ಕರಣ್ ಜೋಹರ್ ನಿರ್ಮಿಸಿ, ನಿರ್ದೇಶಿಸಿರುವ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಹಿಂದಿ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಕರಣ್ ಸಿಗ್ನೇಚರ್ ಸ್ಟೈಲ್ ಟೀಸರ್ನಲ್ಲಿ ಢಾಳಾಗಿ ಕಾಣಿಸುತ್ತವೆ. ರಣವೀರ್ ಸಿಂಗ್ ಮತ್ತು ಅಲಿಯಾ ಭಟ್ ಮುಖ್ಯಭೂಮಿಕೆಯ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಹಿರಿಯ ನಟ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಇದ್ದಾರೆ.
ಏಳು ವರ್ಷಗಳ ನಂತರ ಕರಣ್ ಜೋಹರ್ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದೊಂದಿಗೆ ನಿರ್ದೇಶನಕ್ಕೆ ಮರಳಿದ್ದಾರೆ. ‘ಏ ದಿಲ್ ಹೈ ಮುಶ್ಕಿಲ್’ (2016) ಅವರ ನಿರ್ದೇಶನದ ಕೊನೆಯ ಸಿನಿಮಾ. ಸಾಕಷ್ಟು ಒತ್ತಡದಲ್ಲೇ ಸಿನಿಮಾ ಮಾಡಿರುವುದಾಗಿ ಹೇಳುತ್ತಾರವರು. ರಣವೀರ್ ಸಿಂಗ್ ಮತ್ತು ಅಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದೆ. ಕರಣ್ ಜೋಹರ್ ಸಿನಿಮಾಗಳ ಎಂದಿನ ಅದ್ಧೂರಿತನ, ಪ್ರೀತಿ, ಫ್ಯಾಮಿಲಿ ಡ್ರಾಮಾ ಇಲ್ಲಿ ಕಾಣಿಸುತ್ತದೆ. ‘ಗಲ್ಲಿ ಬಾಯ್’ (2019) ಚಿತ್ರದ ನಂತರ ಇಲ್ಲಿ ಮತ್ತೆ ರಣವೀರ್ ಸಿಂಗ್ ಮತ್ತು ಅಲಿಯಾ ಜೊತೆಯಾಗಿದ್ದಾರೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಒಂದು ನಿಮಿಷದ ಟೀಸರ್ನಲ್ಲಿ ಇವರಿಬ್ಬರ ಪ್ರೀತಿ, ತುಂಟಾಟ, ಜಗಳ, ಡ್ಯಾನ್ಸ್ ಎಲ್ಲವೂ ಇದೆ. ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಪಾತ್ರಗಳು ಪರಿಚಯವಾಗುತ್ತವೆ.
ಟೀಸರ್ ಹೊರಬೀಳುತ್ತಿದ್ದಂತೆ ಸಿನಿಪ್ರೇಮಿಗಳು ನಾನಾ ರೀತಿಯಲ್ಲಿ ಕಾಮೆಂಟ್ಗಳನ್ನು ಹಾಕಲು ಆರಂಭಿಸಿದ್ದಾರೆ. ಕರಣ್ ಜೋಹರ್ ಅವರ ಎಂದಿನ ಸ್ಟೈಲ್ ಇಲ್ಲಿದೆ ಎನ್ನವಲ್ಲಿಂದ ಹಿಡಿದು ಸಿನಿಮಾ ಎದುರು ನೋಡುತ್ತಿರುವುದಾಗಿ ಹಲವರು ಕಾಮೆಂಟ್ ಮಾಡಿದ್ದಾರೆ. ಮೇ 25ರಂದು ಕರಣ್ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಮಾಡಿದ್ದರು. ಹೀರೋ ಮತ್ತು ಹಿರೋಯಿನ್ ಪ್ರತಿನಿಧಿಸುವ ರಾಧ್ವಾಸ್ ಮತ್ತು ಚಟರ್ಜೀ ಕುಟುಂಬಗಳನ್ನು ಅವರು ಪರಿಚಯಿಸಿದ್ದರು. ಹಿರಿಯ ನಟ ಧರ್ಮೇಂದ್ರ ಮತ್ತು ಜಯಾ ಬಚ್ಚನ್ ಅವರು ರಣವೀರ್ ಕುಟುಂಬವನ್ನು ಪ್ರತಿನಿಧಿಸಿದರೆ, ತೋತಾ ರಾಯ್ ಚೌಧರಿ, ಚುರ್ನಿ ಗಂಗೂಲಿ ಮತ್ತು ಶಬಾನಾ ಅಜ್ಮಿ ಅವರು ಅಲಿಯಾ ಕುಟುಂಬದ ಪ್ರತಿನಿಧಿಗಳು. Viacom18 Studios ಜೊತೆಗೂಡಿ ಕರಣ್ ಜೋಹರ್ ನಿರ್ಮಿಸಿರುವ ಈ ಸಿನಿಮಾ ಜುಲೈ 28ರಂದು ಸಿನಿಮಾ ತೆರೆಕಾಣಲಿದೆ.