ನಿರ್ದೇಶಕ ಅನಿರುದ್ಧ ರಾಯ್ ಚೌಧರಿ ಅವರ ಹಿಂದಿನ ಚಿತ್ರ ‘ಪಿಂಕ್’ ವಿಮರ್ಶಕರ ಮೆಚ್ಚುಗೆ ಗಳಿಸಿದ್ದಷ್ಚೇ ಅಲ್ಲದೆ, ಬಾಕ್ಸ್ ಆಫೀಸ್‌ನಲ್ಲೂ ಮೋಡಿ ಮಾಡಿತ್ತು. ಅಂತಹ ಜಾದೂ ಈ ಚಿತ್ರದಲ್ಲಿ ಕಂಡು ಬರುವುದಿಲ್ಲ. ಚಿತ್ರಕತೆ ಮತ್ತು ನಿರೂಪಣೆಯಲ್ಲಿ ಸಿನಿಮಾ ಸೋಲುತ್ತದೆ. ‘LOST’ ಹಿಂದಿ ಸಿನಿಮಾ ZEE5 ಒಟಿಟಿಯಲ್ಲಿ ನೇರ ಬಿಡುಗಡೆ ಕಂಡಿದೆ.
ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟು ಹಾಕಿರುವ ‘19.20.21’ ಚಿತ್ರದ ಸನ್ನಿವೇಶಗಳನ್ನೇ ಬಹುತೇಕ ಮಟ್ಟಿಗೆ ಹೋಲುವ, ಇತ್ತೀಚೆಗೆ ನೇರ ಒಟಿಟಿಯಲ್ಲಿ ಬಿಡುಗಡೆಗೊಂಡ ಹಿಂದಿ ಚಿತ್ರ ‘ಲಾಸ್ಟ್’. ಕೊಲ್ಕೋತ್ತಾದಲ್ಲಿ ನಡೆಯುವ ಈ ಸಿನಿಮಾದ ಕತೆ ಕೂಡ ನೈಜ ಘಟನೆಗಳಿಂದಲೇ ಪ್ರೇರೇಪಿತ. ಇಷ್ಟೆಲ್ಲಾ ಸಾಮ್ಯತೆ ಇದ್ದರೂ, ಈ ಎರಡೂ ಚಿತ್ರಗಳ ಕೇಂದ್ರಬಿಂದು ಮತ್ತು ಪ್ರಸ್ತುತಿಯಲ್ಲಿರುವ ವ್ಯತ್ಯಾಸದಿಂದಾಗಿ ಇವೆರಡೂ ಸಂಪೂರ್ಣ ಭಿನ್ನವೆನಿಸುವುದು ವಿಶೇಷ.
ಬೀದಿ ನಾಟಕಗಳನ್ನು ಆಡುತ್ತಾ ಸಾಮಾಜಿಕ ಜಾಗೃತಿ ಮೂಡಿಸಲು ಯತ್ನಿಸುವ ದಲಿತ ಯುವ ಕಲಾವಿದ ಇಶಾನ್‌ನ (ಇಶಾನ್ ತುಷಾರ್ ಪಾಂಡೆ) ಏಕಾಏಕಿ ಕಣ್ಮರೆ ಕ್ರೈಂ ರಿಪೋರ್ಟರ್ ವಿಧಿಯ (ಯಾಮಿ ಗೌತಮ್) ಗಮನ ಸೆಳೆಯುತ್ತದೆ. ಆ ಬಗ್ಗೆ ಇಶಾನ್ ಅಕ್ಕ ಪೊಲೀಸರಿಗೆ ದೂರು ನೀಡುತ್ತಾಳೆ. ಆದರೆ, ಪೋಲೀಸರು ಅವಳ ಮತ್ತು ಆಕೆಯ ಪತಿಯ ಕುಟುಂಬ ಹಾಗೂ ಇಶಾನ್ ಅಮ್ಮನನ್ನು ವಿಚಾರಣೆಯ ನೆಪದಲ್ಲಿ ಪೀಡಿಸಲು ಆರಂಭಿಸುತ್ತಾರೆ. ಇಶಾನ್ ಓಡಿ ಹೋಗಿ ನಕ್ಸಲ್ ಗುಂಪನ್ನು ಸೇರಿದ್ದಾನೆಂಬ ಪೋಲೀಸರ ಥಿಯರಿಯನ್ನು ಒಪ್ಪದ ವಿಧಿ, ತನ್ನದೇ ಮಾರ್ಗದಲ್ಲಿ ತನಿಖೆ ಆರಂಭಿಸುತ್ತಾಳೆ. ತನ್ನ ತನಿಖಾ ಪತ್ರಿಕೋದ್ಯಮದ ಈ ಪಯಣದಲ್ಲಿ ಹಲವು ಸತ್ಯಗಳಿಗೆ ಮುಖಾಮುಖಿಯಾಗುತ್ತಾಳೆ. ಹಲವಾರು ಬೆದರಿಕೆಗಳನ್ನು ಅನುಭವಿಸುತ್ತಾಳೆ. ಇಶಾನ್ ಕಣ್ಮರೆಯ ಸತ್ಯವನ್ನು ಮುಚ್ಚಿಟ್ಟು ಆತನನ್ನು ನಕ್ಸಲ್ ಎಂದು ಬ್ರ್ಯಾಂಡ್ ಮಾಡಲು ಹೊರಟ ಪೋಲೀಸರ, ಪ್ರಭಾವಿಗಳ ಯತ್ನವನ್ನು ತಡೆಯುವ ನಿಟ್ಟಿನಲ್ಲಿ ವಿಧಿಯ ಹೋರಾಟವೇ ‘ಲಾಸ್ಟ್’ ಸಿನಿಮಾದ ಮುಖ್ಯ ಕತೆ.
ಸಾಮಾನ್ಯವಾಗಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು ಜಿಗ್ಸಾ ಪಝಲ್‌ನಂತೆ. ಒಂದೊಂದೇ ಭಾಗವನ್ನು ಜೋಡಿಸಿ ಕೊನೆಗೆ ಅಂತಿಮ ಭಾಗವೊಂದು ಸರಿಯಾದ ಸ್ಥಾನದಲ್ಲಿ ಕುಳಿತಾಗ ಸಂಪೂರ್ಣ ಚಿತ್ರ ದೊರಕುತ್ತದೆ. ‘ಲಾಸ್ಟ್’ ಸಿನಿಮಾದಲ್ಲಿರುವ ಮುಖ್ಯ ತೊಂದರೆಯಂದರೆ ಕೊನೆಯ ಭಾಗವನ್ನು ಕೂಡಿಸಿದ ಮೇಲೂ ಚಿತ್ರ ಅಪೂರ್ಣವೆನಿಸುತ್ತದೆ. ಎಷ್ಟೋ ಕೊಂಡಿಗಳು ತಪ್ಪಿ ಹೋದಂತೆ ತೋರುತ್ತವೆ. ಇಷಾನ್‌ನ ಪ್ರೇಯಸಿ ಅಂಕಿತಾ (ಪಿಯಾ ಬಾಜಪೇಯ್) ಮತ್ತು ರಾಜಕಾರಣಿ ರಂಜನ್ (ರಾಹುಲ್ ಖನ್ನಾ) ಅವರ ಉದ್ದೇಶಗಳೇ ಸ್ಪಷ್ಚವಾಗುವುದಿಲ್ಲ. ಇಬ್ಬರ ನಡುವಣ ಸಂಬಂಧದ ಬಗ್ಗೆಯೂ ಸ್ಪಷ್ಚತೆ ದೊರಕುವುದಿಲ್ಲ. ರಂಜನ್‌ನನ್ನು ರಾಜಕಾರಣೆಯೆಂಬ ಕಾರಣಕ್ಕೆ ಮಾತ್ರವೇ ಕ್ರೂರಿ ಎಂಬಂತೆ ಬಿಂಬಿಸಲು ಯತ್ನಿಸಿದಂತೆ ಕಾಣುತ್ತದೆ. ಆದರೆ. ಅದನ್ನು ಸಮರ್ಥಿಸುವಂತಹ ಯಾವುದೇ ಕಾರಣಗಳು ನಮಗೆ ಸಿಗುವುದಿಲ್ಲ. ಕಥೆಯ ಮುಖ್ಯ ಅಂಶ ಇಶಾನ್ ಕಣ್ಮರೆಗೂ ಕೂಡ ಒಪ್ಪಬಹುದಾದ, ನಂಬಬಹುದಾದ, ಗಟ್ಟಿಯಾದ ಕಾರಣವೇ ತಿಳಿಯುವುದಿಲ್ಲ.
