ಮುಖ್ಯ ಪಾತ್ರಗಳಲ್ಲಿ ನೀನಾ ಗುಪ್ತಾ ಮತ್ತು ಸಂಜಯ್‌ ಮಿಶ್ರಾ ಅವರ ಅಭಿನಯ ಸಿನಿಮಾವನ್ನು ಎತ್ತಿ ಹಿಡಿಯುವಲ್ಲಿ ದೊಡ್ಡ ಕೊಡುಗೆ ನೀಡಿದೆ. ಅದೇ ಬಹುತೇಕ ಸಿನಿಮಾ ಸೋಲದಂತೆ ಕಾಪಾಡಿದೆ. ಸಿನಿಮಾ ಕೊನೆಯವರೆಗೂ ಒಂದು ಮಟ್ಟಿನ ಕುತೂಹಲ ಕಾಯ್ದುಕೊಳ್ಳುವುದರಿಂದ ಕ್ರೈಂ ಸಿನಿಮಾಗಳನ್ನು ಇಷ್ಟಪಡುವವರು ಒಂದು ಬಾರಿ ನೋಡಬಹುದಾದ ಚಿತ್ರವಿದು. ‘ವಧ್‌’ ನೆಟ್‌ಫ್ಲಿಕ್ಸ್‌ನಲ್ಲಿ ಸ್ಚ್ರೀಮ್ ಆಗುತ್ತಿದೆ.

‘ನಾನು ಮಾಡಿದ್ದು ಕೊಲೆ ಅಲ್ಲ… ವಧೆ’ ಇದು ಹಿಂದಿಯ ‘ವಧ್’ ಸಿನಿಮಾದಲ್ಲಿ ಕಿವಿಗೆ ಬೀಳುವ ಸಂಭಾಷಣೆ. ಇದೇ ವಾಕ್ಯ ಬಹುತೇಕ ಸಿನಿಮಾದ ದೃಷ್ಟಿಕೋನವನ್ನು ನಿರೂಪಿಸುತ್ತದೆ. ವಧೆಗೆ ನಿಘಂಟಿನಲ್ಲಿರುವ ಅರ್ಥ ಕೊಲೆಯೇ ಆದರೂ, ಪದಬಳಕೆಯ ವಿಷಯಕ್ಕೆ ಬಂದಾಗ ವಧಿಸುವುದಕ್ಕೂ, ಕೊಲ್ಲುವುದಕ್ಕೂ ವ್ಯತ್ಯಾಸ ಸಾಕಷ್ಚಿದೆ. ವಧಿಸುವುದು ಎನ್ನುವ ಪದದಲ್ಲೇ ಆ ಕ್ರಿಯೆಗೆ ಒಂದು ಘನತೆಯನ್ನು, ಶ್ರೇಷ್ಠತೆಯನ್ನು ಜೋಡಿಸಲಾಗಿದೆ. ಉದಾಹರಣೆಗೆ, ದೇವರು ದುಷ್ಟರನ್ನು ವಧಿಸುತ್ತಾನೆ ಮತ್ತು ಅಪರಾಧಿಗಳು ಕೊಲೆ ಮಾಡುತ್ತಾರೆ. ಹೀಗಾಗಿ, ಚಿತ್ರದ ಹೆಸರೇ ‘ವಧ್’ ಎಂದಿರುವ ಕಾರಣ ಇಲ್ಲಿ ನಡೆಯುವ ಕೊಲೆಗೆ ಒಂದು ಸಮರ್ಥನೆ ಇದ್ದೇ ಇದೆ ಎಂದು ಯಾರಾದರೂ ಊಹಿಸಬಹುದು.

ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡಿ ನಂತರ ಅವರಿಂದ ನಿರ್ಲಕ್ಷಿಸಲ್ಪಡುವ ಹೆತ್ತವರ ಕತೆಯಂತೆ ‘ವಧ್’ ಚಿತ್ರ ಆರಂಭವಾಗುತ್ತದೆ. ನಿವೃತ್ತ ಶಿಕ್ಷಕ ಶಂಭುನಾಥ್ ಮಿಶ್ರಾ (ಸಂಜಯ್ ಮಿಶ್ರಾ) ಮತ್ತು ಆತನ ಪತ್ನಿ ಮಂಜು ಮಿಶ್ರಾ (ನೀನಾ ಗುಪ್ತಾ) ಬಡತನದ ಜೀವನ ನಡೆಸುತ್ತಿರುತ್ತಾರೆ. ಶಂಭು ನಡೆಸುವ ಟ್ಯೂಶನ್‌ನಿಂದ ಬರುವ ಬಹುತೇಕ ಹಣ ಮಗನ ವಿದೇಶಿ ವ್ಯಾಸಂಗಕ್ಕಾಗಿ ಮಾಡಿದ ಸಾಲವನ್ನು ತೀರಿಸುವುದಕ್ಕೇ ಖರ್ಚಾಗುತ್ತಿರುತ್ತದೆ. ಮತ್ತೊಂದೆಡೆ ಬ್ಯಾಂಕ್ ಲೋನ್ ಸಾಲದೆ ಮಗನಿಗಾಗಿ ದುಬಾರಿ ಬಡ್ಡಿದರದಲ್ಲಿ ಪಡೆದ ಸಾಲವೂ ಅಗಾಧವಾಗಿ ಬೆಳೆಯುತ್ತಿರುತ್ತದೆ. ಸಾಲ ವಸೂಲಿಗಾಗಿ ಆಗಾಗ್ಗೆ ಮನೆಗೆ ಬರುವ ಪ್ರಜಾಪತಿ ಪಾಂಡೆ, ದಂಪತಿಗಳಿಗೆ ಅತಿಯಾಗಿ ಕಿರುಕುಳ ನೀಡುತ್ತಿರುತ್ತಾನೆ. ಅನಿವಾಸಿ ಭಾರತೀಯನಾಗಿಬಿಟ್ಟಿರುವ ಮಗನಿಂದ ಯಾವುದೇ ಸಹಾಯ ದೊರೆಯದಾದಾಗ, ಪಾಂಡೆಯ ಶೋಷಣೆಯಿಂದ ಬೇಸತ್ತು ಅದರಿಂದ ತಪ್ಪಿಸಿಕೊಳ್ಳಲು ಶಂಭುನಾಥ್ ಮಿಶ್ರಾನೇ ದಾರಿ ಕಂಡುಕೊಳ್ಳುತ್ತಾನೆ.

ಸ್ಕೂಲ್ ಮಾಸ್ಚರ್, ಬಾಗ್ಬನ್ ಛಾಯೆಯೊಂದಿಗೆ ಸಿನಿಮಾ ಆರಂಭವಾದರೂ ದೃಶ್ಯಂ, ಅಂದಾಧುನ್ ರೀತಿಯಲ್ಲಿ ಮುಗಿಯುತ್ತದೆ. ಅಪರಾಧ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎಂಬಂತಹ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯೊಬ್ಬ ಘೋರ ಅಪರಾಧ ಮಾಡುವುದಷ್ಟೇ ಅಲ್ಲದೆ, ತನ್ನ ಬುದ್ಧಿವಂತಿಕೆ ಬಳಸಿಕೊಂಡು, ಪೋಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಿ ಪಾರಾಗುವುದು ಹೊಸ ಕತೆಯೇನೂ ಅಲ್ಲ. ಆದರೆ, ಇದು ಪ್ರೇಕ್ಷಕರನ್ನು ಸದಾ ಸೆಳೆಯುವ ಕತೆ. ಇದರಲ್ಲಿರುವ ಸಸ್ಪೆನ್ಸ್ ಥ್ರಿಲ್ಲರ್‌ನ ರೋಚಕತೆ ಮಾತ್ರವಲ್ಲದೆ, ತಮ್ಮಂತೇ ಇರುವ ಸಾಮಾನ್ಯನೊಬ್ಬ ಅಸಾಮಾನ್ಯವಾದನ್ನೇನೋ ಸಾಧಿಸಿದ ತೃಪ್ತಿಯೂ ಪ್ರೇಕ್ಷಕರಿಗೆ ಸಿಗುತ್ತದೆ. ಆದರೆ, ಅದು ಸಾಧ್ಯವಾಗಬೇಕಾದರೆ ಹೀರೋ ನಡೆಸುವ ಅಪರಾಧ ಕೃತ್ಯಕ್ಕೆ ಬಲವಾದ ಸಮರ್ಥನೆ ಇರಬೇಕಾಗುತ್ತದೆ. ಆತನನ್ನು ಕಾನೂನಿನ ಕೈಯಿಂದ ತಪ್ಪಿಸಿಕೊಂಡ ಕ್ರಿಮಿನಲ್ ಆಗಿ ನೋಡುವ ಬದಲು, ದುಷ್ಟ ವಿಲನ್ ಅನ್ನು ಮಟ್ಟಹಾಕಿ ತನ್ನನ್ನು, ತನ್ನ ಕುಟುಂಬ ಮತ್ತು ಸಮಾಜವನ್ನು ಕಾಪಾಡಿದ ಹೀರೋ ಆಗಿ ಪ್ರೇಕ್ಷಕರು ನೋಡಬೇಕಾಗುತ್ತದೆ. ‘ವಧ್’ ಸಿನಿಮಾದ ತೊಂದರೆ ಎಂದರೆ ಇದನ್ನು ಸಾಧಿಸುವ ಯತ್ನದಲ್ಲಿ ಪಾತ್ರ ಚಿತ್ರಣ ಕ್ಲೀಷೆಯ ಮಟ್ಟವನ್ನೂ ದಾಟಿ, ಎಷ್ಟೋ ಬಾರಿ ಹಾಸ್ಯಾಸ್ಪದ ಎನಿಸಿಬಿಡುತ್ತದೆ.

ಉದಾಹರಣೆಗೆ ಇಲ್ಲಿನ ವಿಲನ್ ಪ್ರಜಾಪತಿ ಪಾಂಡೆಯ ಪಾತ್ರವನ್ನು ಪರಿಚಯಿಸುವುದೇ ಆತನ ಒಂದು ಕೈಯಲ್ಲಿ ಅಲ್ಕೊಹಾಲ್, ಮತ್ತೊಂದು ಕೈಯಲ್ಲಿ ಚಿಕನ್ ಪೀಸ್ ಕೊಟ್ಟು, ಸಾಲದೆಂಬಂತೆ ಒಬ್ಬಳು ಬೆದರಿದ ವೇಶ್ಯೆಯನ್ನೂ ಜೊತೆಗೆ ಎಳೆದುಕೊಂಡು ಬರುವಂತಹ ದೃಶ್ಯದಲ್ಲಿ. ಅಂದರೆ, ಒಬ್ಬ ವಿಲನ್‌ಗೆ ಏನೆಲ್ಲಾ ಅವಗುಣಗಳಿರಬೇಕೆಂದು ನಮ್ಮ ಸಮಾಜ ನಿರ್ಧರಿಸಿದೆಯೋ, ಆ ಸಿದ್ಧಮಾದರಿಗೆ ತಕ್ಕಂತೆ ಈ ಪಾತ್ರವನ್ನು ಸೃಷ್ಚಿಸಲಾಗಿದೆ. ಶಂಭುನಾಥ ಮಿಶ್ರಾ ಪಾತ್ರವೂ ಅಷ್ಚೇ. ಆತ, ಅಪರಾಧ ಎಸಗುವವರೆಗೂ ತೆರೆಯ ಮೇಲೆ ಕಾಣದೇ ಹೋದ ಆತನ ಕುಡಿಯುವ ಅಭ್ಯಾಸ, ಅಪರಾಧ ಸಂಭವಿಸಿದ ಕೂಡಲೇ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗೆ ನೋಡಿದರೆ ಸದಾ ಪೂಜೆ ಪುನಸ್ಕಾರ ನಡೆಸುವ, ಮಧ್ಯಮ ವರ್ಗದ ಗೃಹಿಣಿ ಮಂಜು ಮಿಶ್ರಾ ಪಾತ್ರ ಹೆಚ್ಚು ಸಹಜವಾಗಿ ಮೂಡಿ ಬಂದಿದೆ. ಇನ್ನು ಮಿಕ್ಕ ಪಾತ್ರಗಳಾದ ಪೆದ್ದು ಪೋಲೀಸ್ ಕಾನ್‌ಸ್ಟೇಬಲ್‌, ಮಿಶ್ರಾ ದಂಪತಿಗಳ ಮಗ – ಸೊಸೆ, ಅವರ ಪಕ್ಕದ ಮನೆಯಾತ ಇವೆಲ್ಲಾ ಒಂದು ಟೆಂಪ್ಲೇಟ್ ಇಟ್ಟುಕೊಂಡು ಸೃಷ್ಟಿಸಿದ ಪಾತ್ರದಂತಿದೆ.

