ಮಹಾಭಾರತದಲ್ಲಿ ಪ್ರಸ್ತಾಪವಾಗುವ ಒಂದು ಪಾತ್ರ ‘ಐರಾವನ್’. ಈ ಶೀರ್ಷಿಕೆಯಡಿ ಸಸ್ಪೆನ್ಸ್ – ಥ್ರಿಲ್ಲರ್ ಕತೆ ಮಾಡಿ ನಿರ್ದೇಶಿಸಿದ್ದಾರೆ ರಾಮ್ಸ್ ರಂಗ. ಜೆಕೆ ಮತ್ತು ಅದ್ವಿತಿ ಶೆಟ್ಟಿ ಅಭಿನಯದ ಸಿನಿಮಾ ಜೂನ್ 16ರಂದು ತೆರೆಕಾಣಲಿದೆ.
‘ಅಶ್ವಿನಿ ನಕ್ಷತ್ರ’ ಸೀರಿಯಲ್ ಜನಪ್ರಿಯತೆ ನಟ ಜೆಕೆ ಅವರನ್ನು ಬೆಳ್ಳಿತೆರೆಗೆ ಕರೆತಂದಿತು. ನಾಯಕ, ಖಳ ಪಾತ್ರಗಳಲ್ಲಿ ನಟಿಸುತ್ತಾ ಬಂದ ಅವರು ಕೆಲ ಸಮಯ ಹಿಂದಿ ಕಿರುತೆರೆಯಲ್ಲಿ ಮಿಂಚಿದರು. ಇದೀಗ ಬಹಳ ದಿನಗಳ ನಂತರ ಅವರು ಹೀರೋ ಆಗಿ ನಟಿಸಿರುವ ‘ಐರಾವನ್’ ತೆರೆಕಾಣುತ್ತಿದೆ. ಇದು ಅವರ ಬಾಲಿವುಡ್ ಸಿನಿಮಾದ ಕನ್ನಡ ಡಬ್ಬಿಂಗ್ ಅವತರಣಿಕೆ ಎನ್ನುವ ಸುದ್ದಿಯಿತ್ತು. ಇದನ್ನು ಅಲ್ಲಗಳೆಯುವ ಜೆಕೆ, ಇದ ನೇರ ಕನ್ನಡ ಸಿನಿಮಾ ಎನ್ನುತ್ತಾರೆ. ಸಸ್ಪೆನ್ಸ್ – ಥ್ರಿಲ್ಲರ್ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಒಳಿತು ಮತ್ತು ಕೆಡುಕಿನ ಎರಡು ಛಾಯೆಗಳಿವೆಯಂತೆ. ಈ ಸಿನಿಮಾ ಮೂಲಕ ಮತ್ತಷ್ಟು ಉತ್ತಮ ಅವಕಾಶಗಳು ಸಿಗಲಿವೆ ಎನ್ನುವ ವಿಶ್ವಾಸದಲ್ಲಿದ್ದಾರವರು.
‘ಐರಾವನ್ ಎಂದರೆ ಮಹಾಭಾರತದಲ್ಲಿ ಬರುವ ಪಾತ್ರವೊಂದರ ಹೆಸರು. ಬೆಂಗಳೂರು, ಮಂಗಳೂರು ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ಸಮುದ್ರದಲ್ಲಿ ಹೆಚ್ಚಿನ ಚಿತ್ರೀಕರಣ ಮಾಡಿರುವುದು ವಿಶೇಷ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ರಾಮ್ಸ್ ರಂಗ. ನಿರ್ಮಾಪಕ ಡಾ ನಿರಂತರ ಗಣೇಶ್ ವೃತ್ತಿಯಲ್ಲಿ ವೈದ್ಯ. ಕೋವಿಡ್ ಸಂದರ್ಭದಲ್ಲಿ ನಿರ್ದೇಶಕರು ಅವರಿಗೆ ಕತೆ ಹೇಳಿದ್ದಾರೆ. ಚಿತ್ರರಂಗ ಸಂಕಷ್ಟದಲ್ಲಿದ್ದ ಸಮಯ ಅದು. ತಂತ್ರಜ್ಞರು ಹಾಗೂ ಕಲಾವಿದರಿಗೆ ನೆರವಾಗುವ ಉದ್ದೇಶದಿಂದ ತಾವು ಸಿನಿಮಾ ನಿರ್ಮಾಣ ಕೈಗೆತ್ತಿಕೊಂಡಿದ್ದಾಗಿ ಹೇಳುತ್ತಾರೆ ಡಾ ಗಣೇಶ್. ಕೊಂಚ ತಡವಾದರೂ ಒಳ್ಳೆಯ ಸಿನಿಮಾದೊಂದಿಗೆ ತೆರೆಗೆ ಬರುತ್ತಿರುವುದಾಗಿ ಹೇಳುತ್ತಾರೆ. ಅದ್ವಿತಿ ಶೆಟ್ಟಿ ಚಿತ್ರದ ನಾಯಕಿ. ಪ್ರದೀಪ್ ವರ್ಮ ಸಂಗೀತ ಸಂಯೋಜಿಸಿದ್ದಾರೆ. ಜೂನ್ 16ರಂದು ಸಿನಿಮಾ ತೆರೆಕಾಣುತ್ತಿದೆ.