ಭಾರತದ ಪ್ರಸ್ತುತ ಸಂದರ್ಭದ ವಸ್ತುಸ್ಥಿತಿಯ ಕುರಿತು ವ್ಯಗ್ರರಾಗಿರುವ ಅನುಭವ ಸಿನ್ಹಾ ತಮ್ಮ ತಳಮಳವನ್ನು ಹಂಚಿಕೊಳ್ಳಲು ಸಿನಿಮಾ ಮಾಡುತ್ತಾರೆ. ಇದು ಖಂಡಿತ ಶ್ಲಾಘನೀಯ. ಆದರೆ ಆಶಯ ಮತ್ತು ಪ್ರಯತ್ನಗಳಾಚೆ ಮೂಡುವ ಸಿನಿಮಾ ಹೊಸತನವನ್ನು, ತನ್ನ ಆಶಯವನ್ನು ರುತ್ವಿಕ್ ಘಟಕ್ ಹೇಳಿದಂತೆ ‘ಸತ್ಯವೂ ಒಂದು ಕಲೆ’ ಎಂದು ಕಟ್ಟಿಕೊಡಲು ಸಾಧ್ಯವಾಗಬೇಕು. ‘ಅನೇಕ್‌’ ಹಿಂದಿ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಧರ್ಮ ಸೂಕ್ಷ್ಮತೆಯ ‘ಮುಲ್ಕ್’, ಜಾತಿ ಸೂಕ್ಷ್ಮತೆಯ ‘ಆರ್ಟಿಕಲ್ 15’ ನಂತರ ಈ ತ್ರಿವಳಿ ಸರಣಿಯ ಮುಂದುವರಿಕೆಯಾಗಿ ಪ್ರಾದೇಶಿಕ ಸೂಕ್ಷ್ಮತೆಯ ‘ಅನೇಕ್’ ಸಿನಿಮಾ ಬಿಡುಗಡೆಯಾಗಿದೆ. ಇಲ್ಲಿ ಆರಂಭದಲ್ಲಿಯೇ ಸಮಾಧಾನ ಕೊಡುವ ಅಂಶಗಳಿವೆ. ಗಡಿ ವಿವಾದ ಮತ್ತು ಹಿಂಸೆ, ಪ್ರಕ್ಷುಬ್ಧತೆಯುಳ್ಳ ಈಶಾನ್ಯ ರಾಜ್ಯಗಳ ಕುರಿತು ಸಿನಿಮಾ ಮಾಡುವಾಗ ಇತರೆ ಮೂರನೇ ದರ್ಜೆಯ ಹಿಂದಿ ಸಿನಿಮಾಗಳ ರೀತಿ ಗಡಿ ದೇಶಗಳನ್ನು ಶತೃಗಳನ್ನಾಗಿ, ದಾಳಿಕೋರರನ್ನಾಗಿ ನೋಡದೆ ಆ ರಾಜ್ಯಗಳ ಒಳಗಿನ ವೈರುಧ್ಯಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿರುವುದು. ಪ್ರಪಗಂಡಾ ಸಿನಿಮಾ ‘ಕಾಶ್ಮೀರ ಫೈಲ್ಸ್’ ರೀತಿ ಒಂದು ಧರ್ಮವನ್ನು ಗುರಿಯಾಗಿಸದೆ ವಸ್ತುನಿಷ್ಠ ಗುಣ ಉಳಿಸಿಕೊಂಡಿರುವುದು.

