ತೆರೆಯ ಮುಂದಿನ ಪಾತ್ರಗಳನ್ನು ಮೊದಲ ಸೀಸನ್‌ನಿಂದ ಹಾಗೆಯೇ ಉಳಿಸಿಕೊಂಡ ಈ ಸರಣಿ, ತೆರೆಯ ಹಿಂದೆ ಬಹಳಷ್ಟು ಮಟ್ಟಿಗೆ ಬದಲಾಗಿದೆ. ನಿರ್ದೇಶಕ, ಕಥೆಗಾರರು, ಸಂಭಾಷಣಾಕಾರರು, ಛಾಯಾಗ್ರಾಹಕರು ಎಲ್ಲರೂ ಹೊಸಬರೆ. ನಿರ್ದೇಶಕ ತನುಜ್ ಚಂದ್ರ ಇಡೀ ಸರಣಿಯನ್ನು ಅತ್ಯಂತ ಬಿಗಿಯಾಗಿ ಕಟ್ಟಿದ್ದಾರೆ. ‘Delhi Crime 2’ ವೆಬ್‌ ಸರಣಿ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ.

Delhi Crime – ಇದರ ಮೊದಲ ಸೀಸನ್ ನಾವೆಲ್ಲರೂ ಬೆಚ್ಚಿಬಿದ್ದು ನೋಡುವಂತಹ ಕಥಾನಕವನ್ನು ಎದುರಿಗಿಟ್ಟಿತ್ತು. ಇಲ್ಲಿ ನಾನು ‘ಬೆಚ್ಚಿಬಿದ್ದು’ ಎನ್ನುವುದನ್ನು ಬೇಕೆಂದೇ ಬಳಸುತ್ತಿದ್ದೇನೆ. ನಿರ್ಭಯ ಪ್ರಕರಣದ ಬಗ್ಗೆ ಎಷ್ಟೇ ಓದಿದ್ದರೂ, ಅದರ ವಿವರಗಳ ಭಯಾನಕತೆಯನ್ನು ಸುದ್ದಿ ವಾಹಿನಿಗಳಲ್ಲಿ ನೋಡಿದ್ದರೂ, ಅದರ ಬಗ್ಗೆ ಮಾತನಾಡಿದ್ದರೂ ಅದನ್ನೊಂದು ದೃಶ್ಯ ರೂಪಕವಾಗಿ ನೋಡುವಾಗ ಆದ ಪರಿಣಾಮ ಅದನ್ನು ಮತ್ತೆಷ್ಟೋ ಪಟ್ಟು ಗಾಢವಾಗಿಸಿತ್ತು. ಅಲ್ಲಲ್ಲಿ ಎದುರಿಗಿನ ದೃಶ್ಯಗಳನ್ನು ನೋಡಲಾರದೆ, ಆ ಅಪರಾಧಿಗಳ ನಡವಳಿಕೆಯನ್ನು ಅರಗಿಸಿಕೊಳ್ಳಲಾಗದೆ ನಿಲ್ಲಿಸಬೇಕಾಗುತ್ತಿತ್ತು. ನಮ್ಮ ಒಳಗನ್ನು ಆಳವಾಗಿ ಕಲಕಿದಂತಹ ವೆಬ್ ಸರಣಿ ಇದಾಗಿತ್ತು. ಅಪರಾಧದ ಜೊತೆಜೊತೆಗೆ ಸರಣಿ ಅದಕ್ಕೆ ಸಂಬಂಧಿಸಿದವರ ವೈಯಕ್ತಿಕ ಬದುಕಿನ ಬಗೆಗೂ ಮಾತನಾಡಿತ್ತು. ಅದರಲ್ಲಿದ್ದ ಕಲಾವಿದರು, ಅವರ ಅಭಿನಯ ಸರಣಿಯ ಮುಖ್ಯ ಅಂಶಗಳಲ್ಲಿ ಒಂದಾಗಿತ್ತು. ವರ್ತಿಕಾ, ಭುಪೀಂದರ್, ನೀತಿ ಸಿಂಗ್, ಜೈರಾಜ್ ಸಿಂಗ್, ಕುಮಾರ್ ವಿಜಯ್, ಎಸ್ ಎಚ್ ಓ ಇತ್ಯಾದಿ ಪಾತ್ರಗಳು ಆ ಪಾತ್ರ ನಿರ್ವಹಿಸಿದವರಿಗಿಂತಾ ಮಿಗಿಲಾಗಿ ಪಾತ್ರಗಳಾಗೇ ಹತ್ತಿರವಾಗಿತ್ತು. ಮೊದಲ ಸೀಸನ್‌ನಲ್ಲಿ ಅದ್ಭುತವಾಗಿ ಬರುವ ಹಲವಾರು ಸರಣಿಗಳ ಮಿತಿ ಏನೆಂದರೆ ಆನಂತರ ಅದನ್ನು ಬೆಳೆಸಲಿಕ್ಕೆಂದು, ಅದರ ಕುರಿತಾದ ನಿರೀಕ್ಷೆಗಳಿಗೆ ತಕ್ಕಂತೆ ಇರಿಸಬೇಕೆಂದು, ಗ್ಯಾಲರಿಯ ಆಪೇಕ್ಷೆಗಳನ್ನು ಪೂರೈಸಬೇಕೆಂದು ಏನೇನೋ ಕಸರತ್ತುಗಳನ್ನು ಮಾಡಲಾರಂಭಿಸುತ್ತಾರೆ. ಆದರೆ Delhi Crime ಇದ್ಯಾವುದನ್ನೂ ಮಾಡಿಲ್ಲ ಎನ್ನುವುದು ಗಮನಾರ್ಹ.

ಸುಮಾರು ಒಂದು ಲಕ್ಷ ಚಿಲ್ಲರೆ ನಾಗರಿಕರಿಗೆ 138 ಪೋಲೀಸ್ ಸಿಬ್ಬಂದಿಯನ್ನು ಹೊಂದಿರುವ ದೆಹಲಿ ಇದರ ಜೊತೆಜೊತೆಗೆ ಕೇಂದ್ರ ಮತ್ತು ಕೇಂದ್ರಾಡಳಿತ ಪ್ರದೇಶದ ತೆಳು ಸೀಮೆಯ ಅಧಿಕಾರದ ಪರಿಧಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಅಲ್ಲದೆ ಅಧಿಕಾರ ಕೇಂದ್ರಕ್ಕೆ ಅಷ್ಟು ಹತ್ತಿರ ಇರುವ ಕಾರಣಕ್ಕೇ ಅದು ಎದುರಿಸಬೇಕಾದ ಒತ್ತಡಗಳೂ ಹಲವಾರು. ಇಂತಹ ದೆಹಲಿಯಲ್ಲಿ ಇದ್ದಕ್ಕಿದ್ದಂತೆ ಹಿರಿಯ ನಾಗರೀಕರ ಕೊಲೆಗಳಾಗುತ್ತವೆ. ಅದೂ ಸಮಾಜದ ಸಾಮಾಜಿಕ ಮತ್ತು ಆರ್ಥಿಕ ಶ್ರೇಣೀಕರಣದಲ್ಲಿ ಎತ್ತರದಲ್ಲಿರುವವರ ಕೊಲೆಗಳು. ಕೊಲೆಗಳು ಎಲ್ಲೇ ಆದರೂ ಖಂಡನೀಯವೇ. ಅದರ ಬಗ್ಗೆ ಎರಡು ಮಾತಿಲ್ಲ. ಆದರೆ ಇಂತಹ ಜಗತ್ತಿನಲ್ಲಿ ಕೊಲೆಗಳಾದರೆ ಅದು ಆಡಳಿತ ಯಂತ್ರವನ್ನು, ಮಾಧ್ಯಮ ಲೋಕವನ್ನು ಬೆಂಕಿ ಹತ್ತಿದಂತೆ ಅಲ್ಲಾಡಿಸಿಬಿಡುತ್ತದೆ. AIIMS ನ ವಯಸ್ಸಾದ ನಿವೃತ್ತ ವೈದ್ಯ ದಂಪತಿ ಮತ್ತು ಅವರ ಸ್ನೇಹಿತರಾದ ಇನ್ನೊಂದು ದಂಪತಿ ಕೊಲೆಯಾಗಿರುತ್ತಾರೆ. ಮತ್ತು ಅದು ಸರಣಿ ಕೊಲೆಗಳ ಶುರುವಾತ್ತಾಗಿರುತ್ತದೆ.

