ಈ ಥರದ ಸ್ಟೋರಿಗಳನ್ನು ಹೇಳಲು ಸಿನಿಮಾದ ಫಲಿತಾಂಶದ ದೃಷ್ಟಿಯಿಂದ ಸಿಕ್ಕಾಪಟ್ಟೆ ಧೈರ್ಯ ಬೇಕು. ಕೊಂಚ ಅತ್ತಿತ್ತ ಆದರೂ ಸಿನಿಮಾ ಬೇರೆಯದೇ ದಾರಿ ಹಿಡಿಯಬಹುದು. ಸಿನಿಮಾದಲ್ಲಿ ನಿರ್ದೇಶಕರು ಹೇಳಬೇಕೆನಿಸಿದ್ದನ್ನು ನಿರ್ಭಿಡೆಯಿಂದ ಹೇಳಿದ್ದಾರೆ – ವೆಟ್ರಿಮಾರನ್ ನಿರ್ದೇಶನದ ಇತ್ತೀಚಿನ ‘ವಿಡುದಲೈ’ ತಮಿಳು ಸಿನಿಮಾ ಕುರಿತ ಟಿಪ್ಪಣಿ.
- ವೆಟ್ರಿಮಾರನ್ ನಿರ್ದೇಶನದ ‘ವಿಡುದಲೈ’ (ಭಾಗ-೧) ಮತ್ತೆ ಮತ್ತೆ ಆಲೋಚಿಸುವಂತೆ ಮಾಡುವ ಸಿನಿಮಾ. ಇದರಲ್ಲಿ ಮುಖ್ಯವಾಗಿ ನನಗೆ ಇಷ್ಟವಾಗಿದ್ದು ಇಡೀ ಸಿನಿಮಾದಲ್ಲಿ ಕಾಡನ್ನು ತೋರಿಸಿದ ರೀತಿ. ಒಂದು ದೃಶ್ಯದಲ್ಲಿ ಚಿತ್ರದ ನಾಯಕ ಕುಮರೇಸನ್ ಇನ್ನೊಬ್ಬ ಪೊಲೀಸ್ ಅಧಿಕಾರಿಯ ಹಿಂದೆ ಕಾಡಿನಲ್ಲಿ ನಡೆದು ಹೋಗುವ ದೃಶ್ಯವನ್ನು ತೋರಿಸಲಾಗುತ್ತದೆ. ಕ್ಯಾಮೆರಾ ಹಿಂದೆ ಹಿಂದೆ ಸಾಗಿದಂತೆ ಅವರು ಚಿಕ್ಕದಾಗುತ್ತ ಕಡೆಗೆ ಅವರು ನಡೆದು ಹೋಗುತ್ತಿರುವ ಕಾಡು, ಬೆಟ್ಟ ಎಷ್ಟು ವಿಶಾಲವಾಗಿದೆ ಅನ್ನುವುದು ಗೊತ್ತಾಗುತ್ತದೆ.
- ಆರಂಭದ ಹತ್ತು ನಿಮಿಷಗಳ lengthy single-shot ಒಂದೇ ಗುಕ್ಕಿನಲ್ಲಿ ಯಾವ ಸಿನಿಮಾಗೆ ಬಂದಿದ್ದೀವಿ ಅನ್ನುವ ಪರಿಚಯ ಮಾಡಿಬಿಡುತ್ತದೆ.
- ಸೂರಿ ಎನ್ನುವ ಹಾಸ್ಯ ಪಾತ್ರಗಳನ್ನು ಮಾಡುತ್ತಿದ್ದ ಹುಡುಗನಲ್ಲಿ ಎಂಥ ಅದ್ಭುತ ನಟನನ್ನು ಕಂಡು, ಆತನನ್ನು ಜಗತ್ತಿಗೆ ಪರಿಚಯಿಸಿದ ವೆಟ್ರಿಮಾರನ್ ನಿಜಕ್ಕೂ ಒಬ್ಬ ಸ್ಟಾರ್-ಮೇಕರ್.