ಕತೆಯಲ್ಲಿರುವ ಈ ತೊಂದರೆಗಳಿಗೆ ಮುಖ್ಯ ಕಾರಣ ಸಿನಿಮಾ ಅಗತ್ಯಕ್ಕಿಂತ ಹೆಚ್ಚು ವಿಧಿಯ ಜೀವನದ ಮೇಲೆ ಕೇಂದ್ರಿತವಾಗಿರುವುದು. ಇಶಾನ್ ಕಣ್ಮರೆ ಮುಖ್ಯ ಘಟನೆಯಾಗಿರುವಾಗ ಅದರ ಸುತ್ತಲೂ ಕತೆ ಹೆಣೆಯಬೇಕಿತ್ತು. ಅದರ ಬದಲಾಗಿ ವಿಧಿಯನ್ನು ಕೇಂದ್ರದಲ್ಲಿಟ್ಟುಕೊಂಡು ಅವಳ ಪಾತ್ರವನ್ನು ಪೋಷಿಸಲು ಮಾತ್ರವೇ ಇಶಾನ್ ನಾಪತ್ತೆ ಘಟನೆಯನ್ನು ಬಳಸಿಕೊಂಡಂತೆ ತೋರುತ್ತದೆ. ದೊಡ್ಡ ಸ್ಟಾರ್‌ಗಳ ಸಿನಿಮಾ ಸಾಮಾನ್ಯವಾಗಿ ಎದುರಿಸುವ ಈ ತೊಂದರೆ ‘ಲಾಸ್ಟ್’ನಂತಹ ವಿಷಯಾಧಾರಿತ ಸಿನಿಮಾ ಇಲ್ಲಿ ಎದುರಿಸುತ್ತದೆ.
ಯಾಮಿ ಗಾತಮ್ ನಿರ್ವಹಿಸಿರುವ ಕ್ರೈಂ ರಿಪೋರ್ಟರ್ ವಿಧಿ ಪಾತ್ರವೂ ವಾಸ್ತವಕ್ಕೆ ಹತ್ತಿರವಾಗಿರುವಂತೆ ಕಾಣುವುದಿಲ್ಲ. ಸ್ಫೋಟಕ ಎನಿಸುವಂತಹ ಸುದ್ದಿಗಳೇನೂ ಸಿಗದೇ ಇದ್ದಾಗಲೂ, ಆಕೆ ಕೆಲವು ತಿಂಗಳುಗಳ ಕಾಲ ಇದೊಂದೇ ಮಿಸ್ಸಿಂಗ್ ಕೇಸಿನ ಮೇಲೆ ಕೆಲಸ ಮಾಡುವುದು ಆಕೆಯ ಬದ್ಧತೆಯನ್ನು ಹೇಳಿದರೂ, ಯಾವುದೇ ಸುದ್ದಿ ಮಾಧ್ಯಮದಲ್ಲಿ ಅದು ಸಾಧ್ಯವಾಗದ ಸಂಗತಿಯಾದ್ದರಿಂದ, ಅವಾಸ್ತವಿಕ ಎನಿಸುತ್ತದೆ. ಜೊತೆಗೆ, ಇಡೀ ಸಿನಿಮಾದುದ್ದಕ್ಕೂ ಆಕೆ ಅಷ್ಟೆಲ್ಲಾ ತನಿಖೆ ನಡೆಸಿದರೂ, ಪ್ರೇಕ್ಷಕರಿಗೆ ಕಾಣುವಂತೆ ಆಕೆ ಪತ್ರಿಕೆಗೆ ಬರೆದು ಕೊಡುವುದು ಒಂದೇ ನ್ಯೂಸ್ ರಿಪೋರ್ಟ್, ಕೊನೆಗೆ ಅದನ್ನೂ ಕೂಡ ತಡೆ ಹಿಡಿಯುವಂತೆ ಹೇಳುತ್ತಾಳೆ! ಕೊಲ್ಕತ್ತಾದ ಗಲ್ಲಿ ಗಲ್ಲಿ ಸುತ್ತುವ ವಿಧಿಯ ಮೇಕ್ಅಪ್, ಬಟ್ಟೆ-ಬರೆಗಳು ಯಾವುದೋ ಕಾರ್ಪೊರೇಟ್ ಉದ್ಯೋಗಿಯ ರೀತಿ ಇದೆಯಲ್ಲದೆ, ಅದು ದಿನವಿಡೀ ಆಕೆಯ ಅಲೆದಾಟದ ಹೊರತಾಗಿಯೂ ಕೊಂಚವೂ ಹಾಳಾಗದೆ, ತಾಜಾ ಆಗಿ ಉಳಿಯುವುದು ವಿಶೇಷ!
ಸಿನಿಮಾದಲ್ಲಿ ಸಾಕಷ್ಟು ಪಾತ್ರಗಳು ಕಥೆಗೆ ಅಗತ್ಯವಿಲ್ಲದೆ ಬಂದು ಹೋಗುತ್ತವೆ. ವಿಧಿಯ ಅಜ್ಜನ ಪಾತ್ರ ನಿರ್ವಹಿಸಿರುವ ಪಂಕಜ್ ಕಪೂರ್‌ಗೆ ಮಾತ್ರ ಸ್ವಲ್ಪ ಪ್ರಾಮುಖ್ಯತೆ ದೊರೆತಿದೆಯಾದರೂ, ವಿಧಿಯ ತಂದೆ, ತಾಯಿ ಅವರ ಜೊತೆ ಆಕೆಯ ಸಂಬಂಧ ಇವೆಲ್ಲಾ ಚಿತ್ರಕತೆಗೆ ಬೇಕಾಗುವುದೇ ಇಲ್ಲ. ಜೊತೆಗೆ, ವಿಧಿಯ ಕೆಲವು ಸಹೋದ್ಯೋಗಿಗಳು ಯಾವುದೇ ಕಾರಣವಿಲ್ಲದೆ ಕತೆಯಲ್ಲಿ ಸುಮ್ಮನೆ ಆಗಾಗ ಕಾಣಿಸಿಕೊಳ್ಳುತ್ತಾರೆ. ಇದರ ಬದಲು ಇಶಾನ್ ತಾಯಿ, ತಂಗಿ ಮತ್ತು ಪ್ರೇಯಸಿಯ ಪಾತ್ರಗಳನ್ನು ಇನ್ನೂ ಹೆಚ್ಚು ಹಂತಗಳಲ್ಲಿ ಶೋಧಿಸಿದ್ದರೆ ಕತೆಗೆ ಹೊಸ ಪದರಗಳು ದೊರೆಯುವ ಸಾಧ್ಯತೆ ಇತ್ತು.