ಅವರ ಮನೆಯ ಹಲವಾರು ಸಿಸಿ ಟಿವಿಗಳಲ್ಲಿ ಆ ಕೊಲೆಗಾರರು ಓಡಾಡಿರುವ ದೃಶ್ಯಗಳು ಸೆರೆಯಾಗಿರುತ್ತವೆ. ಅವು ಸಾಮಾನ್ಯವಾಗಿ ಹಣ ಒಡವೆ ಲೂಟಿ ಮಾಡಲೆಂದು ಬಂದು, ಅಡ್ಡ ಬಂದಾಗ ಮಾಡಿದ ಕೊಲೆಗಳಂತೆ ಇರುವುದಿಲ್ಲ. ಭೀಷಣವಾಗಿ, ಬರ್ಬರವಾಗಿ ಸುತ್ತಿಗೆಗಳಿಂದ ಬಡಿದು ಅವರನ್ನು ಕೊಲ್ಲಲಾಗಿರುತ್ತದೆ. ಜೊತೆಗೆ ಕೊಲೆಯಾದವರ ಮೈಗಂಟಿರುವ ಎಣ್ಣೆ ಆ ಕೊಲೆಗಾರರು ಮೈತುಂಬಾ ಎಣ್ಣೆ ಪೂಸಿಕೊಂಡು ಬಂದಿದ್ದಾರೆ ಎನ್ನುವುದನ್ನು ಹೇಳುತ್ತದೆ. ಅಷ್ಟೇ ಅಲ್ಲದೆ ಆ ಕೊಲೆಗಾರರು ಉಂಡು, ತಿಂದು, ಕುಡಿದು ಮನೆಯನ್ನು ಅಸ್ತವ್ಯಸ್ತವಾಗಿ ಬಿಟ್ಟು ಹೋಗಿರುತ್ತಾರೆ. ಈ ಅಪರಾಧ ವಿಧಾನ ಅಥವಾ Modus Operandi, 90ರ ದಶಕದಲ್ಲಿ ಸರಣಿ ಕೊಲೆಗಳನ್ನು ಮಾಡಿದ್ದ ‘ಕಚ್ಚಾ ಬನಿಯನ್ ಗ್ಯಾಂಗ್’ ಅಥವಾ ಚಡ್ಡಿ ಬನಿಯನ್ ಧರಿಸಿ ಬಂದು ಕೊಲೆ, ದರೋಡೆ ಮಾಡುತ್ತಿದ್ದವರನ್ನು ಹೋಲುತ್ತಲಿರುತ್ತದೆ. ಸಿಸಿ ಟಿವಿಯಲ್ಲಿಕಂಡ ಕೊಲೆಗಡುಕರು ಅದೇ ವೇಷದಲ್ಲಿರುತ್ತಾರೆ. ಹೀಗಾಗಿ ಮೇಲ್ನೋಟಕ್ಕೆ ಅದು ಅವರದೇ ಕೆಲಸ ಅನ್ನಿಸುವಂತಿರುತ್ತದೆ. ಮಾಧ್ಯಮ ಸಹ ಅದನ್ನೇ ಮತ್ತೆ ಮತ್ತೆ ಹೇಳಿ, ಆ ಸಿಸಿ ಟೀವಿಯ ದೃಶ್ಯಗಳನ್ನು ತೋರಿಸಿ ತೋರಿಸಿ ನಗರದ ಹಿರಿಯ ನಾಗರಿಕರಲ್ಲಿ, ಅವರಿಗೆ ಸಂಬಂಧಿಸಿದವರಲ್ಲಿ ಭಯ ಬಿತ್ತುವುದರಲ್ಲಿ ಸಫಲವಾಗಿರುತ್ತದೆ. ಇದು ಅದೇ ಗ್ಯಾಂಗ್ ಕೆಲಸವೆ ಅಥವಾ ಅದು ಕಾಪಿ ಕ್ಯಾಟ್ ಕೊಲೆಗಳೆ? ಡಿಸಿಪಿ ವರ್ತಿಕಾ ಈ ಕೇಸ್ ಅನ್ನು ಬಿಡಿಸಬೇಕು. ಕೊಲೆಯಾದವರು ಸಮಾಜದ ಗಣ್ಯರು, ಹೀಗಾಗಿ ಆಕೆಯ ಮೇಲಿನ ಒತ್ತಡವೂ ಅಷ್ಟೇ ಹೆಚ್ಚಾಗಿರುತ್ತದೆ.