- ವೆಟ್ರಿಮಾರನ್ ಯಾವಾಗಲೂ ಹೇಳುವಂತೆ ಆತನಿಗೆ ಗ್ರೇ-ಶೇಡ್ ಇರುವ ಪಾತ್ರಗಳು ಇಷ್ಟ. ಅದನ್ನು ‘ವಿಡುದಲೈ’ ಸಿನಿಮಾದಲ್ಲಿ ಬಹುತೇಕ ಕಾಣಬಹುದು. ಇಲ್ಲಿ ಯಾರು ಸರಿ, ಯಾರು ತಪ್ಪು ಅಂತ ನಿರ್ದೇಶಕ ಹೇಳುತ್ತಿಲ್ಲ. ವಿಷಯಗಳನ್ನು ಹೇಳುತ್ತ ಸರಿ-ತಪ್ಪು ಯಾವುದೆಂದು ನಿರ್ಧರಿಸುವುದನ್ನು ಪ್ರೇಕ್ಷಕನಿಗೆ ಬಿಟ್ಟಿದ್ದಾರೆ.
- ಈ ಥರದ ಸ್ಟೋರಿಗಳನ್ನು ಹೇಳಲು ಸಿನಿಮಾದ ಫಲಿತಾಂಶದ ದೃಷ್ಟಿಯಿಂದ ಸಿಕ್ಕಾಪಟ್ಟೆ ಧೈರ್ಯ ಬೇಕು. ಕೊಂಚ ಅತ್ತಿತ್ತ ಆದರೂ ಸಿನಿಮಾ ಬೇರೆಯದೇ ದಾರಿ ಹಿಡಿಯಬಹುದು. ಆದರೆ ವೆಟ್ರಿಮಾರನ್ ತಲೆಕೆಡಿಸಿಕೊಳ್ಳದೆ ಹೇಳಬೇಕೆನಿಸಿದ್ದನ್ನು ನಿರ್ಭಿಡೆಯಿಂದ ಹೇಳಿದ್ದಾರೆ.
- ಈ ಕಥೆಯಲ್ಲಿ ಇನ್ನೊಂದು ಮುಖ್ಯ ಹೈಲೈಟ್ ವಿಜಯ್ ಸೇತುಪತಿ. ಇದು ಮೊದಲನೇ ಭಾಗ. ಮುಂದಿನ ಭಾಗದಲ್ಲಿ ಅವರ ದೃಶ್ಯಗಳು ಹೆಚ್ಚಿವೆ. ಈ ಭಾಗದಲ್ಲಿ ಕೆಲವೇ ದೃಶ್ಯಗಳಲ್ಲಿ ಬಂದರೂ ಕಥೆಯೊಳಗಿನ ಹೀರೋ ಆಗಿ ತಮ್ಮ ಗಾಂಭೀರ್ಯದಿಂದಾಗಿ ನಮ್ಮ ಮನಸ್ಸನ್ನು ಸೂರೆಗೊಳ್ಳುತ್ತಾರೆ.
- ಹಿಂಸೆ ಅನ್ನುವುದು ವೆಟ್ರಿಮಾರನ್ ಸಿನಿಮಾಗಳಲ್ಲಿ ಸಾಮಾನ್ಯ. ಆದರೆ ಇಲ್ಲಿ ಎರಡು ರೀತಿಯಿದೆ. ಮೊದಲನೆಯದು ಒಂದಷ್ಟು ಪಾತ್ರಗಳು ಅನುಭವಿಸುವ ದೈಹಿಕ ಹಿಂಸೆ. ಅದಕ್ಕಿಂತ ಮಿಗಿಲಾಗಿ ಅದನ್ನು ತಡೆಯಲು ಮುಖ್ಯ ಪಾತ್ರ ಪಡುವ ಪರಿಪಾಟಲು ನಮಗೆ ತಲುಪುವ ರೀತಿ. ಅದು ಏನೆಂದು ಅರ್ಥವಾಗಬೇಕೆಂದರೆ ನೀವು ಸಿನಿಮಾ ನೋಡಬೇಕು.