ಅನುಭವ ಸಿನ್ಹಾರಂತಹ ಪ್ರಬುದ್ಧ, ಪ್ರಗತಿಪರ ಚಿಂತನೆಯ ನಿರ್ದೇಶಕರು ಎಂದಿನಂತೆ ತಮ್ಮ ಜವಾಬ್ದಾರಿ ನಿಭಾಯಿಸಿದ್ದಾರೆ. ಈಶಾನ್ಯ ರಾಜ್ಯಗಳಂತಹ ಭೌಗೋಳಿಕವಾಗಿ ನಮ್ಮೊಳಗಿದ್ದೂ ಸಂಪೂರ್ಣವಾಗಿ ನಿರ್ಲಕ್ಷಿತವಾಗಿರುವ ಪ್ರದೇಶದ ಕುರಿತು ಸಿನಿಮಾ ಮಾಡಲು ಮುಂದಾಗಿರುವುದು ಸಹ ಪ್ರಶಂಸನೀಯ. ಈ ಎಲ್ಲಾ ಸಕರಾತ್ಮಕ ಗುಣಗಳನ್ನುಳ್ಳ ‘ಅನೇಕ್’ ಸಿನಿಮಾದಲ್ಲಿ ಸಿನ್ಹಾ ಅವರ ಹಿಂದಿನ ಸಿನಿಮಾಗಳ ರೀತಿ ಇಲ್ಲಿಯೂ ಸೂಕ್ಷ್ಮ ಒಳನೋಟದ ಕೊರತೆಯಿದೆ.
ಎಂದಿನಂತೆ ಆಶಯವಿದೆ, ಸಂವೇದನೆಯಿದೆ, ಪ್ರಾಮಾಣಿಕ ಪ್ರಯತ್ನವಿದೆ. ಆದರೆ ಖಚಿತವಾದ ಮತ್ತು ಸಮಂಜಸವಾದ ಸಮಗ್ರ ಗ್ರಹಿಕೆಯಿಲ್ಲ.

ಉದಾಹರಣೆಗೆ, ಈಗಾಗಲೇ ಸಂತ್ರಸ್ತರಾಗಿರುವ, ಭಾರತದ ಬಹುಸಂಖ್ಯಾತರ ಕೆಂಗಣ್ಣಿಗೆ ಗುರಿಯಾಗಿರುವ ಕಾಶ್ಮೀರ ಮುಸ್ಲಿಂಮರ ಜಾತಿಯವನಾದ ಅಬ್ರಾರ್ ಪಾತ್ರವನ್ನು ಇಂದಿಗೂ ಅಪರಿಚಿತವಾಗಿರುವ, ಪ್ರಕ್ಷುಬ್ಧವಾಗಿರುವ ಈಶಾನ್ಯ ರಾಜ್ಯಗಳ ಉನ್ನತ ಪೋಲಿಸ್ ಅಧಿಕಾರಿಯಾಗಿ ಸೃಷ್ಟಿಸಿದ ಹಿಂದಿನ ತರ್ಕವೇನು?
ಇಲ್ಲಿ ಶಾಂತಿ ಬಯಸುವ ಪ್ರೊಟಗಾನಿಸ್ಟ್ ಹಿಂದೂ. ಆದರೆ ಬಂಡುಕೋರರೊಂದಿಗೆ ಮಾತುಕತೆ ನಡೆಸಲು ಕೇಂದ್ರದ ಪ್ರತಿನಿಧಿಯಾಗಿ ನಿಯುಕ್ತಿಗೊಂಡವರು ಕಲ್ಲು ಹೃದಯದ ಕಾಶ್ಮೀರಿ ಮುಸ್ಲಿಂ. ಇದನ್ನು ಹೇಗೆ ಅರ್ಥೈಸುವುದು?

ಕಾಶ್ಮೀರದಂತೆಯೇ ಈಶಾನ್ಯ ರಾಜ್ಯಗಳಲ್ಲಿಯೂ ಕೇಂದ್ರದ ದೊಡ್ಡಣ್ಣ ಧೋರಣೆ ವಿರುದ್ಧ ಆಕ್ರೋಶವಿದೆ. ಅದರ ಪ್ರತಿನಿಧಿ ವಿರುದ್ದವೂ ಇದು ವಿಸ್ತರಿಸುತ್ತದೆ. ಇಲ್ಲಿ ಆ ಆಕ್ರೋಶಕ್ಕೆ ಗುರಿಯಾಗುತ್ತಿರುವವ ಕೇಂದ್ರದ ದುಷ್ಟ ನೀತಿಗೆ ಬಲಿಯಾದ ರಾಜ್ಯದ ಪ್ರಜೆ ಅದರಲ್ಲೂ ಮುಸ್ಲಿಂ. ಕಾಶ್ಮೀರದಂತೆಯೇ ಈಶಾನ್ಯ ರಾಜ್ಯಗಳು ‘ನಿಮ್ಮ ಭಾರತ’ ಎಂದೇ ಸಂಬೋಧಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಶ್ಮೀರಿ ಮುಸ್ಲಿಂನನ್ನು ಆ ಭಾರತದ ಪ್ರತಿನಿಧಿಯಾಗಿ ತೋರಿಸಲು ಬಲವಾದ ಕಾರಣ ಕಟ್ಟಿಕೊಡಬೇಕಾಗುತ್ತದೆ.

ಮುಖ್ಯವಾಗಿ ಮತೀಯವಾದೀಕರಣಗೊಂಡ ಇಂದಿನ ದಿನಗಳಲ್ಲಿ ಅದರ ಸಂತ್ರಸ್ತರಾದ ಮುಸ್ಲಿಂ ಪಾತ್ರಗಳನ್ನು ಸೃಷ್ಟಿಸುವಾಗ ಎಲ್ಲಾ ಬಗೆಯ ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ. ಇದನ್ನೇ ಪ್ರತಿಪಾದಿಸುವ ಸಿನ್ಹಾ ಅವರೂ ಸಹ ಇಲ್ಲಿ ಯಾಕೆ ಈ ರೀತಿಯ ವಿರೋಧಾಭಾಸಕ್ಕೆ ಮುಂದಾದರು? ಆಥವಾ ಕೇಂದ್ರದ ನೀತಿಯಿಂದ ಸಮಾನ ಸಂತ್ರಸ್ತರಾಗಿರುವ ಎರಡು ಭಿನ್ನ ರಾಜ್ಯಗಳ ಪ್ರಜೆಗಳು ಪ್ರಭುತ್ವದ ಪಿತೂರಿಯಿಂದ ಹೇಗೆ ಪರಸ್ಪರ ದ್ವೇಷಿಸಲು ಪ್ರಾರಂಭಿಸುತ್ತಾರೆ ಎಂದು ಹೇಳಲು ಬಯಸಿದ್ದರೆ? ಒಂದು ವೇಳೆ ಇದು ಹೌದಾಗಿದ್ದರೆ ಇದರ ಕಥನ ಕಟ್ಟುವಲ್ಲಿ ಸೋತಿದ್ದಾರೆ.

ಸ್ಥಳೀಯ ಕ್ರೀಡಾಪಟು, ಭಾರತವನ್ನು ಶತೃ ಎಂದು ಕರೆಯುವ ಆಕೆಯ ತಂದೆ, ಕೇಂದ್ರದ ಸಚಿವ ಮತ್ತು ಆತ ಆಗಾಗ್ಗೆ ಗೌರವಯುತವಾಗಿ ಹೇಳುವ ಸಾಹೇಬ್ ಹೀಗೆ ಈ ಎಲ್ಲಾ ಪಾತ್ರಗಳೂ ಸಹಜವಾಗಿ ಸಮಕಾಲೀನ ಸಂದರ್ಭವನ್ನು ಬಿಂಬಿಸುತ್ತವೆ. ಆದರೆ ಅದರ ಸಂಕೀರ್ಣತೆ ಮತ್ತು ಬಗೆದಷ್ಟೂ ನಿಗೂಢವಾಗಿರುವ ಅಳವನ್ನು ನಿರೂಪಿಸಲು ವಿಫಲರಾಗಿರುವುದು ಗೋಚರಿಸುತ್ತದೆ. ಅದರಲ್ಲೂ ಇದುವರೆಗೂ ಮುಖ್ಯವಾಹಿನಿ ಸಿನಿಮಾದಲ್ಲಿ ಬಂದಿರದ ನಾಗಾಲ್ಯಾಂಡ್ ರಾಜ್ಯವನ್ನು ಪ್ರಾತಿನಿಧಿಕವಾಗಿ ಪರಿಗಣಿಸಿದಾಗ ಪಕ್ಕಾ ಹೋಂವರ್ಕ್‌ ಅಗತ್ಯವಿದೆ ಎನಿಸುತ್ತದೆ. ಅದು ಇಲ್ಲಿ ಕಾಣೆಯಾಗಿದೆ.

ಹೀಗಾಗಿ ಮುಂಜಾನೆ ಅಹ್ಲಾಲದಕರವಾಗಿ ಕಾಫಿ ಹೀರುತ್ತಾ ದಿನಪತ್ರಿಕೆ ಮೂಲಕ ಈಶಾನ್ಯ ರಾಜ್ಯಗಳ ಬವಣೆಯನ್ನು ಕಂಡುಕೊಂಡ ಪ್ರಗತಿಪರರ ಅನುಭವವನ್ನೇ ‘ಅನೇಕ್’ ಸಿನಿಮಾ ಕೊಡುತ್ತದೆ. ಇದರಾಚೆಗೆ ಅತ್ತಿತ್ತ ಹೊರಳುವುದಿಲ್ಲ. ಈಶಾನ್ಯ ರಾಜ್ಯಗಳ ಕುರಿತು ಹೊರಗಿನವರು ಸಿನಿಮಾ ಮಾಡುವಾಗ ವಿಸ್ತಾರವಾದ ಅಧ್ಯಯನ, ಗ್ರಹಿಕೆ ಅಗತ್ಯವಿದೆ. ಜೊತೆಗೆ ಎಂಬತ್ತರ ದಶಕದಿಂದ ಸಿನಿಮಾ ಮಾಡುತ್ತಿರುವ ಜಾನ್ ಬರೂವ, ಇಪ್ಪತ್ತೊಂದನೇ ಶತಮಾನದ ಹೊಸ ಭರವಸೆ ರೀಮಾ ಬೋರಾ ನಿರ್ದೇಶನದ ಸಿನಿಮಾಗಳ ಓದು ಸಹ ಮುಖ್ಯ.

ಕಡೆಯದಾಗಿ ಭಾರತದ ಪ್ರಸ್ತುತ ಸಂದರ್ಭದ ಮತಾಂಧತೆ, ಜಾತೀಯತೆ, ಹಿಂಸೆ ಕುರಿತು ವ್ಯಗ್ರರಾಗಿರುವ ಅನುಭವ ಸಿನ್ಹಾ ತಮ್ಮ ತಳಮಳವನ್ನು ಹಂಚಿಕೊಳ್ಳಲು ಸಿನಿಮಾ ಮಾಡುತ್ತಾರೆ ಮತ್ತು ಇದು ಖಂಡಿತ ಶ್ಲಾಘನೀಯ. ಆದರೆ ಆಶಯ ಮತ್ತು ಪ್ರಯತ್ನಗಳಾಚೆ ಮೂಡುವ ಸಿನಿಮಾ ಹೊಸತನವನ್ನು, ತನ್ನ ಆಶಯವನ್ನು ರುತ್ವಿಕ್ ಘಟಕ್ ಹೇಳಿದಂತೆ ‘ಸತ್ಯವೂ ಒಂದು ಕಲೆ’ ಎಂದು ಕಟ್ಟಿಕೊಡಲು ಸಾಧ್ಯವಾಗಬೇಕು. ಈ ಸಾಧ್ಯತೆಗಳ ಕಡೆಗೆ ಅನುಭವ ಸಿನ್ಹಾರಂತಹ ನಿರ್ದೇಶಕರು ಹುಡುಕಾಟ ನಡೆಸಬೇಕು.

LEAVE A REPLY

Connect with

Please enter your comment!
Please enter your name here