ಗೃಹಮಂತ್ರಿಗಳಿಂದ ಕಮಿಷನರ್‌ಗೆ, ಅವರಿಂದ ಡಿಸಿಪಿಗೆ, ಆಕೆಯಿಂದ ಅವಳ ತಂಡದವರಿಗೆ ಈ ಒತ್ತಡ ಸುಡು ಹನಿಯಾಗಿ ಇಳಿಯುತ್ತಿರುತ್ತದೆ. ಈ ವೃತ್ತಿಪರ ಬದುಕಿನ ಆಚೆಗೆ ಅವರ ವೈಯಕ್ತಿಕ ಬದುಕಿನ ಕೋಟಲೆಗಳೂ ಇವೆ. ವಿದೇಶದಲ್ಲಿ ಓದುತ್ತಿರುವ ಮಗಳು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲ ಎನ್ನುವ ಬಗ್ಗೆ ವರ್ತಿಕಾಗೆ ಏನೋ ತಳಮಳ. ಮಗಳು ಮದುವೆಗೆ ಒಪ್ಪುತ್ತಿಲ್ಲ ಎನ್ನುವ ಚಿಂತೆ ಭುಪೀಂದರ್‌ಗೆ. ಇನ್ನು ನೀತಿ ಸಿಂಗ್ ಗಂಡ ಸೈನ್ಯದಲ್ಲಿರುವವನು. ಅವನು 15 ದಿನಗಳು ರಜೆಯಲ್ಲಿ ಬಂದಿದ್ದಾನೆ. ಹಣ ಹೊಂದಿಸಿ ಹೆಂಡತಿಯೊಂದಿಗೆ ಮಸ್ಸೂರಿಗೆ ಹೋಗುವ ಪ್ಲ್ಯಾನ್ ಹಾಕಿದ್ದಾನೆ. ಅದೇ ಸಮಯದಲ್ಲಿ ಈ ಕೇಸ್. ಆತನ ತಾಯಿ ಬೆಳಗಾದರೆ ಈ ಐಪಿಎಸ್ ಸೊಸೆಯ ಅಫಿಶಿಯಲ್ ಗಾಡಿ ತೆಗೆದುಕೊಂಡು ತರಕಾರಿ ತೆಗೆದುಕೊಂಡು ಹೋಗಿಬಿಡುತ್ತಾಳೆ. ಆದರೆ ಸೊಸೆಯ ವೃತ್ತಿಬದುಕಿನ ಒತ್ತಡಗಳ ಬಗ್ಗೆ, ಅವಳು ಎದುರಿಸಬಹುದಾದ ಸವಾಲುಗಳ ಬಗ್ಗೆ ಅವಳಲ್ಲಿ ಯಾವುದೇ ಸಹಾನುಭೂತಿ ಇರುವುದಿಲ್ಲ. ಇದರ ಹೊರತಾಗಿಯೂ ಆ ಗಂಡ ಹೆಂಡತಿಯರ ನಡುವೆ ಏನೋ ಒತ್ತಡ ಇದೆ ಎನ್ನುವುದು ನಮಗೆ ಗೊತ್ತಾಗುತ್ತಲೇ ಇರುತ್ತದೆ.

‘ಇದು ಕಚ್ಚಾ ಬನಿಯನ್ ಗ್ಯಾಂಗ್ ಆದ್ದರಿಂದ ಒಬ್ಬ ನಿವೃತ್ತ ಪೋಲಿಸ್ ಅಧಿಕಾರಿಯ ನೆರವು ತೆಗೆದುಕೊಳ್ಳಿ. ಆತ ಇಂತಹ ಅಪರಾಧಗಳನ್ನು ಬಿಡಿಸುವಲ್ಲಿ ಕೆಲಸ ಮಾಡಿದ್ದಾನೆ’ ಎಂದು ಕಮಿಷನರ್ ಹೇಳುವುದರಿಂದ ಆತನನ್ನು ತಂಡ ಆಹ್ವಾನಿಸಬೇಕಾಗುತ್ತದೆ. ಆತನ ವೈಭವೋಪೇತ ಫಾರ್ಮ್ ಹೌಸ್, ಅವನ ಮನೆಯ ಬೆಳ್ಳಿ ತಟ್ಟೆ, ಲೋಟಗಳು, ಅವನ ಐಷಾರಾಮದ ಗಾಡಿ ನೋಡಿ ಆತನನ್ನು ಕರೆಯಲು ಹೋಗಿದ್ದ ಅಧಿಕಾರಿಗಳು ದಂಗಾಗುತ್ತಾರೆ. ಆದರೆ ಆ ನಿವೃತ್ತ ಅಧಿಕಾರಿ ‘ನನಗೆ ಇನ್ನೂ ಪೆನ್ಷನ್ ಸೆಟ್ಲ್ ಆಗಿಲ್ಲ, ಅದು ಕೊಡಿಸಿದರೆ ಬರುತ್ತೇನೆ’ ಎಂದು ಕರಾರು ಹಾಕುತ್ತಾನೆ. ಅಂತೂ ಇಂತೂ ತಂಡಕ್ಕೆ ಬರುವ ಆತ ಬರುವಾಗಲೇ ತನ್ನೊಡನೆ ಒಂದು ಫೈಲ್ ಮತ್ತು ಪೂರ್ವಾಗ್ರಹಗಳ ಮೂಟೆಯನ್ನೇ ಹೊತ್ತು ತಂದಿರುತ್ತಾನೆ. ಬ್ರಿಟಿಷರ ಕಾಲದಲ್ಲಿ ಅಪರಾಧಿಗಳು ಎನ್ನುವ ಹಣೆಪಟ್ಟಿ ಕಟ್ಟಿಸಿಕೊಂಡ ಬುಡಕಟ್ಟಿನ ಜನರೇ ಇದಕ್ಕೆಲ್ಲಾ ಕಾರಣ ಎಂದು ಅನುಮಾನಕ್ಕೆಡೆಯಿಲ್ಲದಂತೆ ಘೋಷಿಸಿ ಆ DNT ಅಥವಾ ಡಿ ನೋಟಿಫೈಯ್ಡ್ ಟ್ರೈಬ್ಸ್‌ನ ಹಲವು ಯುವಕರು, ವಯಸ್ಕರು, ಹೆಂಗಸರನ್ನು ಸಹ ಠಾಣೆಗೆ ಕರೆದುಕೊಂಡು ಬಂದು ಕೂಡಿ ಹಾಕುತ್ತಾನೆ. ಅವರು ತಾವು ಸಣ್ಣಪುಟ್ಟ ಕಳ್ಳತನ ಮಾಡಿರುವುದು ಹೌದಾದರೂ ಈ ಕೊಲೆ ಮಾಡಿಲ್ಲ ಎಂದೇ ಸಾಧಿಸುತ್ತಾರೆ. ಅವರಲ್ಲಿ ಇಬ್ಬರ ಮೊಬೈಲ್ ಲೊಕೇಶನ್ ಕೊಲೆಯಾದ ಸ್ಥಳದಲ್ಲೇ ಸಿಕ್ಕಿ ಅವರು ಅಪರಾಧಿಗಳು ಎಂದೇ ತೀರ್ಮಾನಿಸುತ್ತಾರೆ.

ಇಲ್ಲಿ ನಮಗೆ ನೆನಪಾಗುವ ಸಿನಿಮಾ ‘ಜೈ ಭೀಮ್’. ಆದರೆ ಹೋಲಿಕೆ ಅಲ್ಲಿಗೆ ಮುಗಿಯುತ್ತದೆ. ಈ ಸರಣಿ ಪೋಲಿಸರ ತಲ್ಲಣವನ್ನು ಕುರಿತು ಮಾಡಿರುವ ಕಥೆಯಾದ್ದರಿಂದ ಅಪರಾಧಿಗಳು ಮತ್ತು ಆರೋಪಿಗಳು ಇಬ್ಬರ ಬಗ್ಗೆಯೂ ಇದು ಹೆಚ್ಚಿನ ಸಮಯವನ್ನು ವ್ಯಯಿಸುವುದಿಲ್ಲ. ಅಧಿಕಾರದಿಂದ ಅಪರಾಧೀಕರಣಗೊಂಡ ಈ ಇಡೀ ಬುಡಕಟ್ಟಿನ ನೋವು, ಅವಮಾನ, ಸಂಕಟಗಳು ನಮ್ಮನ್ನು ತಟ್ಟುವುದಿಲ್ಲ. ಏಕೆಂದರೆ ಇಲ್ಲಿ ಕ್ಯಾಮೆರಾ ಇಟ್ಟಿರುವುದು ಪೋಲಿಸ್ ಠಾಣೆಯಲ್ಲೇ ಹೊರತು, ಅವರ ಕೇರಿಗಳಲ್ಲಲ್ಲ. ಕ್ಯಾಮೆರಾ ಅವರನ್ನು ಬಹಳಷ್ಟು ಸಲ ಕಥಾವಸ್ತುವಾಗಿ ನೋಡುತ್ತದೆಯೇ ಹೊರತು ಅನ್ಯಾಯಕ್ಕೊಳಗಾದ ಸಮುದಾಯವಾಗಿ ಅಲ್ಲ. ಅವರದೇ ಸಮುದಾಯದಿಂದ ಬಂದು, ಈಗ ಅವರ ಪರವಾಗಿ ನಿಲ್ಲುವ ಒಬ್ಬ ಸೀನಿಯರ್ ವಕೀಲ ಸಹ ಇದನ್ನೊಂದು ದೊಡ್ಡ issue ಮಾಡುವುದಿಲ್ಲ. ಬಹಳಷ್ಟು ಸಲ ಆತ ಅಧಿಕಾರವನ್ನು ಕನ್ವಿನ್ಸ್ ಮಾಡಲೆಂದೇ ಪ್ರಯತ್ನಿಸುತ್ತಾನೆ. ಅದು ಸಹ ಗಮನಿಸಬೇಕಾದ ಅಂಶ.

