್ಯಾತ ಛಾಯಾಚಿತ್ರಗಳು ಕನ್ನಡ ಚಿತ್ರರಂಗದ ಇತಿಹಾಸವನ್ನು ದಾಖಲಿಸುತ್ತವೆ.
ಅಶ್ವತ್ಥ ನಾರಾಯಣ ಅವರು ತಮ್ಮ ವೃತ್ತಿ ಬದುಕಿನಲ್ಲಿ ಸೆರೆಹಿಡಿದ ಅಪರೂಪದ ಛಾಯಾಚಿತ್ರಗಳ ಪೈಕಿ ಆಯ್ದ ಸುಮಾರು 300 ಫೋಟೊಗಳು ಪ್ರದರ್ಶನಗೊಳ್ಳುತ್ತಿವೆ. ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿಯಲ್ಲಿ ಸೆಪ್ಟೆಂಬರ್ 2ರಂದು ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಕನ್ನಡ ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರು, ಸಿನಿಮಾರಂಗದ ಪ್ರಮುಖ ಸಭೆ – ಸಮಾರಂಭಗಳು, ಕನ್ನಡ ಸಾಹಿತಿಗಳು, ಹಿಂದಿ ಚಿತ್ರರಂಗದ ಮೇರು ತಾರೆಯರ ಫೋಟೊಗಳು ಪ್ರದರ್ಶನಗೊಳ್ಳಲಿವೆ. ಹಿರಿಯ ನಟಿ ಪದ್ಮಶ್ರೀ ಭಾರತಿ ವಿಷ್ಣುವರ್ಧನ್, ಹಿರಿಯ ನಟ ಡಾ.ಶ್ರೀನಾಥ್, ಚಿತ್ರನಿರ್ದೇಶಕರು ಹಾಗೂ ಪ್ರಸ್ತುತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಟಿ.ಎಸ್.ನಾಗಾಭರಣ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸೆಪ್ಟೆಂಬರ್ 2ರಿಂದ 4ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್‌ನ ದೇವರಾಜ ಅರಸು ಗ್ಯಾಲರಿಯಲ್ಲಿ ಪ್ರದರ್ಶನ ನಡೆಯಲಿದೆ.
ಈ ಬಗ್ಗೆ ಮಾತನಾಡುವ ಅಶ್ವತ್ಥ ನಾರಾಯಣ ಅವರು, “1970ರಿಂದ 85ರವರೆಗಿನ ಕನ್ನಡ ಚಿತ್ರರಂಗದ ಅವಧಿಯನ್ನು ಸುವರ್ಣಯುಗ ಎಂದೇ ಕರೆಯಲಾಗುತ್ತದೆ. ಈ ಅವಧಿಯಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ದೇಶದ ಇತರೆ ಸಿನಿಮಾ ತಂತ್ರಜ್ಞರು ಹೆಮ್ಮೆ ಪಡುವಂತಹ ಚಿತ್ರಗಳು ತಯಾರಾದವು. ಸಾಕಷ್ಟು ಪ್ರಯೋಗಗಳು ನಡೆದವು. ಹಿಂದಿ ಮತ್ತು ದಕ್ಷಿಣ ಭಾರತದ ಇತರೆ ಚಿತ್ರರಂಗಗಳ ಮೇರು ಕಲಾವಿದರು ಹಾಗೂ ತಂತ್ರಜ್ಞರು ಪಾಲ್ಗೊಂಡ ಕಾರ್ಯಕ್ರಮಗಳು ಬೆಂಗಳೂರಿನಲ್ಲಿ ನಡೆದವು. ಈ ಸಂದರ್ಭಗಳಿಗೆ ಸಾಕ್ಷಿಯಾದ ಖುಷಿ ನನ್ನದು. ನನ್ನ ಕ್ಯಾಮರಾದಲ್ಲಿ ಸೆರೆಯಾದ ಅಂದಿನ ಹಲವು ನೆನಪುಗಳು ಛಾಯಾಚಿತ್ರ ಪ್ರದರ್ಶನದಲ್ಲಿ ಇರಲಿವೆ” ಎನ್ನುತ್ತಾರೆ. ಈ ಛಾಯಾಚಿತ್ರ ಪ್ರದರ್ಶನದಲ್ಲಿ ಅಶ್ವತ್ಥ ನಾರಾಯಣ ಅವರ ತಂದೆ ಕೃಷ್ಣಮೂರ್ತಿಯವರು 1935ರಿಂದ 1945ರವರೆಗಿನ ಅವಧಿಯಲ್ಲಿ ಸೆರೆಹಿಡಿದ ಆಯ್ದ ಕೆಲವು ಫೋಟೊಗಳು ಪ್ರದರ್ಶನಗೊಳ್ಳಲಿವೆ ಎನ್ನುವುದು ವಿಶೇಷ.