80ರ ದಶಕದ ಖ್ಯಾತ ಕಬಡ್ಡಿ ಆಟಗಾರ ಅರ್ಜುನ್‌ ಚಕ್ರವರ್ತಿ ತೆಲುಗು – ತಮಿಳು ಬಯೋಪಿಕ್‌ ಸಿನಿಮಾ ಸೆಟ್ಟೇರಿದೆ. ವಿಕ್ರಾಂತ್‌ ರುದ್ರ ನಿರ್ದೇಶನದ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ವಿಜಯರಾಜು ರಾಮ ನಟಿಸುತ್ತಿದ್ದಾರೆ. ‘ಜರ್ನಿ ಆಫ್ ಅನ್‌ಸಂಗ್ ಚಾಂಪಿಯನ್’ ಈ ಸಿನಿಮಾದ ಉಪಶೀರ್ಷಿಕೆ.

ಕಬಡ್ಡಿ ಆಟಗಾರ ಅರ್ಜುನ್ ಚಕ್ರವರ್ತಿ ಕುರಿತು ಸಿನಿಮಾವೊಂದು ತೆರೆಮೇಲೆ ಬರಲಿದೆ. ‘ಅರ್ಜುನ್ ಚಕ್ರವರ್ತಿ’ ಎಂದೇ ಈ ಸಿನಿಮಾಗೆ ಶೀರ್ಷಿಕೆ ಇಡಲಾಗಿದೆ. ಇದೊಂದು PAN ಇಂಡಿಯಾ ಪ್ರಾಜೆಕ್ಟ್‌ ಎನ್ನಲಾಗಿದ್ದು, ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆ ಮಾಡಿದ್ದಾರೆ. ಕ್ರೀಡೆಯಲ್ಲಿ ಸಾಧನೆ ಮಾಡಿದ ಹಲವರ ಕುರಿತ ಬಯೋಪಿಕ್‌ ಸಿನಿಮಾಗಳು ಬಂದಿವೆ. ಈ ಸಾಲಿಗೆ ಹೊಸ ಸೇರ್ಪಡೆ ‘ಅರ್ಜುನ್ ಚಕ್ರವರ್ತಿ’. ಚಿತ್ರದ ಫಸ್ಟ್‌ಲುಕ್‌ನಲ್ಲಿ ಪದಕವನ್ನು ಹಿಡಿದುಕೊಂಡು ಮೈದಾನದ ಮಧ್ಯಭಾಗದಲ್ಲಿ ನಿಂತು ವಿಜಯದ ಕ್ಷಣವನ್ನು ಆನಂದಿಸುತ್ತಿರುವ ಅರ್ಜುನ್ ಚಕ್ರವರ್ತಿ ಅವರ ದೃಶ್ಯವಿದೆ. ವಿಕ್ರಾಂತ್ ರುದ್ರ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ವಿಜಯರಾಜು ರಾಮ ಅವರು ‘ಅರ್ಜುನ್ ಚಕ್ರವರ್ತಿ’ ಪಾತ್ರವನ್ನು ಮಾಡುತ್ತಿದ್ದಾರೆ. ಸಿಜಾ ರೋಸ್ ಕೂಡ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಬಗ್ಗೆ ನಿರ್ಮಾಪಕ ಶ್ರೀನಿ ಗುಬ್ಬಾಳ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

‘ಜರ್ನಿ ಆಫ್ ಅನ್‌ಸಂಗ್ ಚಾಂಪಿಯನ್ ಎಂಬುದು ಈ ಚಿತ್ರದ ಅಡಿಬರಹ​. ಇದು ಕೇವಲ ಸಿನಿಮಾ ಅಲ್ಲ. ಸವಾಲುಗಳನ್ನು ಮೀರಿ ನಿಲ್ಲುವಂತಹ ಹಾಗೂ ನಮ್ಮೆಲ್ಲರಿಗೂ ಸ್ಫೂರ್ತಿ, ಪ್ರೇರಣೆ ನೀಡುವಂತಹ ಪ್ರಯೋಗ. ಈ ಚಿತ್ರದಿಂದ ನಾವು ಇಚ್ಛಾಶಕ್ತಿ ಹಾಗೂ ಆತ್ಮಬಲದ ವಿಜಯವನ್ನು ಪ್ರದರ್ಶಿಸಲು ಬಯಸುತ್ತೇವೆ’ ಎಂದಿದ್ದಾರೆ ಶ್ರೀನಿ ಗುಬ್ಬಾಳ. ಚಿತ್ರವನ್ನು ತೆಲುಗು ಹಾಗೂ ತಮಿಳಿನಲ್ಲಿ ಏಕಕಾಲದಲ್ಲಿ ಚಿತ್ರೀಕರಣ​ ಮಾಡಲಾಗುತ್ತಿದ್ದು, ಕನ್ನಡ, ಮಲಯಾಳಂ ಮತ್ತು ಹಿಂದಿಗೆ ಡಬ್​ ಮಾಡಲಾಗುವುದು ಎಂದು ತಿಳಿಸಿದ್ದಾರೆ. 1980ರ ದಶಕದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕಬಡ್ಡಿ ಆಟಗಾರ ಅರ್ಜುನ್ ಚಕ್ರವರ್ತಿ ಅವರ ಬದುಕಿನ ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮೂಡಿಬರುತ್ತಿದೆ. ಒಬ್ಬ ಕ್ರೀಡಾಪಟುವಿನ ಬದುಕಿನಲ್ಲಿ ಎದುರಾದ ಹೋರಾಟಗಳು ಹಾಗೂ ಸಿಕ್ಕ ಗೆಲುವಿನ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ದಯಾನಂದ ರೆಡ್ಡಿ, ಅಜಯ್, ಅಜಯ್ ಘೋಷ್ ಹಾಗೂ ದುರ್ಗೇಶ್ ಅವರು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಘ್ನೇಶ್ ಭಾಸ್ಕರನ್ ಅವರ ಸಂಗೀತ ನಿರ್ದೇಶನ ಹಾಗೂ ಜಗದೀಶ್ ಚೀಕಾಟಿ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. Gannet Celluloid ಬ್ಯಾನರ್​ ಅಡಿಯಲ್ಲಿ ಶ್ರೀನಿ ಗುಬ್ಬಾಳ ಅವರು ಈ ಸಿನಿಮಾ ನಿರ್ಮಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here