ಆದರೆ ಈ ಕಥೆ ಇನ್ನೊಂದು ಅಂಶವನ್ನು ಕುರಿತು ಮಾತನಾಡುತ್ತದೆ. ದಿನೇದಿನೇ ಹೆಚ್ಚುತ್ತಿರುವ ಆರ್ಥಿಕ ಅಸಮತೋಲನ, ಇಲ್ಲದವರ ಎದೆಯಲ್ಲಿ ಹುಟ್ಟಿಸುವ ಪ್ರಲೋಭನೆಗಳನ್ನು ಕುರಿತು ಇದು ಗಮನ ಹರಿಸುತ್ತದೆ. ಸಮಾಜದಿಂದ ‘ಅಪರಾಧದ ಹಣೆಪಟ್ಟಿ’ ಅಂಟಿಸಿಕೊಂಡ ಈ ಸಮುದಾಯ ಅದೇ ಕಾರಣಕ್ಕೆ ಪೋಲೀಸರ ಕೈಗಳಿಂದ ‘ಮೇಲ್ನೋಟಕ್ಕೆ ಕಾಣದಂತಹ’ ಹೊಡೆತ ತಿಂದರೆ, 15000 ಕೊಟ್ಟರೆ ನಿಮ್ಮನ್ನು ಬಿಡುತ್ತೇನೆ ಎಂದು ಹೇಳುವ ಅಧಿಕಾರಿ ಆರಾಮಾಗಿ ತಪ್ಪಿಸಿಕೊಂಡು ಕೈ ಬೀಸಿಕೊಂಡು ನಡೆಯುತ್ತಾನೆ. ಮೇಲಿನಿಂದ ಬರುವ ಒತ್ತಡಕ್ಕೆ ತಲೆಬಾಗುವ ಕಮಿಷನರ್ ಹೇಗೂ ಸಿಕ್ಕಿದ್ದಾರೆ, ಅವರೇ ಅಪರಾಧಿಗಳು ಎಂದು ಮಾಧ್ಯಮದ ಮುಂದೆ ಒಪ್ಪಿಕೊಂಡು ಬಿಡು ಎಂದು ತನ್ನ ಕೆಳಗಿನ ಅಧಿಕಾರಿಣಿಗೆ ಕಟ್ಟಪ್ಪಣೆ ಮಾಡಿದರೆ, ತನ್ನ ಆತ್ಮಸಾಕ್ಷಿಗನುಗುಣವಾಗಿ ನಡೆಯುವ ಆಕೆಗೆ ಮುಂಬಡ್ತಿಯನ್ನು ಶಿಕ್ಷೆಯಂತೆ ಕೊಟ್ಟು ಯಾವುದೋ ಮೂಲೆಗೆ ವರ್ಗಾಯಿಸಲಾಗುತ್ತದೆ. ಗಂಡ ಬೇಸರ ಮಾಡಿಕೊಂಡನೇನೋ ಎಂದು ಗಂಡನ ಫೋನ್ ಉತ್ತರಿಸುವ ಆ ಐಪಿಎಸ್ ಅಧಿಕಾರಿಣಿಯ ನಿಗರಾಣಿಯೊಂದ ಇಬ್ಬರು ಆರೋಪಿಗಳು ತಪ್ಪಿಸಿಕೊಂಡು ಹೋಗಿ, ಆಕೆ ತಲೆತಗ್ಗಿಸಬೇಕಾಗುತ್ತದೆ. ಇವೆಲ್ಲಾ ಕಥೆಯೊಳಗೆ ಘರ್ಷಣೆಯನ್ನು, ಸಂಘರ್ಷವನ್ನು ತುಂಬಿಕೊಡುತ್ತವೆ. ಸುಸ್ತಾಗಿ ಮನೆಗೆ ಬರುವ ಅಧಿಕಾರಿಣಿ ನೋಡುವುದು ಊರಿಗೆ ಹಿಂದಿರುಗಲು ಬಟ್ಟೆ ಪ್ಯಾಕ್ ಮಾಡಿಕೊಳ್ಳುತ್ತಿರುವ ಗಂಡ, ಅವನಿಗೆ ನೆರವಾಗುತ್ತಾ ಮೌನದಲ್ಲೇ ಸೊಸೆಯನ್ನು ದೂಷಿಸುವ ಅತ್ತೆ. ಆಕೆ ಐಪಿಎಸ್ ಅಧಿಕಾರಿಯಾಗಿರಲಿ, ಯಾವುದೇ ಬೇರೆ ಹುದ್ದೆಯಲ್ಲಿರಲಿ ಕೆಲವು ನಿರೀಕ್ಷಣೆಗಳು, ಸಮೀಕರಣಗಳು ಬದಲಾಗುವುದೇ ಇಲ್ಲ. ನೀತಿ ಸಿಂಗ್ ಪಾತ್ರದಲ್ಲಿ ರಸಿಕಾ ದುಗ್ಗಾಲ್ ನಟನೆ ತುಂಬಾ ಚೆನ್ನಾಗಿದೆ. ‘ಮಿರ್ಜಾಪುರ್‌’ನಲ್ಲಿ ನೋಡಿದ ರಸಿಕಾ ಮತ್ತು ಈ ರಸಿಕಾ, ಎರಡೂ ಎರಡು ಧೃವಗಳು.

ಶೆಫಾಲಿ ಶಾ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಭಾರತೀಯ ಚಿತ್ರರಂಗದಲ್ಲಿ ಮುರಿದು ಬೀಳುತ್ತಿರುವ ಹೀರೋಯಿನ್‌ಗಳ ಸೋ ಕಾಲ್ಡ್ ‘shelf life’ ಕಲ್ಪನೆಯನ್ನು ಕುರಿತು ಮಾತನಾಡಿದ್ದಳು. 40ರ ನಂತರ ತನಗೆ ಸಿಗುತ್ತಿರುವ ಅದ್ಭುತ ಪಾತ್ರಗಳನ್ನು ಕುರಿತು ಉತ್ಸಾಹದಿಂದ ಹೇಳಿಕೊಂಡಿದ್ದಳು. ಮೊನ್ನೆಮೊನ್ನೆ ಬಂದ ‘ಡಾರ್ಲಿಂಗ್ಸ್’, ಹಿಂದೆಯೇ ಈ ಸರಣಿ. ಹೀರೋಯಿನ್‌ಗಳ ಮಟ್ಟಿಗೆ ಇದೊಂದು ಆಶಾದಾಯಕ ಬೆಳವಣಿಗೆಯೇ ಹೌದು. ತಂಗಿ, ಪ್ರೇಯಸಿ, ಪತ್ನಿ, ತಾಯಿ ಪಾತ್ರಗಳಿಗೆ ಮಾತ್ರ ಸೀಮಿತವಾಗಿದ್ದ, ಅದರಲ್ಲೂ ದಯೆಯಿಂದ ಕೊಟ್ಟಂತಿರುವ screen space ಪಡೆಯುತ್ತಿದ್ದ ನಟಿಯರಿಗೆ ಈಗ ಸವಾಲಿನ ಪಾತ್ರಗಳು ಸಿಗುತ್ತಿವೆ. ಅವರ ಸುತ್ತಲೂ ಕಥೆಗಳು, ವೆಬ್ ಸರಣಿಗಳು, ಚಿತ್ರಗಳು ಬರುತ್ತಲಿವೆ. ಸಾಲುಸಾಲು ಸೋಲು ಕಂಡ ಹಿಂದಿ ಚಿತ್ರರಂಗದ ಈ ದಿನಗಳಲ್ಲಿ ಗೆದ್ದಿರುವುದು ಆಲಿಯಾಳ ‘ಗಂಗೂ ಬಾಯಿ ಕೋಠಿಯಾವಾಡಿ’ ಮಾತ್ರ. ಆದರೆ ದಕ್ಷಿಣದಲ್ಲಿ ಸಾಯಿಪಲ್ಲವಿ ಪ್ರಧಾನ ಪಾತ್ರದಲ್ಲಿ ನಟಿಸಿದ ಚಿತ್ರಗಳು ಥಿಯೇಟರ್‌ನಲ್ಲಿ ಗೆಲ್ಲಲಿಲ್ಲ ಎನ್ನುವ ಉದಾಹರಣೆಯೂ ನಮ್ಮ ಮುಂದಿದೆ. ಓಟೀಟಿಯ ಇಂದಿನ ದಿನಮಾನದಲ್ಲಿ ಇಂತಹ ಚಿತ್ರಗಳು, ಕಥೆಗಳು ಮತ್ತಷ್ಟು ಹೆಚ್ಚಲಿ ಎನ್ನುವುದು ನಮ್ಮ ನಿರೀಕ್ಷೆ.