ಇಂತಹ ಹಲವಾರು ಪ್ರಜ್ಞಾಪೂರ್ವಕವಾಗಿ ತುರುಕಿದಂತಹ ಅಂಶಗಳಿದ್ದರೂ, ಈ ಕತೆ ಮತ್ತು ಪಾತ್ರಗಳಿಗೆ ಒಂದು ವಿಶ್ವಾಸಾರ್ಹತೆಯನ್ನು ತಂದುಕೊಡುವುದು ಇದರ ಪಾತ್ರ ವರ್ಗ. ಅದ್ಭುತ ಅಭಿನಯದಿಂದಾಗಿಯೇ ಕ್ಯಾರಿಕೇಚರ್ ಆಗಿಬಿಡಬಹುದಾದ ಅಪಾಯದಿಂದ ಹಲವು ಪಾತ್ರಗಳು ತಪ್ಪಿಸಿಕೊಂಡಿವೆ. ಸಂಜಯ್ ಮಿಶ್ರಾ ಮತ್ತು ನೀನಾ ಗುಪ್ತಾ ಅತ್ಯುತ್ತಮವಾಗಿ ನಟಿಸಿದ್ದಾರೆ. ಸಂಜಯ್ ಮಿಶ್ರಾ ಬಹುತೇಕ ಪ್ರತೀ ದೃಶ್ಯದಲ್ಲೂ ಇದ್ದಾರೆ ಮತ್ತು ಇಡೀ ಸಿನಿಮಾವನ್ನು ತಮ್ಮ ಭುಜದ ಮೇಲೆ ಹೊತ್ತು ನಡೆಸಿದ್ದಾರೆ. ನೀನಾ ಗುಪ್ತಾಗೆ ಸರಿಸಮನಾದ ಅವಕಾಶ ದೊರೆತಿಲ್ಲವಾದರೂ, ಕೆಲವು ದೃಶ್ಯಗಳಲ್ಲಿ ಸಂಜಯ್ ಮಿಶ್ರಾ ಅವರನ್ನು ಹಿಂದಿಕ್ಕುವಂತೆ ನಟಿಸಿದ್ದಾರೆ. ಇವರಿಬ್ಬರ ಅಭಿನಯದಿಂದಾಗಿ ಪಾತ್ರಗಳಿಗೆ ಆಳ ಮತ್ತು ಹಲವು ಆಯಾಮ ದೊರೆತಿದೆ. ಉಳಿದಂತೆ ಸೌರಭ್ ಸಚ್‌ದೇವ್‌ ಮತ್ತು ಮಾನವ್ ವಿಜ್ ಕೂಡ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಸಿನಿಮಾಕ್ಕೊಂದು ಶಾಕ್ ವ್ಯಾಲ್ಯೂ ಕೊಡುವ ಸಲುವಾಗಿಯೂ ಹಲವು ಭೀಬತ್ಸವೆನಿಸುವ ಸಂಗತಿಗಳನ್ನು ಸೇರಿಸಲಾಗಿದೆ. ದೃಶ್ಯಂ ನಾಯಕನಿಗೆ ತನ್ನ ಅಪರಾಧವನ್ನು ಮುಚ್ಚಿಡಲು ಬೇಕಾದ ಉಪಾಯಗಳು ಹೊಳೆಯುವುದು ಆತ ನೋಡುವ ಸಿನಿಮಾಗಳಿಂದಾದರೆ, ಇಲ್ಲಿ ಮಿಶ್ರಾಗೆ ನೆರವಾಗುವುದು ಆತ ಓದುವ ಪತ್ತೇದಾರಿ ಕಾದಂಬರಿಗಳು. ಇಂತಹ ಕಥಾಂಶಗಳು ಕ್ರೈಂ ಆಧರಿತ ಕತೆ, ಕಾದಂಬರಿಗಳು, ಸಿನಿಮಾ, ಸೀರೀಸ್‌ಗಳ ನೆಗೆಟಿವ್ ಪ್ರಭಾವದ ಬಗ್ಗೆ ಹೇಳುತ್ತವೆಯೇ ಎಂಬ ಸಂದೇಹವೂ ಮೂಡುತ್ತದೆ. ಹೀಗಾಗಿ ಇಂತಹ ಸಿನಿಮಾಗಳಲ್ಲಿ ಈ ರೀತಿಯ ಅಂಶಗಳು ಒಂದು ರೀತಿಯಲ್ಲಿ ಸೆಲ್ಫ್ ಗೋಲ್ ಎಂದೇ ಹೇಳಬಹುದು. ಕೊಲೆ ಮತ್ತು ನಂತರದ ಘಟನೆಗಳ ಸಮರ್ಥನೆಗಾಗಿ ಬಹಳಷ್ಟು ಸಂಗತಿಗಳನ್ನು ಸೇರಿಸಿದ್ದರೂ, ಕೊಲೆಯ ಹಿಂದೆ ಸ್ವಾರ್ಥವೇ ಹೆಚ್ಚಿರುವಂತೆಯೂ, ಮಿಶ್ರಾ ನೀಡುವ ಇತರ ಕಾರಣ ಪೇಲವವಾಗಿಯೂ ಕಾಣುತ್ತದೆ. ಜೊತೆಗೆ, ಅಪರಾಧದ ನಂತರ ಮಿಶ್ರಾ ವ್ಯಕ್ತಿತ್ವ ಥಟ್ಟನೆ ಬದಲಾಗುವುದರಿಂದಲೋ ಏನೋ ಆತನ ಕ್ರಿಯೆ ಮತ್ತು ಪ್ರತಿಕ್ರಿಯೆಯನ್ನು ಒಪ್ಪುವುದು ಕಷ್ಟವಾಗುತ್ತದೆ.

ಜಸ್ಪಾಲ್ ಸಿಂಗ್ ಸಂಧು ಮತ್ತು ರಾಜೀವ್ ಬರ್ನವಾಲ್ ಚಿತ್ರಕಥೆಯಲ್ಲಿ ಮತ್ತು ಪಾತ್ರ ಚಿತ್ರಣದಲ್ಲಿ ಇಂತಹ ಸಾಕಷ್ಟು ತೊಂದರೆ ಇದ್ದರೂ, ಅದನ್ನು ತೆರೆಯ ಮೇಲೆ ತರುವ ವಿಷಯದಲ್ಲಿ ಒಂದು ಹಂತಕ್ಕೆ ಗೆದ್ದಿದ್ದಾರೆ. ಸಿನಿಮಾದ ಆರಂಭದಲ್ಲಿ ಮಿಶ್ರಾ ದಂಪಂತಿಗಳ ನಡುವೆ ಇರುವ ಸಂಬಂಧದ ಚಿತ್ರಣ ಮತ್ತು ಅವರಿರುವ ಪರಿಸರದ ಚಿತ್ರಣ ಚೆನ್ನಾಗಿ ಮೂಡಿಬಂದಿದೆ. ಜೊತೆಗೆ, ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನೀನಾ ಗುಪ್ತಾ ಮತ್ತು ಸಂಜಯ್‌ ಮಿಶ್ರಾ ಅಭಿನಯವೂ ಸಿನಿಮಾವನ್ನು ಎತ್ತಿ ಹಿಡಿಯುವಲ್ಲಿ ದೊಡ್ಡ ಕೊಡುಗೆ ನೀಡಿದೆ. ಅದೇ ಬಹುತೇಕ ಸಿನಿಮಾ ಸೋಲದಂತೆ ಕಾಪಾಡಿದೆ. ಸಿನಿಮಾ ಕೊನೆಯವರೆಗೂ ಒಂದು ಮಟ್ಟಿನ ಕುತೂಹಲ ಕಾಯ್ದುಕೊಳ್ಳುವುದರಿಂದ ಕ್ರೈಂ ಸಿನಿಮಾಗಳನ್ನು ಇಷ್ಟಪಡುವವರು ಒಂದು ಬಾರಿ ನೋಡಬಹುದಾದ ಪ್ರಯೋಗ. ‘ವಧ್‌’ ನೆಟ್‌ಫ್ಲಿಕ್ಸ್‌ನಲ್ಲಿ ಸ್ಚ್ರೀಮ್ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here