- ಎರಡು ಭಾಗಗಳಲ್ಲಿ ಸಿನಿಮಾ ಇದೆ ಎಂದರೆ ಎರಡನೆಯ ಭಾಗ ಯಾವಾಗ ಬರುತ್ತದೋ ಅನ್ನುವ ರೀತಿ ಈ ಭಾಗ ಮುಗಿದಿದೆ. ಅದಕ್ಕೂ ಒಂದು ಹೆಜ್ಜೆ ಹೋಗಿ ಎರಡನೆಯ ಭಾಗದಲ್ಲಿ ಬರಬಹುದಾದ ಕಥೆಯ ಝಲಕ್ ಅನ್ನು ಈ ಸಿನಿಮಾದ ಅಂತ್ಯದಲ್ಲಿ ಕೊಡುವುದರೊಂದಿಗೆ ಪ್ರೇಕ್ಷಕರು ಮತ್ತಷ್ಟು ಕಾತರದಿಂದ ಕಾಯುವಂತೆ ಮಾಡಿದ್ದಾರೆ ವೆಟ್ರಿಮಾರನ್.
- ಸಿನಿಮಾದ ಮತ್ತೊಂದು ಅತಿ ಮುಖ್ಯ ಅಂಶ ಇಳಯರಾಜಾ ಸಂಗೀತ. ಒಂದು ಸಾವಿರ ಸಿನಿಮಾಗಳಿಗಿಂತ ಹೆಚ್ಚಿನ ಸಿನಿಮಾಗಳಿಗೆ ಸಂಗೀತ ನೀಡಿದ ಮೇಲೂ ಇವರು ಅದೇ ಇಂಟೆನ್ಸಿಟಿಯಲ್ಲಿ ಸಿನಿಮಾಗಳಿಗೆ ಸಂಗೀತ ನೀಡಿ ಅವುಗಳ ತೂಕ ಹೆಚ್ಚಿಸುತ್ತಿದ್ದಾರೆ ಅಂದರೆ ನಂಬಲು ಅಸಾಧ್ಯ. ಮತ್ತೆ ಮತ್ತೆ ಮಿಸ್ಕಿನ್, ವೆಟ್ರಿಮಾರನ್‌ರಂತಹ ನಿರ್ದೇಶಕರೇ ಇವರ ಸಂಗೀತದ ಮೊರೆ ಹೋಗುತ್ತಿರುವುದು ಇದಕ್ಕೆ ನಿದರ್ಶನ.
- ವೀರಪ್ಪನ್ ಓಡಾಡಿಕೊಂಡಿದ್ದ ಚಾಮರಾಜನಗರದ ಸ್ಥಳದಲ್ಲಿ ಹುಟ್ಟಿ ಬೆಳೆದ ನನಗೆ ಅಲ್ಲಿ ಆತನ ಬಗೆಗಿದ್ದ ಕಥೆಗಳು, ಜನರ ಅಭಿಪ್ರಾಯ, ಪೊಲೀಸರ ಅಥವಾ ಅರಣ್ಯಾಧಿಕಾರಿಗಳ ಅಥವ ಆತನನ್ನು ಹಿಡಿಯಲು ಬಂದ ಪಡೆಗಳ ಬಗ್ಗೆ ಇದ್ದ ಅಭಿಪ್ರಾಯವನ್ನೆಲ್ಲ ಕೇಳಿದ್ದ ನನಗೆ ಈ ಸಿನಿಮಾ ನಮ್ಮದೇ ಭಾಗದ ಕಥೆ ಅನ್ನಿಸಿತು!