ಆ ಮಟ್ಟಿಗೆ ಈ ಸರಣಿ ಯಶಸ್ವಿಯಾಗಿದೆ. ಶೆಫಾಲಿ ತನಗೆ ಸಿಕ್ಕ ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಒಂದಿಷ್ಟೂ ಅಬ್ಬರವಿಲ್ಲದೆ, ತಣ್ಣಗೆ ನಟಿಸುವ ಈಕೆ ತಮ್ಮ ಮೌನದಲ್ಲೂ ಮಾತನಾಡುತ್ತಾರೆ. ಆಕೆಯಷ್ಟೇ ಅಲ್ಲ, ರಾಜೇಶ್ ತೈಲಾಂಗ್, ಅನುರಾಗ್ ಅರೋರ, ಆದಿಲ್ ಹುಸೇನ್, ಸಿದ್ಧಾರ್ಥ್ ಭಾರದ್ವಾಜ್, ತಿಲೋತ್ತಮಾ ಶೋಮ್ ಎಲ್ಲರೂ, ಎಲ್ಲರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಬಾಯಿಗೆ ಬಂದಂತೆ ಬೈಯ್ಯುವ, ಪೋಲಿಸರನ್ನು ಮುಲಾಜಿಲ್ಲದೆ ದಬಾಯಿಸುವ, ಆದರೆ ಇಂಜಕ್ಷನ್ನಿಗೆ ಹೆದರುವ ಒಂದು ಅಜ್ಜಿಯ ಪಾತ್ರವಂತೂ ಬಹುಕಾಲ ನೆನಪಿನಲ್ಲಿರುತ್ತದೆ.

ತೆರೆಯ ಮುಂದಿನ ಪಾತ್ರಗಳನ್ನು ಮೊದಲ ಸೀಸನ್‌ನಿಂದ ಹಾಗೆಯೇ ಉಳಿಸಿಕೊಂಡ ಈ ಸರಣಿ, ತೆರೆಯ ಹಿಂದೆ ಬಹಳಷ್ಟು ಮಟ್ಟಿಗೆ ಬದಲಾಗಿದೆ. ನಿರ್ದೇಶಕ, ಕಥೆಗಾರರು, ಸಂಭಾಷಣಾಕಾರರು, ಛಾಯಾಗ್ರಾಹಕರು ಎಲ್ಲರೂ ಹೊಸಬರೆ. ನಿರ್ದೇಶಕ ತನುಜ್ ಚಂದ್ರ ಇಡೀ ಸರಣಿಯನ್ನು ಅತ್ಯಂತ ಬಿಗಿಯಾಗಿ ಕಟ್ಟಿದ್ದಾರೆ. ಎಣಿಸಿದಂತೆ 5 ಸಂಚಿಕೆಗಳಿದ್ದು ಎಲ್ಲೂ ಹದ ಅಥವಾ ವೇಗ ತಪ್ಪುವುದಿಲ್ಲ. ಡೇವಿಡ್ ಬೊಲೆನ್‌ರ ಛಾಯಾಗ್ರಹಣ ಇಡೀ ಚಿತ್ರದ ವೇಗ ಮತ್ತು ಉಸಿರುಕಟ್ಟುವಿಕೆಯ ಅನುಭವವನ್ನು ಯಥಾವತ್ ನಿರ್ಮಿಸುತ್ತದೆ. ಅಷ್ಟೇ ಸಮರ್ಪಕವಾಗಿರುವುದು ಹಿನ್ನೆಲೆ ಸಂಗೀತ. ಕುತೂಹಲಕಾರಿ ಮತ್ತು ಭಾವನಾತ್ಮಕ ಎರಡೂ ಎಳೆಗಳಲ್ಲಿ ಸಂವಾದಿಸುವ Delhi Crime ನ ಈ ಸರಣಿ ಸಹ ಒಂದೇ ಪಟ್ಟಿಗೆ ನೋಡುವಂತೆ ಮಾಡುತ್ತದೆ.

LEAVE A REPLY

Connect with

Please enter your comment!
Please enter your name here