BIFFes ಸೇರಿದಂತೆ ಜಗತ್ತಿನ ಹಲವು ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದ ಸಿನಿಮಾ ‘ಪಿಂಕಿ ಎಲ್ಲಿ?’. ಸಾಮಾಜಿಕ ಸಮಸ್ಯೆಯೊಂದರ ಸುತ್ತ ಹೆಣೆದ ಕಥಾನಕ. ಪೃಥ್ವಿ ಕೊಣನೂರು ನಿರ್ದೇಶನದ ಸಿನಿಮಾ ಜೂನ್‌ 2ರಂದು ಥಿಯೇಟರ್‌ಗಳಿಗೆ ಬರುತ್ತಿದೆ.

‘ಸುಮಾರು ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಕಥೆಯಿದು. ಬೆಂಗಳೂರಿನಲ್ಲಿ ನಡೆದ ನೈಜಘಟನೆಯೂ ಹೌದು. ಮಗುವೊಂದು ಕಾಣೆಯಾಗಿರುತ್ತದೆ. ಆದರೆ ಈ ಕಥೆ ಮಗುವಿನ ಸುತ್ತ ಇರುವುದಿಲ್ಲ. ಮಗುವನ್ನು ಕಳೆದುಕೊಂಡವರ ಸುತ್ತ ಇರುತ್ತದೆ’ ಎನ್ನುತ್ತಾರೆ ‘ಪಿಂಕಿ ಎಲ್ಲಿ?’ ಚಿತ್ರದ ನಿರ್ದೇಶಕ ಪೃಥ್ವಿ ಕೊಣನೂರು. ಕತೆಯ ಒಂದೆಳೆಯಿಂದಲೇ ಪ್ರಭಾವಿತರಾದ ಕೃಷ್ಣೇಗೌಡ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರು. ‘ನಾನು ಕಥೆ ಕೇಳಲಿಲ್ಲ. ನಿರ್ದೇಶಕರು ಕಳೆದು ಹೋದ ಮಗುವಿನ ಸುತ್ತ ನಡೆಯುವ ಕತೆ ಎಂದು ಒಂದೆಳೆ ಹೇಳಿದರು. ನೀವು ಕೆಲಸ ಶುರು ಮಾಡಿಕೊಳ್ಳಿ ಎಂದು ನಿರ್ದೇಶಕರಿಗೆ ಹೇಳಿದ. ಬೆಂಗಳೂರಿನಲ್ಲಿ ಮಗುವಿನ ಭವಿಷ್ಯಕ್ಕಾಗಿ ತಂದೆ – ತಾಯಿ ಮಗುವನ್ನು ನೋಡಿಕೊಳ್ಳಲು ಕೆಲಸದವರನ್ನು ಗೊತ್ತು ಮಾಡಿ ಕೆಲಸಕ್ಕೆ ಹೋಗುತ್ತಾರೆ. ಆದರೆ ಇಲ್ಲಿ ಆ ಮಗುವೇ ಇನ್ನೊಬ್ಬರ ಭವಿಷ್ಯಕ್ಕೆ ದಾರಿಯಾಗಿರುತ್ತದೆ. ಇಂತಹ ಅಪರೂಪದ ಕಥೆ ಈ ಚಿತ್ರದಲ್ಲಿದೆ’ ಎನ್ನುತ್ತಾರೆ ನಿರ್ಮಾಪಕ ಕೃಷ್ಣೇಗೌಡ.

‘ನಿರ್ದೇಶಕರು ಕಥೆ ಹೇಳುವ ರೀತಿಯೇ ವಿಭಿನ್ನ. ನನಗೂ ಅವರು ಕಥೆ ಹೇಳುವ ರೀತಿ ಆಶ್ಚರ್ಯವಾಯಿತು’ ಎನ್ನುವ ನಟಿ ಅಕ್ಷತಾ ಪಾಂಡವಪುರ ಚಿತ್ರದಲ್ಲಿ ಮಗುವನ್ನು ಕಳೆದುಕೊಂಡಿರುವ ತಾಯಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಪಾತ್ರದ ನಿರ್ವಹಣೆಗಾಗಿ ನ್ಯೂಯಾರ್ಕ್‌ ಇಂಡಿಯನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಅವರಿಗೆ ಉತ್ತಮ ನಟಿ ಗೌರವ ಸಂದಿದೆ. ಇದೇ ಚಿತ್ರೋತ್ಸವದಲ್ಲಿ ಚಿತ್ರಕಥೆಗೂ ಪ್ರಶಸ್ತಿ ಲಭಿಸಿತ್ತು. ದೀಪಕ್ ಸುಬ್ರಹ್ಮಣ್ಯ ಮತ್ತು ನಿರ್ದೇಸಕ ಪೃಥ್ವಿ ಕೊಣನೂರು ಚಿತ್ರದ ಮತ್ತೆರೆಡು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸ್ಲಂ ನಿವಾಸಿಗಳಾದ ಗುಂಜಲಮ್ಮ ಮತ್ತು ಸಂಗಮ್ಮ ಮೊದಲ ಬಾರಿ ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟನೆ ಗೊತ್ತಿಲ್ಲದ ಇವರು ಸಹಜವಾಗಿ ಅಭಿನಯಿಸಿರುವುದು ವಿಶೇಷ. ಜಾಗತಿಕ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾದ ಸಿನಿಮಾ ಜೂನ್‌ 2ರಂದು ಕನ್ನಡ ನಾಡಿನಲ್ಲಿ ತೆರೆಕಾಣುತ್ತಿದೆ.

LEAVE A REPLY

Connect with

Please enter your comment!
Please enter your name here