ಹೀಗಿದ್ದೂ, ಸಿನಿಮಾ ಕೆಲವು ದೃಶ್ಯಗಳಲ್ಲಿ ಗೆಲ್ಲುತ್ತದೆ. ವಿಧಿಯ ದೂರವಾಗಿರುವ ಪ್ರೇಮಿ/ಪತಿ (ನೀಲ್ ಭೂಪಲಮನ್) “ಕಾಣೆಯಾಗಿರುವ ದಲಿತನೊಬ್ಬ ನಕ್ಸಲ್ ಆಗುವುದು ಸಾಮಾನ್ಯ ಸಂಗತಿ. ಅದರಲ್ಲೇನು ವಿಶೇಷವಿದೆ ಅಂತ ಈ ವಿಷಯದ ಹಿಂದೆ ಬಿದ್ದಿದ್ದೀಯ?” ಎಂದು ಕೇಳುತ್ತಾನೆ. ಅವನು ಕೇಳುವ ರೀತಿ ಅದಕ್ಕೆ ವಿಧಿ ಪ್ರತಿಕ್ರಿಯಿಸುವ ರೀತಿ ಸಿನಿಮಾದ ಅಶಯವನ್ನು ಮತ್ತು ಇಂತಹ ಸಿನಿಮಾದ ಅಗತ್ಯವನ್ನು ಎತ್ತಿ ತೋರಿಸುತ್ತದೆ. ವಿಧಿ ಮತ್ತು ಆಕೆಯ ಅಜ್ಜನ ನಡುವಿನ ಸಂಭಾಷಣೆಗಳು ಅವರ ಬಾಂಧವ್ಯ ಕೆಲವು ಕಡೆ ನಾಟಕೀಯವೆನಿಸಿದರೂ, ಹಲವು ಕಡೆ ಗೆಲ್ಲುತ್ತದೆ. ಜೊತೆಗೆ, ಇಶಾನ್ ಕುಟುಂಬದ ಜೊತೆ ವಿಧಿಯ ಒಡನಾಟವೂ ಚೆನ್ನಾಗಿ ಮೂಡಿಬಂದಿದೆ. ಒಟ್ಟಿನಲ್ಲಿ, ಸಿನಿಮಾದ ಮುಖ್ಯ ಆಶಯಕ್ಕೆ ಅಗತ್ಯವಾಗಿದ್ದ ದೃಶ್ಯಗಳು ಬಹುತೇಕ ಮನ ತಟ್ಟುವಂತಿದ್ದರೂ, ಅನಗತ್ಯ ಪಾತ್ರ ಮತ್ತು ಘಟನೆಗಳ ಭಾರದಿಂದ ಸಿನಿಮಾ ಸೊರಗುತ್ತದೆ.
ಅಭಿನಯದ ವಿಷಯಕ್ಕೆ ಬಂದಾಗ ಪಂಕಜ್ ಕಪೂರ್ ಅವರಂತಹ ಅನುಭವಿ ನಟನಿಂದಾಗಿ ಸಿನಿಮಾಗೆ ತುಂಬಾ ಸಹಾಯವಾಗಿದೆ. ಇಷಾನ್ ಪಾತ್ರ ಮಾಡಿರುವ ತುಷಾರ್ ಪಾಂಡೆಯೇ ಸಿನಿಮಾದ ಕತೆಗೆ ಮೂಲ ಕಾರಣವಾದರೂ ಆತ ಹೆಚ್ಚು ತೆರೆಯ ಮೇಲೆ ಕಾಣಿಸಿಕೊಳ್ಳುವುದೇ ಇಲ್ಲ. ಇಶಾನ್ ಅಕ್ಕ ಹನಿ ಜೈನ್ ಮತ್ತು ಅಮ್ಮ, ಸಿಕ್ಕಿರುವ ಅವಕಾಶದಲ್ಲೇ ಚೆನ್ನಾಗಿ ನಟಿಸಿದ್ದಾರೆ. ಪಿಯಾ ಬಾಜಪೇಯಿಯ ಪಾತ್ರವನ್ನು ಇನ್ನೂ ಸರಿಯಾಗಿ ಬೆಳೆಸಿ ಉತ್ತಮವಾದ ರೀತಿಯಲ್ಲಿ ಸಂಕೀರ್ಣವಾಗಿಸುವ ಅವಕಾಶವನ್ನು ಸಿನಿಮಾ ಕೈಚೆಲ್ಲಿದ್ದರೂ, ಅವರ ನಟನೆ ಸಮರ್ಪಕವಾಗಿದೆ. ರಾಹುಲ್ ಖನ್ನಾ ತಮ್ಮ ಪಾತ್ರಕ್ಕೆ ಬೇಕಾದಷ್ಟೇ ಅಭಿನಯಿಸಿದ್ದಾರೆ. ಯಾಮಿ ಗೌತಮ್ ಕೆಲವು ದೃಶ್ಯಗಳಲ್ಲಿ ಮಿಂಚಿದ್ದರೂ, ಕೆಲವು ಕಡೆ ಪಾತ್ರಕ್ಕೆ ತೀರಾ ಪ್ರಿವಿಲೇಜ್ಡ್ ಭಾವ ಬರುವಂತೆ ನಟಿಸಿದ್ದಾರೆ. ಇದು ಪಾತ್ರ ಚಿತ್ರಣದಲ್ಲಿರುವ ಕೊರತೆಯೂ ಹೌದು.
