ಮಹೇಶ್‌ ಭಟ್‌ ನಿರ್ಮಾಣದ ‘ರಂಜಿ‌ಷ್‌ ಹೀ ಸಹೀ’ ವೆಬ್‌ ಸರಣಿ ಟ್ರೈಲರ್‌ ಬಿಡುಗಡೆಯಾಗಿದ್ದು, ಇದೊಂದು ಡ್ರಾಮಾಟಿಕ್‌ ಲವ್‌ಸ್ಟೋರಿ ಎನ್ನುವ ಸುಳಿವು ನೀಡುತ್ತದೆ. ತಾಹಿರ್‌ ರಾಜ್‌ ಭಾಸಿನ್‌, ಅಮಲಾ ಪೌಲ್‌ ಮತ್ತು ಅಮೃತಾ ಪುರಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸರಣಿ Voot Selectನಲ್ಲಿ ಇದೇ 13ರಿಂದ ಸ್ಟ್ರೀಮ್‌ ಆಗಲಿದೆ.

ಹಿಂದಿ ಸಿನಿಮಾ ನಿರ್ಮಾಪಕ, ನಿರ್ದೇಶಕ ಮಹೇಶ್‌ ಭಟ್‌ Voot Select ಗಾಗಿ ನಿರ್ಮಿಸಿರುವ ‘ರಂಜಿ‌ಷ್‌ ಹೀ ಸಹೀ’ ವೆಬ್‌ ಸರಣಿ ಟ್ರೈಲರ್‌ ಬಿಡುಗಡೆಯಾಗಿದೆ. 1982ರಲ್ಲಿ ಮಹೇಶ್‌ ಅವರೇ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದ ‘ಅರ್ಥ್‌’ ಚಿತ್ರದ ಕತೆಯನ್ನೇ ನೆನಪಿಸುತ್ತದೆ ಈ ಸರಣಿ. ಸಿನಿಮಾ ನಿರ್ದೇಶಕ, ಆತನ ಪತ್ನಿ ಮತ್ತು ನಟಿಯ ಮಧ್ಯೆಯ ಕತೆಯಿದು. ಸಿನಿಮಾದಲ್ಲಿ ಶಬಾನಾ ಅಜ್ಮಿ, ಕುಲಭೂಷಣ ಖರ್‌ಬಂದ, ಸ್ಮಿತಾ ಪಾಟೀಲ್‌ ನಿರ್ವಹಿಸಿದ್ದ ಪಾತ್ರಗಳನ್ನು ವೆಬ್‌ ಸರಣಿಯಲ್ಲಿ ಕ್ರಮವಾಗಿ ಅಮೃತಾ ಪುರಿ, ರಾಜ್‌ ಭಾಸಿನ್‌ ಮತ್ತು ಅಮಲಾ ಪೌಲ್‌ ನಿರ್ವಹಿಸಿದಂತೆ ತೋರುತ್ತದೆ. ಸಿನಿಮಾ ಕತೆಯನ್ನೇ ಲಂಬಿಸಿ ವೆಬ್‌ ಸರಣಿಯನ್ನಾಗಿ ನಿರೂಪಿಸಿದ್ದಾರೆ ಎನಿಸುತ್ತದೆ. ಮಹೇಶ್‌ ಭಟ್‌ ನಿರ್ಮಾಣದ ಈ ಸರಣಿಯನ್ನು ಪುಷ್ಪದೀಪ್‌ ಭಾರದ್ವಾಜ್‌ ನಿರ್ದೇಶಿಸಿದ್ದಾರೆ. ಟ್ರೈಲರ್‌ನಲ್ಲಿ ಮಹೇಶ್‌ ಭಟ್‌ರ ಶೈಲಿ, ಛಾಪು ಢಾಳಾಗಿ ಕಾಣಿಸುತ್ತದೆ.

ಚಿತ್ರರಂಗದಲ್ಲಿ ತನ್ನ ಅಸ್ವಿತ್ವ ಕಂಡುಕೊಳ್ಳಲು ಹೋರಾಟ ನಡೆಸುವ ಚಿತ್ರನಿರ್ದೇಶಕನ ಪಾತ್ರ ತಾಹಿರ್‌ ಅವರದ್ದು. ಅವರ ಪತ್ನಿಯ ಪಾತ್ರದಲ್ಲಿ ಅಮೃತಾ ಪುರಿ ಇದ್ದಾರೆ. ಚಿತ್ರನಟಿಯಾಗಿ ಅಮಲಾ ಪೌಲ್‌ ಕಾಣಿಸಿಕೊಂಡಿದ್ದಾರೆ. ಸರಣಿಯ ಅಫಿಷಿಯಲ್‌ ಸಿನಾಪ್ಸಿಸ್‌ ಹೀಗೆ ಹೇಳುತ್ತದೆ – “ಸುವರ್ಣಯುಗ ಎಂದೇ ಕರೆಸಿಕೊಂಡಿದ್ದ 70ರ ದಶಕದ ಹಿಂದಿ ಸಿನಿಮಾರಂಗದ ಹಿನ್ನೆಲೆಯಲ್ಲಿ ಕತೆ ನಡೆಯುತ್ತದೆ. ಯಶಸ್ಸಿಗಾಗಿ ಎದುರು ನೋಡುತ್ತಿರುವ ಚಿತ್ರನಿರ್ದೇಶಕ ಶಂಕರ್‌ (ತಾಹಿರ್‌), ದಿವಾ ಆಮ್ನಾ (ಅಮಲಾ ಪೌಲ್‌) ಮತ್ತು ಶಂಕರ್‌ ಪತ್ನಿ ಅಂಜು (ಅಮೃತಾ) ಅವರ ಸುತ್ತ ಕತೆ ಸಾಗುತ್ತದೆ. ಕೈಹಿಡಿದ ಪತ್ನಿ ಮತ್ತು ಪ್ರೇಮಿಸುತ್ತಿರುವ ಚಿತ್ರನಟಿ.. ಇಬ್ಬರ ಸಂಬಂಧಗಳ ಸುಳಿಯಲ್ಲಿ ಸಿಲುಕಿರುವ ಚಿತ್ರನಿರ್ದೇಶಕ. ಈ ಮೂವರ ಮಾನಸಿಕ ತಳಮಳಗಳನ್ನು ಸರಣಿಯಲ್ಲಿ ಕಟ್ಟಿಕೊಡಲಾಗಿದೆ”. ‘ರಂಜಿ‌ಷ್‌ ಹೀ ಸಹೀ’ ವೆಬ್‌ ಸರಣಿ Voot Selectನಲ್ಲಿ ಜನವರಿ 13ರಿಂದ ಸ್ಟ್ರೀಮ್‌ ಆಗಲಿದೆ.

Previous articleಟೀಸರ್‌ | ಅರವಿಂದ್‌ ಸ್ವಾಮಿ – ಕುಂಚಾಕ್ಕೊ ಬೋಬನ್‌ ಗ್ಯಾಂಗ್‌ಸ್ಟರ್‌ ಸಿನಿಮಾ ‘ರೆಂಡಗಂ’
Next articleರೈತನ ಸಮಸ್ಯೆ, ಸವಾಲು ‘ಬಿಸಿಲು ಕುದುರೆ’; ಹೃದಯಶಿವ ನಿರ್ದೇಶನದ ಸಿನಿಮಾ

LEAVE A REPLY

Connect with

Please enter your comment!
Please enter your name here