ನಿರ್ದೇಶಕ ಅನಿರುದ್ಧ ರಾಯ್ ಚೌಧರಿ ಅವರ ಹಿಂದಿನ ಚಿತ್ರ ‘ಪಿಂಕ್’ ವಿಮರ್ಶಕರ ಮೆಚ್ಚುಗೆ ಗಳಿಸಿದ್ದಷ್ಚೇ ಅಲ್ಲದೆ, ಬಾಕ್ಸ್ ಆಫೀಸ್‌ನಲ್ಲೂ ಮೋಡಿ ಮಾಡಿತ್ತು. ಅಂತಹ ಜಾದೂ ಈ ಚಿತ್ರದಲ್ಲಿ ಕಂಡು ಬರುವುದಿಲ್ಲ. ಚಿತ್ರದ ಕಥಾ ಹಂದರ, ವಿಷಯ ತುಂಬಾ ಮುಖ್ಯವೂ ಮತ್ತು ಹೇಳಲೇಬೇಕಾದದ್ದೇ ಆಗಿದ್ದರೂ, ಸಿನಿಮಾ ಚಿತ್ರಕತೆ ಮತ್ತು ನಿರೂಪಣೆಯಲ್ಲಿ ಸೋಲುತ್ತದೆ. ಹೀಗಾಗಿ, ಸಿನಿಮಾದ ಆಶಯವೇ ಗೊಂದಲದಲ್ಲಿ ಬೀಳುತ್ತದೆ. ಉದಾಹರಣೆಗೆ, ಸಿನಿಮಾ, ದೇಶದಲ್ಲಿ ದಿನಾ ಕಾಣೆಯಾಗುವವರ ಬಗ್ಗೆ ಅಂಕಿ ಅಂಶಗಳನ್ನು ಸಿನಿಮಾದ ಕೊನೆಯಲ್ಲಿ ನೀಡುತ್ತದೆ. ಅದರೆ, ಚಿತ್ರದ ಮುಖ್ಯ ವಿಷಯ ಒಟ್ಟು ಕಾಣೆಯಾದವರ ಬಗ್ಗೆ ಅಲ್ಲವೇ ಅಲ್ಲ. ಒಟ್ಟಿನಲ್ಲಿ, ಜಿಗ್ಸಾ ಪಝಲ್‌ನ ಎಲ್ಲಾ ತುಂಡುಗಳು ಬಿಡಿ ಬಿಡಿಯಾಗಿ ಸುಂದರವಾಗಿದ್ದರೂ, ಅದು ಒಟ್ಟು ಸೇರಿದಾಗ ಸಂಪೂರ್ಣ ಚಿತ್ರಣ ಸಿಗದೇ ಹೋದರೆ ಆಗುವ ನಿರಾಶೆಯಂತಿದೆ, ‘ಲಾಸ್ಟ್’ ಚಿತ್ರ. ಲಾಸ್ಟ್ ZEE5 ಒಟಿಟಿಯಲ್ಲಿ ನೇರ ಬಿಡುಗಡೆ ಕಂಡಿದೆ.